1. {ಯೆರೂಸಲೇಮಿನವರ ದುಃಖ} [PS] ಅಯ್ಯೋ, ಜನಭರಿತವಾಗಿದ್ದ ನಗರಿಯು ಒಂಟಿಯಾಗಿ ಕುಳಿತುಬಿಟ್ಟಳಲ್ಲಾ! [QBR] ಜನಾಂಗಗಳಲ್ಲಿ ರತ್ನವಾಗಿದ್ದವಳು ವಿಧವೆಯಾದಳು, [QBR] ಸಂಸ್ಥಾನಗಳಲ್ಲಿ ಶಿರೋಮಣಿಯಾಗಿದ್ದವಳು ಗುಲಾಮಳಾದಳು. [QBR]
2. ರಾತ್ರಿಯಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಾ ಗೋಳಾಡುವುದರಿಂದ ಕಣ್ಣೀರು ಕೆನ್ನೆಗಳ ಮೇಲೆ ನಿಂತೇ ಇದೆ; [QBR] ಆಕೆಯ ಬಹುಮಂದಿ ಪ್ರಿಯರಲ್ಲಿ ಯಾರೂ ಸಂತೈಸರು; ಆಕೆಯ ಮಿತ್ರರೆಲ್ಲಾ ದ್ರೋಹಮಾಡಿ ಶತ್ರುಗಳಾಗಿದ್ದಾರೆ. [QBR]
3. ಯೆಹೂದವೆಂಬಾಕೆಯು ಘೋರವಾದ ಸೇವೆ ಮತ್ತು ಶ್ರಮೆಗಳಿಂದ ತಪ್ಪಿಸಿಕೊಳ್ಳಬೇಕೆಂದು ವಲಸೆಹೋಗಿದ್ದಾಳೆ; [QBR] ಮ್ಲೇಚ್ಛರ ಮಧ್ಯದಲ್ಲಿ ನೆಮ್ಮದಿಯಿಲ್ಲದೆ ವಾಸಮಾಡುತ್ತಿದ್ದಾಳೆ; [QBR] ಆಕೆಯು ಇಕ್ಕಟ್ಟಿಗೆ ಸಿಕ್ಕಿಕೊಂಡಿರುವಾಗಲೇ ಆಕೆಯ ಹಿಂಸಕರೆಲ್ಲಾ ಆಕೆಯನ್ನು ಹಿಂದಟ್ಟಿ ಹಿಡಿದರು. [QBR]
4. ಯಾರೂ ಮಹೋತ್ಸವಗಳಿಗೆ ಬಾರದೆ ಇರುವುದರಿಂದ ಚೀಯೋನಿಗೆ ಹೋಗುವ ದಾರಿಗಳು ಬಿಕೋ ಎನ್ನುತ್ತಿವೆ; [QBR] ಅದರ ಬಾಗಿಲುಗಳೆಲ್ಲಾ ಹಾಳು ಬಿದ್ದಿವೆ, ಅಲ್ಲಿನ ಯಾಜಕರು ನರಳಾಡುತ್ತಾರೆ; [QBR] ಅಲ್ಲಿನ ಕನ್ಯೆಯರು ವ್ಯಥೆಪಡುತ್ತಾರೆ, ನಗರಿಗೆ ನಗರಿಯೇ ಶೋಕದಿಂದ ತುಂಬಿದೆ. [QBR]
5. ಅದರ ಲೆಕ್ಕವಿಲ್ಲದ ದ್ರೋಹಗಳಿಗಾಗಿ ಯೆಹೋವನು ಅದನ್ನು ವ್ಯಥೆಗೊಳಿಸಿದ್ದಾನೆ; ಅದರ ವಿರೋಧಿಗಳು ಅದಕ್ಕೆ ಅಧಿಪತಿಗಳಾಗಿದ್ದಾರೆ, [QBR] ಅದರ ಶತ್ರುಗಳು ನೆಮ್ಮದಿಯಲ್ಲಿದ್ದಾರೆ; ಅದರ ಎಳೆಕೂಸುಗಳು ವಿರೋಧಿಗಳ ವಶದಲ್ಲಿ ಸೆರೆಹೋಗಿವೆ. [QBR]
6. ಚೀಯೋನ್ ನಗರಿಯ ವೈಭವವೆಲ್ಲಾ ಕಳೆದುಹೋಗಿದೆ; ಅಲ್ಲಿನ ಪ್ರಧಾನರು ಮೇವಿಲ್ಲದ ಜಿಂಕೆಗಳಂತೆ ಬಲಗುಂದಿ ಹಿಡಿಯಲು ಬೆನ್ನತ್ತಿದವರಿಗೆ ಬೆನ್ನುಕೊಟ್ಟು ಓಡಿಹೋಗಿದ್ದಾರೆ. [QBR]
7. ಯೆರೂಸಲೇಮ್ ಪುರಿಯು ದಿಕ್ಕಾಪಾಲಾಗಿ ಅಲೆದು ಕಷ್ಟಪಡುವಾಗ ಪುರಾತನಕಾಲದಿಂದ ತನಗಿದ್ದ ವೈಭವವನ್ನು ಜ್ಞಾಪಿಸಿಕೊಳ್ಳುತ್ತಾಳೆ. [QBR] ಆಕೆಗೆ ಯಾರ ಸಹಾಯವೂ ಇಲ್ಲದೆ ಆಕೆಯ ಜನರು ವಿರೋಧಿಯ ಕೈಗೆ ಸಿಕ್ಕಿದಾಗ ಹಾಳುಬಿದ್ದಿರುವ ಆಕೆಯನ್ನು ವೈರಿಗಳು ನೋಡಿ ಹಾಸ್ಯಮಾಡಿದರು. [QBR]
8. ಯೆರೂಸಲೇಮು ಪಾಪಮಾಡಿ ಅಶುದ್ಧಳಾಗಿದ್ದಾಳೆ; ಮೊದಲು ಆಕೆಯನ್ನು ಸನ್ಮಾನಿಸುತ್ತಿದ್ದವರು ಈಗ ಆಕೆಯ ಮಾನಭಂಗವನ್ನು ಕಂಡು ಹೀನೈಸುತ್ತಾರೆ; ಆಕೆಯು ಮುಖಮುಚ್ಚಿ ದುಃಖಿಸುತ್ತಾಳೆ. [QBR]
9. ಆಕೆಯ ನೆರಿಗೆಯು ಹೊಲಸಾಗಿತ್ತು, ಮುಂದಿನ ಗತಿಯೇನೆಂದು ಮನಸ್ಸಿಗೆ ತರಲಿಲ್ಲ; ಆದಕಾರಣ ವಿಪರೀತ ಹೀನಸ್ಥಿತಿಯಲ್ಲಿ ಬಿದ್ದು ಬಿಟ್ಟಳು; ಸಂತೈಸುವವರೇ ಇಲ್ಲ. [QBR] “ಯೆಹೋವನೇ, ನನ್ನ ಕಷ್ಟವನ್ನು ಲಕ್ಷಿಸು; ನನ್ನ ಶತ್ರು ಹೆಚ್ಚಳಪಡುತ್ತಾನಲ್ಲಾ” ಎಂದು ಮೊರೆಯಿಡುತ್ತಾಳೆ. [QBR]
10. ವಿರೋಧಿಯು ಕೈಚಾಚಿ ಅವಳ ಭೋಗ್ಯವಸ್ತುಗಳನ್ನೆಲ್ಲಾ ಬಾಚಿಬಿಟ್ಟನು; “ಮ್ಲೇಚ್ಛರು ನಿನ್ನ ಸಭೆಗೆ ಸೇರಬಾರದು” ಎಂದು ನೀನು ಆಜ್ಞಾಪಿಸಿದರೂ [QBR] ಅಂಥವರೇ ತನ್ನಲ್ಲಿನ ಪವಿತ್ರಾಲಯದೊಳಗೆ ಸೇರುವುದನ್ನು ಆಕೆಯು ಕಾಣಬೇಕಾಯಿತು. [QBR]
11. ಆಕೆಯ ಜನರೆಲ್ಲಾ ನರಳುತ್ತಾರೆ, ಅವರು ಅನ್ನವನ್ನು ಹುಡುಕಿಕೊಳ್ಳುವ ಗತಿ ಬಂತು, ಪ್ರಾಣಾಧಾರವಾದ ಆಹಾರಕ್ಕಾಗಿ ತಮ್ಮ ಅಮೂಲ್ಯ ವಸ್ತುಗಳನ್ನೂ ಕೊಟ್ಟುಬಿಟ್ಟಿದ್ದಾರೆ, [QBR] “ಯೆಹೋವನೇ, ನೋಡು, ಕಟಾಕ್ಷಿಸು, ನಾನು ತುಚ್ಛಳಾದೆನಲ್ಲಾ” ಎಂದು ಪ್ರಲಾಪಿಸುತ್ತಾಳೆ. [QBR]
12. ಹಾದುಹೋಗುವವರೇ, ನಿಮ್ಮಲ್ಲಿ ಯಾರಿಗೂ ನನ್ನ ಚಿಂತೆ ಇಲ್ಲವೋ? ಯೆಹೋವನು ಅತಿ ರೋಷಗೊಂಡು [QBR] ನನ್ನನ್ನು ಬಾಧಿಸಿ ನನಗೆ ಉಂಟುಮಾಡಿದ ವ್ಯಥೆಯನ್ನು ನೀವು ನೋಡಿ [QBR] ಇಂಥಾ ವ್ಯಥೆಯು ಇನ್ನೆಲ್ಲಾದರೂ ಉಂಟೋ ಯೋಚಿಸಿರಿ. [QBR]
13. ಆತನು ಮೇಲಣ ಲೋಕದಿಂದ ಬೆಂಕಿಯನ್ನು ಕಳುಹಿಸಿದ್ದಾನೆ, ಅದು ನನ್ನ ಎಲುಬುಗಳನೆಲ್ಲಾ ವ್ಯಾಪಿಸಿದೆ; [QBR] ನನ್ನ ಕಾಲುಗಳಿಗೆ ಬಲೆಯೊಡ್ಡಿದ್ದಾನೆ, ನನ್ನನ್ನು ಹಿಂದಕ್ಕೆ ತಿರುಗಿಸಿದ್ದಾನೆ, [QBR] ನಾನು ಹಾಳುಬಿದ್ದು ಸದಾ ಬಳಲುವಂತೆ ಮಾಡಿದ್ದಾನೆ. [QBR]
14. ಆತನ ಕೈ, ನನ್ನ ದ್ರೋಹಗಳನ್ನು ನನ್ನ ಮೇಲೆ ನೊಗವು ಇರುವಂತೆ ನನ್ನನ್ನು ಬಿಗಿದಿದೆ. ಆ ದ್ರೋಹಗಳು ಹುರಿಗೊಂಡು ನನ್ನ ಕುತ್ತಿಗೆಯನ್ನು ಸುತ್ತಿಕೊಂಡಿವೆ; [QBR] ನನ್ನ ಬಲವನ್ನು ಕುಂದಿಸಿದ್ದಾನೆ; ನಾನು ಎದುರಿಸಲಾರದವರ ಕೈಗೆ ಕರ್ತನು ನನ್ನನ್ನು ಸಿಕ್ಕಿಸಿದ್ದಾನೆ. [QBR]
15. ಕರ್ತನು ನನ್ನ ಶೂರರನ್ನೆಲ್ಲಾ ನನ್ನ ಕಣ್ಣೆದುರಿಗೆ ಹೊರಳಾಡಿಸಿದ್ದಾನೆ; ನನ್ನ ಯುವಕರನ್ನು ಸದೆಬಡಿದಿದ್ದಾನೆ. [QBR] ನನ್ನ ಕೇಡಿಗಾಗಿಯೇ ಮಹೋತ್ಸವವನ್ನು ಏರ್ಪಡಿಸಿದ್ದಾನೆ; [QBR] ಕರ್ತನು ಯೆಹೂದವೆಂಬ ಕನ್ಯೆಯನ್ನು ತೊಟ್ಟಿಯಲ್ಲಿನ ದ್ರಾಕ್ಷಿಯ ಹಾಗೆ ತುಳಿದಿದ್ದಾನೆ. [QBR]
16. ಈ ವಿಪತ್ತುಗಳಿಂದ ಗೋಳಾಡುತ್ತಿರುವೆನು, ನನ್ನನ್ನು ಸಂತೈಸಿ ದಣಿವಾರಿಸತಕ್ಕವನು ದೂರವಾಗಿರುವುದರಿಂದ [QBR] ನನ್ನ ಕಣ್ಣೀರು ಧಾರೆಧಾರೆಯಾಗಿ ಸುರಿಯುವುದು. ಶತ್ರುವು ಗೆದ್ದು ನನ್ನ ಮಕ್ಕಳು ಹಾಳಾದರು. [QBR]
17. ಚೀಯೋನ್ ನಗರಿಯು ಕೈಚಾಚಿ ಅಂಗಲಾಚಿದರೂ ಯಾರೂ ಸಂತೈಸರು; ಯಾಕೋಬಿನ ನೆರೆಹೊರೆಯವರು [QBR] ಅದಕ್ಕೆ ವಿರೋಧಿಗಳಾಗಿರಲಿ ಎಂದು ಯೆಹೋವನು ತೀರ್ಮಾನಿಸಿದ್ದಾನೆ; ಯೆರೂಸಲೇಮು ಅವರ ನಡುವೆ ಹೊಲೆಯಾಗಿ ಬಿದ್ದಿದೆ. [QBR]
18. ಯೆಹೋವನು ನೀತಿಸ್ವರೂಪನು, ನಾನಾದರೋ ಆತನ ಆಜ್ಞೆಗಳನ್ನು ಮೀರಿದ ದ್ರೋಹಿ; [QBR] ಜನಾಂಗಗಳೇ, ನೀವೆಲ್ಲರೂ ಕಿವಿಗೊಡಿರಿ, ನನ್ನ ವ್ಯಥೆಯನ್ನು ನೋಡಿರಿ; ನನ್ನ ಕನ್ಯೆಯರು ಮತ್ತು ಯುವಕರು ಸೆರೆಹೋಗಿದ್ದಾರಲ್ಲಾ! [QBR]
19. ನಾನು ಕೂಗಿಕೊಂಡರೂ ನನ್ನ ನಲ್ಲರಿಂದ ನನಗೆ ಮೋಸವಾಯಿತು, [QBR] ನನ್ನ ಯಾಜಕರೂ ಮತ್ತು ಹಿರಿಯರೂ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದು ಆಹಾರವನ್ನು ಹುಡುಕುವುದರಲ್ಲಿಯೇ ಪಟ್ಟಣದೊಳಗೆ ಪ್ರಾಣಬಿಟ್ಟರು. [QBR]
20. ಯೆಹೋವನೇ, ಕಟಾಕ್ಷಿಸು; ನಾನು ಇಕ್ಕಟ್ಟಿಗೆ ಸಿಕ್ಕಿಕೊಂಡಿದ್ದೇನೆ, ನನ್ನ ಕರುಳು ಕುದಿಯುತ್ತಿದೆ. [QBR] ನಾನು ಕೇವಲ ದ್ರೋಹಮಾಡಿದ್ದರಿಂದ ನನ್ನ ಹೃದಯವು ನನ್ನೊಳಗೆ ಕುಂದಿಹೋಗಿದೆ; ಮನೆಯ ಹೊರಗೆ ಸಂಹಾರ, ಒಳಗೆ ಪ್ರಾಣಸಂಕಟ. [QBR]
21. ಯಾರೂ ನನ್ನನ್ನು ಸಂತೈಸರು; ನನ್ನ ನರಳಾಟದ ಸುದ್ದಿಯು ನನ್ನ ವೈರಿಗಳ ಕಿವಿಗೆ ಬಿದ್ದಿದೆ; [QBR] ನನ್ನ ಶತ್ರುಗಳೆಲ್ಲಾ ನನಗಾದ ಕೇಡಿನ ಸಮಾಚಾರವನ್ನು ಕೇಳಿ ಅದನ್ನು ಮಾಡಿದವನು ನೀನೇ ಎಂದು ಉಲ್ಲಾಸಪಡುತ್ತಾರೆ. [QBR] ನೀನು ಮುಂತಿಳಿಸಿದ ದಿನವನ್ನು ಬರಮಾಡುವಾಗ ನನಗಾದ ಗತಿಯು ಅವರಿಗೂ ಆಗಲಿ! [QBR]
22. ಅವರು ಮಾಡಿದ ಕೆಡುಕೆಲ್ಲಾ ನಿನ್ನ ಚಿತ್ತಕ್ಕೆ ಮುಟ್ಟಲಿ; [QBR] ನೀನು ನನ್ನ ಎಲ್ಲಾ ದ್ರೋಹಗಳಿಗೆ ಪ್ರತಿಯಾಗಿ ನನಗೆ ಮಾಡಿದಂತೆ ಅವರಿಗೂ ಮಾಡು; [QBR] ನನ್ನ ನರಳಾಟವು ಬಹಳವಾಗಿದೆ, ನನ್ನ ಎದೆಯು ಕುಂದಿಹೋಗಿದೆ. [PE]