1. {#1ಗೋಗನ ವಿರುದ್ಧ ದೈವೋಕ್ತಿ } [PS]ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
2. “ನರಪುತ್ರನೇ, ರೋಷಿನವರನ್ನೂ, ಮೆಷೆಕಿನವರನ್ನೂ, ತೂಬಲಿನವರನ್ನೂ ಆಳುವ ಮಾಗೋಗ್ ದೇಶದ ದೊರೆಯಾದ ಗೋಗನ ಕಡೆಗೆ ಮುಖಮಾಡಿ ಅವನಿಗೆ ಈ ಪ್ರವಾದನೆಯನ್ನು ನುಡಿ,
3. ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ರೋಷ್, ಮೆಷೆಕ್, ತೂಬಲ್ ಜನಾಂಗಗಳ ಪ್ರಭುವಾದ ಗೋಗನೇ, ನಾನು ನಿನಗೆ ವಿರುದ್ಧವಾಗಿದ್ದೇನೆ.
4. ನಾನು ನಿನ್ನನ್ನು ಹಿಂದಕ್ಕೆ ತಿರುಗಿಸಿ, ನಿನ್ನ ದವಡೆಗಳಲ್ಲಿ ಕೊಕ್ಕೆಗಳನ್ನು ಹಾಕಿ, ನಿನ್ನ ಎಲ್ಲಾ ಸೈನ್ಯವನ್ನೂ, ಕುದರೆಗಳನ್ನೂ ಮತ್ತು ಕುದರೆ ಸವಾರರನ್ನೂ ಮುಂದೆ ತರುವೆನು. ಇವರೆಲ್ಲರೂ ನಾನಾ ತರವಾದ ಆಯುಧಗಳನ್ನು ತೊಟ್ಟಿರುವರು, ಇವರೊಂದಿಗೆ ಖೇಡ್ಯ ಮತ್ತು ಗುರಾಣಿಗಳುಳ್ಳ ಮಹಾಸಮೂಹವನ್ನು ತರುವೆನು. ಇವರೆಲ್ಲರೂ ಖಡ್ಗವನ್ನು ಹಿಡಿದಿರುವರು.
5. ಅವರೊಂದಿಗೆ ಪಾರಸಿಯರು, ಕೂಷ್ಯರು, ಪೂಟ್ಯರು ಇವರೆಲ್ಲರೊಂದಿಗೆ ಗುರಾಣಿ ಮತ್ತು ಶಿರಸ್ತ್ರಾಣಗಳು ಇದ್ದವು.
6. ಉತ್ತರದಿಕ್ಕಿನ ಕಟ್ಟಕಡೆಯಿಂದ ಬಂದ ಗೋಮೆರ್ ಮತ್ತು ಸೈನ್ಯದವರನ್ನೂ, ತೋಗರ್ಮದವರನ್ನು ಮತ್ತು ಅನೇಕ ಜನರನ್ನು ನಿನ್ನೊಂದಿಗೆ ಬರಮಾಡುವೆನು. [PE]
7. [PS]“ ‘ಸಿದ್ಧವಾಗಿರು! ನಿನ್ನಲ್ಲಿ ಕೂಡಿಬಂದಿರುವ ಎಲ್ಲಾ ತಂಡಗಳೊಡನೆ ನಿನ್ನನ್ನು ಸಿದ್ಧಮಾಡಿಕೋ; ನೀನು ಅವರ ದಂಡ ನಾಯಕನಾಗಿರು.
8. ಬಹಳ ದಿನಗಳಾದ ಮೇಲೆ ನಾನು ನಿನ್ನನ್ನು ಕರೆಯುತ್ತೇನೆ; ಕೆಲವು ವರ್ಷಗಳ ನಂತರ ಖಡ್ಗದಿಂದ ಉಳಿದುಕೊಂಡ ದೇಶಕ್ಕೂ, ಯಾವಾಗಲೂ ಹಾಳಾಗಿದ್ದ ಇಸ್ರಾಯೇಲಿನ ಪರ್ವತಗಳ ಮೇಲೆಯೂ, ಜನಾಂಗಗಳೊಳಗಿಂದ ಕೂಡಿಸಲ್ಪಟ್ಟು ಎಲ್ಲರೂ ಭದ್ರವಾಗಿ ವಾಸಿಸುವವರ ಬಳಿಗೆ ನೀನು ಬರುವಿ.
9. ನೀನು ಮೇಲೇರಿ ಬಿರುಗಾಳಿಯಂತೆ ಹೊರಟು ಬರುವೆ. ನಿನ್ನ ಎಲ್ಲಾ ದಂಡುಗಳೂ ಅನೇಕ ಜನರ ಸಹಿತವಾಗಿ ಕಾರ್ಮುಗಿಲಿನಂತೆ ದೇಶವನ್ನು ಮುಚ್ಚಿಬಿಡುವುದು.’ ” [PE]
10. [PS]ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಆಗ ನಿನ್ನ ಮನಸ್ಸಿನಲ್ಲಿ ಆಲೋಚನೆಗಳು ಹುಟ್ಟುವವು ಮತ್ತು ನೀನು ಕೆಟ್ಟ ಯೋಚನೆಯನ್ನು ಮಾಡುವಿ.
11. ಆಗ ನೀನು, ‘ಆಹಾ, ನಾನು ಪೌಳಿಗೋಡೆಯಿಲ್ಲದ ಹಳ್ಳಿಗಳಿಂದ ತುಂಬಿದ ದೇಶವನ್ನು ನುಗ್ಗಿ, ಅಗುಳಿ, ಬಾಗಿಲು, ಗೋಡೆಗಳಿಲ್ಲದೆ ನೆಮ್ಮದಿಯಿಂದ ನಿರ್ಭಯವಾಗಿರುವವರ ಮೇಲೆ ಬೀಳುವೆನು’ ಅಂದುಕೊಂಡೆ.
12. ಸುಲಿಗೆಯನ್ನು, ಕೊಳ್ಳೆಯನ್ನು ಹೊಡೆಯಬೇಕೆಂತಲೂ, ನಿರ್ಜನವಾಗಿದ್ದು ಜನಭರಿತವಾದ ಪ್ರದೇಶಗಳ ಮೇಲೆ ಕೈಮಾಡಬೇಕೆಂತಲೂ ಜನಾಂಗಗಳೊಳಗಿಂದ ಕೂಡಿಸಲ್ಪಟ್ಟ ಧನ ಕನಕ ಮೊದಲಾದ ಸೊತ್ತನ್ನು ಸಂಗ್ರಹಿಸಿಕೊಂಡು, ಭೂಮಿಯ ಮಧ್ಯದಲ್ಲಿ ವಾಸಿಸುವವರನ್ನು ಹತಿಸಬೇಕೆಂತಲೂ ಕುತಂತ್ರವನ್ನು ಕಲ್ಪಿಸುವಿ.
13. ಶೆಬದವರೂ, ದೆದಾನಿನವರೂ, ತಾರ್ಷೀಷಿನ ವರ್ತಕರೂ, ಅದರ ಸಿಂಹಪ್ರಾಯರೆಲ್ಲರೂ ನಿನ್ನನ್ನು ನೋಡಿ, ‘ನೀನು ಸೂರೆಮಾಡಲಿಕ್ಕೆ ಬಂದಿಯೋ? ಕೊಳ್ಳೆಹೊಡೆದು ಬೆಳ್ಳಿಬಂಗಾರವನ್ನು ದೋಚಿಕೊಂಡು, ಧನ ಕನಕ ಮುಂತಾದ ಸೊತ್ತನ್ನು ಅಪಹರಿಸಿ, ಅಪಾರವಾದ ಆಸ್ತಿಯನ್ನು ಸುಲಿದುಕೊಂಡು ಹೋಗಲು ನಿನ್ನ ತಂಡವನ್ನು ಕೂಡಿಸಿಕೊಂಡು ಬಂದೆಯಾ?’ ” ಎಂದು ಕೇಳುವರು. [PE]
14. [PS]ಹೀಗಿರಲು, “ನರಪುತ್ರನೇ, ನೀನು ಗೋಗನಿಗೆ ಈ ಪ್ರವಾದನೆಯನ್ನು ನುಡಿ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ನನ್ನ ಜನರಾದ ಇಸ್ರಾಯೇಲರು ನೆಮ್ಮದಿಯಾಗಿ ವಾಸಿಸುವ ಕಾಲದಲ್ಲಿ ಆ ನೆಮ್ಮದಿಯು ನಿನಗೆ ಗೊತ್ತಾಗುವುದು.
15. ನೀನು ನಿನ್ನ ಸ್ಥಳವನ್ನು ಬಿಟ್ಟು, ಅಶ್ವಬಲದ ಮಹಾಸೈನ್ಯವಾಗಿ ಗುಂಪು ಕೂಡಿದ ಅನೇಕ ಜನಾಂಗಗಳೊಡನೆ ಉತ್ತರದಿಕ್ಕಿನ ಕಟ್ಟಕಡೆಯಿಂದ ಬರುವಿ.
16. ನನ್ನ ಜನರಾದ ಇಸ್ರಾಯೇಲರ ಮೇಲೆ ಬಿದ್ದು, ಕಾರ್ಮುಗಿಲಿನಂತೆ ದೇಶವನ್ನು ಮುಚ್ಚಿಬಿಡುವಿ; ಗೋಗನೇ, ಜನಾಂಗಗಳ ಕಣ್ಣೆದುರಿಗೆ ನಿನ್ನ ನಾಶದಿಂದ ನನ್ನ ಗೌರವವನ್ನು ಕಾಪಾಡಿಕೊಂಡು ನಾನೇ ಯೆಹೋವನೆಂದು ಜನಾಂಗಗಳಿಗೆ ಗೋಚರವಾಗುವಂತೆ ನಾನು ನಿನ್ನನ್ನು ಕಾಲಾನುಕಾಲಕ್ಕೆ ನನ್ನ ದೇಶದ ಮೇಲೆ ಬೀಳಮಾಡುವೆನು.’ ”
17. ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನನ್ನ ಸೇವಕರಾದ ಇಸ್ರಾಯೇಲಿನ ಪ್ರವಾದಿಗಳು ಪುರಾತನ ಕಾಲದಲ್ಲಿ ಬಹು ವರ್ಷ ಪ್ರವಾದಿಸುತ್ತಾ, ನಾನು ಒಬ್ಬನನ್ನು ಇಸ್ರಾಯೇಲರ ಮೇಲೆ ಬೀಳ ಮಾಡುವೆನು” ಎಂದು ಮುಂತಿಳಿಸಿದಂತೆ; ನಾನು ಅವರ ಮೂಲಕ ಮುಂತಿಳಿಸಿದವನು ನೀನೇ ಅಲ್ಲವೇ. [PE]
18. {#1ಗೋಗನಿಗಾದ ಶಿಕ್ಷೆ } [PS]ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಗೋಗನು ಇಸ್ರಾಯೇಲ್ ದೇಶದ ಮೇಲೆ ಬೀಳುವ ದಿನದಲ್ಲಿ ನಾನು ಸಿಟ್ಟಿನಿಂದ ಬುಸುಗುಟ್ಟುವೆನು.
19. ನಾನು ರೋಷದಿಂದ ಮತ್ತು ಕೋಪದಿಂದ ಉರಿಯುತ್ತಾ ಹೀಗೆ ನುಡಿದಿದ್ದೇನೆ, ‘ಆಹಾ, ಆ ದಿನದಲ್ಲಿ ಇಸ್ರಾಯೇಲ್ ದೇಶದೊಳಗೆ ಮಹಾಕಂಪನವಾಗುವುದು ಖಂಡಿತ.
20. ಆಗ ಸಮುದ್ರದ ಮೀನುಗಳು, ಆಕಾಶದ ಪಕ್ಷಿಗಳು, ಕಾಡುಮೃಗಳು ನೆಲದಲ್ಲಿ ಹರಿದಾಡುವ ಕ್ರಿಮಿಕೀಟಗಳು, ಭೂಮಂಡಲದ ಸಕಲ ಮನುಷ್ಯರೂ ನನ್ನೆದುರಿಗೆ ನಡುಗುವವು; ಪರ್ವತಗಳು ಉರುಳಿಹೋಗುವವು, ಝರಿಗಳು ಕವಚಿಗೊಳ್ಳುವವು, ಎಲ್ಲಾ ಗೋಡೆಗಳು ನೆಲಸಮವಾಗುವವು.’ ” [PE]
21. [PS]ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಖಡ್ಗವು ನನ್ನ ಪರ್ವತಗಳಲ್ಲೆಲ್ಲಾ ಗೋಗನನ್ನು ಸಂಹರಿಸಲಿ ಎಂದು ಅಪ್ಪಣೆಕೊಡುವೆನು; ಪ್ರತಿಯೊಬ್ಬ ಮನುಷ್ಯನ ಕತ್ತಿಯೂ ಅವನ ಸಹೋದರನಿಗೆ ವಿರುದ್ಧವಾಗಿರುವುದು.
22. ನಾನು ಗೋಗನ ಸಂಗಡ ವ್ಯಾಜ್ಯಮಾಡುತ್ತಾ ಅವನನ್ನು ವ್ಯಾಧಿಗೂ, ಸಾವಿಗೂ ಗುರಿಮಾಡಿ, ನಾನು ಅವನ ಮೇಲೆಯೂ, ಅವನ ದಂಡುಗಳ ಮೇಲೆಯೂ, ಅವನೊಂದಿಗಿರುವ ಅನೇಕ ಜನಾಂಗಗಳ ಮೇಲೆಯೂ ವಿಪರೀತ ಮಳೆ, ದೊಡ್ಡ ಆನೆಕಲ್ಲು, ಬೆಂಕಿ, ಗಂಧಕ, ಇವುಗಳನ್ನು ಸುರಿಸುವೆನು.
23. ಹೀಗೆ ನಾನು ನನ್ನ ಮಹಿಮೆಯನ್ನು ತೋರ್ಪಡಿಸಿ, ನನ್ನ ಗೌರವವನ್ನು ಕಾಪಾಡಿಕೊಂಡು, ಅನೇಕ ಜನಾಂಗಗಳು ನಾನೇ ಯೆಹೋವನು ಎಂದು ತಿಳಿದುಕೊಳ್ಳುವಂತೆ ಅವುಗಳ ಕಣ್ಣೆದುರಿಗೆ ವ್ಯಕ್ತವಾಗುವೆನು.” [PE]