1. {ಯೆಹೂದಕ್ಕೆ ಕಠಿಣ ದಂಡನೆ} [PS] ಯೆಹೋವನು ನನಗೆ ಹೀಗೆ ಹೇಳಿದನು, “ಮೋಶೆಯು ಮತ್ತು ಸಮುವೇಲನು ನನಗೆ ವಿಜ್ಞಾಪಿಸಿದರೂ ನನ್ನ ಮನಸ್ಸು ಈ ಜನರ ಕಡೆಗೆ ತಿರುಗುವುದಿಲ್ಲ. ನನ್ನ ಕಣ್ಣೆದುರಿನಿಂದ ಇವರನ್ನು ನೂಕಿಬಿಡು, ತೊಲಗಿ ಹೋಗಲಿ!
2. ಅವರು, ‘ನಾವು ಎಲ್ಲಿಗೆ ಹೋಗೋಣ?’ ಎಂದು ನಿನ್ನನ್ನು ಕೇಳಲು ನೀನು ಅವರಿಗೆ, [QBR] ‘ಮರಣ ವ್ಯಾಧಿಗೆ ನೇಮಿತರಾದವರು ಮರಣವ್ಯಾಧಿಗೆ, ಖಡ್ಗಕ್ಕೆ ನೇಮಿತರಾದವರು ಖಡ್ಗಕ್ಕೆ ಬಲಿಯಾಗಲಿ. [QBR] ಕ್ಷಾಮಕ್ಕೆ ನೇಮಿತರಾದವರು ಕ್ಷಾಮಕ್ಕೆ, ಸೆರೆಗೆ ನೇಮಿತರಾದವರು ಸೆರೆಗೆ ಗುರಿಯಾಗಿ ಹೋಗಲಿ; ಇದೇ ಯೆಹೋವನ ನುಡಿ’ ” ಎಂದು ಹೇಳು. [QBR]
3. “ನಾನು ಅವರಿಗೆ ನಾಲ್ಕು ವಿಧವಾದ ಬಾಧಕರನ್ನು, ಅಂದರೆ ಕಡಿಯುವುದಕ್ಕೆ ಖಡ್ಗವನ್ನು, ಸೀಳುವುದಕ್ಕೆ ನಾಯಿಗಳನ್ನು, [QBR] ನುಂಗಿ ಹಾಳುಮಾಡುವುದಕ್ಕೆ ಆಕಾಶದ ಪಕ್ಷಿಗಳನ್ನೂ ಮತ್ತು ಭೂಜಂತುಗಳನ್ನೂ ನೇಮಿಸುವೆನು” ಎಂಬುದು ಯೆಹೋವನಾದ ನನ್ನ ಮಾತು. [QBR]
4. “ಹಿಜ್ಕೀಯನ ಮಗನೂ ಯೆಹೂದದ ಅರಸನೂ ಆದ ಮನಸ್ಸೆಯು ಯೆರೂಸಲೇಮಿನಲ್ಲಿ ನಡೆಸಿದ್ದಕ್ಕೆ ಪ್ರತಿಯಾಗಿ, [QBR] ನಾನು ಅವರನ್ನು ಲೋಕದ ಸಮಸ್ತ ರಾಜ್ಯಗಳಿಗೆ ಭಯಾಸ್ಪದವಾಗುವಂತೆ ಮಾಡುವೆನು. [QBR]
5. ಯೆರೂಸಲೇಮೇ, ಯಾರು ನಿನ್ನನ್ನು ಕರುಣಿಸುವರು? ನಿನಗಾಗಿ ಯಾರು ಪ್ರಲಾಪಿಸುವರು? [QBR] ನಿನ್ನ ಕ್ಷೇಮವನ್ನು ವಿಚಾರಿಸಲು ಯಾರು ನಿನ್ನ ಕಡೆಗೆ ತಿರುಗುವರು? [QBR]
6. ಯೆಹೋವನ ಈ ಮಾತನ್ನು ಕೇಳು, ‘ನೀನು ನನ್ನನ್ನು ಅಲ್ಲಗಳೆದು ಹಿಂದಿರುಗಿದ್ದಿ. [QBR] ಆದಕಾರಣ ನಾನು ನಿನ್ನ ಮೇಲೆ ಕೈಯೆತ್ತಿ ನಿನ್ನನ್ನು ನಾಶಮಾಡುವೆನು; ನಿನ್ನನ್ನು ಕ್ಷಮಿಸಿ ಕ್ಷಮಿಸಿ ಸಾಕಾಯಿತು. [QBR]
7. ನನ್ನ ಜನರನ್ನು ದೇಶದ ಬಾಗಿಲುಗಳಲ್ಲಿ ಕವೆಗೋಲಿನಿಂದ ಹಾರಿಸಿ ತೂರುವೆನು. [QBR] ಅವರನ್ನು ಪುತ್ರಶೋಕಕ್ಕೆ ಈಡುಮಾಡಿ ನಾಶಪಡಿಸುವೆನು; ಅವರು ಹೋದ ದಾರಿಯಿಂದ ಹಿಂದಿರುಗರು. [QBR]
8. ಅವರ ವಿಧವೆಯರು ನನ್ನ ಭಾಗಕ್ಕೆ ಸಮುದ್ರದ ಉಸುಬಿಗಿಂತ ಹೆಚ್ಚಾಗಿರುವರು. [QBR] ಯುವಕರ ಮತ್ತು ತಾಯಂದಿರ ಮೇಲೆ ಕೊಳ್ಳೆ ಹೊಡೆಯುವವನನ್ನು ಮಧ್ಯಾಹ್ನದಲ್ಲೇ ಬರಮಾಡುವೆನು. [QBR] ಅವರ ಮೇಲೆ ಕಳವಳವನ್ನು ಮತ್ತು ದಿಗಿಲನ್ನು ತಟ್ಟನೆ ಬೀಳಿಸುವೆನು. [QBR]
9. ಏಳು ಮಂದಿ ಮಕ್ಕಳನ್ನು ಹೆತ್ತ ಭಾಗ್ಯವಂತಳೂ ಬಳಲಿ ಪ್ರಾಣಬಿಟ್ಟಂತಿದ್ದಾಳೆ, [QBR] ಹಗಲಿನಲ್ಲಿಯೇ ಆಕೆಯ ಪಾಲಿಗೆ ಸೂರ್ಯನು ಮುಳುಗಿದ್ದಾನೆ, ಆಶಾಭಂಗಪಟ್ಟು ಅವಮಾನಕ್ಕೆ ಈಡಾಗಿದ್ದಾಳೆ. [QBR] ಆಕೆಯ ಉಳಿದ ಸಂತಾನವನ್ನು ಶತ್ರುಗಳ ಕಣ್ಣೆದುರಿನಲ್ಲಿ ನಾನು ಖಡ್ಗಕ್ಕೆ ಗುರಿಮಾಡುವೆನು’ ” ಇದು ಯೆಹೋವನ ನುಡಿ.
10. {ಪ್ರವಾದಿಯ ಪ್ರಲಾಪ} [PS] ನನ್ನ ತಾಯೀ, ನನ್ನ ಗತಿಯನ್ನು ಏನು ಹೇಳಲಿ! ನಿನ್ನ ಗರ್ಭದಿಂದ ಬಂದ ನಾನು ಲೋಕದವರೆಲ್ಲರಿಗೆ ಜಗಳಗಂಟಿಗನೂ, ವ್ಯಾಜ್ಯಗಾರನೂ ಆಗಿದ್ದೇನಲ್ಲಾ. [QBR] ನಾನು ಹಣವನ್ನು ಬಡ್ಡಿಗೆ ಕೊಟ್ಟವನಲ್ಲ, ತೆಗೆದುಕೊಂಡವನಲ್ಲ, ಆದರೂ ನನ್ನನ್ನು ಎಲ್ಲರೂ ನಿಂದಿಸುತ್ತಾರೆ. [QBR]
11. ಇದಕ್ಕೆ ಯೆಹೋವನು, “ನಿನಗೆ ಮೇಲಾಗುವಂತೆ ನಿಶ್ಚಯವಾಗಿ ನಿನ್ನನ್ನು ಬಿಡುಗಡೆಮಾಡುವೆನು. [QBR] ನಿಜನಿಜವಾಗಿ ನಿನ್ನ ಕೇಡಿನಲ್ಲಿಯೂ, ಇಕ್ಕಟ್ಟಿನಲ್ಲಿಯೂ ಶತ್ರುವನ್ನು ನಿನಗೆ ಶರಣಾಗತನನ್ನಾಗಿ ಮಾಡುವೆನು. [QBR]
12. ಕಬ್ಬಿಣವನ್ನು, ಬಡಗಣ ಕಬ್ಬಿಣವನ್ನು ಯಾರು ಮುರಿದಾರು? [QBR] ತಾಮ್ರವನ್ನು ಮುರಿಯುವುದು ಯಾರಿಂದಾದೀತು?” ಎಂದು ಹೇಳಿದನು. [QBR]
13. “ನಿನ್ನ ಸಕಲ ಪ್ರಾಂತ್ಯಗಳಲ್ಲಿ ನೀನು ಮಾಡಿದ ಎಲ್ಲಾ ಪಾಪಗಳ ನಿಮಿತ್ತ ನಾನು ನಿನ್ನ ಸೊತ್ತು ಮತ್ತು ಸಂಪತ್ತುಗಳನ್ನು ಲಾಭವಿಲ್ಲದೆ ಸೂರೆಗೆ ಈಡುಮಾಡಿ, [QBR]
14. ಅವುಗಳನ್ನು ನಿನ್ನ ಶತ್ರುಗಳ ಕೈಗೆ ಕೊಟ್ಟು, ನೀನು ನೋಡದ ದೇಶಕ್ಕೆ ಸಾಗಿಸಿಬಿಡುವೆನು. ನನ್ನ ರೋಷದಿಂದ ಉರಿಯು ಹತ್ತಿಕೊಂಡಿದೆ, ಅದು ನಿಮ್ಮನ್ನು ಸುಟ್ಟುಬಿಡುವುದು.” [QBR]
15. ಅದಕ್ಕೆ ನಾನು, “ಯೆಹೋವನೇ, ನೀನೇ ಬಲ್ಲೆ, ನನ್ನನ್ನು ಜ್ಞಾಪಕಕ್ಕೆ ತಂದು ಕಟಾಕ್ಷಿಸು; [QBR] ನನಗಾಗಿ ನನ್ನ ಹಿಂಸಕರಿಗೆ ಮುಯ್ಯಿತೀರಿಸು. [QBR] ಅವರಿಗೆ ಹೆಚ್ಚು ತಾಳ್ಮೆಯನ್ನು ತೋರಿಸಬೇಡ, ನನ್ನನ್ನು ನಿರ್ಮೂಲ ಮಾಡಬೇಡ. [QBR] ನಿನ್ನ ನಿಮಿತ್ತವೇ ನಾನು ನಿಂದೆಗೆ ಗುರಿಯಾದೆನೆಂದು ಜ್ಞಾಪಕಕ್ಕೆ ತಂದುಕೋ. [QBR]
16. ನನಗೆ ದೊರೆತ ನಿನ್ನ ಮಾತುಗಳನ್ನು ಆಹಾರಮಾಡಿಕೊಂಡೆನು, ನಿನ್ನ ನುಡಿಗಳು ನನಗೆ ಹರ್ಷವೂ, ಹೃದಯಾನಂದವೂ ಆದವು. [QBR] ಸೇನಾಧೀಶ್ವರನಾದ ದೇವರೇ, ಯೆಹೋವನೇ, ನಾನು ನಿನ್ನ ಹೆಸರಿನವನಲ್ಲವೇ! [QBR]
17. ನಾನು ವಿನೋದಗಾರರ ಕೂಟದಲ್ಲಿ ಕುಳಿತುಕೊಳ್ಳಲಿಲ್ಲ, ಉಲ್ಲಾಸಪಡಲೂ ಇಲ್ಲ. [QBR] ನೀನು ನನ್ನ ಮೇಲೆ ಕೈಯಿಟ್ಟಿದ್ದರಿಂದ ಒಂಟಿಗನಾಗಿ ಕುಳಿತೆನು; ನನ್ನನ್ನು ರೋಷದಿಂದ ತುಂಬಿಸಿದ್ದಿಯಷ್ಟೆ. [QBR]
18. ಏಕೆ ನನ್ನ ವ್ಯಥೆಯು ನಿರಂತರವಾಗಿದೆ? ನನ್ನ ಗಾಯವು ಗಡುಸಾಗಿ ಗುಣಹೊಂದದೆ ಇರುವುದು ಏಕೆ? [QBR] ನೀನು ನನಗೆ ನೀರು ಬತ್ತುವ ಕಳ್ಳತೊರೆಯಂತಿರಬೇಕೋ?” ಎಂದು ಅರಿಕೆಮಾಡಿಕೊಂಡೆನು.
19. {ಯೆಹೋವನು ಪ್ರವಾದಿಯನ್ನು ಧೈರ್ಯಗೊಳಿಸಿದ್ದು} [PS] ಇದರಿಂದ ಯೆಹೋವನು, “ನೀನು ನನ್ನ ಕಡೆಗೆ ಹಿಂದಿರುಗಿದರೆ ನನ್ನ ಸಮ್ಮುಖದಲ್ಲಿ ನಿಲ್ಲುವಂತೆ ನಾನು ನಿನ್ನನ್ನು ತಿರುಗಿ ಸೇರಿಸಿಕೊಳ್ಳುವೆನು. [QBR] ನೀನು ತುಚ್ಛವಾದದ್ದನ್ನು ನಿರಾಕರಿಸಿ, ಅಮೂಲ್ಯವಾದದ್ದನ್ನು ಪ್ರಕಾಶಪಡಿಸಿದರೆ ನೀನು ನನ್ನ ಬಾಯಂತಿರುವಿ. [QBR] ಜನರು ನಿನ್ನ ಕಡೆಗೆ ತಿರುಗಿಕೊಳ್ಳುವರು, ನೀನು ಅವರ ಕಡೆಗೆ ತಿರುಗದಿರುವಿ. [QBR]
20. ನಾನು ನಿನ್ನನ್ನು ಈ ಜನರಿಗೆ ದುರ್ಗಮವಾದ ತಾಮ್ರದ ಪೌಳಿಗೋಡೆಯನ್ನಾಗಿ ಮಾಡುವೆನು. [QBR] ಅವರು ನಿನ್ನ ವಿರುದ್ಧವಾಗಿ ಯುದ್ಧಮಾಡುವರು. ಆದರೆ ನಿನ್ನನ್ನು ಸೋಲಿಸಲಾಗುವುದಿಲ್ಲ. [QBR] ನಿನ್ನನ್ನು ಉದ್ಧರಿಸಿ ರಕ್ಷಿಸಲು ನಾನೇ ನಿನ್ನೊಂದಿಗಿರುವೆನು. ಇದು ಯೆಹೋವನಾದ ನನ್ನ ಮಾತು. [QBR]
21. ನಾನು ನಿನ್ನನ್ನು ದುಷ್ಟರ ಕೈಯಿಂದ ಉದ್ಧರಿಸುವೆನು, [QBR] ಹೌದು, ಕ್ರೂರರ ಕೈಯಿಂದ ರಕ್ಷಿಸುವೆನು” ಎಂದಿದ್ದಾನೆ. [PE]