1. {ದೇವರು ಲಾವಕ್ಕಿ ಮತ್ತು ಮನ್ನವನ್ನು ಕೊಟ್ಟದ್ದು} [PS] ಇಸ್ರಾಯೇಲರ ಸಮೂಹವೆಲ್ಲಾ ಏಲೀಮಿನಿಂದ ಪ್ರಯಾಣ ಮಾಡಿ ಅವರು ಐಗುಪ್ತ ದೇಶದಿಂದ ಹೊರಟ ಎರಡನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ ಎಲೀಮಿಗೂ ಸೀನಾಯಿ ಬೆಟ್ಟಕ್ಕೂ ನಡುವೆಯಿರುವ ಸೀನ್ ಎಂಬ ಮರುಭೂಮಿಗೆ ಬಂದರು.
2. ಆಗ ಇಸ್ರಾಯೇಲರ ಸಮೂಹವೆಲ್ಲಾ ಮರುಭೂಮಿಯಲ್ಲಿ ಮೋಶೆ ಮತ್ತು ಆರೋನರ ಮೇಲೆ ಗುಣುಗುಟ್ಟತೊಡಗಿದರು.
3. ಇಸ್ರಾಯೇಲರು ಮೋಶೆ ಮತ್ತು ಆರೋನರಿಗೆ, “ಈ ಸಮೂಹವನ್ನೆಲ್ಲಾ ಹಸಿವೆಯಿಂದ ಸಾಯಿಸಬೇಕೆಂದು ನೀವು ನಮ್ಮನ್ನು ಈ ಮರುಭೂಮಿಗೆ ಕರೆದುಕೊಂಡು ಬಂದಿದ್ದೀರಿ. ನಾವು ಐಗುಪ್ತ ದೇಶದಲ್ಲಿದ್ದಾಗ ಮಾಂಸದ ಪಾತ್ರೆಗಳ ಬಳಿಯಲ್ಲಿ ಕುಳಿತುಕೊಂಡು ಹೊಟ್ಟೆತುಂಬಾ ರೊಟ್ಟಿಯನ್ನು ತಿನ್ನುತ್ತಿದ್ದಾಗ ಯೆಹೋವನ ಕೈಯಿಂದ ಸತ್ತು ಹೋಗಿದ್ದರೆ ಎಷ್ಟೋ ಒಳ್ಳೆಯದಾಗಿತ್ತು” ಎಂದರು.
4. ಆಗ ಯೆಹೋವನು ಮೋಶೆಗೆ, “ನಾನು ಆಕಾಶದಿಂದ ನಿಮಗಾಗಿ ಆಹಾರವನ್ನು ಸುರಿಸುತ್ತೇನೆ. ಜನರು ಪ್ರತಿದಿನವೂ ಹೊರಗೆ ಹೋಗಿ ಆ ದಿನಕ್ಕೆ ಬೇಕಾಗುವಷ್ಟನ್ನು ಮಾತ್ರ ಕೂಡಿಸಿಕೊಳ್ಳಬೇಕು. ಇದರಿಂದ ಅವರು ನನ್ನ ಆಜ್ಞೆಗಳನ್ನು ಅನುಸರಿಸಿ ನಡೆಯುವರೋ ಇಲ್ಲವೋ ಎಂದು ಪರೀಕ್ಷಿಸುತ್ತೇನೆ.
5. [* ಅಥವಾ ಶುಕ್ರವಾರ.] ಆರನೆಯ ದಿನದಲ್ಲಿ ಮಾತ್ರ ಅವರು ತಂದದ್ದನ್ನು ಸಿದ್ಧಮಾಡುವಾಗ ಅದು ಪ್ರತಿದಿನದಲ್ಲಿ ಕೂಡಿಸಿಕೊಂಡದ್ದಕ್ಕಿಂತಲೂ ಎರಡರಷ್ಟಾಗಿರುವುದು” ಎಂದು ಹೇಳಿದನು. [PE][PS]
6. ಮೋಶೆ ಮತ್ತು ಆರೋನರು ಇಸ್ರಾಯೇಲರಿಗೆ, “ನಿಮ್ಮನ್ನು ಐಗುಪ್ತ ದೇಶದೊಳಗಿಂದ ಹೊರಗೆ ಬರಮಾಡಿದಾತನು ಯೆಹೋವನೇ ಎಂಬುದು ಇಂದು ಸಾಯಂಕಾಲದಲ್ಲಿ ನಿಮಗೆ ಗೊತ್ತಾಗುವುದು.
7. ಮುಂಜಾನೆಯಲ್ಲಿ ಯೆಹೋವನ ಮಹಿಮೆಯು ನಿಮಗೆ ಕಾಣಿಸುವುದು, ಏಕೆಂದರೆ ನೀವು ಯೆಹೋವನಿಗೆ ವಿರೋಧವಾಗಿ ಗುಣುಗುಟ್ಟಿದ್ದನ್ನು ಆತನು ಕೇಳಿದ್ದಾನೆ. ನಮ್ಮ ಮೇಲೆ ನೀವು ಗುಣುಗುಟ್ಟುವುದೇನು? ನಾವು ಎಷ್ಟು ಮಾತ್ರದವರು?” ಎಂದು ಹೇಳಿದರು.
8. ಆಗ ಮೋಶೆ, “ಯೆಹೋವನು ಸಾಯಂಕಾಲದ ಹೊತ್ತಿನಲ್ಲಿ ನಿಮಗೆ ಮಾಂಸಾಹಾರವನ್ನೂ, ಮುಂಜಾನೆಯಲ್ಲಿ ಬೇಕಾದಷ್ಟು ರೊಟ್ಟಿಯನ್ನೂ ಕೊಡುವನು. ನಿಮ್ಮ ಗುಣುಗುಟ್ಟುವಿಕೆಯು ಯೆಹೋವನಿಗೆ ಕೇಳಿಸಿತು. ನಾನು ಮತ್ತು ಆರೋನನು ಎಷ್ಟರವರು? ನಿಮ್ಮ ಗುಣುಗುಟ್ಟುವಿಕೆ ಯೆಹೋವನ ವಿರುದ್ಧವೇ ಹೊರತು ನಮ್ಮ ವಿರುದ್ಧವಲ್ಲ” ಎಂದನು. [PE][PS]
9. ಮೋಶೆಯು ಆರೋನನಿಗೆ, “ನೀನು ಇಸ್ರಾಯೇಲರ ಸಮೂಹದ ಬಳಿಗೆ ಹೋಗಿ ಅವರಿಗೆ, ‘ಯೆಹೋವನು ನಿಮ್ಮ ಗುಣುಗುಟ್ಟುವಿಕೆಯನ್ನು ಕೇಳಿದ್ದಾನೆ. ಆದುದರಿಂದ ನೀವೆಲ್ಲರೂ ಆತನ ಸನ್ನಿಧಿಗೆ ಒಟ್ಟಾಗಿ ಸೇರಿ ಬರಬೇಕೆಂದು ಆಜ್ಞಾಪಿಸು’ ” ಎಂದು ಹೇಳಿದನು.
10. ಆರೋನನು ಇಸ್ರಾಯೇಲರ ಸಮೂಹಕ್ಕೆಲ್ಲಾ ಈ ಮಾತುಗಳನ್ನು ತಿಳಿಸುತ್ತಿರುವಾಗ, ಅವರು ಮರುಭೂಮಿಯ ಕಡೆಗೆ ನೋಡಲಾಗಿ, ಮೇಘದಲ್ಲಿ ಯೆಹೋವನ ತೇಜಸ್ಸು ಅವರಿಗೆ ಕಾಣಿಸಿತು. [PE][PS]
11. ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
12. “ಇಸ್ರಾಯೇಲರ ಗುಣುಗುಟ್ಟುವಿಕೆಯು ನನಗೆ ಕೇಳಿಸಿತು. ನೀನು ಅವರಿಗೆ, ‘ನೀವು ಸಾಯಂಕಾಲದಲ್ಲಿ ಮಾಂಸವನ್ನೂ, ಮುಂಜಾನೆಯಲ್ಲಿ ಬೇಕಾದಷ್ಟು ರೊಟ್ಟಿಯನ್ನೂ ತಿನ್ನುವಿರಿ. ಇದರಿಂದ ನಾನು ನಿಮ್ಮ ದೇವರಾದ ಯೆಹೋವನು ಎಂಬುದು ನಿಮಗೆ ಗೊತ್ತಾಗುವುದೆಂದು ಹೇಳಬೇಕು’ ” ಎಂಬುದೇ. [PE][PS]
13. ಸಾಯಂಕಾಲವಾಗುತ್ತಲೇ ಲಾವಕ್ಕಿಗಳು ಬಂದು ಅವರ ಪಾಳೆಯವನ್ನು ತುಂಬಿಕೊಂಡವು. ಅದಲ್ಲದೆ ಹೊತ್ತಾರೆಯಲ್ಲಿ ಮಂಜು ಪಾಳೆಯದ ಸುತ್ತಲೂ ಬಿದ್ದಿತ್ತು.
14. ಆ ಮಂಜು ಕರಗಿ ಹೋದ ಮೇಲೆ ಮರುಭೂಮಿಯ ನೆಲದಲ್ಲಿ ಮಂಜಿನ ಹನಿಗಳಂತೆ ಏನೋ ಸಣ್ಣ ಸಣ್ಣ ರವೆಗಳು ಕಾಣಿಸಿದವು.
15. ಇಸ್ರಾಯೇಲರು ಅದನ್ನು ಕಂಡು ಒಬ್ಬರಿಗೊಬ್ಬರು, “ಇದೇನಿರಬಹುದು?” ಎಂದು ಅಂದುಕೊಂಡರು. ಅದು ಏನೆಂದು ಅವರಿಗೆ ತಿಳಿಯಲಿಲ್ಲ. ಮೋಶೆ ಅವರಿಗೆ, “ಇದು ಯೆಹೋವನು ನಿಮಗಾಗಿ ತಿನ್ನುವುದಕ್ಕೆ ಕೊಟ್ಟಿರುವ ರೊಟ್ಟಿಯಾಗಿದೆ.
16. [† 16:36 ನೋಡಿರಿ.] ಯೆಹೋವನು ಇದರ ವಿಷಯದಲ್ಲಿ ಆಜ್ಞಾಪಿಸಿದ್ದೇನೆಂದರೆ: ಪ್ರತಿಯೊಬ್ಬನು ತನ್ನ ಕುಟುಂಬದವರ ಸಂಖ್ಯಾನುಸಾರ ತಲೆಗೆ ಮೂರು ಸೇರಿನಂತೆ ತನ್ನ ಡೇರೆಯವರಿಗಾಗಿ ಕೂಡಿಸಿಕೊಳ್ಳಲಿ. ಪ್ರತಿಯೊಬ್ಬನು ತಾನು ಎಷ್ಟು ತಿನ್ನುವನೋ ಅದರ ಪ್ರಾಕಾರ ನೀವು ಕೂಡಿಸಿಕೊಳ್ಳಿರಿ” ಎಂದು ಹೇಳಿದನು.
17. ಇಸ್ರಾಯೇಲರು ಹಾಗೆಯೇ ಮಾಡಿದರು. ಕೆಲವರು ಹೆಚ್ಚಾಗಿ, ಕೆಲವರು ಕಡಿಮೆಯಾಗಿ ಕೂಡಿಸಿಕೊಂಡರು.
18. ಅವರು ಅದನ್ನು ಸೇರಿನಿಂದ ಅಳತೆಮಾಡಿದರು. ಬಹಳ ಕೂಡಿಸಿದವನಿಗೆ ಏನೂ ಹೆಚ್ಚಾಗಲಿಲ್ಲ, ಸ್ವಲ್ಪವಾಗಿ ಕೂಡಿಸಿದವನಿಗೆ ಏನೂ ಕಡಿಮೆಯಾಗಲಿಲ್ಲ. ಪ್ರತಿಯೊಬ್ಬನೂ ತನ್ನ ಭೋಜನಕ್ಕೆ ಸರಿಯಾಗುವಷ್ಟನ್ನು ಕೂಡಿಸಿಕೊಂಡಿದ್ದನು. [PE][PS]
19. ಅದಲ್ಲದೆ ಮೋಶೆ ಅವರಿಗೆ, “ಇದನ್ನು ಯಾರೂ ಮರು ದಿನದವರೆಗೆ ಇಟ್ಟುಕೊಳ್ಳಬಾರದು” ಎಂದು ಹೇಳಿದನು.
20. ಆದಾಗ್ಯೂ ಅವರು ಮೋಶೆಯ ಮಾತನ್ನು ಕೇಳದೆ, ಅದರಲ್ಲಿ ಸ್ವಲ್ಪವನ್ನು ಮರು ದಿನದವರೆಗೆ ಇಟ್ಟುಕೊಂಡಾಗ ಅದು ಹುಳ ಬಿದ್ದು ಹೊಲಸುವಾಸನೆ ಹಿಡಿದು ಕೆಟ್ಟುಹೋಯಿತು. ಅದಕ್ಕೆ ಮೋಶೆ ಅವರ ಮೇಲೆ ಕೋಪಗೊಂಡನು.
21. ಜನರು ಪ್ರತಿದಿನ ಮುಂಜಾನೆಯಲ್ಲಿ ತಮ್ಮ ಭೋಜನಕ್ಕೆ ತಕ್ಕಷ್ಟು ಕೂಡಿಸಿಕೊಂಡರು. ಬಿಸಿಲು ಹೆಚ್ಚಾದಾಗ ಅದು ಕರಗಿಹೋಗುತ್ತಿತ್ತು. [PE][PS]
22. ಆರನೆಯ ದಿನ ಎರಡರಷ್ಟು ಆಹಾರವು, ಅಂದರೆ ಒಬ್ಬೊಬ್ಬನಿಗೆ ಎರಡೆರಡು ಸೇರಿನಂತೆ ಆರಿಸಿ ತುಂಬಿಟ್ಟುಕೊಂಡಿದ್ದರಿಂದ ಸಮೂಹದ ಅಧಿಕಾರಿಗಳೆಲ್ಲರು ಮೋಶೆಯ ಬಳಿಗೆ ಬಂದು ಈ ಸಂಗತಿಯನ್ನು ತಿಳಿಸಿದರು.
23. ಅದಕ್ಕೆ ಅವನು, “ಇದು ಯೆಹೋವನು ಹೇಳಿದ ಮಾತು, ‘ನಾಳೆ ಯೆಹೋವನಿಗೆ ವಿಶ್ರಾಂತಿಯ ಪರಿಶುದ್ಧ ಸಬ್ಬತ ದಿನವಾಗಿದೆ. ಈ ದಿನವೇ ಸುಡಬೇಕಾದದ್ದನ್ನು ಸುಟ್ಟು, ಬೇಯಿಸಬೇಕಾದದ್ದನ್ನು ಬೇಯಿಸಿರಿ. ಇದರಲ್ಲಿ ಮಿಕ್ಕಾದದ್ದನ್ನೆಲ್ಲಾ ನಾಳೆಯವರೆಗೆ ಇಟ್ಟುಕೊಳ್ಳಿರಿ’ ” ಎಂದನು.
24. ಮೋಶೆ ಆಜ್ಞಾಪಿಸಿದಂತೆ ಅವರು ಮರು ದಿನದವರೆಗೆ ಅದನ್ನು ಇಟ್ಟುಕೊಂಡರು. ಆದರೆ ಅದು ಕೆಟ್ಟು ಹೋಗಿರಲಿಲ್ಲ, ಹುಳ ಬೀಳಲ್ಲೂ ಇಲ್ಲ.
25. ಆಗ ಮೋಶೆ ಅವರಿಗೆ, “ಈ ಹೊತ್ತು ಅದನ್ನು ಊಟ ಮಾಡಿರಿ. ಈ ದಿನವು ಯೆಹೋವನ ಸಬ್ಬತ್ ದಿನವಾಗಿರುವುದರಿಂದ ಈ ದಿನ ಅದು ಹೊಲದಲ್ಲಿ ಕಾಣಿಸಿಕೊಳ್ಳುವುದಿಲ್ಲ.
26. ಆರು ದಿನ ಅದನ್ನು ಕೂಡಿಸಿಡಬೇಕು. ಏಳನೆಯ ದಿನ ಸಬ್ಬತ್ ದಿನವಾಗಿರುವುದರಿಂದ ಅದು ದೊರೆಯುವುದಿಲ್ಲ” ಎಂದು ಹೇಳಿದನು.
27. ಹಾಗೆಯೇ ಆಯಿತು. ಜನರಲ್ಲಿ ಕೆಲವರು ಏಳನೆಯ ದಿನದಲ್ಲಿ ಅದನ್ನು ಕೂಡಿಸಿಕೊಳ್ಳುವುದಕ್ಕೆ ಹೋದಾಗ ಅವರಿಗೆ ಏನೂ ಸಿಕ್ಕಲಿಲ್ಲ.
28. ಆಗ ಯೆಹೋವನು ಮೋಶೆಗೆ, “ನೀವು ಎಲ್ಲಿಯವರೆಗೆ ನನ್ನ ಆಜ್ಞೆಗಳನ್ನೂ, ನಾನು ಮಾಡಿರುವ ನಿಯಮಗಳನ್ನೂ ಅನುಸರಿಸದೆ ಅಲಕ್ಷ್ಯ ಮಾಡುವಿರಿ?
29. ನೋಡಿರಿ, ಯೆಹೋವನು ನಿಮಗೆ ಸಬ್ಬತ್ ದಿನವನ್ನು ಆಚರಿಸಬೇಕೆಂದು ಅಪ್ಪಣೆಕೊಟ್ಟಿರುವುದರಿಂದಲೇ ಆರನೆಯ ದಿನದಲ್ಲಿ ಎರಡು ದಿನದ ಆಹಾರವು ನಿಮಗೆ ದೊರಕುವಂತೆ ಅನುಗ್ರಹಿಸಿದ್ದಾನೆ. ನಿಮ್ಮಲ್ಲಿ ಪ್ರತಿಯೊಬ್ಬನು ತಾನಿರುವ ಸ್ಥಳದಲ್ಲಿ ಇರಬೇಕು. ಏಳನೆಯ ದಿನದಲ್ಲಿ ಒಬ್ಬನೂ ತನ್ನ ಸ್ಥಳವನ್ನು ಬಿಟ್ಟು ಹೊರಗೆ ಹೋಗಬಾರದು” ಎಂದು ಹೇಳಿದನು.
30. ಆದುದರಿಂದ ಏಳನೆಯ ದಿನದಲ್ಲಿ ಜನರು ಕೆಲಸವನ್ನು ಮಾಡದೆ ವಿಶ್ರಮಿಸಿಕೊಂಡರು. [PE][PS]
31. ಇಸ್ರಾಯೇಲರು ಆ ಆಹಾರಕ್ಕೆ “ಮನ್ನ” ಎಂದು ಹೆಸರಿಟ್ಟರು. ಅದು ಬಿಳಿ ಕೊತ್ತುಂಬರಿ ಕಾಳಿನಂತಿದ್ದು ರುಚಿಯಲ್ಲಿ ಜೇನುತುಪ್ಪ ಸವರಿದ ದೋಸೆಯಂತೆ ಇತ್ತು.
32. ಮೋಶೆಯು ಜನರಿಗೆ, “ಯೆಹೋವನು ಆಜ್ಞಾಪಿಸಿದ್ದು ಇದೇ, ‘ನಾನು ಐಗುಪ್ತ ದೇಶದಿಂದ ನಿಮ್ಮನ್ನು ಹೊರಗೆ ಬರಮಾಡಿದಾಗ ಮರುಭೂಮಿಯಲ್ಲಿ ತಿನ್ನುವುದಕ್ಕೆ ಕೊಟ್ಟ ಆಹಾರವನ್ನು ನಿಮ್ಮ ಸಂತಾನದವರು ನೋಡುವ ಹಾಗೆ ಅವರಿಗಾಗಿ ನೀವು ಒಂದು ಸೇರು ಮನ್ನವನ್ನು ತುಂಬಿಸಿ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು’ ” ಎಂದು ಹೇಳಿದನು.
33. ಆದಕಾರಣ ಮೋಶೆಯು ಆರೋನನಿಗೆ, “ನೀನು ಒಂದು ಪಾತ್ರೆಯನ್ನು ತೆಗೆದುಕೊಂಡು, ಅದರಲ್ಲಿ ಒಂದು ಸೇರಿನಷ್ಟು ಮನ್ನವನ್ನು ಹಾಕಿ ನಿಮ್ಮ ಸಂತತಿಯವರು ನೋಡುವುದಕ್ಕಾಗಿ ಅದನ್ನು ಯೆಹೋವನ ಸನ್ನಿಧಿಯಲ್ಲಿ ಇಡಬೇಕು” ಎಂದು ಹೇಳಿದನು.
34. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆ, ಆರೋನನು [‡ ಇದು ಮಂಜೂಷ ಪೆಟ್ಟಿಗೆ. 25:10-12 ಅನ್ನು ನೋಡಿರಿ.] ಆಜ್ಞಾಶಾಸನ ಮಂಜೂಷದ ಪಕ್ಕದಲ್ಲಿ ಅದನ್ನು ಇರಿಸಿದನು. [PE][PS]
35. ಇಸ್ರಾಯೇಲರು ತಾವು ವಾಸಮಾಡಲಿರುವ ಪ್ರದೇಶಕ್ಕೆ ಬರುವವರೆಗೆ ಅಂದರೆ ಕಾನಾನ್ ದೇಶವನ್ನು ಬಂದು ಸೇರುವವರೆಗೆ ನಲ್ವತ್ತು ವರ್ಷ ಮನ್ನವನ್ನೇ ಊಟಮಾಡಿದರು.
36. [§ 23 ಲೀಟರುಗಳು.] ಓಮೆರ್ ಎಂಬುದು ಏಫಾದಲ್ಲಿ ಹತ್ತನೆಯ ಒಂದು ಪಾಲು ಹಿಡಿಯುವಂಥ ಒಂದು ಅಳತೆಯ ಮಾಪನವಾಗಿದೆ. [PE]