1. ಆಗ ಯೋಬನು ಇಂತೆಂದನು, [QBR]
2. “ನನ್ನ ಮಾತುಗಳನ್ನು ಚೆನ್ನಾಗಿ ಕೇಳಿರಿ. [QBR] ನಿಮ್ಮಿಂದ ನನಗಾಗಬೇಕಾದ ಆದರಣೆಯು ಇಷ್ಟೇ. [QBR]
3. ತಾಳ್ಮೆಯಿಂದಿರಿ, ನಾನೂ ಮಾತನಾಡುವೆನು, [QBR] ಆಮೇಲೆ ಹಾಸ್ಯಮಾಡಿದರೂ ಮಾಡಿರಿ. [QBR]
4. ನಾನೇನು ಮನುಷ್ಯನ ವಿಷಯದಲ್ಲಿ ಗುಣುಗುಟ್ಟುತ್ತಿರುವೆನೆ? [QBR] ನಾನೇಕೆ ಬೇಸರಗೊಳ್ಳಬಾರದು? [QBR]
5. ನನ್ನ ಕಡೆಗೆ ಗಮನಿಸಿ, [QBR] ನಿಮ್ಮ ಬಾಯಿಯ ಮೇಲೆ ಕೈಯಿಟ್ಟು ಬೆರಗಾಗಿ, [QBR]
6. ಈ ವಿಷಯವನ್ನು ನೆನಪಿಗೆ ತಂದುಕೊಂಡ ಹಾಗೆಲ್ಲಾ, [QBR] ನಡುಕವು ನನ್ನ ಮಾಂಸವನ್ನು ಹಿಡಿಯುತ್ತದೆ. [QBR]
7. ದುಷ್ಟರು ಬಾಳಿ ವೃದ್ಧರಾಗುವುದಕ್ಕೂ, ಬಲಿಷ್ಠರಾಗಿ [QBR] ಪ್ರಬಲಿಸುವುದಕ್ಕೂ ಕಾರಣವೇನು? [QBR]
8. ಅವರ ಸಂತಾನದವರು ಅವರೊಂದಿಗಿರುತ್ತಾ ಅವರ ಮುಂದೆಯೇ ಸುಸ್ಥಿರವಾಗಿರುವರು, [QBR] ಅವರ ಮಕ್ಕಳು ಅವರ ಕಣ್ಣೆದುರಿನಲ್ಲಿ ಅಚಲವಾಗಿ ನಿಲ್ಲುವರು. [QBR]
9. ಅವರ ಮನೆಗಳು ಸುರಕ್ಷಿತವಾಗಿ ನಿರ್ಭಯದಿಂದ ಇರುವವು; [QBR] ದೇವರ ದಂಡವು ಅವರ ಮೇಲೆ ಬೀಳದು. [QBR]
10. ಅವರ ಗೂಳಿಯು ಬೇಸರಗೊಳ್ಳದೆ ಸಂತತಿಯನ್ನು ಹುಟ್ಟಿಸುತ್ತದೆ; [QBR] ಅವರ ಹಸುವು ಕಂದುಹಾಕದೆ ಈಯುವುದು. [QBR]
11. ತಮ್ಮ ಮಕ್ಕಳನ್ನು ಮಂದೆಮಂದೆಯಾಗಿ ನಡೆಸುವರು, [QBR] ಅವರ ಮಕ್ಕಳು ಕುಣಿದಾಡುವರು. [QBR]
12. ಅವರು ದಮ್ಮಡಿ ಕಿನ್ನರಿಗಳೊಡನೆ ಸ್ವರವೆತ್ತಿ, [QBR] ಕೊಳಲಿನ ಧ್ವನಿಗೆ ಉಲ್ಲಾಸಪಡುವರು. [QBR]
13. ಹೀಗೆ ತಮ್ಮ ದಿನಗಳನ್ನು ಸುಖವಾಗಿ ಕಳೆದು, [QBR] ಸಮಾಧಾನದಿಂದ [* ಸಮಾಧಾನದಿಂದ ಅಥವಾ ಕ್ಷಣಮಾತ್ರದಲ್ಲಿ.] ಸಮಾಧಿಗೆ ಸೇರುವರು. [QBR]
14. ಆದರೆ ಇವರೇ ದೇವರನ್ನು ಕುರಿತು, ‘ನಮ್ಮಿಂದ ತೊಲಗಿ ಹೋಗು, [QBR] ನಿನ್ನ ಮಾರ್ಗಗಳ ತಿಳಿವಳಿಕೆಯೇ ನಮಗೆ ಬೇಡ ಎಂದೂ [QBR]
15. ಆ ಸರ್ವಶಕ್ತನಾದ ದೇವರು ಎಷ್ಟರವನು, ಆತನನ್ನು ನಾವು ಏಕೆ ಸೇವಿಸಬೇಕು? [QBR] ಆತನಿಗೆ ವಿಜ್ಞಾಪನೆ ಮಾಡುವುದರಿಂದ ಪ್ರಯೋಜನವೇನು?’ ಎಂದೂ ಹೇಳುತ್ತಿದ್ದರು. [QBR]
16. ಆಹಾ, ಅವರ ಸುಖವು ಅವರ ಕೈಯಲ್ಲಿ ನೆಲಸಿರುವುದಿಲ್ಲ, [QBR] ದುಷ್ಟರ ಆಲೋಚನೆಯು ನನಗೆ ದೂರವಾಗಿರಲಿ! [QBR]
17. ದುಷ್ಟರ ದೀಪವು ಆರಿಹೋದದ್ದು ಎಷ್ಟು ಸಾರಿ? [QBR] ಎಷ್ಟು ಸಾರಿ ಉಪದ್ರವವು ಅವರಿಗೆ ಸಂಭವಿಸಿದೆ? [QBR] ದೇವರು ಕೋಪಗೊಂಡು ಅವರ ಪಾಲಿಗೆ ಸಂಕಟಗಳನ್ನು ಕೊಟ್ಟದ್ದು ಎಷ್ಟು ಸಾರಿ? [QBR]
18. ಅವರು ಗಾಳಿಗೆ ಸಿಕ್ಕಿಬಿದ್ದ ಹುಲ್ಲಿನಂತೆ ಆದದ್ದು ಎಷ್ಟು ಸಾರಿ? [QBR] ಎಷ್ಟು ಸಾರಿ ಬಿರುಗಾಳಿಯು ಕೊಚ್ಚಿಕೊಂಡು ಹೋಗುವ ಹೊಟ್ಟಿನಂತಿದ್ದರು? [QBR]
19. ‘ದೇವರು ದುಷ್ಟನ ಪಾಪ ಫಲವನ್ನು ಅವನ ಮಕ್ಕಳಿಗಾಗಿ ಇಟ್ಟಿದ್ದಾನೆ’ ಎನ್ನುತ್ತೀರೋ, [QBR] ಆ ಫಲವನ್ನು ಅನುಭವಿಸುವ ಹಾಗೆ ದೇವರು ಅವನಿಗೆ ಕೊಟ್ಟುಬಿಡಲಿ. [QBR]
20. ಅವನು ತನ್ನ ನಾಶವನ್ನು ಕಣ್ಣಾರೆ ಕಾಣಲಿ, [QBR] ಸರ್ವಶಕ್ತನಾದ ದೇವರ ರೌದ್ರರಸವನ್ನು ಪಾನಮಾಡಲಿ. [QBR]
21. ಅವನಿಗೆ ನೇಮಕವಾದ ದಿನಗಳು ಮುಗಿದುಹೋದ ಮೇಲೆ [QBR] ತನ್ನನ್ನು ಹಿಂಬಾಲಿಸುವ ಸಂತತಿಯವರ ಚಿಂತೆ ಏನು? [QBR]
22. ಮೇಲಣ ಲೋಕದವರಿಗೂ, ನ್ಯಾಯತೀರಿಸುವ ದೇವರಿಗೂ ಜ್ಞಾನಬೋಧನೆಯನ್ನು ಮಾಡಬಹುದೇ? [QBR]
23. ಒಬ್ಬನು ಸಮೃದ್ಧನಾಗಿ, ತುಂಬಾ ಸುಖದಿಂದಲೂ, ನೆಮ್ಮದಿಯಿಂದಲೂ ಇರುವಾಗ ಸಾಯುವನು. [QBR]
24. ಅವನ ತೊಟ್ಟಿಗಳಲ್ಲಿ ಹಾಲು ತುಂಬಿರುವುದು, [QBR] ಅವನ ಎಲಬುಗಳು ಮಜ್ಜೆಯಿಂದ ಸಾರವಾಗಿರುವುದು. [QBR]
25. ಮತ್ತೊಬ್ಬನು ಸ್ವಲ್ಪವೂ ಸುಖಾನುಭವವಿಲ್ಲದೆ, [QBR] ಮನೋವ್ಯಥೆಪಡುತ್ತಾ ಸಾಯುವನು. [QBR]
26. ಇಬ್ಬರೂ ಧೂಳಿನಲ್ಲಿ ಮಲಗುವರು, [QBR] ಹುಳುಗಳು ಅವರನ್ನು ಮುತ್ತಿಕೊಳ್ಳುವವು. [QBR]
27. ಆಹಾ, ನಿಮ್ಮ ಯೋಚನೆಗಳನ್ನು ಬಲ್ಲೆ, [QBR] ನೀವು ನನ್ನ ವಿರುದ್ಧವಾಗಿ ಮಾಡುವ ಕುಯುಕ್ತಿಗಳನ್ನು ತಿಳಿದುಕೊಂಡಿದ್ದೇನೆ. [QBR]
28. ‘ಪ್ರಧಾನನ ಮನೆ ಏನಾಯಿತು? [QBR] ದುಷ್ಟರು ವಾಸಿಸಿದ ಗುಡಾರವೆಲ್ಲಿ?’ ಎನ್ನುತ್ತೀರಷ್ಟೆ. [QBR]
29. ನೀವು ಮಾರ್ಗಸ್ಥರನ್ನು ವಿಚಾರಿಸಲಿಲ್ಲವೋ? [QBR] ಅವರು ಕೊಟ್ಟ ದೃಷ್ಟಾಂತಗಳಿಂದ, [QBR]
30. ಆಪತ್ತಿನ ದಿನದಲ್ಲಿ ದುಷ್ಟನು ಉಳಿದು, [QBR] ಕೋಪವು ತುಂಬಿ ತುಳುಕುವ ದಿನದಲ್ಲಿ ತಪ್ಪಿಸಲ್ಪಡುವನು ಎಂಬುದು ನಿಮಗೆ ಗೊತ್ತಾಗಲಿಲ್ಲವೋ? [QBR]
31. ನೀನು ದುರ್ಮಾರ್ಗಿ ಎಂದು ಅವನಿಗೆ ಮುಖಾಮುಖಿಯಾಗಿ ಯಾರು ತಾನೇ ಹೇಳುವರು? [QBR] ಅವನಿಗೆ ಮುಯ್ಯಿಗೆ ಮುಯ್ಯಿ ತೀರಿಸುವವರು ಯಾರು? [QBR]
32. ಅವನನ್ನು ಮೆರವಣಿಗೆಯಿಂದ ಸಮಾಧಿಗೆ ತೆಗೆದುಕೊಂಡು ಹೋಗುವರು; [QBR] ಅವನ ಗೋರಿಗೆ ಕಾವಲಿಡುವರು. [QBR]
33. ಆ ಕಣಿವೆಯ ಪ್ರದೇಶದ ಹೆಂಟೆಗಳು ಅವನಿಗೆ ಒಪ್ಪಿತವಾಗಿರುವವು. [QBR] ಅವನಿಗಿಂತ ಹಿಂದೆ ಲೆಕ್ಕವಿಲ್ಲದಷ್ಟು ಜನರು ಹೀಗೆಯೇ ಇದ್ದರು, [QBR] ಇನ್ನು ಮುಂದೆ ಸಮಸ್ತರೂ ಹೀಗೆಯೇ ಅವನನ್ನು ಹಿಂಬಾಲಿಸುವರು. [QBR]
34. ನೀವು ನನಗೆ ಮಾಡುವ ಆದರಣೆಯು ಎಷ್ಟು ವ್ಯರ್ಥವಾಗಿದೆ! [QBR] ನಿಮ್ಮ ಉತ್ತರಗಳಲ್ಲಿ ಉಳಿದಿರುವುದು ಮಿತ್ರ ದ್ರೋಹವೇ.” [PE]