1. ಆಗ ಎಲೀಷನು ಅವನಿಗೆ, “ಯೆಹೋವನ ವಾಕ್ಯವನ್ನು ಕೇಳು, ಆತನು, ‘ನಾಳೆ ಈ ಹೊತ್ತಿಗೆ ಸಮಾರ್ಯ ಪಟ್ಟಣದ ಬಾಗಿಲಿನಲ್ಲಿ ಗೋದಿಹಿಟ್ಟು ರೂಪಾಯಿಗೆ ಹನ್ನೆರಡು ಸೇರಿನಂತೆಯೂ, ಜವೆಗೋದಿಯು ಇಪ್ಪತ್ತನಾಲ್ಕು ಸೇರಿನಂತೆಯೂ ಮಾರಲ್ಪಡುವುದು’ ” ಎನ್ನುತ್ತಾನೆ ಎಂದು ಹೇಳಿದನು.
2. ಇದನ್ನು ಕೇಳಿ ಅರಸನ ಸಮೀಪವರ್ತಿಯಾದ ಸರದಾರನು ದೇವರ ಮನುಷ್ಯನಿಗೆ, “ಯೆಹೋವನು ಆಕಾಶದಲ್ಲಿ ಕಿಂಡಿಗಳನ್ನು ಕೊರೆದರೂ ಇದು ಸಂಭವಿಸಲಾರದು” ಎನ್ನಲು ಎಲೀಷನು ಅವನಿಗೆ, “ಅದು ಸಂಭವಿಸುವುದನ್ನು ನೀನು ಕಣ್ಣಾರೆ ಕಾಣುವಿ, ಆದರೆ ನೀನು ಅದನ್ನು ಅನುಭವಿಸುವುದಿಲ್ಲ” ಎಂದು ಹೇಳಿದನು. [PS]
3. {ಅರಾಮ್ಯರ ಪಲಾಯನ} [PS] ಊರುಬಾಗಿಲಿನ ಹತ್ತಿರ ನಾಲ್ಕು ಮಂದಿ ಕುಷ್ಠರೋಗಿಗಳಿದ್ದರು. ಅವರು ತಮ್ಮೊಳಗೆ, “ನಾವು ಸಾಯುವ ತನಕ ಇಲ್ಲೇ ಕುಳಿತಿರಬೇಕೋ?
4. ಪಟ್ಟಣದೊಳಗೆ ಬರವಿರುವುದರಿಂದ ಅಲ್ಲಿ ಹೋದರೂ ಸಾಯಬೇಕು, ಇಲ್ಲಿಯೇ ಕುಳಿತಿದ್ದರೂ ಸಾಯಬೇಕು. ಆದುದರಿಂದ ಹೊರಟುಹೋಗಿ ಅರಾಮ್ಯರ ಪಾಳೆಯವನ್ನು ಸೇರೋಣ. ಅವರು ನಮ್ಮನ್ನು ಉಳಿಸುವುದಾದರೆ ಉಳಿಸಲಿ, ಕೊಲ್ಲುವುದಾದರೆ ಕೊಲ್ಲಲಿ” ಎಂದು ಮಾತನಾಡಿಕೊಂಡರು. [PE][PS]
5. ಅವರು ಸಾಯಂಕಾಲವಾಗಲು ಅರಾಮ್ಯರ ಪಾಳೆಯಕ್ಕೆ ಹೊರಟರು. ಅವರು ಪಾಳೆಯದ ಅಂಚಿಗೆ ಬಂದಾಗ ಅಲ್ಲಿ ಒಬ್ಬನೂ ಕಾಣಿಸಲಿಲ್ಲ.
6. ಕರ್ತನು ಅರಾಮ್ಯರ ಪಾಳೆಯದವರಿಗೆ ರಥರಥಾಶ್ವಸಹಿತವಾದ ಮಹಾಸೈನ್ಯಘೋಷವು ಕೇಳಿಸುವಂತೆ ಮಾಡಿದ್ದರಿಂದ ಅವರು, “ಇಸ್ರಾಯೇಲರ ಅರಸನು ಹಿತ್ತಿಯ, ಐಗುಪ್ತ ಇವುಗಳ ಅರಸರಿಗೆ ಹಣಕೊಟ್ಟು ಅವರನ್ನು ನಮಗೆ ವಿರುದ್ಧವಾಗಿ ಕರೆದುತಂದಿದ್ದಾರೆ” ಅಂದುಕೊಂಡು,
7. ತಮ್ಮ ಗುಡಾರಗಳನ್ನೂ, ಕತ್ತೆ ಕುದುರೆಗಳನ್ನೂ ಪಾಳೆಯದಲ್ಲಿದ್ದುದ್ದೆಲ್ಲವನ್ನೂ ಬಿಟ್ಟು ತಮ್ಮ ಜೀವರಕ್ಷಣೆಗಾಗಿ ಅದೇ ಸಾಯಂಕಾಲದಲ್ಲಿ ಓಡಿಹೋಗಿದ್ದರು.
8. ಆ ಕುಷ್ಠರೋಗಿಗಳು ಪಾಳೆಯದ ಅಂಚಿಗೆ ಬಂದಾಗ ಮೊದಲನೆಯ ಡೇರೆಯನ್ನು ಹೊಕ್ಕು ಉಂಡು, ಕುಡಿದು ಅದರಲ್ಲಿದ್ದ ಬೆಳ್ಳಿ ಬಂಗಾರವನ್ನೂ, ಬಟ್ಟೆಗಳನ್ನೂ ತೆಗೆದುಕೊಂಡು ಅಡಗಿಸಿಟ್ಟರು. ಇನ್ನೊಂದು ಡೇರೆಯನ್ನು ಹೊಕ್ಕು ಅಲ್ಲಿಂದಲೂ ತೆಗೆದುಕೊಂಡು ಅಡಗಿಸಿಟ್ಟರು. [PE][PS]
9. ಅನಂತರ ಅವರು, “ಇದು ಶುಭವಾರ್ತೆಯ ದಿನವಾಗಿದೆ. ನಾವು ಇದನ್ನು ಪ್ರಕಟಿಸದಿರುವುದು ಒಳ್ಳೇಯದಲ್ಲ. ಬೆಳಗಾಗುವವರೆಗೆ ತಡಮಾಡಿದರೆ ಶಿಕ್ಷೆಗೆ ಪಾತ್ರರಾದೇವು. ಆದುದರಿಂದ ಹೋಗಿ ಅರಸನಿಗೆ ಈ ಸಂಗತಿ ತಿಳಿಸೋಣ” ಎಂದು ಮಾತನಾಡಿಕೊಂಡು ಅಲ್ಲಿಂದ ಹೊರಟರು.
10. ಊರಬಾಗಿಲಿಗೆ ಬಂದು ಕಾವಲುಗಾರರಿಗೆ, “ನಾವು ಅರಾಮ್ಯರ ಪಾಳೆಯಕ್ಕೆ ಹೋಗಿದ್ದೆವು. ಅಲ್ಲಿ ನಮಗೆ ಯಾರೂ ಕಾಣಿಸಲಿಲ್ಲ, ಮನುಷ್ಯರ ಶಬ್ದವೇ ಕೇಳಿಸಲಿಲ್ಲ. ಕತ್ತೆ ಕುದುರೆಗಳನ್ನು ಅಲ್ಲಲ್ಲಿ ಕಟ್ಟಿಹಾಕಲಾಗಿತ್ತು ಡೇರೆಗಳು ಇದ್ದ ಹಾಗೆಯೇ ಇವೆ” ಎಂದು ಕೂಗಿ ಹೇಳಿದರು.
11. ಬಾಗಿಲು ಕಾಯುವವರು ಕೂಡಲೆ ಅರಸನ ಮನೆಯವರನ್ನು ಕೂಗಿ, ಅವರಿಗೆ ಈ ವರ್ತಮಾನವನ್ನು ತಿಳಿಸಿದರು. [PE][PS]
12. ಅರಸನು ರಾತ್ರಿಯಲ್ಲೇ ಎದ್ದು ತನ್ನ ಪರಿವಾರದವರಿಗೆ, “ಅರಾಮ್ಯರ ಉಪಾಯವನ್ನು ಹೇಳುತ್ತೇನೆ ಕೇಳಿರಿ; ನಾವು ಹಸಿವೆಯಿಂದ ಸಾಯುವವರಾಗಿದ್ದೇವೆ ಎಂಬುವುದನ್ನು ಅವರು ಬಲ್ಲರು. ಆದುದರಿಂದ ಪಾಳೆಯವನ್ನು ಬಿಟ್ಟು ಹೋಗಿ ಅಡವಿಯಲ್ಲಿ ಅಡಗಿಕೊಂಡಿದ್ದಾರೆ. ನಾವು ಪಟ್ಟಣದಿಂದ ಹೊರಗೆ ಹೋದ ಕೂಡಲೆ ನಮ್ಮನ್ನು ಜೀವ ಸಹಿತವಾಗಿ ಹಿಡಿದು ಪಟ್ಟಣವನ್ನು ಪ್ರವೇಶಿಸಬೇಕೆಂದಿದ್ದಾರೆ” ಎಂದನು.
13. ಆಗ ಅವರಲ್ಲೊಬ್ಬನು ಅರಸನಿಗೆ, “ರಾಹುತರು ಪಟ್ಟಣದಲ್ಲಿ ಉಳಿದಿರುವ ಕುದುರೆಗಳಲ್ಲಿ ನಾಲ್ಕೈದು ಕುದುರೆಗಳನ್ನು ತೆಗೆದುಕೊಂಡು ನೋಡುವುದಕ್ಕೆ ಹೋಗಲಿ; ಅವರಿಗೆ ಪಟ್ಟಣದಲ್ಲಿ ಉಳಿದಿರುವ ಇಸ್ರಾಯೇಲರ ಗತಿಯಾಗಲಿ, ಸತ್ತುಹೋದವರ ಗತಿಯಾಗಲಿ, ಸಂಭವಿಸುವುದಷ್ಟೆ” ಎಂದು ಹೇಳಿದನು. [PE][PS]
14. ಕೂಡಲೆ ಅರಸನು ಎರಡು ಜೋಡಿ ಕುದುರೆಗಳನ್ನು ತರಿಸಿ, ಅರಾಮ್ಯರ ಸೈನ್ಯವು ಎಲ್ಲಿರುತ್ತದೆ ಎಂಬುವುದನ್ನು ನೋಡಿ, ಬರುವುದಕ್ಕಾಗಿ ರಾಹುತರನ್ನು ಕಳುಹಿಸಿದನು.
15. ಅವರು ಯೊರ್ದನ್ ನದಿಯವರೆಗೂ ಹೋಗಿ, ಅವಸರದಿಂದ ಓಡಿಹೋದ ಅರಾಮ್ಯರು ದಾರಿಯಲ್ಲೆಲ್ಲಾ ತಮ್ಮ ಬಟ್ಟೆಗಳನ್ನು ಸಾಮಾನುಗಳನ್ನು ಬಿಸಾಡಿದ್ದನ್ನೂ ಕಂಡು, ಹಿಂದಿರುಗಿ ಬಂದು ಅರಸನಿಗೆ ತಿಳಿಸಿದರು. [PE][PS]
16. ಆಗ ಜನರು ಹೊರಗೆ ಹೋಗಿ ಅರಾಮ್ಯರ ಪಾಳೆಯವನ್ನು ಸೂರೆಮಾಡಿಬಿಟ್ಟರು. ಯೆಹೋವನ ಮಾತಿನಂತೆ ಗೋದಿಹಿಟ್ಟು ರೂಪಾಯಿಗೆ ಹನ್ನೆರಡು ಸೇರಿನಂತೆಯೂ, ಜವೆಗೋದಿಯು ಇಪ್ಪತ್ತನಾಲ್ಕು ಸೇರಿನಂತೆಯೂ ಮಾರಲ್ಪಟ್ಟವು.
17. ಅರಸನು ತನ್ನ ಸಹವರ್ತಿಯಾದ ಸರದಾರನನ್ನು ಊರಬಾಗಿಲು ಕಾಯುವುದಕ್ಕಾಗಿ ಕಳುಹಿಸಿದ್ದರಿಂದ, ಅವನು ಜನರಿಂದ ತುಳಿಯಲ್ಪಟ್ಟು ಸತ್ತು ಹೋದನು. ಹೀಗೆ ದೇವರ ಮನುಷ್ಯನು ಅರಸನ ಜೊತೆಯಲ್ಲಿ, ತನ್ನ ಬಳಿಗೆ ಬಂದಿದ್ದ ಆ ಸರದಾರನಿಗೆ ಹೇಳಿದ ಮಾತು ನೆರವೇರಿತು. [PE][PS]
18. ದೇವರ ಮನುಷ್ಯನು ಅರಸನಿಗೆ, “ನಾಳೆ ಇಷ್ಟು ಹೊತ್ತಿಗೆ ಸಮಾರ್ಯ ಪಟ್ಟಣದ ಬಾಗಿಲಿನಲ್ಲಿ ಗೋದಿಹಿಟ್ಟು ರೂಪಾಯಿಗೆ ಹನ್ನೆರಡು ಸೇರಿನಂತೆಯೂ ಜವೆಗೋದಿಯು ಇಪ್ಪತ್ತನಾಲ್ಕು ಸೇರಿನಂತೆಯೂ ಮಾರಲ್ಪಡುವವು” ಎಂದು ಹೇಳಿದನು.
19. ಆ ಸರದಾರನು ದೇವರ ಮನುಷ್ಯನಿಗೆ, “ಯೆಹೋವನು ಆಕಾಶದಲ್ಲಿ ಕಿಂಡಿಗಳನ್ನು ಕೊರೆದರೂ, ಇದು ಸಂಭವಿಸಲು ಸಾಧ್ಯವಿಲ್ಲ?” ಎಂದು ಹೇಳಿದ್ದನು. ಆಗ ದೇವರ ಮನುಷ್ಯನಾದ ಎಲೀಷನು ಅವನಿಗೆ, “ನೀನು, ಅದನ್ನು ಕಣ್ಣಾರೆ ಕಾಣುವಿ, ಆದರೆ ಅದನ್ನು ಅನುಭವಿಸುವುದಿಲ್ಲ” ಎಂದು ನುಡಿದಿದ್ದನು.
20. ಅವನು ಊರುಬಾಗಿಲಿನಲ್ಲಿ ಜನರಿಂದ ತುಳಿಯಲ್ಪಟ್ಟು ಮರಣ ಹೊಂದಿದನು. ಎಲೀಷನು ಹೇಳಿದ ಈ ಮಾತು ನೆರವೇರಿತು. [PE]