1. {#1ಬಾಷಾನಿನ ಅರಸನ ಸೋಲು } [PS]ಆಗ ನಾವು ಹಿಂದಿರುಗಿ ಬಾಷಾನಿನ ಕಡೆಗೆ ಮೇಲಕ್ಕೆ ಹೊರಟೆವು. ಆಗ ಬಾಷಾನಿನ ಅರಸನಾದ ಓಗನು ತನ್ನ ಸಮಸ್ತ ಜನರ ಸಂಗಡ ನಮಗೆ ವಿರುದ್ಧವಾಗಿ ಯುದ್ಧಮಾಡುವುದಕ್ಕೆ ಎದ್ರೈಗೆ ಹೊರಟುಬಂದನು.
2. ಆಗ ಯೆಹೋವ ದೇವರು ನನಗೆ, “ನೀನು ಅವನಿಗೆ ಭಯಪಡಬೇಡ. ಏಕೆಂದರೆ ನಿನ್ನ ಕೈಯೊಳಗೆ ನಾನು ಅವನನ್ನೂ, ಅವನ ಸಮಸ್ತ ಜನರನ್ನೂ, ಅವನ ದೇಶವನ್ನೂ ಕೊಟ್ಟಿದ್ದೇನೆ. ನೀನು ಹೆಷ್ಬೋನಿನಲ್ಲಿ ವಾಸವಾಗಿದ್ದ ಅಮೋರಿಯರ ಅರಸನಾದ ಸೀಹೋನನಿಗೆ ಮಾಡಿದ ಪ್ರಕಾರ ಇವನಿಗೂ ಮಾಡಬೇಕು,” ಎಂದರು. [PE]
3. [PS]ಈ ಪ್ರಕಾರ ನಮ್ಮ ದೇವರಾದ ಯೆಹೋವ ದೇವರು ಬಾಷಾನಿನ ಅರಸನಾದ ಓಗನನ್ನೂ ಅವನ ಜನರೆಲ್ಲರನ್ನೂ ನಮ್ಮ ಕೈಗಳಲ್ಲಿ ಒಪ್ಪಿಸಿದರು. ಒಬ್ಬನಾದರೂ ತಪ್ಪಿಸಿಕೊಂಡು ಬದುಕುಳಿಯದಂತೆ ಅವರನ್ನು ಹೊಡೆದೆವು.
4. ಆ ಕಾಲದಲ್ಲಿ ಅವನ ಪಟ್ಟಣಗಳನ್ನೆಲ್ಲಾ ಜಯಿಸಿದೆವು. ನಾವು ಅವರಿಂದ ವಶಪಡಿಸಿಕೊಳ್ಳದ ಪಟ್ಟಣವು ಒಂದೂ ಇರಲಿಲ್ಲ. ಬಾಷಾನಿನಲ್ಲಿರುವ ಓಗನ ರಾಜ್ಯದಲ್ಲಿ ಅಂದರೆ, ಅರ್ಗೋಬಿನ ಸಮಸ್ತ ಸುತ್ತಲಿನ ಪ್ರದೇಶದ ಅರವತ್ತು ಪಟ್ಟಣಗಳನ್ನು ತೆಗೆದುಕೊಂಡೆವು.
5. ಆ ಪಟ್ಟಣಗಳೆಲ್ಲಾ ಎತ್ತರವಾದ ಗೋಡೆ, ಬಾಗಿಲು, ಅಗುಳಿಗಳಿಂದ ಭದ್ರವಾಗಿದ್ದವು. ಅವುಗಳಲ್ಲದೆ ಬಯಲುಸೀಮೆಯ ಪಟ್ಟಣಗಳು ಬಹಳ ಇದ್ದವು.
6. ನಾವು ಹೆಷ್ಬೋನಿನ ಅರಸನಾದ ಸೀಹೋನನ ಪಟ್ಟಣಗಳಿಗೆ ಮಾಡಿದ ಪ್ರಕಾರ ಅವುಗಳನ್ನೆಲ್ಲಾ ಸಂಪೂರ್ಣವಾಗಿ ನಿರ್ಮೂಲ ಮಾಡಿದೆವು. ಪುರುಷರನ್ನೂ ಸ್ತ್ರೀಯರನ್ನೂ ಮಕ್ಕಳನ್ನೂ ಪ್ರತಿಯೊಂದು ಪಟ್ಟಣವನ್ನೂ ಸಂಪೂರ್ಣವಾಗಿ ನಿರ್ಮೂಲ ಮಾಡಿದೆವು.
7. ಎಲ್ಲಾ ಪಶುಗಳನ್ನೂ ಪಟ್ಟಣಗಳನ್ನೂ ಸೂರೆಮಾಡಿಬಿಟ್ಟೆವು. [PE]
8. [PS]ಆ ಕಾಲದಲ್ಲಿ ನಾವು ಯೊರ್ದನ್ ನದಿಯ ಈಚೆಯಲ್ಲಿ ಅರ್ನೋನ್ ನದಿಯಿಂದ ಹೆರ್ಮೋನ್ ಬೆಟ್ಟದವರೆಗೆ ಇರುವ ದೇಶವನ್ನು ಅಮೋರಿಯರ ಇಬ್ಬರು ಅರಸರ ಕೈಯಿಂದ ಸ್ವಾಧೀನಮಾಡಿಕೊಂಡೆವು.
9. ಹೆರ್ಮೋನಿಗೆ ಸೀದೋನ್ಯರು ಸಿರ್ಯೋನೆಂದೂ ಅಮೋರಿಯರು ಸೆನೀರ್ ಎಂದೂ ಕರೆಯುತ್ತಾರೆ.
10. ಬಯಲುಸೀಮೆಯ ಎಲ್ಲಾ ಪಟ್ಟಣಗಳನ್ನೂ, ಎಲ್ಲಾ ಗಿಲ್ಯಾದನ್ನೂ ಬಾಷಾನಿನಲ್ಲಿ ಓಗನ ರಾಜ್ಯದಲ್ಲಿ ಪಟ್ಟಣಗಳಾದ ಸಲ್ಕಾ ಎದ್ರೈವರೆಗೆ ಎಲ್ಲಾ ಬಾಷಾನನ್ನೂ ಸ್ವಾಧೀನಮಾಡಿಕೊಂಡೆವು.
11. ರೆಫಾಯರಲ್ಲಿ ಬಾಷಾನಿನ ಅರಸನಾದ ಓಗನು ಮಾತ್ರ ಉಳಿದಿದ್ದನು. ಅವನ ಮಂಚವು ಕಬ್ಬಿಣದ ಮಂಚ. ಅದು ಅಮ್ಮೋನಿಯರ ರಬ್ಬಾದಲ್ಲಿ ಈಗಲೂ ಉಂಟಲ್ಲವೋ? ಅದರ ಉದ್ದ ಪುರುಷನ ಕೈ ಅಳತೆಯ ಪ್ರಕಾರ ಒಂಬತ್ತು ಮೊಳ, ಅಗಲ ನಾಲ್ಕು ಮೊಳ ಇತ್ತು. [PE]
12. {#1ಸ್ಥಳ ವಿಭಜನೆ } [PS]ಆ ಕಾಲದಲ್ಲಿ ನಾವು ಸ್ವತಂತ್ರಿಸಿಕೊಂಡ ದೇಶವನ್ನು ಅರ್ನೋನ್ ಹಳ್ಳದ ಸಮೀಪದಲ್ಲಿರುವ ಅರೋಯೇರಿನಿಂದ ಮೊದಲ್ಗೊಂಡು, ಅರ್ಧ ಗಿಲ್ಯಾದ್ ಬೆಟ್ಟವನ್ನೂ, ಅದರ ಪಟ್ಟಣಗಳನ್ನೂ ರೂಬೇನ್ಯರ ಪ್ರದೇಶದವರೆಗೂ, ಗಾದನ ಪ್ರದೇಶದವರೆಗೂ ಕೊಟ್ಟೆನು.
13. ಮಿಕ್ಕ ಗಿಲ್ಯಾದನ್ನು ಓಗನ ರಾಜ್ಯವಾದ ಎಲ್ಲಾ ಬಾಷಾನನ್ನೂ ಮನಸ್ಸೆಯ ಅರ್ಧ ಗೋತ್ರಕ್ಕೆ ಕೊಟ್ಟೆನು. ಅರ್ಗೋಬ್ ಎನಿಸಿಕೊಳ್ಳುವ ಸಮಸ್ತ ಸೀಮೆಯನ್ನೂ, ರೆಫಾಯರ ದೇಶವೆಂದು ಎನಿಸಿಕೊಳ್ಳುವ ಸಮಸ್ತ ಬಾಷಾನನ್ನೂ ಅವರಿಗೆ ಕೊಟ್ಟೆನು.
14. ಮನಸ್ಸೆಯ ಮಗ ಯಾಯೀರನು ಅರ್ಗೋಬಿನ ದೇಶವನ್ನೆಲ್ಲಾ ಗೆಷೂರ್ಯರ, ಮಾಕಾತ್ಯರ ಮೇರೆಯವರೆಗೆ ಸ್ವಾಧೀನಮಾಡಿಕೊಂಡು, ಆ ಬಾಷಾನಿಗೆ ತನ್ನ ಹೆಸರಿನ ಪ್ರಕಾರ ಇಂದಿನವರೆಗೆ ಹವ್ವೋತ್ ಯಾಯೀರೆಂದು ಹೆಸರಿಟ್ಟನು.
15. ಗಿಲ್ಯಾದನ್ನು ಮಾಕೀರನಿಗೆ ಕೊಟ್ಟೆನು.
16. ಗಿಲ್ಯಾದ್ ಮೊದಲುಗೊಂಡು ಅರ್ನೋನ್ ತಗ್ಗಿನವರೆಗೂ ಯಬ್ಬೋಕ್ ಹೊಳೆಯವರೆಗೂ ಇರುವ ಪ್ರದೇಶವನ್ನು ರೂಬೇನ್ಯರಿಗೂ ಗಾದ್ಯರಿಗೂ ಕೊಟ್ಟೆನು. ಅರ್ನೋನ್ ತಗ್ಗಿನ ಮಧ್ಯಭಾಗವೇ ಅವರ ಮೇರೆ. ಅವರಿಗೂ ಅಮ್ಮೋನಿಯರಿಗೂ ನಡುವೆ ಇರುವ ಯಬ್ಬೋಕ್ ಹೊಳೆಯು ಅವರ ಮೇರೆ.
17. ಅದಲ್ಲದೆ ಪಶ್ಚಿಮದಲ್ಲಿ ಅವರ ಪ್ರದೇಶ ಅರಾಬಾದ ಯೊರ್ದನ್ ನದಿಯವರೆಗೆ ಹರಡಿತ್ತು, ಅದರಲ್ಲಿ ಕಿನ್ನೆರೆತ್ ಮೊದಲ್ಗೊಂಡು ಪೂರ್ವದಲ್ಲಿರುವ ಪಿಸ್ಗಾದ ಕೆಳಗಿರುವ ಉಪ್ಪಿನ ಸಮುದ್ರವಾದ ಬಯಲು ಸಮುದ್ರದವರೆಗೆ ವ್ಯಾಪಿಸಿತ್ತು. [PE]
18. [PS]ಆ ಕಾಲದಲ್ಲಿ ನಾನು ರೂಬೇನ್ಯರಿಗೂ ಗಾದ್ಯರಿಗೂ ಮತ್ತು ಮನಸ್ಸೆಯ ಅರ್ಧ ಗೋತ್ರಕ್ಕೂ ಆಜ್ಞಾಪಿಸಿದ್ದೇನೆಂದರೆ, “ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಈ ದೇಶವನ್ನು ಸೊತ್ತಾಗಿ ಕೊಟ್ಟಿದ್ದಾರೆ. ನಿಪುಣರಾಗಿರುವ ನೀವೆಲ್ಲರು ನಿಮ್ಮ ಸಹೋದರರಾದ ಇಸ್ರಾಯೇಲರ ಮುಂದೆ ಆಯುಧ ಧರಿಸಿಕೊಂಡು ನದಿದಾಟಿ ಹೋಗಬೇಕು.
19. ನಿಮಗೆ ಬಹಳ ಪಶುಗಳಿವೆ ಎಂದು ನನಗೆ ಗೊತ್ತಿದೆ. ಆದರೆ ನಿಮ್ಮ ಹೆಂಡತಿಯರೂ ಮಕ್ಕಳೂ ಪಶುಗಳೂ ನಾನು ನಿಮಗೆ ಕೊಟ್ಟ ಪಟ್ಟಣಗಳಲ್ಲಿ ವಾಸವಾಗಿರಲಿ.
20. ಯೆಹೋವ ದೇವರು ನಿಮಗೆ ವಿಶ್ರಾಂತಿ ಕೊಟ್ಟ ಹಾಗೆಯೇ ನಿಮ್ಮ ಸಹೋದರರಿಗೂ ವಿಶ್ರಾಂತಿಯನ್ನು ಕೊಡುವರು. ನಿಮ್ಮ ದೇವರಾದ ಯೆಹೋವ ದೇವರು ಯೊರ್ದನಿನ ಆಚೆಯಲ್ಲಿ ಅವರಿಗೆ ಕೊಟ್ಟ ದೇಶವನ್ನು ಅವರು ಸ್ವಾಧೀನಪಡಿಸಿಕೊಳ್ಳುವರು. ಅದುವರೆಗೆ ನೀವು ಅವರೊಂದಿಗೆ ಸೇರಿ ಯುದ್ಧಕ್ಕೆ ಹೋಗಿರಿ. ಅನಂತರ ನಿಮ್ಮಲ್ಲಿ ಪ್ರತಿಯೊಬ್ಬನೂ ನಾನು ನಿಮಗೆ ಕೊಟ್ಟ ಸ್ಥಳಗಳಗೆ ಹಿಂತಿರುಗಿ ಬರಬಹುದು.” [PE]
21. {#1ಯೊರ್ದನ್ ದಾಟಲು ಮೋಶೆಗೆ ಪ್ರತಿಬಂಧ } [PS]ಆ ಕಾಲದಲ್ಲಿ ನಾನು ಯೆಹೋಶುವನಿಗೆ ಆಜ್ಞಾಪಿಸಿ, “ನಿಮ್ಮ ದೇವರಾದ ಯೆಹೋವ ದೇವರು ಆ ಇಬ್ಬರು ಅರಸರಿಗೆ ಮಾಡಿದ್ದನ್ನೆಲ್ಲಾ ನಿನ್ನ ಕಣ್ಣುಗಳು ನೋಡಿದವು. ನೀನು ಹಾದುಹೋಗುವ ಎಲ್ಲಾ ರಾಜ್ಯಗಳನ್ನೂ ಯೆಹೋವ ದೇವರು ಹಾಗೆಯೇ ಮಾಡುವರು.
22. ನೀವು ಅವುಗಳಿಗೆ ಭಯಪಡಬೇಡಿರಿ, ನಿಮ್ಮ ದೇವರಾದ ಯೆಹೋವ ದೇವರೇ ನಿಮಗೋಸ್ಕರ ಯುದ್ಧಮಾಡುವರು,” ಎಂದೆನು. [PE]
23. [PS]ಆ ಕಾಲದಲ್ಲಿ ನಾನು ಯೆಹೋವ ದೇವರಿಗೆ:
24. “ಸಾರ್ವಭೌಮ ಯೆಹೋವ ದೇವರೇ, ನೀವು ನಿಮ್ಮ ಸೇವಕನಿಗೆ ನಿಮ್ಮ ಮಹತ್ವವನ್ನೂ ನಿಮ್ಮ ಹಸ್ತಬಲವನ್ನೂ ತೋರಿಸಲಾರಂಭಿಸಿದಿರಿ. ನಿಮ್ಮ ಮಹತ್ಕಾರ್ಯಗಳ ಹಾಗೆಯೂ, ನಿಮ್ಮ ಪರಾಕ್ರಮದ ಹಾಗೆಯೂ ಮಾಡಲು ಶಕ್ತರಾದ ದೇವರು ಆಕಾಶದಲ್ಲಾಗಲಿ, ಭೂಮಿಯಲ್ಲಾಗಲಿ ಯಾರಿದ್ದಾರೆ?
25. ನಾನು ದಾಟಿ ಹೋಗಿ, ಯೊರ್ದನಿನ ಆಚೆಯಲ್ಲಿರುವ ಆ ಒಳ್ಳೆಯ ದೇಶವನ್ನೂ ಆ ಒಳ್ಳೆಯ ಬೆಟ್ಟವನ್ನೂ ಲೆಬನೋನನ್ನೂ ನೋಡುವುದಕ್ಕೆ ಅಪ್ಪಣೆಯಾಗಬೇಕು,” ಎಂದು ಬಿನ್ನೈಸಿದೆನು. [PE]
26. [PS]ಆದರೆ ಯೆಹೋವ ದೇವರು ನಿಮ್ಮ ನಿಮಿತ್ತ ನನ್ನ ಮೇಲೆ ಕೋಪಮಾಡಿ, ನನ್ನ ಮನವಿಯನ್ನು ಕೇಳಲಿಲ್ಲ. ಯೆಹೋವ ದೇವರು ನನಗೆ, “ಇನ್ನು ಸಾಕು, ಈ ವಿಷಯದಲ್ಲಿ ನನ್ನ ಸಂಗಡ ಇನ್ನು ಮಾತನಾಡಬೇಡ.
27. ಪಿಸ್ಗಾದ ತುದಿಗೆ ಏರಿ, ಪಶ್ಚಿಮಕ್ಕೂ, ಉತ್ತರಕ್ಕೂ, ದಕ್ಷಿಣಕ್ಕೂ, ಪೂರ್ವಕ್ಕೂ ಕಣ್ಣೆತ್ತಿ ಅದನ್ನು ಕಣ್ಣಾರೆ ನೋಡು. ಈ ಯೊರ್ದನನ್ನು ನೀನು ದಾಟಿ ಹೋಗುವುದಿಲ್ಲ.
28. ಆದರೆ ಯೆಹೋಶುವನಿಗೆ ಆಜ್ಞಾಪಿಸಿ, ಅವನಿಗೆ ದೃಢಮಾಡಿ ಬಲಪಡಿಸು. ಅವನು ಈ ಜನರ ಮುಂದೆ ದಾಟಿ ಹೋಗಿ, ನೀನು ನೋಡುವ ದೇಶವನ್ನು ಅವರಿಗೆ ಸ್ವಾಧೀನಪಡಿಸುವನು,” ಎಂದು ಹೇಳಿದರು.
29. ಆಗ ನಾವು ಬೇತ್ ಪೆಗೋರಿಗೆ ಎದುರಾಗಿರುವ ತಗ್ಗಿನಲ್ಲಿ ವಾಸವಾಗಿದ್ದೆವು. [PE]