1. {ಯಾಜಕರನ್ನು ಪ್ರತಿಷ್ಠಿಸಬೇಕಾದ ಕ್ರಮ} (ಯಾಜ 8:1-26) [PS] ಅವರು ನನಗೆ ಯಾಜಕರಾಗುವಂತೆ ಅವರನ್ನು ಪ್ರತಿಷ್ಠಿಸುವುದಕ್ಕೆ ನೀನು ಮಾಡಬೇಕಾಗಿರುವ ಕಾರ್ಯಗಳೆನೆಂದರೆ; ಒಂದು ಹೋರಿ ಮತ್ತು ಕರುವನ್ನು ಯಾವ ದೋಷವಿಲ್ಲದ ಎರಡು ಟಗರುಗಳನ್ನೂ ತೆಗೆದುಕೊಳ್ಳಬೇಕು.
2. ಮತ್ತು ಹುಳಿಯಿಲ್ಲದ ರೊಟ್ಟಿಗಳನ್ನು, ಎಣ್ಣೆ ಮಿಶ್ರಿತವಾದ ಹುಳಿಯಿಲ್ಲದ ಹೋಳಿಗೆಗಳನ್ನು, ಎಣ್ಣೆ ಸವರಿದ ಹುಳಿಯಿಲ್ಲದ ಕಡಬುಗಳನ್ನೂ,
3. ಗೋದಿಯ ಹಿಟ್ಟಿನಿಂದ ಮಾಡಿಸಿ ಒಂದೇ ಪುಟ್ಟಿಯಲ್ಲಿ ತುಂಬಿಸಬೇಕು. ಆ ನಂತರ ಆ ಪುಟ್ಟಿಯನ್ನು, ಹೋರಿಯನ್ನು ಮತ್ತು ಎರಡು ಟಗರುಗಳೊಂದಿಗೆ ತರಬೇಕು.
4. ಆಗ ಆರೋನನನ್ನೂ ಮತ್ತು ಅವನ ಮಕ್ಕಳನ್ನೂ ದೇವದರ್ಶನದ ಗುಡಾರದ ಬಾಗಿಲಿಗೆ ಕರೆದುಕೊಂಡು ಬಂದು ನೀರಿನಲ್ಲಿ ಸ್ನಾನಮಾಡಿಸಬೇಕು.
5. ಆ ವಸ್ತ್ರಗಳನ್ನು ತೆಗೆದುಕೊಂಡು ಒಳ ಅಂಗಿಯನ್ನು ಏಫೋದ್ ಕವಚದ ಸಂಗಡ ತೊಟ್ಟುಕೊಳ್ಳತಕ್ಕ ನಿಲುವಂಗಿಯನ್ನೂ, ಏಫೋದ್ ಕವಚವನ್ನು ಎದೆಯ ಪದಕವನ್ನೂ ಆರೋನನಿಗೆ ತೊಡಿಸಿ ಏಫೋದ್ ಕವಚದ ಕಸೂತಿ ಹಾಕಿದ ನಡುಕಟ್ಟನ್ನು ಕಟ್ಟಿಸಿ,
6. [* 28:36 ನೋಡಿರಿ.] ಅವನ ತಲೆಗೆ ಮುಂಡಾಸವನ್ನು ಹಾಕಿಸಿ, ಮುಂಡಾಸದ ಮೇಲೆ ಪವಿತ್ರ ಪಟ್ಟವನ್ನು ಕಟ್ಟಿಸಿ,
7. ಅಭಿಷೇಕತೈಲವನ್ನು ಅವನ ಮೇಲೆ ಸುರಿದು ಅವನನ್ನು ಅಭಿಷೇಕಿಸಬೇಕು. [PE][PS]
8. ತರುವಾಯ ಅವನ ಮಕ್ಕಳನ್ನು ಹತ್ತಿರಕ್ಕೆ ಕರೆದು, ಅವರಿಗೆ ಮೇಲಂಗಿಗಳನ್ನು ತೊಡಿಸಿ
9. ಆರೋನನಿಗೂ ಅವನ ಮಕ್ಕಳಿಗೂ [† ಯಾಜಕತ್ವವು ಸದಾಕಾಲವಿರುವ ಆಜ್ಞೆಯಾಗಿದೆ.] ನಡುಕಟ್ಟುಗಳನ್ನು ಕಟ್ಟಿಸಿ ಮುಂಡಾಸಗಳನ್ನು ಇಡಬೇಕು. ಅಂದಿನಿಂದ ಯಾಜಕತ್ವವು ಅವರಿಗೆ ಶಾಶ್ವತವಾದ ಹಕ್ಕಾಗಿರುವುದು. ಹೀಗೆ ಆರೋನನೂ ಅವನ ಮಕ್ಕಳೂ ಯಾಜಕ ಸೇವೆಗೆ ಪ್ರತಿಷ್ಠಿತರಾಗಿರುವರು. [PE][PS]
10. ತರುವಾಯ ನೀನು ಆ ಹೋರಿಯನ್ನು ದೇವದರ್ಶನದ ಗುಡಾರದ ಎದುರಿಗೆ ತಂದು, ಆರೋನನೂ ಅವನ ಮಕ್ಕಳೂ ಅದರ ತಲೆಯ ಮೇಲೆ ತಮ್ಮ ಕೈಗಳನ್ನಿಡಬೇಕು.
11. ಆ ನಂತರ ನೀನು ಅದನ್ನು ಯೆಹೋವನ ಸನ್ನಿಧಿಯಲ್ಲಿ ದೇವದರ್ಶನದ ಗುಡಾರದ ಬಾಗಿಲಲ್ಲೇ ವಧಿಸಬೇಕು.
12. ಆ ಹೋರಿಯ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಬೆರಳಿನಿಂದ ಯಜ್ಞವೇದಿಯ ಕೊಂಬುಗಳಿಗೆ ಹಚ್ಚಿ ಮಿಕ್ಕ ರಕ್ತವನ್ನೆಲ್ಲಾ ಯಜ್ಞವೇದಿಯ ಬುಡಕ್ಕೆ ಹೊಯ್ಯಬೇಕು.
13. ಅದರ ಪಿತ್ತಕೋಶದ ಮೇಲಿರುವ ಕೊಬ್ಬನ್ನೂ ಎರಡು ಮೂತ್ರಕೋಶಗಳನ್ನೂ ಅವುಗಳ ಮೇಲಿರುವ ಕೊಬ್ಬನ್ನೂ ತೆಗೆದುಕೊಂಡು ಯಜ್ಞವೇದಿಯ ಮೇಲೆ ಹೋಮ ಮಾಡಬೇಕು.
14. ಹೋರಿಯ ಮಾಂಸವನ್ನು, ಚರ್ಮವನ್ನು ಮತ್ತು ಕಲ್ಮಷವನ್ನು ಪಾಳೆಯದ ಹೊರಗೆ ಬೆಂಕಿಯಿಂದ ಸುಟ್ಟುಬಿಡಬೇಕು. ಏಕೆಂದರೆ ಇದು ದೋಷಪರಿಹಾರಕ ಯಜ್ಞ. [PE][PS]
15. ತರುವಾಯ ನೀನು ಆ ಟಗರುಗಳಲ್ಲಿ ಒಂದನ್ನು ತೆಗೆದುಕೊಂಡು ಆರೋನನೂ ಅವನ ಮಕ್ಕಳೂ ಅದರ ತಲೆಯ ಮೇಲೆ ತಮ್ಮ ಕೈಗಳನ್ನು ಇಡಬೇಕು.
16. ನೀನು ಅದನ್ನು ವಧಿಸಿ ಅದರ ರಕ್ತವನ್ನು ಯಜ್ಞವೇದಿಯ ನಾಲ್ಕು ಕಡೆಗಳಿಗೆ ಚಿಮುಕಿಸಬೇಕು.
17. ಆ ನಂತರ ನೀನು ಆ ಟಗರನ್ನು ತುಂಡು ತುಂಡಾಗಿ ಕತ್ತರಿಸಿ ಅದರ ಕರಳುಗಳನ್ನೂ, ಕಾಲುಗಳನ್ನೂ ತೊಳೆದು ಅದರ ತುಂಡುಗಳನ್ನೂ, ತಲೆಯನ್ನೂ ಒಟ್ಟಿಗೆ ಇಡಬೇಕು.
18. ಅದನ್ನೆಲ್ಲಾ ಯಜ್ಞವೇದಿಯ ಮೇಲೆ ಯೆಹೋವನಿಗೆ ಸರ್ವಾಂಗಹೋಮವಾಗಿ ಸಮರ್ಪಿಸಬೇಕು. ಇದು ಯೆಹೋವನಿಗೆ ಸುಗಂಧಹೋಮವಾಗಿದೆ.
19. ಆ ಮೇಲೆ ನೀನು ಎರಡನೆಯ ಟಗರನ್ನು ತೆಗೆದುಕೊಂಡು ಆರೋನನೂ ಅವನ ಮಕ್ಕಳೂ ಅದರ ತಲೆಯ ಮೇಲೆ ತಮ್ಮ ಕೈಗಳನ್ನು ಇಡಬೇಕು.
20. ನಂತರ ಅದನ್ನು ವಧಿಸಿ ಅದರ ರಕ್ತದಲ್ಲಿ ಸ್ವಲ್ಪವನ್ನು ಆರೋನನ ಮತ್ತು ಅವನ ಮಕ್ಕಳ ಬಲಗಿವಿಯ ತುದಿಗೂ ಬಲಗೈಯ ಹೆಬ್ಬೆರಳಿಗೂ, ಬಲಗಾಲಿನ ಹೆಬ್ಬೆರಳಿಗೂ ಹಚ್ಚಿ, ಮಿಕ್ಕ ರಕ್ತವನ್ನು ಯಜ್ಞವೇದಿಯ ಸುತ್ತಲು ಚಿಮುಕಿಸಬೇಕು.
21. ಅದಲ್ಲದೆ ನೀನು ಯಜ್ಞವೇದಿಯ ಮೇಲಿರುವ ರಕ್ತದಲ್ಲಿಯೂ, ಅಭಿಷೇಕ ತೈಲದಲ್ಲಿಯೂ ಸ್ವಲ್ಪವನ್ನು ತೆಗೆದುಕೊಂಡು ಆರೋನನ ಮತ್ತು ಅವನ ವಸ್ತ್ರಗಳ ಮೇಲೆಯೂ ಅವನ ಮಕ್ಕಳ ಮತ್ತು ಅವರ ವಸ್ತ್ರಗಳ ಮೇಲೆಯೂ ಚಿಮುಕಿಸಬೇಕು. ಹೀಗೆ ಅವನೂ ಮತ್ತು ಅವನ ಮಕ್ಕಳೂ ಅವರ ವಸ್ತ್ರಗಳ ಸಹಿತವಾಗಿ ಪರಿಶುದ್ಧರಾಗುವರು. [PE][PS]
22. ಪ್ರತಿಷ್ಠೆಗಾಗಿ ಸಮರ್ಪಿಸಲ್ಪಟ್ಟ ಟಗರಾಗಿರುವುದರಿಂದ ಅದರ ಕೊಬ್ಬನ್ನೆಲ್ಲಾ ಅಂದರೆ ಬಾಲದ ಕೊಬ್ಬನ್ನು, ವಪೆಯನ್ನು, ಪಿತ್ತಕೋಶದ ಮೇಲಿರುವ ಕೊಬ್ಬನ್ನು, ಎರಡು ಮೂತ್ರಕೋಶಗಳನ್ನು ಅವುಗಳ ಮೇಲಿರುವ ಕೊಬ್ಬನ್ನು ಹಾಗೂ ಬಲತೊಡೆಯನ್ನು,
23. ಮತ್ತು ಯೆಹೋವನಿಗೆದುರಾಗಿ ಪುಟ್ಟಿಯಲ್ಲಿ ಇಟ್ಟಿದ್ದ ಹುಳಿಯಿಲ್ಲದ ಪದಾರ್ಥಗಳಲ್ಲಿ ಒಂದು ರೊಟ್ಟಿಯನ್ನು, ಎಣ್ಣೆ ಮಿಶ್ರವಾದ ಒಂದು ಹೋಳಿಗೆಯನ್ನು ಮತ್ತು ಒಂದು ಕಡುಬನ್ನು ತೆಗೆದುಕೊಂಡು,
24. ಅವುಗಳನ್ನೆಲ್ಲಾ ಆರೋನನ ಮತ್ತು ಅವನ ಮಕ್ಕಳ ಕೈಗೆ ಕೊಟ್ಟು ಯೆಹೋವನ ಸನ್ನಿಧಿಯಲ್ಲಿ ನೈವೇದ್ಯವಾಗಿ ಅರ್ಪಿಸಬೇಕು.
25. ಆಮೇಲೆ ಅವುಗಳನ್ನು ಅವರ ಕೈಯಿಂದ ತೆಗೆದುಕೊಂಡು ಯಜ್ಞವೇದಿಯ ಮೇಲೆ ಯೆಹೋವನಿಗಾಗಿ ಸುಡಬೇಕು. ಅದು ಯೆಹೋವನಿಗೆ ಸುಗಂಧ ಹೋಮವಾಗಿದೆ. [PE][PS]
26. ಮತ್ತು ಆರೋನನ ಪಟ್ಟಾಭೀಷೇಕಕ್ಕಾಗಿ ಪ್ರತಿಷ್ಠಿಸಿದ ಟಗರಿನ ಎದೆಯ ಭಾಗವನ್ನು ತೆಗೆದುಕೊಂಡು ಅದನ್ನು ನೈವೇದ್ಯವಾಗಿ ಯೆಹೋವನ ಸನ್ನಿಧಿಯಲ್ಲಿ ನಿವಾಳಿಸಬೇಕು. ಅದು ನಿನಗೇ ಸಲ್ಲತಕ್ಕ ಪಾಲಾಗಿರುತ್ತದೆ.
27. ಆರೋನನನ್ನೂ ಅವನ ಮಕ್ಕಳನ್ನೂ ಪ್ರತಿಷ್ಠೆ ಮಾಡುವಾಗ ಸಮರ್ಪಿಸಿದ ಟಗರಿನ ಮಾಂಸದಲ್ಲಿ ನೈವೇದ್ಯವಾಗಿ ನಿವಾಳಿಸಿದ ಎದೆಯ ಭಾಗವನ್ನೂ ಯಾಜಕರ ಭಾಗಕ್ಕೆ ಪ್ರತ್ಯೇಕಿಸಿದ ತೊಡೆಯನ್ನೂ ದೇವರದೆಂದು ಭಾವಿಸಬೇಕು.
28. ಶಾಶ್ವತ ನಿಯಮವಾಗಿ ಇಸ್ರಾಯೇಲರು ಅವುಗಳನ್ನು ಆರೋನನಿಗೂ ಅವನ ವಂಶಸ್ಥರಿಗೂ ಕೊಡತಕ್ಕದ್ದು. ಅವು ಯಾಜಕರ ಭಾಗಕ್ಕಾಗಿ ಪ್ರತ್ಯೇಕಿಸಲ್ಪಟ್ಟಿವೆ. ಇಸ್ರಾಯೇಲರು ಸಮಾಧಾನ ಯಜ್ಞಕ್ಕಾಗಿ ಪಶುಗಳನ್ನು ವಧಿಸಿ ಯೆಹೋವನಿಗೆ ನೈವೇದ್ಯ ಮಾಡುವಾಗೆಲ್ಲಾ ಆ ಭಾಗಗಳನ್ನು ಯಾಜಕರಿಗಾಗಿ ಪ್ರತ್ಯೇಕಿಸಬೇಕು. [PE][PS]
29. ಆರೋನನ ಪವಿತ್ರವಾದ ಯಾಜಕದೀಕ್ಷಾವಸ್ತ್ರಗಳು ಅವನ ತರುವಾಯ ಅವನ ವಂಶಸ್ಥರಿಗೂ ಉಪಯೋಗವಾಗಬೇಕು. ಅವರು ಅದರಲ್ಲಿಯೇ ನನಗಾಗಿ ಅಭಿಷೇಕಿಸಿ ಪ್ರತಿಷ್ಠಿಸಬೇಕು.
30. ಅವನ ಮಕ್ಕಳಲ್ಲಿ ಅವನಿಗೆ ಬದಲಾಗಿ ಮಹಾಯಾಜಕನಾಗುವವನು ಪವಿತ್ರಸ್ಥಾನದಲ್ಲಿ ದೇವರ ಸೇವೆಯನ್ನು ನಡೆಸುವುದಕ್ಕೆ ದೇವದರ್ಶನದ ಗುಡಾರದೊಳಗೆ ಪ್ರವೇಶಿಸಿದಂದಿನಿಂದ ಏಳು ದಿನಗಳವರೆಗೆ ಆ ವಸ್ತ್ರಗಳನ್ನು ಧರಿಸಿಕೊಂಡಿರಬೇಕು. [PE][PS]
31. ಆರೋನನು ಪ್ರತಿಷ್ಠೆಗಾಗಿ ಸಮರ್ಪಿಸಿದ ಟಗರಿನ ಮಾಂಸವನ್ನು ದೇವದರ್ಶನದ ಗುಡಾರದ ಅಂಗಳದಲ್ಲಿ ಬೇಯಿಸಬೇಕು.
32. ಆರೋನನೂ ಅವನ ಮಕ್ಕಳೂ ಆ ಟಗರಿನ ಮಾಂಸವನ್ನೂ ಪುಟ್ಟಿಯಲ್ಲಿರುವ ರೊಟ್ಟಿಯನ್ನೂ ದೇವದರ್ಶನ ಗುಡಾರದ ಬಾಗಿಲೊಳಗೆ ಊಟಮಾಡಬೇಕು.
33. ಅವರನ್ನು ಯಾಜಕ ಸೇವೆಗೆ ನೇಮಿಸುವುದಕ್ಕೂ ದೇವರ ಪವಿತ್ರ ಸೇವೆಗೆ ಪ್ರತಿಷ್ಠಿಸುವುದಕ್ಕೂ ಯಾವ ಪದಾರ್ಥಗಳು [‡ ಅಥವಾ ಪಾಪ ಕ್ಷಮಾಪಣೆಗಾಗಿ.] ದೋಷಪರಿಹಾರಕ್ಕಾಗಿ ಸಮರ್ಪಿಸಲ್ಪಟ್ಟವೋ ಅವುಗಳನ್ನು ಅವರು ತಿನ್ನಬೇಕೇ ಹೊರತು ಇತರರು ತಿನ್ನಬಾರದು ಏಕೆಂದರೆ ಅವು ಪರಿಶುದ್ಧವಾದವುಗಳಾಗಿ ಮೀಸಲಾದುದು.
34. ಪ್ರತಿಷ್ಠೆಗೆ ಸಂಬಂಧಪಟ್ಟ ಮಾಂಸದಲ್ಲಾಗಲಿ, ರೊಟ್ಟಿಯಲ್ಲಾಗಲಿ ಏನಾದರೂ ಮರುದಿನದ ಉದಯದ ವರೆಗೆ ಉಳಿದರೆ ಅದನ್ನು ಸುಟ್ಟುಬಿಡಬೇಕು. ಅದು ಪವಿತ್ರವಾದುದರಿಂದ ಯಾರೂ ಅದನ್ನು ತಿನ್ನಬಾರದು. [PE][PS]
35. ನಾನು ನಿನಗೆ ಆಜ್ಞಾಪಿಸಿದ ರೀತಿಯಲ್ಲಿ ಏಳು ದಿನಗಳ ಕಾಲ ಹೀಗೆ ಅವರನ್ನು ಪ್ರತ್ಯೇಕಿಸಿ ಪ್ರತಿಷ್ಠಿಸಬೇಕು. ಆರೋನನನ್ನೂ ಅವನ ಮಕ್ಕಳನ್ನೂ ಸೇವೆಗೆ ಪ್ರತಿಷ್ಠಿಸಬೇಕು.
36. ಪ್ರತಿದಿನವೂ ದೋಷಪರಿಹಾರಕ್ಕಾಗಿ ಒಂದು ಹೋರಿಯನ್ನು ಯಜ್ಞಮಾಡಬೇಕು. ಅದಲ್ಲದೆ ಯಜ್ಞವೇದಿಯನ್ನು ಶುದ್ಧಮಾಡುವುದಕ್ಕಾಗಿ ಅದರ ಮೇಲೆ ದೋಷಪರಿಹಾರಕ ಯಜ್ಞವನ್ನು ಸಮರ್ಪಿಸಿ, ಅದನ್ನು ದೇವರ ಸೇವೆಗಾಗಿ ಪ್ರತಿಷ್ಠಿಸುವುದಕ್ಕಾಗಿ ಅಭಿಷೇಕಿಸಬೇಕು.
37. ಹೀಗೆ ಏಳು ದಿನಗಳವರೆಗೂ ಯಜ್ಞವೇದಿಯ ನಿಮಿತ್ತವಾಗಿ ದೋಷಪರಿಹಾರಕ ಆಚಾರವನ್ನು ನಡಿಸಿ ಅದನ್ನು ಪ್ರತಿಷ್ಠಿಸಬೇಕು. ಯಜ್ಞವೇದಿಯು ಅತಿ ಪರಿಶುದ್ಧವಾಗಿರಬೇಕು. ಯಜ್ಞವೇದಿಯನ್ನು ಮುಟ್ಟುವವರೆಲ್ಲರೂ ಪರಿಶುದ್ಧರಾಗಿರಬೇಕು. [PS]
38. {ಪ್ರತಿನಿತ್ಯವೂ ಮಾಡಬೇಕಾದ ಸರ್ವಾಂಗಹೋಮದ ಕ್ರಮ} (ಅರಣ್ಯ 28:1-8) [PS] ಯಜ್ಞವೇದಿಯ ಮೇಲೆ ನಿತ್ಯವೂ ಸಮರ್ಪಿಸಬೇಕಾದವುಗಳು, ಒಂದು ವರ್ಷದ ಎರಡು ಕುರಿಮರಿಗಳನ್ನು ಪ್ರತಿದಿನವೂ ಹೋಮಮಾಡಬೇಕು.
39. ಅವುಗಳಲ್ಲಿ ಒಂದನ್ನು ಉದಯಕಾಲದಲ್ಲಿ ಮತ್ತೊಂದನ್ನು ಸಾಯಂಕಾಲದಲ್ಲಿ ಸಮರ್ಪಿಸಬೇಕು.
40. [§ ಸುಮಾರು ಒಂದು ಕಿಲೋಗ್ರಾಂ ಒಲೀವ್ ಎಣ್ಣೆ.] ಒಂದೂವರೆ ಸೇರು ಶ್ರೇಷ್ಠವಾದ ಎಣ್ಣೆಯನ್ನೂ ಮೂರು ಸೇರು ಗೋದಿಹಿಟ್ಟನ್ನೂ ಬೆರಸಿ ಧಾನ್ಯಸಮರ್ಪಣೆಗಾಗಿ ಆ ಮೊದಲನೆಯ ಕುರಿಯ ಸಂಗಡ ಅರ್ಪಿಸಬೇಕು. ಪಾನದ್ರವ್ಯಾರ್ಪಣೆಗಾಗಿ ಒಂದು ಪಾವು ದ್ರಾಕ್ಷಾರಸವನ್ನು ಅದರೊಂದಿಗೆ ಅರ್ಪಿಸಬೇಕು.
41. ಸಾಯಂಕಾಲದಲ್ಲಿ ಎರಡನೆಯ ಕುರಿಯನ್ನು ಹೋಮಮಾಡುವಾಗ ಹೊತ್ತಾರೆಯಲ್ಲಿ ಮಾಡಿದ ಪ್ರಕಾರವೇ ಅದರೊಂದಿಗೆ ಭೋಜನ ನೈವೇದ್ಯವನ್ನೂ, ಪಾನದ್ರವ್ಯವನ್ನೂ ಸರ್ವಾಂಗಹೋಮವಾಗಿ ಸಮರ್ಪಿಸಬೇಕು. ಅದು ಯೆಹೋವನಿಗೆ ಸುವಾಸನೆಯ ಹೋಮವಾಗಿರುವುದು. [PE][PS]
42. ಈ ಸರ್ವಾಂಗಹೋಮವನ್ನು ನೀವೂ ನಿಮ್ಮ ಸಂತತಿಯವರು ಪ್ರತಿನಿತ್ಯ ಯೆಹೋವನ ಸನ್ನಿಧಿಯಲ್ಲಿ ದೇವದರ್ಶನದ ಗುಡಾರದ ಬಾಗಿಲಿನ ಎದುರಿನಲ್ಲಿ ಮಾಡಬೇಕು. ಆ ಗುಡಾರದಲ್ಲಿ ನಾನು ನಿಮ್ಮೊಂದಿಗೆ ಮಾತನಾಡುವೆನು.
43. ಅಲ್ಲಿಯೇ ನಾನು ಇಸ್ರಾಯೇಲರಿಗೆ ದರ್ಶನವನ್ನು ಕೊಡುವೆನು. ಅಲ್ಲಿ ಕಾಣಿಸುವ ನನ್ನ ತೇಜಸ್ಸಿನಿಂದ ಆ ಸ್ಥಳವು ಪರಿಶುದ್ಧವಾಗಿರುವುದು.
44. ನಾನು ದೇವದರ್ಶನದ ಗುಡಾರವನ್ನೂ ಯಜ್ಞವೇದಿಯನ್ನೂ ಪರಿಶುದ್ಧಗೊಳಿಸುವೆನು. ಆರೋನನನ್ನೂ ಮತ್ತು ಅವನ ಮಕ್ಕಳನ್ನೂ ನನಗೆ ಯಾಜಕ ಸೇವೆ ಮಾಡುವಂತೆ ಶುದ್ಧೀಕರಿಸುವೆನು.
45. ನಾನು ಇಸ್ರಾಯೇಲರ ಮಧ್ಯದಲ್ಲಿ ವಾಸವಾಗಿದ್ದು ಅವರಿಗೆ ದೇವರಾಗಿರುವೆನು.
46. ಅವರ ಮಧ್ಯದಲ್ಲಿ ವಾಸಮಾಡುವುದಕ್ಕಾಗಿಯೇ ಅವರನ್ನು ಐಗುಪ್ತದೇಶದಿಂದ ಹೊರಗೆ ಬರಮಾಡಿದ ನಾನೇ ಅವರ ದೇವರಾದ ಯೆಹೋವನು ಎಂದು ಅವರು ತಿಳಿದುಕೊಳ್ಳುವರು. ಅವರ ದೇವರಾದ ಯೆಹೋವನು ನಾನೇ. [PE]