1. {ನ್ಯಾಯತೀರ್ಪು ಮತ್ತು ರಕ್ಷಣೆ} [PS] “ವಿಜ್ಞಾಪಿಸಿಕೊಳ್ಳದವರಿಗೂ ಪ್ರಸನ್ನನಾಗಿದ್ದೆನು, ನನ್ನನ್ನು ಹುಡುಕದವರಿಗೂ ಸಿಕ್ಕಿದೆನು, [QBR] ನನ್ನ ನಾಮವನ್ನೆತ್ತಿ ಪ್ರಾರ್ಥಿಸದ ಜನಾಂಗಕ್ಕೂ, ‘ಇಗೋ, ನಾನಿದ್ದೇನೆ! ನಾನಿದ್ದೇನೆ’ ಎನ್ನುತ್ತಿದ್ದೆನು. [QBR]
2. ನನ್ನನ್ನು ತೊರೆದು, ಮನಸ್ಸು ಬಂದ ಹಾಗೆ ದುರ್ಮಾರ್ಗದಲ್ಲಿ ನಡೆಯುವ ಜನರನ್ನು ನಾನು ದಿನವೆಲ್ಲಾ ಕೈಚಾಚಿ ಕರೆದೆನು. [QBR]
3. ಈ ಜನರು ವನಗಳಲ್ಲಿ ಯಜ್ಞ ಮಾಡುತ್ತಾ, ಇಟ್ಟಿಗೆಯ ಯಜ್ಞವೇದಿಯ ಮೇಲೆ ಧೂಪಹಾಕುತ್ತಾ ನನ್ನನ್ನು ಯಾವಾಗಲೂ ಕೆಣಕುತ್ತಾರೆ. [QBR]
4. ಗೋರಿಗಳಲ್ಲಿ ಕುಳಿತುಕೊಳ್ಳುತ್ತಾ, ಗುಪ್ತಸ್ಥಳಗಳಲ್ಲಿ ರಾತ್ರಿ ಕಳೆಯುತ್ತಾ, ಹಂದಿಯ ಮಾಂಸವನ್ನು ತಿನ್ನುತ್ತಾ, [QBR] ಅಸಹ್ಯ ಪದಾರ್ಥಗಳ ಸಾರನ್ನು ತಮ್ಮ ಪಾತ್ರೆಗಳಲ್ಲಿ ಬಡಿಸಿಕೊಳ್ಳುತ್ತಾ ಅಲ್ಲಿ ನಿಂತಿರುತ್ತಾರೆ. [QBR]
5. ಅವರು, ‘ಹತ್ತಿರ ಬರಬೇಡ, ನಾನು ಮಡಿವಂತನು, ನೀನು ಸೇರತಕ್ಕವನಲ್ಲ’ ಎನ್ನುತ್ತಾ, [QBR] ಅಂತು ಪ್ರತಿನಿತ್ಯವೂ ಮುಖದೆದುರಿಗೆ ನನ್ನನ್ನು ಕೆಣಕುತ್ತಾ, ನನ್ನ ಮೂಗಿಗೆ ದಿನವೆಲ್ಲಾ ಉರಿಯುವ ಬೆಂಕಿಯ ಹೊಗೆಯಾಗಿದ್ದಾರೆ. [QBR]
6. ಇಗೋ, ಇದೆಲ್ಲಾ ಶಾಸನವಾಗಿ ನನ್ನ ಕಣ್ಣೆದುರಿಗಿದೆ, ನಾನು ಮುಯ್ಯಿ ತೀರಿಸುವ ತನಕ ಸುಮ್ಮನಿರಲಾರೆನು; ಅದರ ಪ್ರತಿಫಲವನ್ನು ಇವರ ಮಡಿಲಿಗೆ ಹಾಕುವೆನು; [QBR]
7. ಇವರೂ ಇವರ ಪೂರ್ವಿಕರೂ ಬೆಟ್ಟಗುಡ್ಡಗಳಲ್ಲಿ ಧೂಪಹಾಕಿ, ನನ್ನನ್ನು ಹೀನೈಸಿ ನಡೆಸಿದ ಅಪರಾಧ ಕಾರ್ಯದ ಫಲವನ್ನು ಅದರ ಅಳತೆಗೆ ಸರಿಯಾಗಿ ಇವರ ಮಡಿಲಿಗೆ ಸುರಿಯುವೆನು” ಎಂದು ಯೆಹೋವನು ಹೇಳುತ್ತಾನೆ. [QBR]
8. ಯೆಹೋವನು ಹೀಗನ್ನುತ್ತಾನೆ, “ರಸ ದೊರೆಯಬಹುದಾದ ದ್ರಾಕ್ಷಿಯ ಗೊಂಚಲನ್ನು ಒಬ್ಬನು ನೋಡಿ, ‘ಹಾಳುಮಾಡಬೇಡ, ಅದರಲ್ಲಿ ಪ್ರಯೋಜನವಿದೆ’ ಎನ್ನುವಂತೆ, [QBR] ನಾನು ನನ್ನ ಸೇವಕರನ್ನು ಲಕ್ಷ್ಯಕ್ಕೆ ತಂದು, ಇವರನ್ನೆಲ್ಲಾ ಹಾಳುಮಾಡಬಾರದು ಎಂದು ಅಂದುಕೊಳ್ಳುವೆನು, [QBR]
9. ಯಾಕೋಬಿನಿಂದ ಸಂತಾನವನ್ನು ಹುಟ್ಟಿಸುವೆನು, ಯೆಹೂದ ವಂಶದಿಂದ ನನ್ನ ಪರ್ವತಗಳ ಸ್ವತ್ತಿನ ಸಂತತಿಯನ್ನು ಬರಮಾಡುವೆನು, [QBR] ನನ್ನ ಆಪ್ತರು ಆ ಸ್ವತ್ತನ್ನು ಅನುಭವಿಸುವರು, ನನ್ನ ಸೇವಕರು ಅಲ್ಲಿ ವಾಸಿಸುವರು. [QBR]
10. ಆಗ ನನ್ನ ಭಕ್ತಜನರ ಹಿತಕ್ಕಾಗಿ ಶಾರೋನು ಹಿಂಡುಗಳಿಗೆ ಹುಲ್ಲುಗಾವಲಾಗಿಯೂ, [QBR] ಆಕೋರಿನ ತಗ್ಗು ದನದ ಹಕ್ಕೆಯಾಗಿಯೂ ಇರುವವು. [QBR]
11. ಆದರೆ ಯೆಹೋವನಾದ ನನ್ನನ್ನು ತೊರೆದು, ನನ್ನ ಪವಿತ್ರ ಪರ್ವತವನ್ನು ಮರೆತು, ಶುಭದಾಯಕ ದೇವತೆಗೆ ಔತಣವನ್ನು ಏರ್ಪಡಿಸಿ, [QBR] ಗತಿದಾಯಕ ದೇವತೆಗೆ ಮದ್ಯವನ್ನು ಬೆರಸಿದ ನಿಮಗೆ ಕತ್ತಿಯನ್ನೇ ಗತಿಯಾಗ ಮಾಡುವೆನು. [QBR]
12. ನೀವೆಲ್ಲರೂ ಕತ್ತಿಗೆ ಬೀಳುವಿರಿ, ನೀವೆಲ್ಲರೂ ಕೊಲೆಗೊಳಗಾಗಿ ಬೀಳುವಿರಿ, ಏಕೆಂದರೆ ನಾನು ಕೂಗಲು ನೀವು ಉತ್ತರಕೊಡಲಿಲ್ಲ. ನಾನು ಹೇಳಿದರೂ ನೀವು ಕೇಳಲಿಲ್ಲ; [QBR] ನನ್ನ ಚಿತ್ತಕ್ಕೆ ವಿರುದ್ಧವಾದದ್ದನ್ನು ನಡೆಸಿ, ನನಗೆ ಇಷ್ಟವಿಲ್ಲದ್ದನ್ನು ಆರಿಸಿಕೊಂಡಿರಿ.” [QBR]
13. ಹೀಗಿರಲು ಕರ್ತನಾದ ಯೆಹೋವನು ಹೀಗೆನ್ನುತ್ತಾನೆ, “ಇಗೋ, ನನ್ನ ಸೇವಕರು ಊಟಮಾಡುವರು, ನೀವು ಹಸಿದಿರುವಿರಿ; [QBR] ಇಗೋ, ನನ್ನ ಸೇವಕರು ಕುಡಿಯುವರು, ನೀವು ದಾಹಗೊಳ್ಳುವಿರಿ; [QBR] ಇಗೋ, ನನ್ನ ಸೇವಕರು ಉಲ್ಲಾಸಗೊಳ್ಳುವರು, ನೀವು ಆಶಾಭಂಗಪಡುವಿರಿ. [QBR]
14. ಇಗೋ, ನನ್ನ ಸೇವಕರು ಹೃದಯಾನಂದದಿಂದ ಹರ್ಷಧ್ವನಿಗೈಯುವರು, [QBR] ನೀವೋ ಮನೋವ್ಯಥೆಯಿಂದ ಮೊರೆಯಿಟ್ಟು, ಹೃದಯದ ಯಾತನೆಯಿಂದ ಗೋಳಾಡುವಿರಿ. [QBR]
15. ಕರ್ತನಾದ ಯೆಹೋವನು ನಿಮ್ಮನ್ನು ಕೊಂದುಹಾಕುವನು, ನಿಮ್ಮ ಹೆಸರು ನನ್ನ ಆಪ್ತಜನರು ಶಪಿಸುವ ಶಾಪದ ಮಾತಾಗಿಯೇ ಉಳಿಯುವುದು; [QBR] ನಾನು ನನ್ನ ಸೇವಕರಿಗೆ ಹೊಸ ಹೆಸರನ್ನು ಕೊಡುವೆನು. [QBR]
16. ನಿಮ್ಮ ಪೂರ್ವದ ಕಷ್ಟಗಳು ಇನ್ನು ನನ್ನ ಕಣ್ಣಿಗೆ ಬೀಳದೆ ಮರೆತು ಹೋಗಿರುವುದರಿಂದ [QBR] ಲೋಕದಲ್ಲಿ ತನ್ನನ್ನು ಆಶೀರ್ವದಿಸಿಕೊಳ್ಳುವ ಪ್ರತಿಯೊಬ್ಬನೂ ಸತ್ಯಸಂಧನಾದ ದೇವರ ಹೆಸರಿನಿಂದ ಆಶೀರ್ವದಿಸಿಕೊಳ್ಳುವನು; [QBR] ಲೋಕದಲ್ಲಿ ಆಣೆಯಿಡುವ ಪ್ರತಿಯೊಬ್ಬನೂ ಸತ್ಯವಂತನಾದ ದೇವರ ಮೇಲೆ ಆಣೆಯಿಡುವನು. [PS]
17. {ನೂತನ ಸೃಷ್ಟಿ} [PS] “ಇಗೋ, ನೂತನ ಆಕಾಶಮಂಡಲವನ್ನೂ ಮತ್ತು ನೂತನ ಭೂಮಂಡಲವನ್ನೂ ಸೃಷ್ಟಿಸುವೆನು; [QBR] ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು, ಅದು ನೆನಪಿಗೆ ಬಾರದು. [QBR]
18. ನಾನು ಮಾಡುವ ಸೃಷ್ಟಿಕಾರ್ಯದಲ್ಲಿಯೇ ಹರ್ಷಗೊಂಡು ಸದಾ ಉಲ್ಲಾಸಿಸಿರಿ; [QBR] ಆಹಾ, ನಾನು ಯೆರೂಸಲೇಮನ್ನು ಉಲ್ಲಾಸದ ನಿವಾಸವನ್ನಾಗಿಯೂ, [QBR] ಅದರ ಜನರನ್ನು ಹರ್ಷಭರಿತರನ್ನಾಗಿಯೂ ಮಾಡುವೆನು. [QBR]
19. ನಾನೂ ಯೆರೂಸಲೇಮನ್ನು ದೃಷ್ಟಿಸುತ್ತಾ ಉಲ್ಲಾಸಿಸುವೆನು, ಅದರ ಜನರಲ್ಲಿ ಹರ್ಷಗೊಳ್ಳುವೆನು. [QBR] ರೋದನ ಶಬ್ದವೂ, ಪ್ರಲಾಪಧ್ವನಿಯೂ ಅಲ್ಲಿ ಇನ್ನು ಕೇಳಿಸವು. [QBR]
20. ಕೆಲವು ದಿನ ಮಾತ್ರ ಬದುಕತಕ್ಕ ಕೂಸಾಗಲಿ, ವೃದ್ಧನಾಗಲಿ ಅಲ್ಲಿ ಇರುವುದಿಲ್ಲ; [QBR] ಯುವಕನು ನೂರು ವರ್ಷದೊಳಗೆ ಸಾಯನು, ಪಾಪಿಷ್ಠನಿಗೂ ನೂರು ವರ್ಷದೊಳಗೆ ಶಾಪ ತಗಲದು. [QBR]
21. ಅಲ್ಲಿನ ಜನರು ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು, ತಾವು ಮಾಡಿದ ದ್ರಾಕ್ಷಿಯ ತೋಟಗಳ ಫಲವನ್ನು ತಾವೇ ಅನುಭವಿಸುವರು. [QBR]
22. ಒಬ್ಬನು ಕಟ್ಟಿದ ಮನೆಯಲ್ಲಿ ಬೇರೊಬ್ಬನು ವಾಸಿಸನು; ಒಬ್ಬನು ಮಾಡಿದ ತೋಟದ ಫಲವು ಇನ್ನೊಬ್ಬನಿಗೆ ವಶವಾಗದು; [QBR] ನನ್ನ ಜನರ ಆಯುಸ್ಸು ವೃಕ್ಷದ ಆಯುಸ್ಸಿನಂತಿರುವುದು; ನನ್ನ ಆಪ್ತರು ತಮ್ಮ ಕೈಕೆಲಸದ ಆದಾಯವನ್ನು ಸಂಪೂರ್ಣವಾಗಿ ಅನುಭವಿಸುವರು. [QBR]
23. ಅವರು ವ್ಯರ್ಥವಾಗಿ ದುಡಿಯರು, ಅವರಿಗೆ ಹುಟ್ಟುವ ಮಕ್ಕಳು ಘೋರವ್ಯಾಧಿಗೆ ಗುರಿಯಾಗರು. [QBR] ಅವರು ಯೆಹೋವನ ಆಶೀರ್ವಾದವನ್ನು ಹೊಂದಿದವರ ಸಂತಾನವಷ್ಟೆ; ಅವರ ಸಂತತಿಯವರು ಅವರೊಂದಿಗೆ ಬಹುದಿನವಿರುವರು. [QBR]
24. ಆಗ ಅವರು ಬೇಡುವುದರೊಳಗೆ ಸದುತ್ತರವನ್ನು ದಯಪಾಲಿಸುವೆನು; ಅವರು ಹೇಳುತ್ತಿರುವಾಗಲೇ ಕೇಳುವೆನು. [QBR]
25. ತೋಳವು ಕುರಿಯ ಸಂಗಡ ಮೇಯುವುದು, ಸಿಂಹವು ಎತ್ತಿನಂತೆ ಹುಲ್ಲು ತಿನ್ನುವುದು, ಹಾವಿಗೆ ಧೂಳೇ ಆಹಾರವಾಗುವುದು. [QBR] ನನ್ನ ಪರಿಶುದ್ಧ ಪರ್ವತದಲ್ಲೆಲ್ಲಾ ಯಾರೂ ಕೇಡು ಮಾಡುವುದಿಲ್ಲ, ಯಾರೂ ಹಾಳು ಮಾಡುವುದಿಲ್ಲ” ಎಂದು ಯೆಹೋವನು ಅನ್ನುತ್ತಾನೆ. [PE]