1. {ಯೋಬನ ಮೊದಲನೆಯ ಸಂಭಾಷಣೆ} [PS] ಆ ಮೇಲೆ ಯೋಬನು ಬಾಯಿ ತೆರೆದು ತನ್ನ ಜನ್ಮ ದಿನವನ್ನು ಶಪಿಸಿ, [QBR]
2. ಯೋಬನು ಇಂತೆಂದನು, [QBR]
3. “ನಾನು ಹುಟ್ಟಿದ ದಿನವು ಹಾಳಾಗಿ ಹೋಗಲಿ, ‘ಗರ್ಭದಲ್ಲಿ ಪುರುಷಾಂಕುರವಾಯಿತು’ ಎಂದು ನುಡಿದ ರಾತ್ರಿಯು ನಾಶವಾಗಲಿ [QBR]
4. ಆ ದಿನವು ಕತ್ತಲೆಯಾಗಲಿ, ಮೇಲಿನಿಂದ ದೇವರು ಅದನ್ನು ಲೆಕ್ಕಿಸದಿರಲಿ, ಅದರ ಮೇಲೆ ಬೆಳಕು ಪ್ರಕಾಶಿಸದಿರಲಿ. [QBR]
5. ಕತ್ತಲೆಯೂ, ಘೋರಾಂಧಕಾರವೂ ಅದನ್ನು ವಶಮಾಡಿಕೊಳ್ಳಲಿ. ಮೋಡವು ಅದನ್ನು ಕವಿಯಲಿ, ಹಗಲನ್ನು ಮುಚ್ಚಿಕೊಳ್ಳುವ ಮೊಬ್ಬು ಅದನ್ನು ಹೆದರಿಸಲಿ. [QBR]
6. ಕಾರ್ಗತ್ತಲು ಆ ರಾತ್ರಿಯನ್ನು ಹಿಡಿದುಕೊಳ್ಳಲಿ, ಅದು ಮಾಸಗಳ ಲೆಕ್ಕದಲ್ಲಿ ಸೇರದೆ ಸಂವತ್ಸರದ ದಿನಗಳಲ್ಲಿ ಹರ್ಷಿಸದೆ ಇರಲಿ. [QBR]
7. ಆಹಾ, ರಾತ್ರಿಯು ಬಂಜೆಯಾಗಿ ಅದರಲ್ಲಿ ಉತ್ಸಾಹಧ್ವನಿಯು ಉಂಟಾಗದಿರಲಿ. [QBR]
8. ಘಟಸರ್ಪವನ್ನು ಎಬ್ಬಿಸುವುದರಲ್ಲಿಯೂ, ದಿನಗಳನ್ನು ಶಪಿಸುವುದರಲ್ಲಿಯೂ ಜಾಣರಾದ (ಮಾಂತ್ರಿಕರು) ಅದಕ್ಕೆ ಶಾಪಕೊಡಲಿ. [QBR]
9. ಆ ದಿನದಲ್ಲಿ ಮುಂಜಾನೆಯ ನಕ್ಷತ್ರಗಳೂ ಮಿಣುಕದೆ ಹೋಗಲಿ. ಅದು ಬೆಳಕನ್ನು ಎದುರುನೋಡಿದರೂ ಹೊಂದದಿರಲಿ. ಅರುಣೋದಯವೆಂಬ ರೆಪ್ಪೆ ತೆರೆಯುವುದನ್ನು ಅದು ಕಾಣದಿರಲಿ. [QBR]
10. ಆ ರಾತ್ರಿಯು ನನ್ನ ತಾಯಿಯ ಗರ್ಭದ್ವಾರವನ್ನು ಮುಚ್ಚಿ, ನನ್ನ ಕಣ್ಣುಗಳಿಗೆ ಶ್ರಮೆಯನ್ನು ಮರೆಮಾಡಲಿಲ್ಲವಲ್ಲಾ. [QBR]
11. ನಾನು ಹುಟ್ಟುವಾಗಲೇ ಏಕೆ ಸಾಯಲಿಲ್ಲ. ಗರ್ಭದಿಂದ ಬಂದಾಗಲೇ ಏಕೆ ಪ್ರಾಣಬಿಡಲಿಲ್ಲ? [QBR]
12. ತಾಯಿಯ ಮಡಿಲು ನನ್ನನ್ನು ಹೊತ್ತದ್ದೇಕೆ? ತಾಯಿಯ ಮೊಲೆಗಳು ನನಗೆ ಕುಡಿಯ ಕೊಟ್ಟದ್ದೇಕೆ? [QBR]
13. ಆಗಲೇ ಸತ್ತಿದ್ದರೆ ನಾನೀಗ ಮೌನವಾಗಿ ಮಲಗಿರುತ್ತಿದ್ದೆ, ಕಣ್ಣು ಮುಚ್ಚಿ ಪ್ರಶಾಂತವಾಗಿ ನಿದ್ರಿಸುತ್ತಿದ್ದೆನು. [QBR]
14. ಭೂಲೋಕದಲ್ಲಿ ಹಾಳುಬಿದ್ದ ಪಟ್ಟಣಗಳನ್ನು ತಮ್ಮ ಸಮಾಧಿಗಾಗಿ ಕಟ್ಟಿಸಿಕೊಂಡ ಅರಸರೊಂದಿಗೂ, ಮಂತ್ರಿಗಳೊಡನೆಯೂ ನಾನಿರುತ್ತಿದ್ದೆ. [QBR]
15. ಬಂಗಾರವನ್ನು ಕೂಡಿಸಿಟ್ಟು ತಮ್ಮ ಮನೆಗಳನ್ನು ಬೆಳ್ಳಿಯಿಂದ ತುಂಬಿಸಿದ ಅಧಿಪತಿಗಳ ಸಂಗಡಲೂ ವಿಶ್ರಮಿಸಿಕೊಳ್ಳುತ್ತಿದ್ದೆನು. [QBR]
16. ಒಂದು ವೇಳೆ ನಾನು ಗರ್ಭಸ್ರಾವವಾಗಿ ಬಿದ್ದು, ಹೂಳಿಟ್ಟ ಪಿಂಡದಂತೆ, ಬೆಳಕನ್ನೇ ಕಾಣದೆ ಸತ್ತುಹೋದ ಕೂಸುಗಳಂತೆ ಜನ್ಮವಿಲ್ಲದವನಾಗಿ ಇರುತ್ತಿದ್ದೆನು. [QBR]
17. ಅಲ್ಲಿ ದುಷ್ಟರ ಆಗ್ರಹವು ಅಣಗಿ ಹೋಗುವುದು, ದಣಿದವರು ದಣಿವಾರಿಸಿಕೊಳ್ಳುವರು. [QBR]
18. ಸೆರೆಯಾದವರು ಬಾಧಿಸುವ ಅಧಿಕಾರಿಯ ಧ್ವನಿಯನ್ನೇ ಕೇಳದೆ, ಗುಂಪುಗುಂಪಾಗಿ ವಿಶ್ರಮಿಸಿಕೊಳ್ಳುವರು. [QBR]
19. ಅಲ್ಲಿ ದೊಡ್ಡವರು, ಚಿಕ್ಕವರು ಎಂಬ ಭೇದವಿಲ್ಲಾ. ಆಳು, ಒಡೆಯ ಎಂಬ ಕಟ್ಟಳೆಯೂ ಇಲ್ಲ. [QBR]
20. ಕಷ್ಟದಲ್ಲಿರುವವನಿಗೆ ಬೆಳಕನ್ನು, ಮನನೊಂದವರಿಗೆ ಜೀವವನ್ನು ಕೊಡುವುದೇಕೆ? [QBR]
21. ಅವರು ನಿಕ್ಷೇಪಕ್ಕಾಗಿ ಅಗೆಯುವ ಆಶೆಗಿಂತಲೂ ಹೆಚ್ಚಾದ ಆಶೆಯಿಂದ ಮರಣವನ್ನು ಹಾರೈಸಿ ಹುಡುಕಿದರೂ ಅದು ದೊರೆಯದು. [QBR]
22. ಸಮಾಧಿಗೆ ಸೇರುವಾಗ ಬಹಳವಾಗಿ ಹರ್ಷಿಸಿ ಉಲ್ಲಾಸಪಡುತ್ತಾರೆ. [QBR]
23. ದೇವರು ನನ್ನ ಸುತ್ತಲೂ ಬೇಲಿ ಹಾಕಿ, ದಾರಿಕಟ್ಟಿದ ಮೇಲೆ ಅವನಿಗೆ ಏಕೆ ಬೆಳಕನ್ನು ಕೊಡುತ್ತಾನೆ? [QBR]
24. ನಿಟ್ಟುಸಿರೇ ನನ್ನೆದುರಿಗೆ ಬರುವ ಆಹಾರವಾಗಿದೆ. ನನ್ನ ನರಳಾಟವು ಜಲಧಾರೆಯಂತಿದೆ. [QBR]
25. ನನಗೆ ಭಯವು ಹುಟ್ಟಿದೊಡನೆಯೇ ಆಪತ್ತು ಸಂಭವಿಸುವುದು. ನಾನು ಯಾವುದಕ್ಕೆ ಹೆದರುತ್ತೇನೋ ಅದು ತಪ್ಪದೆ ಬರುವುದು. [QBR]
26. ನನಗೆ ಯಾವ ಶಾಂತಿಯೂ, ವಿಶ್ರಾಂತಿಯೂ, ಉಪಶಮನವೂ ಇರುವುದಿಲ್ಲ, ಯಾವಾಗಲೂ ಕಳವಳವೇ.” [PE]