1. {#1ದಾವೀದನಿಗೆ ನಾತಾನನ ಮುಖಾಂತರ ಸಂದೇಶ } [PS]ಯೆಹೋವನು ನಾತಾನನನ್ನು ದಾವೀದನ ಬಳಿಗೆ ಕಳುಹಿಸಿದನು. ಅವನು ದಾವೀದನ ಹತ್ತಿರ ಬಂದು ಹೇಳಿದ್ದೇನೆಂದರೆ, “ಒಂದು ಊರಿನಲ್ಲಿ ಇಬ್ಬರು ಮನುಷ್ಯರಿದ್ದರು. ಒಬ್ಬನು ಐಶ್ವರ್ಯವಂತನು ಇನ್ನೊಬ್ಬನು ಬಡವನು.
2. ಐಶ್ವರ್ಯವಂತನಿಗೆ ಬಹಳ ಕುರಿದನಗಳಿದ್ದವು.
3. ಬಡವನಿಗೆ ಒಂದು ಹೆಣ್ಣು ಕುರಿಮರಿಯ ಹೊರತು ಬೇರೇನೂ ಇರಲಿಲ್ಲ. ಅವನು ಅದನ್ನು ಕೊಂಡುಕೊಂಡು ಸಾಕುತ್ತಿದ್ದನು. ಅದು ಮಗಳಂತೆ ಅವನ ಸಂಗಡಲೂ, ಅವನ ಮಕ್ಕಳ ಸಂಗಡಲೂ ಬೆಳೆಯುತ್ತಾ, ಅವರೊಡನೆ ರೊಟ್ಟಿ ತಿನ್ನುತ್ತಾ, ಅವರ ಪಾತ್ರೆಯಲ್ಲೇ ನೀರು ಕುಡಿಯುತ್ತಾ ಇತ್ತು. ಅವನ ಎದೆ ಮೇಲೆಯೇ ಒರಗಿಕೊಂಡು ನಿದ್ದೆ ಮಾಡುತ್ತಿತ್ತು.
4. ಒಂದು ದಿನ ಐಶ್ವರ್ಯವಂತನ ಮನೆಗೆ ಒಬ್ಬ ಪ್ರಯಾಣಿಕನು ಬಂದನು. ಆಗ ಐಶ್ವರ್ಯವಂತನು ತನ್ನ ಕುರಿದನಗಳಿಂದ ಏನೂ ತೆಗೆದುಕೊಳ್ಳಲು ಮನಸ್ಸಿಲ್ಲದೆ, ಆ ಬಡವನ ಹೆಣ್ಣುಕುರಿಮರಿಯನ್ನು ಹಿಡಿದು ಅತಿಥಿಗೋಸ್ಕರ ಅಡಿಗೆ ಮಾಡಿಸಿದನು” ಎಂದು ಹೇಳಿದನು.
5. ಇದನ್ನು ಕೇಳಿ ದಾವೀದನು ಆ ಮನುಷ್ಯನ ಮೇಲೆ ಬಹಳವಾಗಿ ಕೋಪಗೊಂಡು ನಾತಾನನಿಗೆ, “ಯೆಹೋವನ ಆಣೆ, ಆ ಮನುಷ್ಯನು ಸಾಯಲೇಬೇಕು.
6. ಅವನು ಕರುಣೆಯಿಲ್ಲದೆ ಹೀಗೆ ಮಾಡಿದ್ದರಿಂದ ಆ ಕುರಿಮರಿಗಾಗಿ ನಾಲ್ಕರಷ್ಟು ಹಿಂದಕ್ಕೆ ಕೊಡಬೇಕು” ಎಂದನು. [PE]
7. [PS]ಆಗ ನಾತಾನನು ದಾವೀದನನ್ನು ನೋಡಿ, “ಆ ಮನುಷ್ಯನು ನೀನೇ. ಇಸ್ರಾಯೇಲಿನ ದೇವರಾದ ಯೆಹೋವನು ನಿನಗೆ ಹೇಳುವುದೇನೆಂದರೆ, ‘ನಿನ್ನನ್ನು ಅಭಿಷೇಕಿಸಿ ಇಸ್ರಾಯೇಲ್ಯರಿಗೆ ಅರಸನನ್ನಾಗಿ ಮಾಡಿದವನು, ಸೌಲನ ಕೈಗೆ ಸಿಕ್ಕದಂತೆ ತಪ್ಪಿಸಿದವನು ನಾನೇ.
8. ಇದಲ್ಲದೆ ನಾನು ನಿನಗೆ ನಿನ್ನ ಯಜಮಾನನ ಮನೆಯನ್ನು ಒಪ್ಪಿಸಿದೆನು. ಅವನ ಹೆಂಡತಿಯರನ್ನು ನಿನ್ನ ಮಗ್ಗುಲಿಗೆ ಕೊಟ್ಟೆನು. ಇಸ್ರಾಯೇಲ್ ಹಾಗೂ ಯೆಹೂದ ಕುಲಗಳನ್ನು ನಿನಗೆ ವಶಪಡಿಸಿದೆನು. ಇದೂ ಸಾಕಾಗಾದೆ ಹೋಗಿದ್ದರೆ ನಾನು ನಿನಗೆ ಇನ್ನೂ ಬೇಕಾದದ್ದನ್ನು ಕೊಡುತ್ತಿದ್ದೆನು.
9. ಹೀಗಿರಲು ನೀನು ಯೆಹೋವನಾದ ನನ್ನ ಆಜ್ಞೆಯನ್ನು ತಿರಸ್ಕರಿಸಿ, ನನ್ನ ದೃಷ್ಟಿಯಲ್ಲಿ ಅನೀತಿಯನ್ನು ಕೆಟ್ಟದ್ದಾಗಿರುವುದನ್ನು ಮಾಡಿದ್ದೇನು? ನೀನು ಹಿತ್ತಿಯನಾದ ಊರೀಯನನ್ನು ಕತ್ತಿಯಿಂದ ಕೊಲ್ಲಿಸಿ, ಅವನ ಹೆಂಡತಿಯನ್ನು ನಿನ್ನ ಹೆಂಡತಿಯನ್ನಾಗಿ ತೆಗೆದುಕೊಂಡಿರುವೆ.
10. ನೀನು ನನ್ನ ಆಜ್ಞೆಯನ್ನು ತಿರಸ್ಕರಿಸಿದ್ದರಿಂದಲೂ, ಹಿತ್ತಿಯನಾದ ಊರೀಯನನ್ನು ಅಮ್ಮೋನಿಯರ ಕತ್ತಿಯಿಂದ ಕೊಲ್ಲಿಸಿ, ಅವನ ಹೆಂಡತಿಯನ್ನು ನಿನ್ನ ಹೆಂಡತಿಯನ್ನಾಗಿ ತೆಗೆದುಕೊಂಡದ್ದರಿಂದಲೂ, ನೀತಿಯ ಕತ್ತಿಯು ನಿನ್ನ ಮನೆಯನ್ನು ಬಿಟ್ಟು ಹೋಗುವುದಿಲ್ಲ.
11. ಯೆಹೋವನಾದ ನನ್ನ ಮಾತನ್ನು ಕೇಳು. ನಾನು ನಿನ್ನ ಮನೆಯವರಿಂದಲೇ ನಿನಗೆ ಕೇಡು ಉಂಟಾಗುವಂತೆ ಮಾಡುವೆನು. ನಿನ್ನ ಹೆಂಡತಿಯರನ್ನು ತೆಗೆದು ನಿನ್ನೆದುರಿನಲ್ಲಿಯೇ ಇನ್ನೊಬ್ಬನಿಗೆ ಕೊಡುವೆನು. ಅವನು ಹಗಲಿನಲ್ಲಿಯೇ ಅವರ ಕೂಡ ಮಲಗುವನು. ನೀನು ಅದನ್ನು ಗುಪ್ತವಾಗಿ ಮಾಡಿರುವೆ.
12. ನಾನು ಹೇಳುವ ಮಾತಾದರೋ ಎಲ್ಲಾ ಇಸ್ರಾಯೇಲ್ಯರ ಮುಂದೆ ಹಗಲಿನಲ್ಲೇ ನೆರವೇರುವುದು’ ” ಎಂದನು. [PE]
13. {#1ದಾವೀದನ ಪಶ್ಚಾತ್ತಾಪ } [PS]ಆಗ ದಾವೀದನು ನಾತಾನನಿಗೆ, “ನಾನು ಯೆಹೋವನಿಗೆ ವಿರುದ್ಧವಾಗಿ ಪಾಪ ಮಾಡಿದ್ದೇನೆ” ಎಂದು ಹೇಳಿದನು. ನಾತಾನನು ಅವನಿಗೆ “ಯೆಹೋವನು ನಿನ್ನ ಪಾಪವನ್ನು ಕ್ಷಮಿಸಿದ್ದಾನೆ, ನೀನು ಸಾಯುವುದಿಲ್ಲ.
14. ಆದರೂ ನೀನು ಈ ಕೃತ್ಯದಿಂದ ಯೆಹೋವನ ವೈರಿಗಳು ಆತನನ್ನು ಬಹಳವಾಗಿ ನಿಂದಿಸುವುದಕ್ಕೆ ಆಸ್ಪದ ಕೊಟ್ಟಿದ್ದರಿಂದ ನಿನ್ನಿಂದ ಹುಟ್ಟಿರುವ ಮಗುವು ಸತ್ತೇ ಹೋಗುವುದು” ಎಂದು ಹೇಳಿ ಮನೆಗೆ ಹೊರಟುಹೋದನು.
15. ಊರೀಯನ ಹೆಂಡತಿಯಲ್ಲಿ ದಾವೀದನಿಗೆ ಹುಟ್ಟಿದ ಮಗು ಯೆಹೋವನ ಪೆಟ್ಟಿನಿಂದ ಬಹಳವಾಗಿ ಅಸ್ವಸ್ಥವಾಯಿತು. [PE]
16. [PS]ದಾವೀದನು ಮಗುವಿಗೋಸ್ಕರ ದೇವರನ್ನು ಪ್ರಾರ್ಥಿಸುತ್ತಾ, ಉಪವಾಸ ಮಾಡುತ್ತಾ, ಒಳಗಿನ ಕೋಣೆಗೆ ಹೋಗಿ ರಾತ್ರಿಯೆಲ್ಲಾ ನೆಲದ ಮೇಲೆಯೇ ಬಿದ್ದುಕೊಂಡಿದ್ದನು.
17. ಅವನ ಮನೆಯ ಹಿರಿಯ ಸೇವಕರು ಅವನನ್ನು ಎಬ್ಬಿಸುವುದಕ್ಕೆ ಹೋದರು. ಆದರೆ ಅವನು ಏಳಲೇ ಇಲ್ಲ. ಅವರೊಡನೆ ಆಹಾರ ತೆಗೆದುಕೊಳ್ಳಲೂ ಇಲ್ಲ.
18. ಏಳನೆಯ ದಿನ ಮಗು ಸತ್ತುಹೋಯಿತು. ಅವನ ಸೇವಕರು ಭಯಪಟ್ಟು ಈ ವರ್ತಮಾನವನ್ನು ದಾವೀದನಿಗೆ ತಿಳಿಸಲಿಲ್ಲ. ಅವರು, “ಹುಡುಗನು ಜೀವದಿಂದಿದ್ದಾಗಲೇ ಅವನು ನಮ್ಮ ಸಂತೈಸುವಿಕೆಯನ್ನು ಲಕ್ಷಿಸಲಿಲ್ಲ. ಹೀಗಿರುವಲ್ಲಿ ಮಗುವಿನ ಮರಣದ ವಾರ್ತೆಯನ್ನು ಅವನಿಗೆ ತಿಳಿಸಿದರೆ ಅವನು ತನಗೆ ಏನಾದರೂ ಕೇಡುಮಾಡಿಕೊಂಡಾನಲ್ಲವೇ” ಎಂದು ಮಾತನಾಡಿಕೊಳ್ಳುತ್ತಿದ್ದರು.
19. ಸೇವಕರು ಈ ಪ್ರಕಾರ ಪಿಸುಗುಟ್ಟುವುದನ್ನು ಕಂಡು ದಾವೀದನು, ಮಗು ಸತ್ತು ಹೋಯಿತೆಂದು ತಿಳಿದು ಸೇವಕರನ್ನು, “ಮಗು ಸತ್ತುಹೋಯಿತೋ?” ಎಂದು ಕೇಳಿದನು. ಅವರು, “ಹೌದು ಸತ್ತುಹೋಯಿತು” ಎಂದು ಉತ್ತರ ಕೊಟ್ಟರು
20. ಆಗ ದಾವೀದನು ನೆಲದಿಂದೆದ್ದು, ಸ್ನಾನ ಮಾಡಿ, ತೈಲ ಹಚ್ಚಿಕೊಂಡು, ತನ್ನ ಬಟ್ಟೆಗಳನ್ನು ಬದಲಿಸಿ, ಯೆಹೋವನ ಮಂದಿರಕ್ಕೆ ಹೋಗಿ ಆರಾಧನೆ ಮಾಡಿದನು. ಅನಂತರ ಮನೆಗೆ ಬಂದು ಆಹಾರ ತರಿಸಿ ಊಟಮಾಡಿದನು.
21. ಇದನ್ನು ನೋಡಿ ಅವನ ಸೇವಕರು ಅವನಿಗೆ, “ಇದೇನು ನೀನು ಮಾಡಿದ್ದು? ಹುಡುಗನು ಜೀವದಿಂದಿದ್ದಾಗ ಅಳುತ್ತಾ ಉಪವಾಸಮಾಡಿದ್ದೀ. ಹುಡುಗನು ಸತ್ತ ನಂತರ ಎದ್ದು ಊಟ ಮಾಡಿರುವೆ” ಎಂದರು.
22. ದಾವೀದನು ಅವರಿಗೆ, “ಹುಡುಗನು ಜೀವದಿಂದಿದ್ದಾಗ ಒಂದು ವೇಳೆ ಯೆಹೋವನು ಕೃಪೆಮಾಡಿ ಅವನನ್ನು ಉಳಿಸಾನು ಅಂದುಕೊಂಡು ಉಪವಾಸ ಮಾಡಿದೆನು, ಅತ್ತೆನು.
23. ಈಗ ಸತ್ತುಹೋದನಲ್ಲಾ. ನಾನೇಕೆ ಉಪವಾಸಮಾಡಬೇಕು? ಅವನನ್ನು ಹಿಂದಕ್ಕೆ ತರುವುದು ನನ್ನಿಂದಾದೀತೆ? ನಾನಾಗಿ ಅವನ ಬಳಿಗೆ ಹೋಗಬೇಕೇ ಹೊರತು ಅವನು ನನ್ನ ಬಳಿಗೆ ಬರುವುದಿಲ್ಲ” ಎಂದು ಉತ್ತರ ಕೊಟ್ಟನು. [PE]
24. {#1ಸೊಲೊಮೋನನ ಜನನ } [PS]ದಾವೀದನು ತನ್ನ ಹೆಂಡತಿಯಾದ ಬತ್ಷೆಬೆಯ ಬಳಿಗೆ ಹೋಗಿ ಆಕೆಯನ್ನು ಸಂತೈಸಿ ಆಕೆಯ ಸಂಗಡ ಮಲಗಿದನು. ಆಕೆಯು ಒಬ್ಬ ಮಗನನ್ನು ಹೆತ್ತಾಗ ದಾವೀದನು ಅವನಿಗೆ “ಸೊಲೊಮೋನನು” ಎಂದು ಹೆಸರಿಟ್ಟನು. ಯೆಹೋವನು ಅವನನ್ನು ಪ್ರೀತಿಸಿದನು.
25. ಪ್ರವಾದಿಯಾದ ನಾತಾನನು ಯೆಹೋವನು ತನಗೆ ಆಜ್ಞಾಪಿಸಿದಂತೆ ಯೆಹೋವನ ಪ್ರೀತಿಯ ನಿಮಿತ್ತ ಆ ಹುಡುಗನಿಗೆ “[* ಅಂದರೆ ಯೆಹೋವನಿಗೆ ಪ್ರಿಯನು. ]ಯೆದೀದ್ಯ” ಎಂದು ಹೆಸರಿಟ್ಟನು. [PE]
26. {#1ದಾವೀದನು ರಬ್ಬ ಪಟ್ಟಣವನ್ನು ವಶಮಾಡಿಕೊಂಡದ್ದು } [PS]ಯೋವಾಬನು ಅಮ್ಮೋನಿಯರ ಪಟ್ಟಣವಾದ ರಬ್ಬಕ್ಕೆ ಮುತ್ತಿಗೆ ಹಾಕಿ ಅರಮನೆಯಿದ್ದ ಭಾಗವನ್ನು ಸ್ವಾಧೀನಮಾಡಿಕೊಂಡನು.
27. ಯೋವಾಬನು ದಾವೀದನಿಗೆ ದೂತರ ಮುಖಾಂತರವಾಗಿ, “ನಾನು ರಬ್ಬಕ್ಕೆ ಮುತ್ತಿಗೆ ಹಾಕಿ, ಹೊಳೆಯ ಬಳಿಯಲ್ಲಿರುವ ಭಾಗವನ್ನು ಸ್ವಾಧೀನ ಮಾಡಿಕೊಂಡಿದ್ದೇನೆ.
28. ನೀನು ಬೇಗನೆ ಉಳಿದ ಸೈನ್ಯವನ್ನು ಕೂಡಿಸಿಕೊಂಡು ಬಂದು ಪಟ್ಟಣಕ್ಕೆ ಮುತ್ತಿಗೆ ಹಾಕಿ, ಉಳಿದ ಭಾಗವನ್ನು ಸ್ವಾಧೀನಪಡಿಸಿಕೋ, ಅದನ್ನು ನಾನೇ ಹಿಡಿದರೆ ಅದಕ್ಕೆ ನನ್ನ ಹೆಸರು ಬರುವುದು” ಎಂದು ಹೇಳಿ ಕಳುಹಿಸಿದನು. [PE]
29. [PS]ಆಗ ದಾವೀದನು ಜನರೆಲ್ಲರನ್ನು ಕೂಡಿಸಿಕೊಂಡು ಹೋಗಿ, ರಬ್ಬಕ್ಕೆ ಮುತ್ತಿಗೆ ಹಾಕಿ ಅದನ್ನು ವಶಮಾಡಿಕೊಂಡನು.
30. ಇದಲ್ಲದೆ ಅವನು ಮಲ್ಕಾಮ ಮೂರ್ತಿಯ ತಲೆಯ ಮೇಲಿದ್ದ ಬಂಗಾರದ ಕಿರೀಟವನ್ನು ತೆಗೆದುಕೊಂಡನು. ಅದು ನಾಲ್ಕು ಸಾವಿರ ತೊಲೆ[† ನಾಲ್ಕು ಸಾವಿರ ತೊಲೆ ಸುಮಾರು 34 ಕಿಲೋಗ್ರಾಂ. ] ತೂಕವುಳ್ಳದ್ದಾಗಿತ್ತು. ಅಲ್ಲದೆ ಅದರಲ್ಲಿ ಅಮೂಲ್ಯರತ್ನವನ್ನು ಇರಿಸಲಾಗಿತ್ತು. ಅವರು ಅದನ್ನು ದಾವೀದನ ಶಿರಸ್ಸಿನ ಮೇಲಿರಿಸಿದರು. ಆ ಪಟ್ಟಣದಿಂದ ದೊಡ್ಡ ಕೊಳ್ಳೆಯನ್ನು ತೆಗೆದುಕೊಂಡು ಹೋದರು.
31. ಊರಿನ ನಿವಾಸಿಗಳನ್ನು ಹಿಡಿದು ಗರಗಸ, ಗುದ್ದಲಿ, ಕೊಡಲಿಗಳಿಂದ ಮಾಡುವ ಕೆಲಸಮಾಡುವುದಕ್ಕೂ ಇಟ್ಟಿಗೆಗಳನ್ನು ಮಾಡುವುದಕ್ಕೂ ಹಚ್ಚಿದರು. ಅಮ್ಮೋನಿಯರ ಎಲ್ಲಾ ಪಟ್ಟಣದವರಿಗೂ ಇದೇ ಗತಿಯಾಯಿತು. ಅನಂತರ ದಾವೀದನು ಎಲ್ಲಾ ಸೈನಿಕರೊಡನೆ ಯೆರೂಸಲೇಮಿಗೆ ಹೋದನು. [PE]