1. {ದಾವೀದನ ರಚಿಸಿದ ಸ್ತುತಿಗೀತೆ} [PS] ಯೆಹೋವನು ದಾವೀದನನ್ನು ಎಲ್ಲಾ ಶತ್ರುಗಳ ಕೈಗೂ ಸೌಲನ ಕೈಗೂ ಸಿಕ್ಕದಂತೆ ತಪ್ಪಿಸಿದಾಗ ಅವನು ಯೆಹೋವನ ಘನಕ್ಕಾಗಿ ಈ ಜಯ ಗೀತೆಯನ್ನು ರಚಿಸಿ ಹೀಗೆ ಹಾಡಿದನು: [QBR]
2. ಯೆಹೋವನು ನನ್ನ ಬಂಡೆಯೂ, ನನ್ನ ಕೋಟೆಯೂ ನನ್ನ ವಿಮೋಚಕನೂ ಆಗಿದ್ದಾನೆ. [QBR]
3. ಆತನು ನನ್ನ ಆಶ್ರಯಗಿರಿಯಾಗಿರುವ ದೇವರೂ, ನನ್ನ ಗುರಾಣಿಯೂ ನನ್ನ ರಕ್ಷಣೆಯ ಕೊಂಬೂ, ನನ್ನ ದುರ್ಗವೂ, ನನ್ನ ಶರಣನೂ, ಹಿಂಸೆಯಿಂದ ನನ್ನನ್ನು ರಕ್ಷಿಸುವವನೂ ಆಗಿದ್ದಾನೆ. [QBR]
4. ಯೆಹೋವನು ಸ್ತೋತ್ರಕ್ಕೆ ಅರ್ಹನು. ನಾನು ಆತನಿಗೆ ಮೊರೆಯಿಡಲು ಆತನು ನನ್ನನ್ನು ಶತ್ರುಗಳಿಂದ ರಕ್ಷಿಸುತ್ತಾನೆ. [QBR]
5. ಮರಣ ಪ್ರವಾಹದ ಅಲ್ಲಕಲ್ಲೋಲಗಳು ನನ್ನನ್ನು ಸುತ್ತಿಕೊಂಡವು. ನಾಶಪ್ರವಾಹವು ನನ್ನನ್ನು ನಡುಗಿಸಿತು. [QBR]
6. ಪಾತಾಳಪಾಶಗಳು ನನ್ನನ್ನು ಆವರಿಸಿಕೊಂಡವು, ಮರಣಕರವಾದ ಉರುಲುಗಳು ನನ್ನನ್ನು ಸುತ್ತಿಕೊಂಡವು. [QBR]
7. ಅಂಥ ಕಷ್ಟದಲ್ಲಿ ನಾನು ಯೆಹೋವನಿಗೆ ಮೊರೆಯಿಟ್ಟೆನು. ನನ್ನ ದೇವರನ್ನು ಪ್ರಾರ್ಥಿಸಿದೆನು. ಆತನು ತನ್ನ ಮಂದಿರದಲ್ಲಿ ನನ್ನ ಸ್ವರವನ್ನು ಕೇಳಿದನು. ನನ್ನ ಪ್ರಾರ್ಥನೆ ಆತನ ಸನ್ನಿಧಿಗೆ ಕೇಳಿಸಿತು. [QBR]
8. ಆಗ ಆತನ ಕೋಪದಿಂದ ಭೂಮಿಯು ಕಂಪಿಸಿತು. ಆಕಾಶದ ಆಧಾರಗಳು ನಡುಗಿ ಕದಲಿದವು. [QBR]
9. ಆತನ ಮೂಗಿನಿಂದ ಹೊಗೆಯು ಬಂದಿತು. ಆತನ ಬಾಯಿಂದ ಅಗ್ನಿಜ್ವಾಲೆಯು ಹೊರಟು ಸಿಕ್ಕಿದ್ದೆಲ್ಲವನ್ನು ದಹಿಸಿ ಕೆಂಡವನ್ನಾಗಿ ಮಾಡಿತು. [QBR]
10. ಆತನು ಆಕಾಶವನ್ನು ತಗ್ಗಿಸಿ ಇಳಿದು ಬಂದನು. ಆತನ ಪಾದಗಳ ಕೆಳಗೆ ಕಾರ್ಗತ್ತಲಿತ್ತು. [QBR]
11. ಕೆರೂಬಿವಾಹನನಾಗಿ ಹಾರಿದನು. ವಾಯುವೇ ಆತನ ರೆಕ್ಕೆಗಳೋ ಎಂಬಂತೆ ಇಳಿದು ಪ್ರತ್ಯಕ್ಷನಾದನು. [QBR]
12. ಕತ್ತಲನ್ನೂ, ಜಲಮಯವಾಗಿರುವ ನೀಲಮೇಘಗಳನ್ನೂ, ತನ್ನ ಸುತ್ತಲೂ ಗುಡಾರದಂತೆ ಕವಿಸಿಕೊಂಡನು. [QBR]
13. ಆತನ ಸಾನ್ನಿಧ್ಯ ಪ್ರಕಾಶದಿಂದ ಉರಿಗೆಂಡಗಳು ಹೊರಟವು. [QBR]
14. ಯೆಹೋವನು ಆಕಾಶದಿಂದ ಗುಡುಗಿದನು. ಪರಾತ್ಪರನಾದ ದೇವರು ಧ್ವನಿಗೊಟ್ಟನು. [QBR]
15. ಆತನು ಬಾಣಗಳನ್ನೆಸೆದು ಶತ್ರುಗಳನ್ನು ಚದುರಿಸಿಬಿಟ್ಟನು. ಸಿಡಿಲಿನಿಂದ ಅವುಗಳನ್ನು ಕಳವಳಗೊಳಿಸಿದನು. [QBR]
16. ಆಗ ಯೆಹೋವನ ಗದರಿಕೆಯಿಂದಲೂ ಆತನ ಶ್ವಾಸಭರದಿಂದಲೂ ಸಮುದ್ರದ ತಳವು ಕಾಣಿಸಿತು. ಭೂಮಂಡಲದ ಅಸ್ಥಿವಾರವು ತೋರಿಬಂದವು. [QBR]
17. ಆತನು ಮೇಲಣಲೋಕದಿಂದ ಕೈಚಾಚಿ ನನ್ನನ್ನು ಹಿಡಿದು! ಮಹಾಜಲರಾಶಿಯೊಳಗಿಂದ ನನ್ನನ್ನು ಎಳೆದನು. [QBR]
18. ನನಗಿಂತ ಬಲಿಷ್ಠರೂ, ಪುಷ್ಠರೂ ಆಗಿ ದ್ವೇಷಿಸುತ್ತಿದ್ದ ಶತ್ರುಗಳಿಂದ ನನ್ನನ್ನು ಬಿಡಿಸಿ ರಕ್ಷಿಸಿದನು. [QBR]
19. ಅವರು ನನ್ನ ಆಪತ್ಕಾಲದಲ್ಲಿ ನನ್ನ ಮೇಲೆ ಬಿದ್ದರು. ಆಗ ಯೆಹೋವನು ನನಗೆ ಉದ್ಧಾರಕನಾದನು. [QBR]
20. ಆತನು ನನ್ನನ್ನು ಅಪಾಯದಿಂದ ಬಿಡಿಸಿದನು. ನನ್ನನ್ನು ಮೆಚ್ಚಿ [* ಅಥವಾ ವಿಶಾಲ ಸ್ಥಳದಲ್ಲಿ ಸೇರಿಸಿದನು.] ರಕ್ಷಿಸಿದನು. [QBR]
21. ಯೆಹೋವನು ನನ್ನ ಸನ್ನಡತೆಗೆ ತಕ್ಕ ಪ್ರತಿಫಲ ನೀಡಿದನು. ನನ್ನ ಕೈಗಳ ಶುದ್ಧತ್ವಕ್ಕೆ ತಕ್ಕಂತೆ ಪ್ರತಿಫಲಕೊಟ್ಟನು. [QBR]
22. ಯೆಹೋವನ ಮಾರ್ಗವನ್ನೇ ಅನುಸರಿಸಿದೆನಲ್ಲಾ ನನ್ನ ದೇವರನ್ನು ಬಿಟ್ಟು ದ್ರೋಹ ಮಾಡಲಿಲ್ಲ. [QBR]
23. ನಾನು ಆತನ ಆಜ್ಞೆಗಳನ್ನು ಯಾವಾಗಲೂ ನನ್ನೆದುರಿನಲ್ಲಿ ಇಟ್ಟುಕೊಂಡೆನು. ಆತನ ವಿಧಿಗಳಿಂದ ತಪ್ಪಿ ಹೋಗಲಿಲ್ಲ. [QBR]
24. ನಾನು ಆತನ ದೃಷ್ಟಿಯಲ್ಲಿ ನಿರ್ದೋಷಿಯು. ಪಾಪದಲ್ಲಿ ಬೀಳದಂತೆ ಜಾಗರೂಕತೆಯಿಂದ ನಡೆದುಕೊಂಡೆನು. [QBR]
25. ಆದ್ದರಿಂದ ನನ್ನ ನೀತಿಗೆ ತಕ್ಕಂತೆಯೂ, ಆತನ ದೃಷ್ಟಿಯಲ್ಲಿ ನನ್ನ ನಿರಪರಾಧಕ್ಕೆ ತಕ್ಕಂತೆಯೂ ಯೆಹೋವನು ನನಗೆ ತಕ್ಕ ಪ್ರತಿಫಲವನ್ನು ಕೊಟ್ಟನು. [QBR]
26. ನೀನು ಕೃಪೆಯುಳ್ಳವನಿಗೆ ಕೃಪಾವಂತನೂ, ದೋಷವಿಲ್ಲದವರಿಗೆ ನಿರ್ದೋಷಿಯೂ. [QBR]
27. ಶುದ್ಧನಿಗೆ ಪರಿಶುದ್ಧನೂ, ವಕ್ರಬುದ್ಧಿಯವನಿಗೆ ವಕ್ರನೂ ಆಗಿರುವಿ. [QBR]
28. ದೀನರನ್ನು ಉದ್ಧರಿಸುತ್ತಿ. ಹಮ್ಮಿನವರನ್ನು ಕಂಡುಹಿಡಿದು ತಗ್ಗಿಸಿಬಿಡುತ್ತಿ. [QBR]
29. ಯೆಹೋವನೇ, ನನ್ನ ದೀಪವು ನೀನೇ. ಯೆಹೋವನು ನನಗೆ ಬೆಳಕನ್ನು ಕೊಟ್ಟು ನನ್ನ ಕತ್ತಲನ್ನು ಪರಿಹರಿಸುವನು. [QBR]
30. ನಿನ್ನ ಬಲದಿಂದ [† ಅಥವಾ ನಾನು ಜಜ್ಜಿಹಾಕುವೆನು.] ನಾನು ದಂಡಿನ ಮೇಲೆ ಬೀಳುವೆನು. ನನ್ನ ದೇವರ ಸಹಾಯದಿಂದ ಪ್ರಾಕಾರಗಳನ್ನು ಹಾರುವೆನು. [QBR]
31. ದೇವರ ಮಾರ್ಗವು ಯಾವ ದೋಷವೂ ಇಲ್ಲದ್ದು ಯೆಹೋವನ ವಚನವು ಶುದ್ಧವಾದದ್ದು. ಆತನು ಆಶ್ರಿತರೆಲ್ಲರಿಗೆ ಗುರಾಣಿಯಾಗಿದ್ದಾನೆ. [QBR]
32. ಯೆಹೋವನಲ್ಲದೆ ದೇವರು ಯಾರು? ನಮ್ಮ ದೇವರ ಹೊರತು ಶರಣನು ಎಲ್ಲಿ? [QBR]
33. ದೇವರು ನನ್ನ ಬಲವಾದ ಕೋಟೆಯಾಗಿದ್ದಾನೆ. ಆತನು ನನ್ನ ಮಾರ್ಗವನ್ನು ಸರಾಗಮಾಡುತ್ತಾನೆ. [QBR]
34. ನನ್ನ ಕಾಲನ್ನು ಜಿಂಕೆಯ ಕಾಲಿನಂತೆ ಚುರುಕು ಮಾಡುತ್ತಾನೆ. ನನ್ನನ್ನು ಉನ್ನತಪ್ರದೇಶಗಳಲ್ಲಿ ನಿಲ್ಲಿಸುತ್ತಾನೆ [QBR]
35. ಆತನು ನನಗೆ ಯುದ್ಧ ವಿದ್ಯೆಯನ್ನು ಕಲಿಸಿದ್ದರಿಂದ ನಾನು ತಾಮ್ರದ ಬಿಲ್ಲನ್ನಾದರೂ ಉಪಯೋಗಿಸಬಲ್ಲೆನು. [QBR]
36. ನೀನು ನನಗೋಸ್ಕರ ಗುರಾಣಿಯನ್ನು ಹಿಡಿದು ರಕ್ಷಿಸಿದ್ದೀ. ನಿನ್ನ ಕೃಪಾಕಟಾಕ್ಷವು ನನ್ನನ್ನು ಉನ್ನತಕ್ಕೆ ಏರಿಸಿದೆ. [QBR]
37. ನೀನು ನನ್ನ ಕಾಲುಗಳಿಗೆ ವಿಶಾಲ ಸ್ಥಳವನ್ನು ಕೊಟ್ಟಿದ್ದರಿಂದ ನನ್ನ ಕಾಲುಗಳು ಕದಲುವುದಿಲ್ಲ. [QBR]
38. ನನ್ನ ಶತ್ರುಗಳನ್ನು ಹಿಂದಟ್ಟಿ ಸಂಹರಿಸುವೆನು. ಅವರನ್ನು ಇಲ್ಲದಂತೆ ಮಾಡುವವರೆಗೂ ಹಿಂದಿರುಗುವುದಿಲ್ಲ. [QBR]
39. ಅವರನ್ನು ನಿರ್ನಾಮಗೊಳಿಸುವೆನು, ಹೊಡೆದು ಏಳಲಾರದಂತೆ ಮಾಡುವೆನು. ಅವರು ನನ್ನ ಪಾದದ ಕೆಳಗೆ ಬೀಳುವರು. [QBR]
40. ನೀನು ನನಗೆ ಯುದ್ಧಕ್ಕಾಗಿ ಶೌರ್ಯವೆಂಬ ನಡುಕಟ್ಟನ್ನು ಬಿಗಿದಿದ್ದಿ. ಎದುರಾಳಿಗಳನ್ನು ಕುಗ್ಗಿಸಿ ನನಗೆ ಅಧೀನಮಾಡಿದ್ದಿ. [QBR]
41. ನನ್ನ ಶತ್ರುಗಳನ್ನು ಬೆಂಗೊಟ್ಟು ಓಡಮಾಡಿದ್ದೀ. ನನ್ನ ಶತ್ರುಗಳನ್ನು ನಿರ್ಮೂಲ ಮಾಡುವೆನು. [QBR]
42. ಅವರು ಸಹಾಯಕ್ಕಾಗಿ ಕೂಗಿಕೊಂಡರೂ ರಕ್ಷಿಸುವವನಿಲ್ಲ. ಯೆಹೋವನಿಗೆ ಮೊರೆಯಿಟ್ಟರೂ ಆತನು ಉತ್ತರವನ್ನು ಕೊಡಲೇ ಇಲ್ಲ. [QBR]
43. ಭೂಮಿಯ ಧೂಳನ್ನೋ ಎಂಬಂತೆ ಅವರನ್ನು ಪುಡಿಪುಡಿ ಮಾಡಿದೆನು. ಬೀದಿಯಲ್ಲಿರುವ ಕೆಸರನ್ನೋ ಎಂಬಂತೆ ಅವರನ್ನು ತುಳಿದು ಎಸೆದುಬಿಟ್ಟೆನು. [QBR]
44. ನನ್ನ ಜನರ ಕಲಹಗಳಿಗೆ ನನ್ನನ್ನು ತಪ್ಪಿಸಿದ್ದಿ. ಜನಾಂಗಗಳಿಗೆ ದೊರೆಯಾಗುವಂತೆ ನನ್ನನ್ನು ಉಳಿಸಿದ್ದಿ. ನಾನರಿಯದ ಜನಾಂಗದವರು ಸಹ ನನಗೆ ಅಧೀನರಾಗುವರು. [QBR]
45. ದೇಶಾಂತರದವರು ನನ್ನ ಮುಂದೆ ಮುದುರಿಕೊಳ್ಳುವರು. ನನ್ನ ಸುದ್ದಿಯನ್ನು ಕೇಳಿದ ಮಾತ್ರಕ್ಕೆ ನನಗೆ ವಿಧೇಯರಾಗುವರು. [QBR]
46. ಅವರು ಧೈರ್ಯಗುಂದಿದವರಾಗಿ ತಮ್ಮ ತಮ್ಮ ಕೋಟೆಗಳಿಂದ ನಡುಗುತ್ತಾ ಬರುವರು. [QBR]
47. ಯೆಹೋವನು ಚೈತನ್ಯಸ್ವರೂಪನು. ನನ್ನ ಶರಣನಿಗೆ ಸ್ತೋತ್ರ. ನನ್ನ ಆಶ್ರಯಗಿರಿಯಾಗಿರುವ ದೇವರಿಗೆ ಕೊಂಡಾಟ. [QBR]
48. ಆತನು ನನ್ನ ಶತ್ರುಗಳಿಗೆ ಪ್ರತಿದಂಡನೆಮಾಡುವ ದೇವರು. ಜನಾಂಗಗಳನ್ನು ನನಗೆ ಅಧೀನಪಡಿಸುತ್ತಾನೆ. [QBR]
49. ಶತ್ರುಗಳಿಂದ ನನ್ನನ್ನು ಬಿಡಿಸುವಾತನೇ, ನೀನು ನನ್ನನ್ನು ನನ್ನ ಎದುರಾಳಿಗಳಿಂದ ತಪ್ಪಿಸಿ ಉನ್ನತಪಡಿಸುತ್ತಿ. ಬಲಾತ್ಕಾರಿಗಳಿಂದ ನನ್ನನ್ನು ರಕ್ಷಿಸುತ್ತಿ. [QBR]
50. ಈ ಕಾರಣದಿಂದ ಯೆಹೋವನೇ, ಅನ್ಯಜನಾಂಗಗಳ ಮಧ್ಯದಲ್ಲಿ ನಿನ್ನನ್ನು ಸ್ತುತಿಸುವೆನು. ನಿನ್ನ ನಾಮವನ್ನು ಸಂಕೀರ್ತಿಸುವೆನು. [QBR]
51. ಆತನು ತಾನು ನೇಮಿಸಿದ ಅರಸನಿಗೋಸ್ಕರ ವಿಶೇಷ ರಕ್ಷಣೆಯನ್ನು ದಯಪಾಲಿಸುವವನಾಗಿದ್ದಾನೆ. ತಾನು ಅಭಿಷೇಕಿಸಿದ ದಾವೀದನಿಗೂ, ಅವನ ಸಂತತಿಯವರೆಗೆ ಸದಾಕಾಲವೂ ಕೃಪೆಯನ್ನು ಅನುಗ್ರಹಿಸುವವನಾಗಿದ್ದಾನೆ. [PE]