1. {ಬಾಬೆಲಿನ ವಿಷಯವಾದ ದೈವೋಕ್ತಿ} [PS] ಯೆಹೋವನು ಪ್ರವಾದಿಯಾದ ಯೆರೆಮೀಯನ ಮೂಲಕ ಕಸ್ದೀಯರ ದೇಶವಾದ ಬಾಬೆಲಿನ ವಿಷಯವಾಗಿ ಪ್ರಕಟಿಸಿದ ವಾಕ್ಯ. [QBR]
2. “ಜನಾಂಗಗಳಲ್ಲಿ ಪ್ರಚುರಪಡಿಸಿರಿ, ಧ್ವಜವೆತ್ತಿ ಪ್ರಕಟಿಸಿರಿ, ಮರೆಮಾಡದೆ ಹೀಗೆ ಸಾರಿರಿ, [QBR] ‘ಬಾಬೆಲ್ ಶತ್ರುವಶವಾಯಿತು, ಬೇಲ್ ದೇವತೆಯು ನಾಚಿಕೆಗೊಂಡಿದೆ, ಮೆರೋದಾಕ್ ದೇವತೆಯು ಬೆಚ್ಚಿಬಿದ್ದಿದೆ, [QBR] ಅದರ ಮೂರ್ತಿಗಳು ಅವಮಾನಕ್ಕೆ ಗುರಿಯಾಗಿವೆ, ಅದರ ಬೊಂಬೆಗಳು ಚೂರುಚೂರಾಗಿವೆ. [QBR]
3. ಒಂದು ಜನಾಂಗವು ಉತ್ತರ ದಿಕ್ಕಿನಿಂದ ಬಾಬೆಲಿನ ಮೇಲೆ ಬರುತ್ತಿದೆ, ಅದು ಬಾಬೆಲ್ ದೇಶವನ್ನು ಹಾಳುಮಾಡುವುದು, [QBR] ಅಲ್ಲಿ ಯಾರೂ ವಾಸಿಸರು, ಪಶುಗಳೂ ಜನರೂ ಓಡಿಹೋಗಿದ್ದಾರೆ, ತೊಲಗಿಬಿಟ್ಟಿದ್ದಾರೆ. [QBR]
4. ಯೆಹೋವನು ಇಂತೆನ್ನುತ್ತಾನೆ, ಆ ದಿನಗಳಲ್ಲಿ, ಆ ಕಾಲದಲ್ಲಿ ಇಸ್ರಾಯೇಲರೂ ಮತ್ತು ಯೆಹೂದ್ಯರೂ ಒಟ್ಟಿಗೆ ಹಿಂದಿರುಗಿ [QBR] ದಾರಿಯುದ್ದಕ್ಕೂ ಅಳುತ್ತಾ ಬಂದು, ತಮ್ಮ ದೇವರಾದ ಯೆಹೋವನಲ್ಲಿ ಮೊರೆಹೋಗುವರು. [QBR]
5. ಚೀಯೋನಿಗೆ ಅಭಿಮುಖರಾಗಿ ಮಾರ್ಗವನ್ನು ವಿಚಾರಿಸಿ, ಬನ್ನಿರಿ, ಯೆಹೋವನನ್ನು ಆಶ್ರಯಿಸಿ, [QBR] ಎಂದಿಗೂ ಮರೆಯದ ಶಾಶ್ವತವಾದ ಒಡಂಬಡಿಕೆಯನ್ನು ಆತನೊಂದಿಗೆ ಮಾಡಿಕೊಳ್ಳೋಣ’ ಎಂದು ಹೇಳುವರು. [QBR]
6. ನನ್ನ ಜನರು ತಪ್ಪಿಸಿಕೊಂಡ ಕುರಿಗಳು; ಪಾಲಕರು ಅವರನ್ನು ದಾರಿತಪ್ಪಿಸಿ ಪರ್ವತಗಳಲ್ಲಿ ಅಲೆದಾಡಿಸಿದ್ದಾರೆ; [QBR] ನನ್ನ ಜನರು ತಮ್ಮ ಹಕ್ಕೆಯನ್ನು ಮರೆತು ಬೆಟ್ಟಗುಡ್ಡಗಳಲ್ಲಿ ತಿರುಗಾಡುತ್ತಲಿದ್ದಾರೆ. [QBR]
7. ಕಂಡಕಂಡವರೆಲ್ಲರೂ ಅವರನ್ನು ನುಂಗಿಬಿಟ್ಟಿದ್ದಾರೆ; ಅವರ ವಿರೋಧಿಗಳು, ‘ನಾವು ಅವರನ್ನು ನುಂಗಿದ್ದು ದೋಷವಲ್ಲ, [QBR] ಅವರು ಸತ್ಯಸ್ವರೂಪನಾದ ಯೆಹೋವನಿಗೆ, ಹೌದು, ತಮ್ಮ ಪೂರ್ವಿಕರ ನಿರೀಕ್ಷೆಯಾದ ಯೆಹೋವನಿಗೆ ಪಾಪ ಮಾಡಿದರಲ್ಲಾ’ ಅಂದುಕೊಂಡರು. [QBR]
8. ಬಾಬೆಲ್ ದೇಶದೊಳಗಿಂದ ಓಡಿಹೋಗಿರಿ, ಕಸ್ದೀಯರ ಸೀಮೆಯಿಂದ ಹೊರಡಿರಿ; ಹಿಂಡುಗಳ ಮುಂದೆ ಹೋಗುವ ಹೋತಗಳಂತಿರಿ. [QBR]
9. ಇಗೋ, ನಾನು ಮಹಾ ಜನಾಂಗಗಳ ಸಮೂಹವನ್ನು ಎಬ್ಬಿಸಿ ಉತ್ತರ ದಿಕ್ಕಿನಿಂದ ಬಾಬೆಲಿನ ಮೇಲೆ ಬೀಳಮಾಡುವೆನು; [QBR] ಅವು ಬಾಬಿಲೋನಿಗೆ ವಿರುದ್ಧವಾಗಿ ವ್ಯೂಹಕಟ್ಟಿ ಅದನ್ನು ಅದರ ಸ್ಥಳದೊಳಗಿಂದ ನಿರ್ಮೂಲಮಾಡುವವು; [QBR] ಅವುಗಳ ಬಾಣಗಳು ಸುಮ್ಮನೆ ಹಿಂದಿರುಗದ ಯುದ್ಧಪ್ರವೀಣರಾದ ಶೂರನಂತಿರುವವು. [QBR]
10. ಕಸ್ದೀಯ ರಾಜ್ಯವು ಸೂರೆಯಾಗುವುದು; ಸೂರೆಗಾರರೆಲ್ಲರೂ ತೃಪ್ತಿಗೊಳ್ಳವರು, ಇದು ಯೆಹೋವನ ನುಡಿ” ಎಂಬುದೇ.
11. {ಬಾಬೆಲಿನ ಪತನ} [PS] “ನನ್ನ ಸ್ವತ್ತನ್ನು ಕೊಳ್ಳೆಹೊಡೆಯುವವರೇ, ನೀವು ಹರ್ಷಿಸಿ ಉಲ್ಲಾಸಿಸುವವರೂ, [QBR] ಕಣತುಳಿಯುವ ಕಡಸಿನ ಹಾಗೆ ಕುಣಿದಾಡುವವರೂ, ಕೊಬ್ಬಿದ ಕುದುರೆಗಳಂತೆ ಹೇಕರಿಸುವವರೂ ಆಗಿರುವುದರಿಂದ [QBR]
12. ನಿಮ್ಮ ಮಾತೃಭೂಮಿಯು ಮಾನಭಂಗಕ್ಕೆ ಈಡಾಗುವುದು, ನಿಮ್ಮನ್ನು ಹೆತ್ತ ರಾಜ್ಯವು ನಾಚಿಕೊಳ್ಳುವುದು; [QBR] ಆಹಾ, ಅದು ಕಾಡು, ಕಗ್ಗಾಡು, ಬೆಗ್ಗಾಡು, ಜನಾಂಗಗಳಲ್ಲಿ ಕನಿಷ್ಠವೂ ಆಗುವುದು. [QBR]
13. ಯೆಹೋವನ ರೋಷದ ದೆಸೆಯಿಂದ ಅದು ನಿರ್ಜನವಾಗಿ ತೀರಾ ಹಾಳುಬೀಳುವುದು; [QBR] ಬಾಬೆಲನ್ನು ಹಾದು ಹೋಗುವವರೆಲ್ಲರೂ ಅದಕ್ಕೆ ಸಂಭವಿಸಿದ ವಿಪತ್ತುಗಳನ್ನು ಕಂಡು ಬೆರಗಾಗಿ ಪರಿಹಾಸ್ಯ ಮಾಡುವರು. [QBR]
14. ಬಿಲ್ಲುಗಾರರೇ, ನೀವೆಲ್ಲರೂ ವ್ಯೂಹಕಟ್ಟಿ ಬಾಬಿಲೋನಿಗೆ ಮುತ್ತಿಗೆ ಹಾಕಿರಿ, [QBR] ಬಾಣಗಳನ್ನು ಉಳಿಸದೆ ಎಸೆಯಿರಿ; ಅದು ಯೆಹೋವನಿಗೆ ಪಾಪ ಮಾಡಿತಲ್ಲಾ. [QBR]
15. ಅದರ ಸುತ್ತಲು ಜಯಘೋಷಮಾಡಿರಿ, ಅಧೀನವಾಯಿತು, ಅದರ ಕೊತ್ತಲುಗಳು ಬಿದ್ದವು, ಅದರ ಪೌಳಿಗೋಡೆಯು ಕೆಡವಲ್ಪಟ್ಟಿತು. [QBR] ಯೆಹೋವನು ಅದಕ್ಕೆ ಮುಯ್ಯಿತೀರಿಸಿದ್ದಾನೆ; ಮುಯ್ಯಿತೀರಿಸಿರಿ; ಅದು ಮಾಡಿದಂತೆಯೇ ಅದಕ್ಕೆ ಮಾಡಿರಿ. [QBR]
16. ಬೀಜ ಬಿತ್ತುವವನನ್ನೂ ಮತ್ತು ಸುಗ್ಗಿಯಲ್ಲಿ ಕುಡುಗೋಲು ಹಿಡಿಯುವವನನ್ನೂ ಬಾಬೆಲಿನಿಂದ ನಿರ್ಮೂಲಮಾಡಿರಿ; [QBR] ಪ್ರತಿಯೊಬ್ಬ ವಿದೇಶೀಯನು ಹಿಂಸೆಯ ಖಡ್ಗದ ದೆಸೆಯಿಂದ ಸ್ವಜನರ ಕಡೆಗೆ ತಿರುಗಿಕೊಂಡು ಸ್ವದೇಶಕ್ಕೆ ಓಡಿಹೋಗುವನು.
17. {ಇಸ್ರಾಯೇಲರು ಹಿಂದಿರುಗುವರು} [PS] ಇಸ್ರಾಯೇಲು ಚದರಿಹೋದ ಕುರಿ ಹಿಂಡು; ಸಿಂಹಗಳು ಅದನ್ನು ಓಡಿಸಿಬಿಟ್ಟಿವೆ; [QBR] ಮೊಟ್ಟಮೊದಲು ಅಶ್ಶೂರದ ಅರಸನು ಅದನ್ನು ತಿಂದನು, [QBR] ಕಟ್ಟಕಡೆಗೆ ಈಗ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಅದರ ಎಲುಬುಗಳನ್ನು ಕಡಿದುಬಿಟ್ಟನು. [QBR]
18. ಹೀಗಿರಲು ಇಸ್ರಾಯೇಲಿನ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, [QBR] ಆಹಾ, ನಾನು ಅಶ್ಶೂರದ ಅರಸನನ್ನು ದಂಡಿಸಿದಂತೆ ಬಾಬೆಲಿನ ಅರಸನನ್ನೂ ಮತ್ತು ಅವನ ದೇಶವನ್ನೂ ದಂಡಿಸುವೆನು. [QBR]
19. ಇಸ್ರಾಯೇಲನ್ನು ಪುನಃ ಅದರ ಹುಲ್ಗಾವಲಿಗೆ ಸೇರಿಸುವೆನು; ಅದು ಕರ್ಮೆಲಿನಲ್ಲಿಯೂ, ಬಾಷಾನಿನಲ್ಲಿಯೂ ಮೇಯುವುದು; [QBR] ಎಫ್ರಾಯೀಮಿನ ಮತ್ತು ಗಿಲ್ಯಾದಿನ ಬೆಟ್ಟಗಳಲ್ಲಿ ತೃಪ್ತಿಗೊಳ್ಳುವುದು. [QBR]
20. ಆ ದಿನಗಳಲ್ಲಿ, ಆ ಕಾಲದಲ್ಲಿ ಇಸ್ರಾಯೇಲಿನ ಅಧರ್ಮವನ್ನು ಎಲ್ಲಿ ಹುಡುಕಿದರೂ ಇರುವುದೇ ಇಲ್ಲ; [QBR] ಯೆಹೂದದ ಪಾಪವನ್ನು ಎಲ್ಲಿ ಹುಡುಕಿದರೂ ಸಿಕ್ಕುವುದೇ ಇಲ್ಲ; [QBR] ನಾನು ಉಳಿಸುವ ಜನಶೇಷವನ್ನು ಕ್ಷಮಿಸುವೆನಲ್ಲವೆ. ಇದು ಯೆಹೋವನ ನುಡಿ.”
21. {ಬಾಬಿಲೋನಿಗೆ ದೇವರ ದಂಡನೆ} [PS] ಯೆಹೋವನು ಇಂತೆನ್ನುತ್ತಾನೆ, “ಮೆರಾಥಯಿಮ್ ದೇಶಕ್ಕೂ ಮತ್ತು ಪೆಕೋದಿನ ನಿವಾಸಿಗಳಿಗೂ ವಿರುದ್ಧವಾಗಿ ದಂಡೆತ್ತಿ ಹೋಗಿ, [QBR] ಅವರನ್ನು ಸಂಹರಿಸಿ, ಅನಂತರ ದೇಶವನ್ನು ತೀರಾ ಹಾಳುಮಾಡಿ, ನಾನು ನಿನಗೆ ಆಜ್ಞಾಪಿಸಿದ್ದನ್ನೆಲ್ಲಾ ನೆರವೇರಿಸು. [QBR]
22. ಯುದ್ಧದ ಆರ್ಭಟವೂ ಮಹಾನಾಶನದ ಶಬ್ದವೂ ದೇಶದೊಳಗೆ ಕೇಳಿಸುತ್ತವೆ. [QBR]
23. ಆಹಾ, ಲೋಕವನ್ನೆಲ್ಲಾ ಹೊಡೆದ ಚಮಟಿಗೆಯು ಮುರಿದು ತುಂಡುತುಂಡಾಯಿತು! [QBR] ಬಾಬೆಲ್ ರಾಜ್ಯವು ಜನಾಂಗಗಳ ನಡುವೆ ಹಾಳಾಯಿತಲ್ಲಾ! [QBR]
24. ಬಾಬೆಲೇ, ನಾನು ನಿನಗೆ ಉರುಲೊಡ್ಡಿದೆನು; ನೀನು ತಿಳಿಯದೆ ಸಿಕ್ಕಿಕೊಂಡಿ; [QBR] ನೀನು ಯೆಹೋವನೊಂದಿಗೆ ಹೋರಾಡಿದ್ದರಿಂದ ಬೋನಿಗೆ ಬಿದ್ದು ವಶವಾದಿ. [QBR]
25. ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ಕಸ್ದೀಯರ ದೇಶದಲ್ಲಿ ನಿರ್ವಹಿಸಬೇಕಾದ ಕಾರ್ಯವೊಂದುಂಟು; [QBR] ಅದಕ್ಕಾಗಿ ಯೆಹೋವನು ತನ್ನ ಆಯುಧ ಶಾಲೆಯನ್ನು ತೆರೆದು ತನ್ನ ರೋಷದ ಅಸ್ತ್ರಶಸ್ತ್ರಗಳನ್ನು ಹೊರಗೆ ತೆಗೆದಿದ್ದಾನೆ. [QBR]
26. ಲೋಕದ ಕಟ್ಟಕಡೆಯಿಂದ ಬಾಬಿಲೋನಿಗೆ ಬನ್ನಿರಿ, ಅದರ ಕಣಜಗಳನ್ನು ತೆರೆಯಿರಿ; [QBR] ಪಟ್ಟಣವನ್ನು ಹಾಳುದಿಬ್ಬಗಳಾಗಿ ಮಾಡಿ ಪೂರ್ಣವಾಗಿ ನಾಶಪಡಿಸಿರಿ; ಏನೂ ಉಳಿಯದಿರಲಿ. [QBR]
27. ಅದರ ಹೋರಿಗಳನ್ನೆಲ್ಲಾ ಕೊಲ್ಲಿರಿ, ಅವು ವಧ್ಯಸ್ಥಾನಕ್ಕೆ ಹೋಗಲಿ; ಅವುಗಳ ಗತಿಯನ್ನು ಏನೆಂದು ಹೇಳಲಿ! [QBR] ಅವುಗಳಿಗೆ ವಿಪತ್ಕಾಲವು ಒದಗಿದೆ, ದಂಡನೆಯ ದಿನವು ಸಂಭವಿಸಿದೆ. [QBR]
28. ಓಹೋ, ಬಾಬೆಲಿನಿಂದ ತಪ್ಪಿಸಿಕೊಂಡು ಓಡಿಹೋಗುವವರ ಶಬ್ದ! [QBR] ನಮ್ಮ ದೇವರಾದ ಯೆಹೋವನು ತನ್ನ ಆಲಯವನ್ನು ನಾಶ ಮಾಡಿದವರಿಗೆ ಮುಯ್ಯಿತೀರಿಸಿದ್ದಾನೆ ಎಂಬ ಸಮಾಚಾರವನ್ನು [QBR] ಚೀಯೋನಿನಲ್ಲಿ ಪ್ರಕಟಿಸುವುದಕ್ಕೆ ಹೋಗುತ್ತಾರಲ್ಲಾ. [QBR]
29. ಬಿಲ್ಲನ್ನು ಬೊಗ್ಗಿಸಿ, ಬಾಣಬಿಡುವವರನ್ನೆಲ್ಲಾ ಬಾಬಿಲೋನಿಗೆ ಕರೆಯಿರಿ; ಅದರ ಸುತ್ತಲು ದಂಡಿಳಿಸಿರಿ; [QBR] ಅದರ ನಿವಾಸಿಗಳಲ್ಲಿ ಯಾರೂ ತಪ್ಪಿಸಿಕೊಳ್ಳದ ಹಾಗಿರಲಿ; ಅದರ ಕೃತ್ಯಕ್ಕೆ ತಕ್ಕಂತೆ ಮುಯ್ಯಿತೀರಿಸಿರಿ; [QBR] ಅದು ಮಾಡಿದಂತೆಯೇ ಅದಕ್ಕೆ ಮಾಡಿರಿ; ಅದು ಸೊಕ್ಕೇರಿ ಇಸ್ರಾಯೇಲರ ಸದಮಲಸ್ವಾಮಿಯಾದ ಯೆಹೋವನನ್ನು ಅಸಡ್ಡೆ ಮಾಡಿತಲ್ಲಾ. [QBR]
30. ಆದಕಾರಣ ಆ ದಿನದಲ್ಲಿ ಅಲ್ಲಿನ ಯೌವನಸ್ಥರು ಚೌಕಗಳಲ್ಲಿ ಬಿದ್ದುಬಿಡುವರು, [QBR] ಯುದ್ಧವೀರರೆಲ್ಲಾ ಸುಮ್ಮನಾಗುವರು; ಇದು ಯೆಹೋವನ ನುಡಿ” ಎಂಬುದೇ. [QBR]
31. ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ಇಂತೆನ್ನುತ್ತಾನೆ, “ಆಹಾ, ಸೊಕ್ಕಿನ ರಾಜ್ಯವೇ! ನಾನು ನಿನ್ನ ವಿರುದ್ಧವಾಗಿದ್ದೇನೆ; [QBR] ನಿನಗೆ ಹೊತ್ತು ಬಂದಿದೆ, ನಿನ್ನನ್ನು ದಂಡಿಸತಕ್ಕ ಕಾಲ ಸಂಭವಿಸಿದೆ. [QBR]
32. ಸೊಕ್ಕಿನ ರಾಜ್ಯವು ಎಡವಿ ಬೀಳುವುದು, ಅದನ್ನು ಯಾರೂ ಎತ್ತರು; [QBR] ಅದರ ಪಟ್ಟಣಗಳಿಗೆ ಬೆಂಕಿಹೊತ್ತಿಸುವೆನು, ಅದು ಸುತ್ತಲಿರುವುದನ್ನು ನುಂಗಿಬಿಡುವುದು.” [QBR]
33. ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, [QBR] “ಇಸ್ರಾಯೇಲರು ಮತ್ತು ಯೆಹೂದ್ಯರು ಉಭಯರೂ ಹಿಂಸೆಗೆ ಗುರಿಯಾಗಿದ್ದಾರೆ; [QBR] ಅವರನ್ನು ಸೆರೆ ಒಯ್ದವರೆಲ್ಲರೂ ಅವರನ್ನು ಬಿಡಿಸಲೊಲ್ಲದೆ ಬಿಗಿಹಿಡಿದಿದ್ದಾರೆ. [QBR]
34. ಅವರ ರಕ್ಷಕನು ಬಲಿಷ್ಠನು; ಸೇನಾಧೀಶ್ವರನಾದ ಯೆಹೋವನೆಂಬುದೇ ಆತನ ನಾಮಧೇಯ; [QBR] ಆತನು ಅವರ ವ್ಯಾಜ್ಯವನ್ನು ಜಯಿಸಿ, ಲೋಕವನ್ನು ವಿಶ್ರಾಂತಿಗೊಳಿಸಿ ಬಾಬೆಲಿನವರನ್ನು ಕಳವಳಪಡಿಸುವನು.” [QBR]
35. ಯೆಹೋವನು ಇಂತೆನ್ನುತ್ತಾನೆ, “ಖಡ್ಗವು ಕಸ್ದೀಯರ ಮೇಲೆ ಬೀಳಲಿ! [QBR] ಬಾಬೆಲಿನ ಸಾಮಾನ್ಯ ಜನರು, ಪ್ರಧಾನರು, ಪಂಡಿತರು, ಇವರನ್ನೆಲ್ಲಾ ಹತಿಸಲಿ! [QBR]
36. ಖಡ್ಗವು ಕೊಚ್ಚಿಕೊಳ್ಳುವವರನ್ನು ಇರಿಯಲಿ! ಅವರ ಬುದ್ಧಿಹೀನತೆಯು ಬಯಲಿಗೆ ಬರುವುದು. [QBR] ಖಡ್ಗವು ಬಾಬೆಲಿನ ಶೂರರನ್ನು ಸಂಹರಿಸಲಿ! ಅವರು ಬೆಚ್ಚಿಬೀಳುವರು. [QBR]
37. ಖಡ್ಗವು ಅವರ ಅಶ್ವಗಳನ್ನೂ, ರಥಗಳನ್ನೂ, ಬಾಬೆಲಿನಲ್ಲಿರುವ ಬಗೆಬಗೆಯ ವಿದೇಶೀಯರನ್ನೆಲ್ಲ ಹೊಡೆಯಲಿ! [QBR] ಅವರು ಹೆಂಗಸರಂತೆ ಬೆದರುವರು, ಖಡ್ಗವು ಅವರ ಸಂಪತ್ತನ್ನು ನುಂಗಲಿ! ಅವರು ಸೂರೆಗೆ ಈಡಾಗುವರು. [QBR]
38. ಬರಗಾಲವು ಅವರ ನೀರನ್ನೆಲ್ಲಾ ಹೀರಲಿ! ಅದು ಬತ್ತಿಹೋಗುವುದು. [QBR] ಅದು ಬೊಂಬೆಗಳಿಂದ ತುಂಬಿದ ದೇಶ, [QBR] ಅದರ ಜನರು ತಮ್ಮ ಭಯಂಕರವಾದ ವಿಗ್ರಹಗಳ ಪೂಜೆಯಿಂದ ಮದವೇರಿಸಿಕೊಳ್ಳುತ್ತಾರಷ್ಟೆ; [QBR]
39. ಆದಕಾರಣ ತೋಳ ಮುಂತಾದ ಕಾಡುಮೃಗಗಳು ಅಲ್ಲಿ ಬೀಡು ಮಾಡಿಕೊಳ್ಳುವವು, ಉಷ್ಟ್ರಪಕ್ಷಿಗಳು ತಂಗುವವು; [QBR] ಅದು ಎಂದಿಗೂ ವಾಸಸ್ಥಳವಾಗದು, ತಲತಲಾಂತರಕ್ಕೂ ಅಲ್ಲಿ ಜನರು ಒಕ್ಕಲು ಇರುವುದಿಲ್ಲ. [QBR]
40. ದೇವರು ಕೆಡವಿದ ಸೊದೋಮ್, ಗೊಮೋರ ಪಟ್ಟಣಗಳಲ್ಲಿಯೂ ಮತ್ತು ಸುತ್ತಣ ಊರುಗಳಲ್ಲಿಯೂ ಹೇಗೋ, [QBR] ಹಾಗೆಯೇ ಬಾಬೆಲಿನಲ್ಲಿಯೂ ಯಾರೂ ವಾಸಿಸರು, ಯಾವ ನರಪ್ರಾಣಿಯೂ ನೆಲೆ ನಿಲ್ಲುವುದಿಲ್ಲ. [QBR]
41. ಆಹಾ, ಉತ್ತರ ದಿಕ್ಕಿನಿಂದ ಒಂದು ಜನಾಂಗವು ಬರುತ್ತೆ, ಮಹಾ ಜನವೂ, ಬಹು ಮಂದಿ ಅರಸರೂ ಎಬ್ಬಿಸಲ್ಪಟ್ಟು ಲೋಕದ ಕಟ್ಟಕಡೆಯಿಂದ ಬರುತ್ತಾರೆ. [QBR]
42. ಬಿಲ್ಲನ್ನೂ ಮತ್ತು ಈಟಿಯನ್ನೂ ಹಿಡಿದುಕೊಂಡಿದ್ದಾರೆ, ಅವರು ಕ್ರೂರರು, ನಿಷ್ಕರುಣಿಗಳು; [QBR] ಅವರ ಧ್ವನಿಯು ಸಮುದ್ರದಂತೆ ಮೊರೆಯುತ್ತದೆ, ಕುದುರೆ ಹತ್ತಿದ್ದಾರೆ; [QBR] ಬಾಬೆಲ್ ನಗರಿಯೇ, ಆ ಸೈನ್ಯವು ಶೂರನಂತೆ ನಿನ್ನ ಮೇಲೆ ಯುದ್ಧಸನ್ನದ್ಧವಾಗಿದೆ” ಎಂದು ಯೆಹೋವನು ಅನ್ನುತ್ತಾನೆ. [QBR]
43. ಬಾಬೆಲಿನ ಅರಸನು ಅದರ ಸುದ್ದಿಯನ್ನು ಕೇಳಿದನು, ಅವನ ಕೈಗಳು ಜೋಲುಬಿದ್ದವು, [QBR] ಪ್ರಸವವೇದನೆಯಂತಿರುವ ಯಾತನೆಯು ಅವನನ್ನು ಹಿಡಿದಿದೆ. [QBR]
44. ಆಹಾ, ಒಬ್ಬನು ಸಿಂಹದೋಪಾದಿಯಲ್ಲಿ ಯೊರ್ದನಿನ ದಟ್ಟಡವಿಯಿಂದ ಕಸ್ದೀಯರಿಗೆ ನಿತ್ಯನೆಲೆಯಾದ ಗೋಮಾಳಕ್ಕೆ ಏರಿ ಬರುವನು; [QBR] ಕ್ಷಣಮಾತ್ರದಲ್ಲಿ ನಾನು ಅವರನ್ನು ಅಲ್ಲಿಂದ ಓಡಿಸಿಬಿಡುವೆನು; ನಾನು ಆರಿಸಿಕೊಂಡವನನ್ನೇ ಅದನ್ನು ಕಾಯುವುದಕ್ಕೆ ನೇಮಿಸುವೆನು; [QBR] ನನ್ನ ಸಮಾನನು ಯಾರು? ನನ್ನನ್ನು ನ್ಯಾಯವಿಚಾರಣೆಗೆ ಯಾರು ಕರೆದಾರು? [QBR] ಮಂದೆಯನ್ನು ಕಾಯುವ ಯಾರು ನನ್ನೆದುರಿಗೆ ನಿಲ್ಲಬಲ್ಲನು? [QBR]
45. ಹೀಗಿರಲು ಯೆಹೋವನು ಬಾಬೆಲಿನ ವಿಷಯವಾಗಿ ಮಾಡಿಕೊಂಡಿರುವ ಆಲೋಚನೆಯನ್ನೂ, [QBR] ಆತನು ಕಸ್ದೀಯರ ದೇಶವನ್ನು ಕುರಿತು ಸಂಕಲ್ಪಿಸಿರುವ ಉದ್ದೇಶವನ್ನೂ ಆಲಿಸಿರಿ, [QBR] ಮೃಗಗಳು ಹಿಂಡಿನ ಮರಿಗಳನ್ನು ಖಂಡಿತವಾಗಿ ಎಳೆದುಕೊಂಡು ಹೋಗುವವು; [QBR] ನಿಶ್ಚಯವಾಗಿ ಅವುಗಳ ಹುಲ್ಗಾವಲು ಅವುಗಳ ನಾಶಕ್ಕೆ ಬೆದರುವುದು. [QBR]
46. ಬಾಬೆಲು ಶತ್ರುವಶವಾಯಿತೆಂಬ ಕೋಲಾಹಲಕ್ಕೆ ಭೂಮಿಯು ಕಂಪಿಸುತ್ತದೆ, [QBR] ಅದರ ಮೊರೆಯು ಜನಾಂಗಗಳಲ್ಲಿ ಕೇಳಿಸುತ್ತದೆ. [PE]