1. {#1ವಾಹನರೂಢನಾದ ಯೆಹೋವನ ದರ್ಶನ }
2. [PS]ಕೆಬಾರ್ ನದಿಯ ಹತ್ತಿರ ಸೆರೆಯಾಗಿ ವಾಸಿಸುತ್ತಿದ್ದ ಯೆಹೂದ್ಯರ ಮಧ್ಯದಲ್ಲಿ ನಾನು ವಾಸಿಸುತ್ತಿದ್ದಾಗ, ಮೂವತ್ತನೆಯ ವರ್ಷದ, ನಾಲ್ಕನೆಯ ತಿಂಗಳಿನ ಐದನೆಯ ದಿನದಲ್ಲಿ ಆಕಾಶವು ತೆರೆಯಲ್ಪಟ್ಟಿತು, ನಾನು ದೇವ ದರ್ಶನಗಳನ್ನು ಕಂಡೆನು. [PE][PS]ಅರಸನಾದ ಯೆಹೋಯಾಖೀನನು ಸೆರೆಯಾದ ಐದನೆಯ ವರ್ಷದ ನಾಲ್ಕನೆಯ ತಿಂಗಳಿನ ಐದನೆಯ ದಿನದಲ್ಲಿ,
3. ಯೆಹೋವನ ವಾಕ್ಯವು ಕಸ್ದೀಯ ದೇಶದೊಳಗೆ ಕೆಬಾರ್ ನದಿಯ ಹತ್ತಿರ ಬೂಜಿಯ ಮಗನೂ, ಯಾಜಕನೂ ಆದ ಯೆಹೆಜ್ಕೇಲನಿಗೆ ಸ್ಪಷ್ಟವಾಗಿ ಕೇಳಿಸಿತು; ಅಲ್ಲಿ ಯೆಹೋವನ ಹಸ್ತಸ್ಪರ್ಶದಿಂದ ಅವನು ಪರವಶನಾದನು. [PE]
4. [PS]ಆಗ ನಾನು ನೋಡಲಾಗಿ; ಇಗೋ, ಉತ್ತರ ದಿಕ್ಕಿನಿಂದ ಬಿರುಗಾಳಿಯು ಬೀಸಿತು, ಎಡೆಬಿಡದೆ ಝಗಝಗಿಸುವ ಜ್ವಾಲೆಯುಳ್ಳ ಮಹಾಮೇಘವು ಕಾಣಿಸಿತು. ಅದರ ಸುತ್ತಲೂ ಮಿಂಚು ಹೊಳೆಯಿತು, ಅದರ ನಡುವೆ, ಆ ಜ್ವಾಲೆಯ ಮಧ್ಯೆ, ಸುವರ್ಣದಂಥ ಕಾಂತಿಯು ಉಂಟಾಯಿತು.
5. ಅದರ ಮಧ್ಯದೊಳಗಿಂದ ನಾಲ್ಕು ಜೀವಿಗಳ ಆಕಾರಗಳು ಕಂಡುಬಂದವು; ಅವುಗಳ ರೂಪವು ಮನುಷ್ಯನ ರೂಪದಂತಿತ್ತು.
6. ಒಂದೊಂದಕ್ಕೆ ನಾಲ್ಕು ನಾಲ್ಕು ಮುಖಗಳೂ ಮತ್ತು ನಾಲ್ಕು ನಾಲ್ಕು ರೆಕ್ಕೆಗಳೂ ಇದ್ದವು.
7. ಅವುಗಳ ಕಾಲುಗಳು ನೆಟ್ಟಗಿದ್ದು; ಹೆಜ್ಜೆಗಳು ಕರುವಿನ ಗೊರಸಿನಂತಿದ್ದವು. ಅವುಗಳು ಬೆಳಗಿದ ತಾಮ್ರದ ಹಾಗೆ ಹೊಳೆಯುತ್ತಿದ್ದವು.
8. ಒಂದೊಂದು ಜೀವಿಯ ನಾಲ್ಕು ಪಾರ್ಶ್ವಗಳಲ್ಲಿನ ರೆಕ್ಕೆಗಳ ಕೆಳಗೆ ಮನುಷ್ಯನ ಹಸ್ತದಂಥ ಹಸ್ತಗಳಿದ್ದವು; ಆ ನಾಲ್ಕು ಜೀವಿಗಳ ಮುಖಗಳೂ, ರೆಕ್ಕೆಗಳೂ ಹೇಗಿದ್ದವೆಂದರೆ,
9. ರೆಕ್ಕೆಗಳು ಒಂದಕ್ಕೊಂದು ತಗಲುತ್ತಿದ್ದವು; ಆ ಜೀವಿಗಳು ಮುಂದೆ ಹೋಗುವಾಗ ತಿರುಗಿಕೊಳ್ಳದೆ ನೇರ ಮುಖವಾಗಿಯೇ ಹೋಗುತ್ತಿದ್ದವು. [PE]
10. [PS]ಅವುಗಳ ಮುಖಗಳು ಹೀಗಿದ್ದವು: ಒಂದೊಂದರ ಮುಂದಿನ ಮುಖವು ಮನುಷ್ಯನ ಮುಖದಂತಿತ್ತು, ಬಲಗಡೆಯ ಮುಖವು ಸಿಂಹದ ಮುಖದಂತಿತ್ತು, ಎಡಗಡೆಯ ಮುಖವು ಹೋರಿಯ ಮುಖದಂತಿತ್ತು, ಹಿಂದಿನ ಮುಖವು ಗರುಡಪಕ್ಷಿಯ ಮುಖದಂತಿತ್ತು.
11. ಅವುಗಳ ರೆಕ್ಕೆಗಳು ಮೇಲಕ್ಕೆ ಚಾಚಲ್ಪಟ್ಟಿದ್ದವು; ರೆಕ್ಕೆಗಳೂ ಮೇಲ್ಗಡೆ ಪ್ರತ್ಯೇಕಪ್ರತ್ಯೇಕವಾಗಿದ್ದವು; ಒಂದೊಂದು ಜೀವಿಯ ಎರಡು ರೆಕ್ಕೆಗಳು ಪಕ್ಕದ ಜೀವಿಗಳ ರೆಕ್ಕೆಗಳಿಗೆ ತಗಲುತ್ತಿದ್ದವು, ಇನ್ನೆರಡು ರೆಕ್ಕೆಗಳು ದೇಹವನ್ನು ಮುಚ್ಚಿಕೊಂಡಿದ್ದವು.
12. ಆ ಜೀವಿಗಳೆಲ್ಲಾ ನೇರ ಮುಖವಾಗಿಯೇ ಹೋಗುತ್ತಿದ್ದವು, ದೇವರಾತ್ಮವು ಸಾಗಿಸಿದ ಕಡೆಗೇ ಸಾಗಿದವು; ಹಿಂತಿರುಗಿನೋಡದೆ ಮುಂದೆ ಹೋದವು.
13. ಆ ಜೀವಿಗಳ ಮಧ್ಯದಲ್ಲಿ ಅದ್ಭುತಕಾಂತಿಯೊಂದು ಉರಿಯುವ ಕೆಂಡಗಳೋ, ಪಂಜುಗಳೋ ಎಂಬಂತೆ ಕಾಣಿಸಿತು; ಅದು ಜೀವಿಗಳ ನಡುವೆ ಓಲಾಡುತ್ತಿತ್ತು; ಆ ಉರಿಯು ತೇಜೋಮಯವಾಗಿತ್ತು, ಅದರೊಳಗಿಂದ ಮಿಂಚುಗಳು ಹೊರಡುತ್ತಿದ್ದವು.
14. ಆ ಜೀವಿಗಳು ಮಿಂಚಿನಂತೆ ಮುಂದಕ್ಕೂ, ಹಿಂದಕ್ಕೂ ವೇಗವಾಗಿ ಚಲಿಸುತ್ತಿದ್ದವು. [PE]
15. [PS]ಇಗೋ, ನಾನು ಆ ಜೀವಿಗಳನ್ನು ನೋಡುತ್ತಿರಲಾಗಿ ಒಂದೊಂದು ಕಡೆಯಲ್ಲಿಯೂ ಜೀವಿಗಳ ಪಕ್ಕದಲ್ಲಿ ಭೂಮಿಯ ಮೇಲೆ ಒಂದು ಚಕ್ರವು ಕಾಣಿಸಿತು.
16. ಆ ಚಕ್ರಗಳ ವರ್ಣವೂ, ರಚನೆಯೂ ಹೇಗಿದ್ದವೆಂದರೆ, ಅವುಗಳ ವರ್ಣವು ಪೀತರತ್ನದ ಹಾಗೆ ಥಳಥಳಿಸುತ್ತಿತ್ತು. ಒಂದು ಚಕ್ರದೊಳಗೆ ಇನ್ನೊಂದು ಚಕ್ರವು ಅಡ್ಡವಾಗಿ ರಚಿಸಿದಂತಿತ್ತು; ಆ ನಾಲ್ಕು ಚಕ್ರಗಳು ಒಂದೇ ಮಾದರಿಯಾಗಿದ್ದವು.
17. ಅವು ಚಲಿಸುವಾಗ ನಾಲ್ಕು ಕಡೆಗಳಲ್ಲಿ ಯಾವ ಕಡೆಗಾದರೂ ತಿರುಗುತ್ತಿದ್ದವು; ಓರೆಯಾಗಿ ತಿರುಗುತ್ತಿರಲಿಲ್ಲ. [PE]
18. [PS]ಗಾಲಿಗಳ ಸುತ್ತಣ ಭಾಗಗಳು ಎತ್ತರವಾಗಿಯೂ, ಭಯಂಕರವಾಗಿಯೂ ಇದ್ದವು; ಈ ಭಾಗಗಳ ಎಲ್ಲಾ ಕಡೆಯಲ್ಲಿಯೂ ತುಂಬಾ ಕಣ್ಣುಗಳಿದ್ದವು;
19. ಜೀವಿಗಳು ಮುಂದೆ ಹೋಗುವಾಗ ಚಕ್ರಗಳೂ ಅವುಗಳ ಪಕ್ಕದಲ್ಲಿ ಮುಂದೆ ಹೋಗುತ್ತಿದ್ದವು; ಆ ಜೀವಿಗಳು ಭೂಮಿಯಿಂದ ಮೇಲಕ್ಕೇಳುವಾಗ ಚಕ್ರಗಳೂ ಮೇಲೆ ಏಳುತ್ತಿದ್ದವು;
20. ದೇವರಾತ್ಮವು ಸಾಗಿಸಿದ ಕಡೆಗೇ ಸಾಗಿದವು; ಜೀವಿಗಳ ಒಳಗಿನ ಆತ್ಮವು ಚಕ್ರಗಳಲ್ಲಿ ಇದ್ದ ಕಾರಣ ಚಕ್ರಗಳು ಅವುಗಳ ಪಕ್ಕದಲ್ಲಿ ಏಳುತ್ತಿದ್ದವು.
21. ಅವು ಮುಂದೆ ಹೋಗುವಾಗ ಇವೂ ಮುಂದೆ ಹೋಗುತ್ತಿದ್ದವು, ಅವು ನಿಂತು ಹೋಗುವಾಗ ಇವೂ ನಿಂತುಹೋಗುತ್ತಿದ್ದವು, ಅವು ನೆಲದಿಂದ ಮೇಲಕ್ಕೆ ಏಳುವಾಗ ಚಕ್ರಗಳೂ ಅವುಗಳ ಪಕ್ಕದಲ್ಲಿ ಏಳುತ್ತಿದ್ದವು; ಏಕೆಂದರೆ ಜೀವಿಗಳ ಆತ್ಮವು ಚಕ್ರಗಳಲ್ಲಿಯೂ ಇತ್ತು. [PE]
22. [PS]ಭೀಕರವಾದ ಮಂಜುಗಡ್ಡೆಯಂತೆ ಥಳಥಳಿಸುವ ಒಂದು ರೀತಿಯ ಗಗನಮಂಡಲ ಆ ಜೀವಿಗಳ ತಲೆಯ ಮೇಲ್ಗಡೆ ಹರಡಿತ್ತು.
23. ಅದರ ಕೆಳಗೆ ಜೀವಿಗಳ ರೆಕ್ಕೆಗಳು ನೇರವಾಗಿ ಚಾಚಲ್ಪಟ್ಟು ಒಂದಕ್ಕೊಂದು ತಗಲುತ್ತಿದ್ದವು; ಇದಲ್ಲದೆ ಒಂದೊಂದು ಜೀವಿಗೆ ದೇಹವನ್ನು ಮುಚ್ಚಿಕೊಳ್ಳುವ ಎರಡೆರಡು ರೆಕ್ಕೆಗಳಿದ್ದವು.
24. ಅವು ಮುಂದೆ ಹೋಗುವಾಗ ಅವುಗಳ ರೆಕ್ಕೆಗಳ ಶಬ್ದವು ಜಲಪ್ರವಾಹದ ಘೋಷದಂತೆ ಸರ್ವಶಕ್ತನ ಧ್ವನಿಯಂತೆ, ಆರ್ಭಟಿಸುವ ಸೈನ್ಯದ ಕೋಲಾಹಲದಂತೆ ನನಗೆ ಕೇಳಿಸಿತು; ಅವು ನಿಂತಾಗ ರೆಕ್ಕೆಗಳನ್ನು ಮುದುರಿಕೊಳ್ಳುತ್ತಿದ್ದವು. [PE]
25. [PS]ಅವುಗಳ ತಲೆಗಳ ಮೇಲ್ಗಡೆಯ ಗಗನಮಂಡಲದ ಮೇಲಿಂದ ಒಂದು ಧ್ವನಿಯು ಕಿವಿಗೆ ಬಿತ್ತು. ಜೀವಿಗಳು ನಿಂತಾಗ ರೆಕ್ಕೆಗಳನ್ನು ಮುದುರಿಕೊಳ್ಳುತ್ತಿದ್ದವು.
26. ಅವುಗಳ ತಲೆಗಳ ಮೇಲ್ಗಡೆಯ ಗಗನಮಂಡಲ ಮೇಲೆ ಇಂದ್ರನೀಲಮಣಿಯಂತೆ ಹೊಳೆಯುವ ಸಿಂಹಾಸನಾಕಾರವು ಕಾಣಿಸಿತು; ಅದರ ಮೇಲೆ ನರರೂಪದಂಥ ರೂಪವುಳ್ಳ ಒಬ್ಬಾತನು ಆಸೀನನಾಗಿದ್ದನು. [PE]
27.
28. [PS]ಸೊಂಟದ ಹಾಗೆ ತೋರುವ ಆತನ ಮಧ್ಯಭಾಗದಿಂದ ಮೇಲ್ಗಡೆ ಸುವರ್ಣವು ಥಳಥಳಿಸುತ್ತದೋ, ಬೆಂಕಿಯು ಆ ರೂಪದೊಳಗೆಲ್ಲಾ ಪ್ರಜ್ವಲಿಸುತ್ತದೋ ಎಂಬಂತಿರುವ ಅದ್ಭುತಕಾಂತಿಯನ್ನು ಕಂಡೆನು; ಸೊಂಟದ ಹಾಗೆ ತೋರುವ ಆತನ ಮಧ್ಯಭಾಗದಿಂದ ಕೆಳಗಡೆ ಬೆಂಕಿಯು ಉರಿಯುತ್ತದೋ ಎಂಬಂತಿರುವ ಮಹಾ ತೇಜಸ್ಸನ್ನು ನೋಡಿದೆನು; ಮತ್ತು ಪ್ರಕಾಶವು ಆತನನ್ನು ಆವರಿಸಿಕೊಂಡಿತ್ತು. [PE][PS]ಮಳೆಗಾಲದಲ್ಲಿ ಮೇಘಮಂಡಲದೊಳಗೆ ಕಾಮನ ಬಿಲ್ಲು ಹೊಳೆಯುವಂತೆ ಆತನ ಸುತ್ತಲೂ ಪ್ರಕಾಶವು ಹೊಳೆಯುತ್ತಿತ್ತು. ಹೀಗೆ ಯೆಹೋವನ ಮಹಿಮಾದ್ಭುತ ದರ್ಶನವು ಆಯಿತು. ಇದನ್ನು ಕಂಡಾಗ ನಾನು ಅಡ್ಡಬಿದ್ದೆ; ಮಾತನಾಡುವಾತನ ವಾಣಿಯನ್ನು ಕೇಳಿದೆ. [PE]