1. {ತೂರಿನ ಅರಸನ ಅಹಂಭಾವವನ್ನು ಖಂಡಿಸಿದ್ದು} [PS] ಯೆಹೋವನು ಇನ್ನೊಂದು ವಾಕ್ಯವನ್ನು ನನಗೆ ದಯಪಾಲಿಸಿದನು,
2. “ನರಪುತ್ರನೇ, ನೀನು ತೂರಿನ ಅರಸನಿಗೆ ಹೀಗೆ ನುಡಿ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ನೀನು ಉಬ್ಬಿದ ಮನಸ್ಸುಳ್ಳವನಾಗಿ ಆಹಾ, ನಾನೇ ದೇವರು, ಸಮುದ್ರ ಮಧ್ಯದಲ್ಲಿ ದೇವರ ಸ್ಥಾನದಲ್ಲಿ ಕುಳಿತುಕೊಂಡಿರುವೆನು’ ಎಂದು ಹೇಳಿಕೊಂಡಿದ್ದೀ; ನೀನು ದೇವರಲ್ಲ, ಮನುಷ್ಯನೇ. ಆದರೂ ನಿನ್ನನ್ನು ನೀನೇ ದೇವರಿಗೆ ಸಮಾನನೆಂದು ಭಾವಿಸಿಕೊಂಡಿರುವಿ. [PE][PS]
3. “ಇಗೋ, ನೀನು ದಾನಿಯೇಲನಿಗಿಂತಲೂ ಜ್ಞಾನಿಯಾಗಿರುವೆಯಾ; ನಿನಗೆ ರಹಸ್ಯವಾದುದು ಯಾವುದೇ ಇದ್ದರು ನಿನಗೆ ಮರೆಯಾಗಿರುವುದಿಲ್ಲ?
4. ನಿನ್ನ ಜ್ಞಾನದಿಂದಲೂ, ನಿನ್ನ ವಿವೇಕದಿಂದಲೂ ನೀನು ಐಶ್ವರ್ಯವನ್ನು ಹೆಚ್ಚಿಸಿಕೊಂಡಿರುವೆ. ನಿನ್ನ ಭಂಡಾರಗಳಲ್ಲಿ ಬೆಳ್ಳಿಯನ್ನೂ, ಬಂಗಾರವನ್ನು ತುಂಬಿಸಿಕೊಂಡಿದ್ದೀ.
5. ನೀನು ನಿನ್ನ ಅಧಿಕ ಜ್ಞಾನದಿಂದ ವ್ಯಾಪಾರದಲ್ಲಿ ಸಂಪತ್ತನ್ನು ವೃದ್ಧಿಮಾಡಿಕೊಂಡಿರುವೆ. [* ನೀನು ನಿನ್ನ ಅಧಿಕ ಜ್ಞಾನದಿಂದ ವ್ಯಾಪಾರದಲ್ಲಿ ಸಂಪತ್ತನ್ನು ವೃದ್ಧಿಮಾಡಿಕೊಂಡಿರುವೆ. ಅಧಿಕಜ್ಞಾನದಿಂದಲೂ ವ್ಯಾಪಾರದಿಂದಲೂ ಸಂಪತ್ತನ್ನು ವೃದ್ಧಿಮಾಡಿಕೊಂಡಿರಲು.] ನಿನ್ನ ಮನಸ್ಸು ನಿನ್ನ ಆಸ್ತಿಯ ನಿಮಿತ್ತ ಉಬ್ಬಿಕೊಂಡಿದೆ.” [PE][PS]
6. ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ. “ನೀನು ನಿನ್ನನ್ನು ದೇವರಿಗೆ ಸಮಾನವಾಗಿಸಿಕೊಂಡಿರುವೆ.
7. ಆದುದರಿಂದ ನಾನು ನಿನ್ನ ಮೇಲೆ ಭಯಂಕರವಾದ ಜನಾಂಗದವರಾದ ಮ್ಲೇಚ್ಛರನ್ನು ಬೀಳಮಾಡುವೆನು; ಅವರು ನಿನ್ನ ಜ್ಞಾನದ ಸೊಬಗಿನ ವಿರುದ್ಧವಾಗಿ ಕತ್ತಿಯನ್ನು ಹಿರಿಯುವರು; ನಿನ್ನ ಪ್ರಕಾಶವನ್ನು ಕೆಡಿಸುವರು. [PE][PS]
8. “ನಿನ್ನನ್ನು ಪಾತಾಳಕ್ಕೆ ತಳ್ಳಿಬಿಡುವರು; ಸಮುದ್ರದ ಮಧ್ಯದಲ್ಲಿ ಹತರಾದವರ ಹಾಗೆ ನೀನು ಸಾಯುವಿ.
9. ನೀನು ನಿನ್ನನ್ನು ಸಂಹರಿಸುವವರ ಎದುರಿಗೆ ನಾನು ದೇವರು ಎಂದು ಹೇಳುವೆಯೋ? ನಿನ್ನನ್ನು ಸಂಹರಿಸುವವನ ಕೈಯಲ್ಲಿ ನೀನು ದೇವರಲ್ಲ, ನರಪ್ರಾಣಿಯೇ.
10. ನೀನು ಅನ್ಯರ ಕೈಯಿಂದ ಸುನ್ನತಿಹೀನರ ಮರಣಕ್ಕೆ ಗುರಿಯಾಗುವಿ; ಏಕೆಂದರೆ ನಾನೇ ಇದನ್ನು ನುಡಿದಿದ್ದೇನೆ” ಎಂದು ಕರ್ತನಾದ ಯೆಹೋವನು ಹೇಳಿದ್ದಾನೆ. [PE][PS]
11. ಯೆಹೋವನು ಇನ್ನೊಂದು ವಾಕ್ಯವನ್ನು ನನಗೆ ದಯಪಾಲಿಸಿದನು,
12. “ನರಪುತ್ರನೇ, ನೀನು ತೂರಿನ ಅರಸನ ವಿಷಯದಲ್ಲಿ ಶೋಕ ಗೀತೆಯನ್ನು ಹಾಡು, ಅವನಿಗೆ ಹೀಗೆ ನುಡಿ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ನೀನು ಸರ್ವಸುಲಕ್ಷಣ ಶಿರೋಮಣಿ, ಪೂರ್ಣಜ್ಞಾನಿ, ಪರಿಪೂರ್ಣಸುಂದರಿ.
13. ದೇವರ ಉದ್ಯಾನವನವಾದ ಏದೆನಿನಲ್ಲಿ ನೀನಿದ್ದೆ; ಮಾಣಿಕ್ಯ, ಪುಷ್ಯರಾಗ, ಪಚ್ಚೆ, ಪೀತರತ್ನ, ವಜ್ರ, ವೈಡೂರ್ಯ, ನೀಲ ಗೋಮೇಧಿಕ, ಕೆಂಪು ಸ್ಫಟಿಕ, ಚಿನ್ನ ಈ ಅಮೂಲ್ಯ ರತ್ನಗಳಿಂದ ಭೂಷಿತವಾಗಿದ್ದೆ. ನಿನ್ನಲ್ಲಿರುವ ಈ ರತ್ನಗಳು ನಿನ್ನ ಸೃಷ್ಟಿಯ ದಿನದಲ್ಲಿ ಸಿದ್ಧವಾದವು. [PE][PS]
14. “ ‘ನೀನು ರೆಕ್ಕೆತೆರೆದು ನೆರಳು ನೀಡುವ ಕೆರೂಬಿಯಾಗಿದ್ದೆ; ನಾನು ನಿನ್ನನ್ನು ದೇವರ ಪರಿಶುದ್ಧ ಪರ್ವತದಲ್ಲಿ ನೆಲೆಗೊಳಿಸಿದೆನು; ನೀನು ಅಮೂಲ್ಯ ರತ್ನಗಳ ಕೆಂಡದ ಮಧ್ಯದಲ್ಲಿ ವಿಹಾರ ಮಾಡುತ್ತಿದ್ದೆ.
15. ನಿನ್ನ ಸೃಷ್ಟಿಯ ದಿನದಿಂದ ನಿನ್ನಲ್ಲಿ ಅಪರಾಧವು ಸಿಕ್ಕುವ ತನಕ ನಿನ್ನ ನಡತೆಯು ನಿರ್ದೋಷವಾಗಿ ಕಾಣುತ್ತಿತ್ತು. [PE][PS]
16. “ ‘ನಿನ್ನ ಮಿತಿಯಿಲ್ಲದ ವ್ಯಾಪಾರದಿಂದ ನಿನ್ನಲ್ಲಿ ಬಲಾತ್ಕಾರವು ತುಂಬಿ ನೀನು ಪಾಪಿಯಾದೆ. ಆದಕಾರಣ ನಾನು ನಿನ್ನನ್ನು ದೇವರ ಪರ್ವತದಿಂದ ಅಪವಿತ್ರನೆಂದು ತಳ್ಳಿಬಿಟ್ಟೆನು; ಹೌದು, ನೆರಳು ನೀಡುವ ಕೆರೂಬಿಯೇ, ಬೆಂಕಿಯ ಕಲ್ಲುಗಳ ಮಧ್ಯದಿಂದ ನಿನ್ನನ್ನು ನಾಶಮಾಡುವೆನು. [PE][PS]
17. “ ‘ನಿನ್ನ ಸೌಂದರ್ಯದ ನಿಮಿತ್ತ ನಿನ್ನ ಹೃದಯವು ಉಬ್ಬಿಕೊಂಡಿತು; ನಿನ್ನ ಪ್ರಕಾಶದ ನಿಮಿತ್ತ ನಿನ್ನ ಬುದ್ಧಿಯನ್ನು ಹಾಳು ಮಾಡಿಕೊಂಡೆ; ನಾನು ನಿನ್ನನ್ನು ನೆಲಕ್ಕೆ ಹಾಕಿ, ನಿನ್ನನ್ನು ಅರಸರು ನೋಡುವಂತೆ ಅವರ ಕಣ್ಣ ಮುಂದೆ ಹಾಕುವೆನು.
18. ನಿನ್ನ ಅಪಾರವಾದ ಅಪರಾಧಗಳಿಂದಲೂ, ಅನ್ಯಾಯವಾದ ವ್ಯಾಪಾರದಿಂದಲೂ ನಿನ್ನಲ್ಲಿನ ಪವಿತ್ರಾಲಯಗಳನ್ನು ಹೊಲಸು ಮಾಡಿದೆ; ಆದುದರಿಂದ ನಾನು ನಿನ್ನೊಳಗಿಂದ ಬೆಂಕಿಯನ್ನು ಬರಮಾಡಿದೆನು, ಅದು ನಿನ್ನನ್ನು ನುಂಗಿತು, ನೋಡುವವರೆಲ್ಲರ ಕಣ್ಣೆದುರಿಗೆ ನಿನ್ನನ್ನು ಬೂದಿ ಮಾಡಿಬಿಟ್ಟೆನು.
19. ಜನಾಂಗಗಳಲ್ಲಿ ನಿನ್ನನ್ನು ಬಲ್ಲವರೆಲ್ಲರೂ ನಿನ್ನ ಗತಿಗೆ ಬೆಚ್ಚಿ ಬೆರಗಾಗುವರು; ನೀನು ಸಂಪೂರ್ಣ ನಾಶವಾಗಿ ಇನ್ನೆಂದಿಗೂ ಇಲ್ಲದಂತಾಗುವೆ.’ ” [PS]
20. {ಚೀದೋನಿನ ಬಗ್ಗೆ ದೈವೋಕ್ತಿ} [PS] ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
21. “ನರಪುತ್ರನೇ, ನೀನು ಚೀದೋನಿಗೆ ಅಭಿಮುಖನಾಗಿ ಅದಕ್ಕೆ ವಿರುದ್ಧವಾಗಿ ಪ್ರವಾದಿಸು.
22. ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ಆಹಾ, ಚೀದೋನೇ, ನಾನು ನಿನ್ನ ವಿರುದ್ಧವಾಗಿ ನಿನ್ನ ಮಧ್ಯದಲ್ಲಿ ಪ್ರಖ್ಯಾತಿಗೊಳ್ಳುವೆನು; ನಾನು ಈ ಪಟ್ಟಣದಲ್ಲಿ ನ್ಯಾಯ ತೀರಿಸಿ, ನಾನು ಮಹಿಮೆಯನ್ನು ಹೊಂದುವಾಗ ನಾನೇ ಯೆಹೋವನು’ ಎಂದು ಎಲ್ಲರಿಗೂ ಗೊತ್ತಾಗುವುದು.
23. ‘ನಾನು ಅದರಲ್ಲಿ ವ್ಯಾಧಿಯನ್ನೂ, ಅದರ ಚೌಕಗಳಲ್ಲಿ ಸಂಹಾರವನ್ನೂ ಉಂಟು ಮಾಡುವೆನು, ಖಡ್ಗವು ಸುತ್ತುಮುತ್ತಲೂ ಅದರ ಮೇಲೆ ಬೀಸುತ್ತಿರುವಾಗ ಪ್ರಜೆಗಳು ಅದರ ನಡುವೆ ಹತರಾಗಿ ಬೀಳುವರು; ಆಗ ನಾನೇ ಯೆಹೋವನು’ ಎಂದು ಅವರಿಗೆ ತಿಳಿದು ಬರುವುದು. [PE][PS]
24. “ಇಸ್ರಾಯೇಲ್ ವಂಶದವರಿಗೆ ಚುಚ್ಚುವ ಮುಳ್ಳು ಇನ್ನು ಮೇಲೆ ಇರುವುದಿಲ್ಲ; ಹೀನೈಸುವ ನೆರೆಹೊರೆಯವರೆಂಬ ಕಂಟಕದ ಬಾಧೆಯು ಇನ್ನು ಆಗುವುದಿಲ್ಲ; ನಾನೇ ಕರ್ತನಾದ ಯೆಹೋವನು” ಎಂದು ಅವರಿಗೆ ತಿಳಿಯುವುದು. [PS]
25. {ಇಸ್ರಾಯೇಲಿನ ಮುಂದಿನ ಸುಸ್ಥಿತಿ} [PS] ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ ‘ಜನಾಂಗಗಳಲ್ಲಿ ಚದುರಿ ಹೋಗಿರುವ ಇಸ್ರಾಯೇಲ್ ವಂಶದವರನ್ನು ನಾನು ಒಟ್ಟುಗೂಡಿಸಿ, ಎಲ್ಲಾ ಜನಾಂಗಗಳ ಕಣ್ಣೆದುರಿಗೆ ನನ್ನ ಗೌರವವನ್ನು ಕಾಪಾಡಿಕೊಳ್ಳುವೆನು. ಆಮೇಲೆ ಆ ಇಸ್ರಾಯೇಲ್ ವಂಶದವರು ನನ್ನ ಸೇವಕನಾದ ಯಾಕೋಬನಿಗೆ ನಾನು ಅನುಗ್ರಹಿಸಿದ ತಮ್ಮ ಸ್ವದೇಶದಲ್ಲಿ ವಾಸಿಸುವರು.
26. ಅಲ್ಲಿ ನಿರ್ಭಯವಾಗಿ ವಾಸಿಸುವರು, ಮನೆಗಳನ್ನು ಕಟ್ಟಿಕೊಂಡು, ದ್ರಾಕ್ಷಿಯ ತೋಟಗಳನ್ನು ಮಾಡಿಕೊಂಡು, ಸುಖವಾಗಿ ವಾಸಿಸುವರು; ಅವರನ್ನು ಆಸಡ್ಡೆ ಮಾಡಿದವರೆಲ್ಲರ ಮೇಲೆ ನಾನು ನ್ಯಾಯ ತೀರಿಸಿದ ಮೇಲೆ ನಿರ್ಭಯವಾಗಿ ವಾಸಿಸುವರು. ಆಗ ಯೆಹೋವನಾದ ನಾನೇ ಅವರ ದೇವರು ಎಂದು ಅವರಿಗೆ ನಿಶ್ಚಯವಾಗುವುದು.’ ” [PE]