1. ಯೆಹೋವನಿಗೆ ಸ್ತೋತ್ರ! ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ. [QBR] ಆತನು ಒಳ್ಳೆಯವನು. ಆತನ ಕೃಪೆಯು ಶಾಶ್ವತವಾಗಿರುವುದು. [QBR]
2. ಯೆಹೋವನ ಮಹತ್ಕಾರ್ಯಗಳನ್ನು ಯಾರು ವರ್ಣಿಸಬಲ್ಲರು? [QBR] ಆತನನ್ನು ತಕ್ಕಂತೆ ಕೀರ್ತಿಸುವುದು ಯಾರಿಂದಾದೀತು? [QBR]
3. ಯಾವಾಗಲೂ ನ್ಯಾಯವನ್ನು ಕಾಪಾಡುವವರೂ, [QBR] ನೀತಿಯನ್ನು ಪಾಲಿಸುವವರೂ ಧನ್ಯರು. [QBR]
4. ಯೆಹೋವನೇ, ನನ್ನನ್ನು ನೆನಪುಮಾಡಿಕೊಂಡು, [QBR] ನಿನ್ನ ಪ್ರಜೆಗೆ ತೋರಿಸುವ ದಯೆಯನ್ನು ನನಗೂ ತೋರಿಸು. [QBR] ನನ್ನನ್ನು ರಕ್ಷಿಸಲಿಕ್ಕೆ ಬಾ, [QBR]
5. ಆಗ ನೀನು ಆರಿಸಿಕೊಂಡ ಪ್ರಜೆಯ ಏಳಿಗೆಯನ್ನು ನೋಡಿ, [QBR] ನಾನೂ ಅವರೊಂದಿಗೆ ಸಂತೋಷಿಸುವೆನು; [QBR] ನಿನ್ನ ಸ್ವಕೀಯರೊಂದಿಗೆ ನಾನೂ ಹಿಗ್ಗುವೆನು. [QBR]
6. ನಮ್ಮ ಪೂರ್ವಿಕರಂತೆ ನಾವೂ ಪಾಪಿಗಳು; [QBR] ಅಪರಾಧಮಾಡಿದೆವು; ದುಷ್ಟತನವನ್ನು ನಡೆಸಿದೆವು. [QBR]
7. ನಮ್ಮ ಪೂರ್ವಿಕರು ಐಗುಪ್ತದಲ್ಲಿ ನಿನ್ನ ಅದ್ಭುತಕ್ರಿಯೆಗಳನ್ನು ಲಕ್ಷಿಸಲಿಲ್ಲ; [QBR] ನಿನ್ನ ಕೃಪಾತಿಶಯವನ್ನು ಸ್ಮರಿಸಲಿಲ್ಲ. [QBR] ಅವರು ಕೆಂಪು ಸಮುದ್ರದ ಬಳಿಯಲ್ಲಿ ನಿನಗೆ ತಿರುಗಿಬಿದ್ದರು. [QBR]
8. ಆದರೂ ಆತನು ತನ್ನ ಹೆಸರಿನ ನಿಮಿತ್ತವಾಗಿಯೂ, [QBR] ತನ್ನ ಶೌರ್ಯವನ್ನು ಪ್ರಕಟಿಸುವುದಕ್ಕಾಗಿಯೂ ಅವರನ್ನು ರಕ್ಷಿಸಿದನು. [QBR]
9. ಆತನು ಗದರಿಸಲು ಕೆಂಪು ಸಮುದ್ರವು ಒಣಗಿಹೋಯಿತು; [QBR] ಅಡವಿಯನ್ನೋ ಎಂಬಂತೆ ಸಾಗರವನ್ನು ದಾಟಿಸಿದನು. [QBR]
10. ಹಗೆಗಳ ಕೈಯಿಂದ ಅವರನ್ನು ತಪ್ಪಿಸಿದನು; [QBR] ವೈರಿಯ ಹಸ್ತದಿಂದ ಬಿಡಿಸಿದನು. [QBR]
11. ಜಲರಾಶಿಯು ಅವರ ವಿರೋಧಿಗಳನ್ನು ಮುಚ್ಚಿಬಿಟ್ಟಿತು; [QBR] ಒಬ್ಬನೂ ಉಳಿಯಲಿಲ್ಲ. [QBR]
12. ಆಗ ಅವರು ಆತನ ಮಾತನ್ನು ನಂಬಿ ಆತನನ್ನು ಕೀರ್ತಿಸಿದರು. [QBR]
13. ಆದರೆ ಅವರು ಬೇಗನೆ ಆತನ ಕೆಲಸಗಳನ್ನು ಮರೆತು, [QBR] ಆತನ ನಡೆಸುವಿಕೆಗೆ ಕಾದಿರದೆ, [QBR]
14. ಅರಣ್ಯದಲ್ಲಿ ಅತಿ ಆಶೆಗೊಂಡವರಾಗಿ, [QBR] ಅಡವಿಯಲ್ಲಿ ದೇವರನ್ನು ಪರೀಕ್ಷಿಸಿದರು. [QBR]
15. ಆತನು ಅವರ ಆಶೆಯನ್ನು ಪೂರೈಸಿದರೂ, [QBR] ಅವರ ಪ್ರಾಣಕ್ಕೆ ಕ್ಷಯವನ್ನು ಬರಮಾಡಿದನು. [QBR]
16. ಅವರು ಪಾಳೆಯದಲ್ಲಿ ಮೋಶೆಯ ಮೇಲೆಯೂ, [QBR] ಯೆಹೋವನು ಪ್ರತಿಷ್ಠಿಸಿದ ಆರೋನನ ಮೇಲೆಯೂ ಹೊಟ್ಟೆಕಿಚ್ಚುಪಡಲು, [QBR]
17. ಭೂಮಿಯು ಬಾಯ್ದೆರೆದು ದಾತಾನನನ್ನು ನುಂಗಿಬಿಟ್ಟಿತು; [QBR] ಅಬಿರಾಮನ ಕಡೆಯವರನ್ನು ಮುಚ್ಚಿಬಿಟ್ಟಿತು. [QBR]
18. ಅವರ ಮಧ್ಯದಲ್ಲಿ ಬೆಂಕಿಯುಂಟಾಯಿತು; [QBR] ಅಗ್ನಿಜ್ವಾಲೆಯು ದುಷ್ಟರನ್ನು ದಹಿಸಿಬಿಟ್ಟಿತು. [QBR]
19. ಹೋರೇಬಿನಲ್ಲಿ ಎರಕದ ಬಸವನನ್ನು ಮಾಡಿ, [QBR] ಅದಕ್ಕೆ ಅಡ್ಡಬಿದ್ದರು. [QBR]
20. ಹೀಗೆ ಅವರು ತಮ್ಮ ದಿವ್ಯಮಹಿಮೆಯ ದೇವರನ್ನು ಬಿಟ್ಟು, [QBR] ಹುಲ್ಲು ತಿನ್ನುವ ಎತ್ತಿನ ಮೂರ್ತಿಯನ್ನು ಹಿಡಿದುಕೊಂಡರು. [QBR]
21. ಐಗುಪ್ತದಲ್ಲಿ ಮಹತ್ತುಗಳನ್ನೂ, ಹಾಮನ ದೇಶದಲ್ಲಿ ಅದ್ಭುತಗಳನ್ನೂ, [QBR]
22. ಕೆಂಪು ಸಮುದ್ರದ ಬಳಿಯಲ್ಲಿ ಘೋರಕೃತ್ಯಗಳನ್ನೂ ನಡೆಸಿದ, [QBR] ತಮ್ಮ ರಕ್ಷಕನಾದ ದೇವರನ್ನು ಮರೆತೇ ಬಿಟ್ಟರು. [QBR]
23. ಆದುದರಿಂದ ಆತನು ಅವರನ್ನು ಸಂಹರಿಸುವೆನು ಎನ್ನಲು, [QBR] ಆತನು ಆರಿಸಿಕೊಂಡ ಮೋಶೆಯು ಮಧ್ಯಸ್ಥನಾಗಿ, [QBR] ಅವರನ್ನು ಸಂಹರಿಸದಂತೆ ಆತನ ಕೋಪವನ್ನು ಶಾಂತಪಡಿಸಿದನು. [QBR]
24. ಅವರು ಆ ರಮಣೀಯ ದೇಶವನ್ನು ತಿರಸ್ಕರಿಸಿದರು, [QBR] ಆತನ ಮಾತನ್ನು ನಂಬಲಿಲ್ಲ. [QBR]
25. ತಮ್ಮ ತಮ್ಮ ಗುಡಾರಗಳಲ್ಲಿ ಗುಣುಗುಟ್ಟಿ, [QBR] ಯೆಹೋವನ ಮಾತಿಗೆ ಕಿವಿಗೊಡಲಿಲ್ಲ. [QBR]
26. ಇದರಿಂದ ಆತನು ಅವರನ್ನು ಅರಣ್ಯದಲ್ಲಿಯೇ ಬೀಳಿಸುವೆನೆಂದೂ, [QBR]
27. ಅವರ ಸಂತಾನವನ್ನು ದೇಶಾಂತರಗಳಲ್ಲಿ ಚದುರಿಸಿ, [QBR] ಅನ್ಯಜನಾಂಗಗಳ ನಡುವೆ ನಾಶಮಾಡುವೆನೆಂದೂ ಕೈಯೆತ್ತಿದನು. [QBR]
28. ಅವರು ತಮ್ಮನ್ನು ಬಾಳ್ ಪೆಗೋರನ ಸೇವೆಗೆ ಒಪ್ಪಿಸಿ, [QBR] ಮೂರ್ತಿಗಳಿಗೆ ಯಜ್ಞ ಮಾಡಿದ್ದನ್ನು ಊಟಮಾಡಿದರು. [QBR]
29. ಈ ತಮ್ಮ ಕ್ರಿಯೆಗಳಿಂದ ಆತನನ್ನು ಕೆಣಕಿದರು; [QBR] ಅವರಲ್ಲಿ ವ್ಯಾಧಿಯುಂಟಾಯಿತು. [QBR]
30. ಫೀನೆಹಾಸನು ಎದ್ದು ಅವರನ್ನು ದಂಡಿಸಲು, [QBR] ಆ ವ್ಯಾಧಿಯು ನಿಂತುಹೋಯಿತು. [QBR]
31. ಅವನು ಮಾಡಿದ್ದು ತಲಾತಲಾಂತರಕ್ಕೂ ನೀತಿಯೆಂದು ಎಣಿಸಲ್ಪಟ್ಟಿತು. [QBR]
32. ಅವರು ಮೆರೀಬ ಪ್ರವಾಹದ ಸಮೀಪದಲ್ಲಿ ಆತನನ್ನು ರೇಗಿಸಿದರು. [QBR] ಅವರ ದೆಸೆಯಿಂದ ಮೋಶೆಗೆ ಕೇಡು ಉಂಟಾಯಿತು. [QBR]
33. ಅವರು ದೇವರಾತ್ಮನಿಗೆ ವಿರುದ್ಧವಾಗಿ ನಿಂತಿದ್ದರಿಂದ, [QBR] ಮೋಶೆ ದುಡುಕಿ ಮಾತನಾಡಿದನು. [QBR]
34. ಅನ್ಯ ಜನಾಂಗದವರನ್ನು ಸಂಹರಿಸಬೇಕೆಂಬ, [QBR] ಯೆಹೋವನ ಆಜ್ಞೆಗೆ ಅವಿಧೇಯರಾಗಿ, [QBR]
35. ಅವರೊಡನೆ ಕೂಡಿಕೊಂಡು, ಅವರ ದುರಾಚಾರಗಳನ್ನು ಕಲಿತುಕೊಂಡರು. [QBR]
36. ಅವರ ವಿಗ್ರಹಗಳನ್ನು ಸೇವಿಸಿದರು; ಅವು ಅವರಿಗೆ ಉರುಲಿನಂತಾದವು. [QBR]
37. ಅವರು ತಮ್ಮ ಗಂಡು ಹೆಣ್ಣು ಮಕ್ಕಳನ್ನು ಭೂತಗಳಿಗೆ ಬಲಿಕೊಟ್ಟರು. [QBR]
38. ಕಾನಾನ್ಯರ ಮೂರ್ತಿಗಳ ಅರ್ಪಣೆಗೋಸ್ಕರ, [QBR] ತಮ್ಮ ಮಕ್ಕಳ ನಿರಪರಾಧ ರಕ್ತವನ್ನು ಸುರಿಸಿದರು; [QBR] ಇಂಥ ಕೊಲೆಗಳಿಂದ ದೇಶವನ್ನು ಹೊಲೆಮಾಡಿದರು. [QBR]
39. ಅವರು ತಮ್ಮ ದುಷ್ಕೃತ್ಯಗಳಿಂದ ಅಶುದ್ಧರಾದರು. [QBR] ದುರಾಚಾರಗಳಿಂದ ದೇವದ್ರೋಹಿಗಳಾದರು. [QBR]
40. ಆಗ ಯೆಹೋವನ ಕೋಪವು ಅವರ ಮೇಲೆ ಉರಿಗೊಂಡಿತು; [QBR] ಆತನು ತನ್ನ ಸ್ವಾಸ್ತ್ಯವಾದ ಪ್ರಜೆಗಳನ್ನು ಅಸಹ್ಯಿಸಿ, [QBR]
41. ಅವರನ್ನು ಅನ್ಯಜನಾಂಗಗಳ ಕೈಗೆ ಒಪ್ಪಿಸಿದನು. [QBR] ವೈರಿಗಳು ಅವರ ಮೇಲೆ ಅಧಿಕಾರ ನಡೆಸಿದರು; [QBR]
42. ಶತ್ರುಗಳು ಅವರನ್ನು ಕುಗ್ಗಿಸಿದರು; ಅವರ ಕೈಕೆಳಗೆ ತಗ್ಗಿಹೋದರು. [QBR]
43. ಆತನು ಅವರನ್ನು ಅನೇಕಾವರ್ತಿ ರಕ್ಷಿಸಿದರೂ, [QBR] ಅವರು ತಮ್ಮ ಆಲೋಚನೆಯನ್ನೇ ಅನುಸರಿಸಿ ಅವಿಧೇಯರಾದರು; [QBR] ತಮ್ಮ ಅಕ್ರಮದಿಂದಲೇ ಹೀನಸ್ಥಿತಿಗೆ ಬಂದರು. [QBR]
44. ಆದರೆ ಆತನು ಕಷ್ಟದಲ್ಲಿದ್ದ, [QBR] ಅವರ ಮೊರೆಯನ್ನು ಕೇಳಿ ಪರಾಂಬರಿಸಿದನು. [QBR]
45. ತನ್ನ ಒಡಂಬಡಿಕೆಯನ್ನು ನೆನಪುಮಾಡಿಕೊಂಡು, [QBR] ತನ್ನ ಕೃಪಾತಿಶಯದಿಂದ ಅವರನ್ನು ಕನಿಕರಿಸಿದನು. [QBR]
46. ಸೆರೆಯೊಯ್ದವರ ದಯೆಗೆ ಅವರು ಪಾತ್ರರಾಗುವಂತೆ ಮಾಡಿದನು. [QBR]
47. ಯೆಹೋವನೇ, ನಮ್ಮ ದೇವರೇ, ರಕ್ಷಿಸು; [QBR] ಅನ್ಯಜನಗಳಲ್ಲಿ ಚದರಿರುವ ನಮ್ಮನ್ನು ತಿರುಗಿ ಕೂಡಿಸು. [QBR] ಆಗ ನಿನ್ನ ಪರಿಶುದ್ಧ ನಾಮವನ್ನು ಕೊಂಡಾಡುವೆವು; [QBR] ನಿನ್ನ ಸ್ತೋತ್ರದಲ್ಲಿ ಹೆಚ್ಚಳಪಡುವೆವು. [QBR]
48. ಇಸ್ರಾಯೇಲ್ ದೇವರಾದ ಯೆಹೋವನಿಗೆ, [QBR] ಯುಗಯುಗಾಂತರಗಳವರೆಗೂ ಕೊಂಡಾಟವಾಗಲಿ; [QBR] ಸರ್ವಜನರೂ “ಆಮೆನ್” ಎನ್ನಲಿ. [QBR] ಯೆಹೋವನಿಗೆ ಸ್ತೋತ್ರ! [PE]