1. {#1ಯೆಹೋವನು ಜನಾಂಗಗಳನ್ನು ದಂಡಿಸುವುದು } [QS]ಜನಾಂಗಗಳೇ, ಸಮೀಪಕ್ಕೆ ಬಂದು ಕೇಳಿರಿ; ಜನಗಳೇ, ಕಿವಿಗೊಡಿರಿ! ಭೂಮಿಯೂ ಅದರಲ್ಲಿನ ಸಮಸ್ತವೂ, ಲೋಕವೂ ಅದರಿಂದ ಉದ್ಭವಿಸುವುದೆಲ್ಲವೂ ಆಲಿಸಲಿ. [QE]
2. [QS]ಯೆಹೋವನು ಸಕಲ ಜನಾಂಗಗಳ ಮೇಲೆ ಕೋಪಗೊಂಡು, ಅವುಗಳ ಸೈನ್ಯದ ಮೇಲೆ ರೋಷಗೊಂಡು, ಅವರನ್ನು ಕೊಲೆಗೆ ಈಡುಮಾಡಿ ಸಂಪೂರ್ಣವಾಗಿ ಸಂಹರಿಸಿದ್ದಾನೆ. [QE]
3. [QS]ಅವರಲ್ಲಿ ಹತರಾದವರು ಬಿಸಾಡಲ್ಪಡುವರು, ಅವರ ಶವಗಳ ದುರ್ವಾಸನೆಯು ಮೇಲಕ್ಕೆ ಏರುವುದು. ಅವರ ರಕ್ತಪ್ರವಾಹದಿಂದ ಪರ್ವತಗಳು ಕರಗುವವು. [QE]
4. [QS]ನಕ್ಷತ್ರ ಸೈನ್ಯವೆಲ್ಲಾ ಗತಿಸಿ ಹೋಗುವುದು, ಆಕಾಶ ಮಂಡಲವು ಸುರಳಿಯಂತೆ ಸುತ್ತಿಕೊಳ್ಳುವುದು. ದ್ರಾಕ್ಷಿಯ ಎಲೆ ಒಣಗಿ ಗಿಡದಿಂದ ಬೀಳುವಂತೆಯೂ, ಅಂಜೂರ ಮರದಿಂದ ಮಾಗಿದ ಹಣ್ಣು ಉದುರುವ ಹಾಗೂ ತಾರಾಮಂಡಲವೆಲ್ಲಾ ಬಾಡಿ ಕೆಳಗೆ ಉದುರುವುದು. [QE]
5. [QS]ನನ್ನ ಖಡ್ಗವು ಮೇಲಿನ ಲೋಕದಲ್ಲಿ ರೋಷಪಾನ ಮಾಡುವುದು, ಇಗೋ, ನಾನು ಶಪಿಸಿದ ಎದೋಮೆಂಬ ಜನಾಂಗದ ಮೇಲೆ ನ್ಯಾಯ ತೀರಿಸುವುದಕ್ಕೆ ಕೆಳಗೆ ಇಳಿದು ಬರುವುದು. [QE]
6. [QS]ಯೆಹೋವನ ಖಡ್ಗವು ರಕ್ತದಿಂದ ತುಂಬಿದೆ. ಅದು ಕುರಿ ಮತ್ತು ಹೋತಗಳ ರಕ್ತದಿಂದಲೂ, ಟಗರುಗಳ ಮೂತ್ರಪಿಂಡದ ಕೊಬ್ಬಿನಿಂದಲೂ ಲೇಪಿತವಾಗಿದೆ. ಏಕೆಂದರೆ ಯೆಹೋವನು ಬೊಚ್ರದಲ್ಲಿ ಬಲಿಯನ್ನೂ, ಎದೋಮ್ ಸೀಮೆಯಲ್ಲಿ ದೊಡ್ಡ ಹತ್ಯೆಯನ್ನೂ ಮಾಡಬೇಕೆಂದಿದ್ದಾನೆ. [QE]
7. [QS]ಈ ಯಜ್ಞಪಶುಗಳೊಂದಿಗೆ ಕಾಡುಕೋಣಗಳೂ ಮತ್ತು ಹೋರಿಗೂಳಿಗಳೂ ಹತವಾಗುವವು. ಆ ದೇಶವು ರಕ್ತದಿಂದ ತೊಯಿದಿರುವುದು, ಅಲ್ಲಿನ ಧೂಳು ಕೊಬ್ಬಿನಿಂದ ಜಿಡ್ಡಾಗಿರುವುದು. [QE]
8. [QS]ಏಕೆಂದರೆ ಅದು ಯೆಹೋವನು ಮುಯ್ಯಿತೀರಿಸುವ ದಿನವಾಗಿದೆ, ಚೀಯೋನಿನ ವ್ಯಾಜ್ಯದಲ್ಲಿ ದಂಡನೆ ವಿಧಿಸತಕ್ಕ ವರ್ಷವು ಒದಗಿದೆ. [QE]
9. [QS]ಅಲ್ಲಿ ಪ್ರವಾಹಗಳು ಇಳಿಜಾರಾಗಿ ಮಾರ್ಪಡುವವು, ಧೂಳು ಗಂಧಕವಾಗುವುದು, ದೇಶವೆಲ್ಲಾ ಉರಿಯುವ ಇಳಿಜಾರು ಪ್ರದೇಶವಾಗುವುದು. [QE]
10. [QS]ಅದು ಹಗಲಿರುಳೂ ಆರುವುದಿಲ್ಲ. ಅದರ ಹೊಗೆಯು ನಿರಂತರವಾಗಿ ಏರುತ್ತಿರುವುದು. ದೇಶವು ತಲತಲಾಂತರಕ್ಕೂ ಹಾಳು ಬಿದ್ದಿರುವುದು, ಯುಗಯುಗಾಂತರಕ್ಕೂ ಅಲ್ಲಿ ಯಾರೂ ಹಾದು ಹೋಗರು. [QE]
11. [QS]ಆದರೆ ಕಾಡಿನ ಪಕ್ಷಿಗಳು, ಪ್ರಾಣಿಗಳು ಅಲ್ಲಿ ವಾಸಿಸುವವು. ಗೂಬೆ ಮತ್ತು ಕಾಗೆಗಳು ಅಲ್ಲಿ ವಾಸಿಸುವವು; ಯೆಹೋವನು ಅದರ ಮೇಲೆ ನಾಶ ಎಂಬ ನೂಲನ್ನೂ ಪಾಳು ಎಂಬ ಮಟ್ಟಗೋಲನ್ನೂ ಎಳೆಯುವನು. [QE]
12. [QS]ಅಲ್ಲಿ ಪಟ್ಟಕ್ಕೆ ಕರೆಯಲು ಪ್ರಮುಖರಲ್ಲಿ ಯಾರೂ ಸಿಕ್ಕುವುದಿಲ್ಲ; ದೇಶದಲ್ಲಿ ಪ್ರಧಾನರೇ ಇಲ್ಲದಂತಾಗುವರು. [QE]
13. [QS]ಅಲ್ಲಿನ ಅರಮನೆಗಳಲ್ಲಿ ಮುಳ್ಳುಗಳು ಬೆಳೆಯುವವು, ಅದರ ಕೋಟೆಗಳಲ್ಲಿ ಮುಳ್ಳುಗಿಡಗಳೂ, ದತ್ತೂರಿಯೂ ಹಬ್ಬಿಕೊಳ್ಳುವವು. ಅದು ನರಿಗಳಿಗೆ ಗುಹೆಯಾಗಿಯೂ, ಉಷ್ಟ್ರಪಕ್ಷಿಗಳಿಗೆ ನಿವಾಸವಾಗಿಯೂ ಇರುವುದು. [QE]
14. [QS]ಕಾಡುಮೃಗಗಳು ಮತ್ತು ನರಿಗಳು ಅಲ್ಲಿ ಸಂಧಿಸುವವು, ಕಾಡಿನ ಆಡುಗಳು ತನ್ನ ಜೊತೆಯನ್ನು ಕೂಗುವುದು, ಭೂತ ಪ್ರೇತಗಳು ಅಲ್ಲಿ ಹಾಯಾಗಿ ವಿಶ್ರಮಿಸಿಕೊಂಡು, ಆಸರೆಯನ್ನು ಕಂಡುಕೊಳ್ಳುವುದು. [QE]
15. [QS]ಅಲ್ಲಿ ಗೂಬೆಯೂ ಗೂಡನ್ನು ಮಾಡಿಕೊಂಡು ಮೊಟ್ಟೆಯಿಟ್ಟು, ಮರಿಮಾಡಿ ಮರೆಯಲ್ಲಿ ಕೂಡಿಸಿಕೊಳ್ಳುವುದು. ಹೌದು, ಹದ್ದುಗಳು ಅಲ್ಲಿ ಜೋಡಿಜೋಡಿಯಾಗಿ ಸೇರಿಕೊಳ್ಳುವವು. [QE]
16. [QS]ಯೆಹೋವನ ಶಾಸ್ತ್ರದಲ್ಲಿ ಹುಡುಕಿ ಓದಿರಿ, ಇವುಗಳಲ್ಲಿ ಒಂದಾದರೂ ಇಲ್ಲದೆ ಇರುವುದಿಲ್ಲ, ಜೊತೆಯಿಲ್ಲದೆ ಒಂದೂ ಇಲ್ಲ. ಏಕೆಂದರೆ ಆತನ ಬಾಯಿಯೇ ಅದನ್ನು ಆಜ್ಞಾಪಿಸಿತು. ಆತನ ಆತ್ಮವು ಇವುಗಳನ್ನು ಒಟ್ಟುಗೂಡಿಸಿತು. [QE]
17. [QS]ಆತನೇ ಇವುಗಳಿಗೆ ಪಾಲು ಮಾಡಿಕೊಟ್ಟಿದ್ದಾನೆ. ಆತನ ಕೈಯೇ ಗೆರೆ ಹಾಕಿ ದೇಶವನ್ನು ಹಂಚಿಕೊಟ್ಟಿದೆ. ಅದು ಇವುಗಳಿಗೆ ನಿತ್ಯ ಸ್ವಾಸ್ತ್ಯವಾಗುವುದು, ಅವು ತಲಾತಲಾಂತರಕ್ಕೂ ಅದರಲ್ಲಿ ವಾಸವಾಗಿರುವವು. [QE]