1. {#1ಯೆರೂಸಲೇಮಿಗೆ ಶಿಕ್ಷೆ } [PS]ಆಮೇಲೆ ಆತನು, “ಪಟ್ಟಣವನ್ನು ದಂಡಿಸತಕ್ಕವರೇ, ನೀವೆಲ್ಲರೂ ನಿಮ್ಮ ಹತ್ಯಾ ಆಯುಧಗಳನ್ನು ಹಿಡಿದವರಾಗಿ ಸಮೀಪಿಸಿರಿ” ಎಂದು ಗಟ್ಟಿಯಾಗಿ ಕೂಗಿ ಹೇಳಿದ ಮಾತು ನನ್ನ ಕಿವಿಗೆ ಬಿತ್ತು.
2. ಕೂಡಲೆ ಗದೆಗಳನ್ನು ಹಿಡಿದುಕೊಂಡ ಆರು ಮಂದಿ ಪುರುಷರು ಉತ್ತರ ಮುಖವಾಗಿರುವ ಮೇಲಣ ಹೆಬ್ಬಾಗಿಲಿನ ಮಾರ್ಗವಾಗಿ ಬಂದರು; ನಾರಿನ ಬಟ್ಟೆಯನ್ನು ಹೊದ್ದುಕೊಂಡು ಲೇಖಕನ ಮಸಿಕುಡಿಕೆಯನ್ನು ನಡುವಿಗೆ ಕಟ್ಟಿಕೊಂಡಿರುವ ಮತ್ತೊಬ್ಬ ಪುರುಷನು ಅವರ ಮಧ್ಯದಲ್ಲಿದ್ದನು. ಇವರೆಲ್ಲರೂ ಒಳಕ್ಕೆ ಸೇರಿ ತಾಮ್ರದ ಯಜ್ಞವೇದಿಯ ಪಕ್ಕದಲ್ಲಿ ನಿಂತುಕೊಂಡರು. [PE]
3. [PS]ಇಷ್ಟರಲ್ಲಿ ಇಸ್ರಾಯೇಲಿನ ದೇವರ ತೇಜಸ್ಸು ತನ್ನ ವಾಹನವಾದ ಕೆರೂಬಿಯನ್ನು ಬಿಟ್ಟು ಮೇಲಕ್ಕೇರಿ ಆಲಯದ ಹೊಸ್ತಿಲಿನ ಮೇಲ್ಗಡೆ ನಿಂತಿತ್ತು; ಆಗ ನಾರಿನ ಬಟ್ಟೆಯನ್ನು ಹೊದ್ದುಕೊಂಡು, ಲೇಖಕನ ಮಸಿಕೊಂಬನ್ನು ನಡುವಿಗೆ ಕಟ್ಟಿಕೊಂಡಿರುವ ಪುರುಷನನ್ನು ಕಂಡನು.
4. ಯೆಹೋವನು ಕೂಗಿ ಅವನಿಗೆ, “ನೀನು ಯೆರೂಸಲೇಮ್ ಪಟ್ಟಣದಲ್ಲೆಲ್ಲಾ ತಿರುಗಿ ಅದರೊಳಗೆ ನಡೆಯುವ ಸಮಸ್ತ ಅಸಹ್ಯ ಕಾರ್ಯಗಳಿಗಾಗಿ ನರಳಿ ಗೋಳಾಡುತ್ತಿರುವ ಜನರ ಹಣೆಯ ಮೇಲೆ ಗುರುತುಮಾಡು” ಎಂದು ಅಪ್ಪಣೆಕೊಟ್ಟನು. [PE]
5. [PS]ಮತ್ತೂ ಆತನು ಉಳಿದವರಿಗೆ, “ನೀವು ಪಟ್ಟಣದಲ್ಲೆಲ್ಲಾ ಇವನ ಹಿಂದೆ ತಿರುಗುತ್ತಾ ಹತಿಸಿರಿ; ಯಾರನ್ನೂ ಕಟಾಕ್ಷಿಸದಿರಿ, ಉಳಿಸದಿರಿ; ವೃದ್ಧ, ಯುವಕ, ಯುವತಿ, ಸ್ತ್ರೀ, ಬಾಲಕ ಎನ್ನದೆ ಸಕಲರನ್ನೂ ಸಂಹಾರ ಮಾಡಿಬಿಡಿರಿ; ಆದರೆ ಆ ಗುರುತುಳ್ಳವರಲ್ಲಿ ಯಾರನ್ನೂ ಮುಟ್ಟಬೇಡಿರಿ; ನನ್ನ ಆಲಯದಲ್ಲಿಯೇ ಪ್ರಾರಂಭಮಾಡಿರಿ” ಎಂಬುದಾಗಿ ಆತನು ನನಗೆ ಕೇಳಿಸುವಂತೆ ಅಪ್ಪಣೆಮಾಡಿದನು.
6. ಆಗ ಅವರು ದೇವಾಲಯದ ಮುಂದೆ ಇದ್ದ ಹಿರಿಯರನ್ನು ಮೊದಲುಗೊಂಡು ಹತಿಸತೊಡಗಿದರು. [PE]
7. [PS]ಆತನು ಅವರಿಗೆ, “ಹೊರಡಿರಿ, ಪ್ರಾಕಾರಗಳನ್ನು ಶವಗಳಿಂದ ತುಂಬಿಸಿ, ದೇವಾಲಯವನ್ನು ಹೊಲೆಗೆಡಿಸಿರಿ” ಎಂದು ಅಪ್ಪಣೆ ಕೊಡಲು ಅವರು ಹೊರಟು ಪಟ್ಟಣದಲ್ಲಿದ್ದವರನ್ನು ಹತಿಸಿದರು.
8. ಅವರು ಹತಿಸುತ್ತಿರುವಾಗ ಅಲ್ಲಿ ಒಂಟಿಗನಾಗಿ ಉಳಿದ ನಾನು ಅಡ್ಡಬಿದ್ದು, “ಅಯ್ಯೋ, ಕರ್ತನಾದ ಯೆಹೋವನೇ, ನೀನು ಯೆರೂಸಲೇಮಿನ ಮೇಲೆ ನಿನ್ನ ಕೋಪಾಗ್ನಿಯನ್ನು ಹೊಯ್ದು, ಇಸ್ರಾಯೇಲರಲ್ಲಿ ಉಳಿದವರನ್ನೆಲ್ಲಾ ನಾಶಮಾಡುವಿಯಾ?” ಎಂದು ಮೊರೆಯಿಟ್ಟೆನು. [PE]
9. [PS]ಆತನು ನನಗೆ, “ಇಸ್ರಾಯೇಲ್ ಮತ್ತು ಯೆಹೂದ ವಂಶದವರ ಅಧರ್ಮವು ಅತ್ಯಂತವಾಗಿದೆ; ದೇಶವು ರಕ್ತಪೂರ್ಣವಾಗಿದೆ, ಪಟ್ಟಣವು ಅನ್ಯಾಯಭರಿತವಾಗಿದೆ; ಆ ವಂಶದವರು, ‘ನಮ್ಮ ದೇಶವನ್ನು ಯೆಹೋವನು ಬಿಟ್ಟುಬಿಟ್ಟಿದ್ದಾನೆ, ಯೆಹೋವನು ನೋಡುವುದಿಲ್ಲ’ ಎಂಬುದಾಗಿ ಮಾತನಾಡಿಕೊಳ್ಳುತ್ತಿದ್ದಾರೆ.
10. ನಾನಂತು, ಅವರನ್ನು ಕಟಾಕ್ಷಿಸುವುದಿಲ್ಲ, ಉಳಿಸುವುದಿಲ್ಲ, ಅವರ ದುರ್ನಡತೆಯನ್ನು ಅವರ ತಲೆಗೆ ಕಟ್ಟುವೆನು” ಎಂದು ಹೇಳಿದನು. [PE]
11. [PS]ಕೂಡಲೆ ನಾರಿನ ಬಟ್ಟೆಯನ್ನು ಹೊದ್ದುಕೊಂಡು ಮಸಿಕೊಂಬನ್ನು ನಡುವಿಗೆ ಕಟ್ಟಿಕೊಂಡಿರುವ ಪುರುಷನು, “ನಿನ್ನ ಅಪ್ಪಣೆಯಂತೆಯೇ ಮಾಡಿದ್ದೇನೆ” ಎಂದು ಅರಿಕೆಮಾಡಿದನು. [PE]