1. {#1ಯೆಹೂದದ ಅರಸನಾದ ಯೋಷೀಯನು } [PS]ಯೋಷೀಯನು ಅರಸನಾದಾಗ ಎಂಟು ವರ್ಷದವನಾಗಿದ್ದು ಯೆರೂಸಲೇಮಿನಲ್ಲಿ ಮೂವತ್ತೊಂದು ವರ್ಷ ಆಳಿದನು. ಬೊಚ್ಕತೂರಿನವಳೂ ಅದಾಯನ ಮಗಳೂ ಆದ ಯೆದೀದಾ ಎಂಬಾಕೆಯು ಅವನ ತಾಯಿ.
2. ಅರಸನಾದ ಯೋಷೀಯನು ಯೆಹೋವನನ್ನು ಬಿಟ್ಟು ಎಡಕ್ಕಾಗಲಿ ಬಲಕ್ಕಾಗಲಿ ತಿರುಗಿಕೊಳ್ಳದೆ ತನ್ನ ಪೂರ್ವಜನಾದ ದಾವೀದನ ಮಾರ್ಗದಲ್ಲಿಯೇ ನಡೆದು ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿ ನಡೆದನು. [PE]
3. [PS]ಅರಸನಾದ ಯೋಷೀಯನು ತನ್ನ ಆಳ್ವಿಕೆಯ ಹದಿನೆಂಟನೆಯ ವರ್ಷದಲ್ಲಿ ಅಚಲ್ಯನ ಮಗನೂ, ಮೆಷುಲ್ಲಾಮನ ಮೊಮ್ಮಗನೂ, ಯೆಹೋವನ ಆಲಯದ ಲೇಖಕನೂ[* ಲೇಖಕನೂ ಕಾರ್ಯದರ್ಶಿ. ] ಆದ ಶಾಫಾನನನ್ನು ಕರೆದು ಅವನಿಗೆ,
4. “ನೀನು ಮಹಾಯಾಜಕನಾದ ಹಿಲ್ಕೀಯನ ಬಳಿಗೆ ಹೋಗಿ, ಅವನಿಗೆ ದ್ವಾರಪಾಲಕರು ಯೆಹೋವನ ಆಲಯಕ್ಕೆ ಬರುವ ಜನರಿಂದ ಕೂಡಿಸಿದ ಹಣವನ್ನು ಲೆಕ್ಕಿಸಬೇಕು,
5. ಅದಲ್ಲದೆ ಆಲಯದ ಕೆಲಸಮಾಡಿಸುವ ಮುಖ್ಯಸ್ಥರಿಗೆ ಅದನ್ನು ಒಪ್ಪಿಸು ಎಂದು ಹೇಳಬೇಕು, ಮುಖ್ಯಸ್ಥರು ಅದನ್ನು ಯೆಹೋವನ ಆಲಯದ ದುರಸ್ತಿ ಕೆಲಸಕ್ಕೆ ಉಪಯೋಗಿಸಲಿ,
6. ಬಡಗಿ, ಶಿಲ್ಪಿ, ಮೇಸ್ತ್ರಿ ಮೊದಲಾದವರ ಸಂಬಳಕ್ಕಾಗಿಯೂ, ದೇವಾಲಯಕ್ಕೆ ಬೇಕಾದ ಮರ, ಕೆತ್ತಿದ ಕಲ್ಲು ಇವುಗಳನ್ನು ಕೊಂಡುಕೊಳ್ಳುವುದಕ್ಕಾಗಿಯೂ ಅದನ್ನು ಉಪಯೋಗಿಸಿಕೊಳ್ಳಲಿ,
7. ಅವರು ನಂಬಿಗಸ್ತರಾಗಿರುವುದರಿಂದ ಅವರ ವಶಕ್ಕೆ ಕೊಡಲ್ಪಡುವ ಹಣದ ಲೆಕ್ಕವನ್ನು ಕೇಳಬಾರದು” ಎಂದು ಆಜ್ಞಾಪಿಸಿ ಅವನನ್ನು ಯೆಹೋವನ ಆಲಯಕ್ಕೆ ಕಳುಹಿಸಿದನು. [PE]
8. {#1ಧರ್ಮೋಪದೇಶಗ್ರಂಥವು ದೊರೆತದ್ದು } [PS]ಪ್ರಧಾನ ಯಾಜಕನಾದ ಹಿಲ್ಕೀಯನು ಲೇಖಕನಾದ ಶಾಫಾನನಿಗೆ, “ಯೆಹೋವನ ಆಲಯದಲ್ಲಿ ನನಗೆ ಧರ್ಮೋಪದೇಶಗ್ರಂಥವು ಸಿಕ್ಕಿರುತ್ತದೆ” ಎಂದು ಹೇಳಿ, ಅದನ್ನು ಅವನ ಕೈಯಲ್ಲಿ ಕೊಟ್ಟನು. ಶಾಫಾನನು ಅದನ್ನು ಓದಿದನು.
9. ಅನಂತರ ಲೇಖಕನಾದ ಶಾಫಾನನು ಹಿಂತಿರುಗಿ ಅರಸನ ಬಳಿಗೆ ಹೋಗಿ, “ನಿನ್ನ ಸೇವಕರು ಯೆಹೋವನ ದೇವಾಲಯದಲ್ಲಿ ಸಂಗ್ರಹವಾದ ಹಣವನ್ನು ತೆಗೆದು ದೇವಾಲಯದ ಕೆಲಸವನ್ನು ಮಾಡಿಸುವ ಮುಖ್ಯಸ್ಥರಿಗೆ ಒಪ್ಪಿಸಿದರು.
10. ಇದಲ್ಲದೆ, ಯಾಜಕನಾದ ಹಿಲ್ಕೀಯನು ಲೇಖಕನಾದ ಶಾಫಾನನಿಗೆ ಒಂದು ಗ್ರಂಥವನ್ನು ಕೊಟ್ಟಿದ್ದಾನೆ” ಎಂದು ಹೇಳಿ ಅದನ್ನು ಅರಸನ ಮುಂದೆ ಓದಿದನು. [PE]
11. [PS]ಅರಸನು ಧರ್ಮೋಪದೇಶಗ್ರಂಥದ ವಾಕ್ಯಗಳನ್ನು ಕೇಳಿದಾಗ, ಬಟ್ಟೆಗಳನ್ನು ಹರಿದುಕೊಂಡನು.
12. ಅರಸನು ಯಾಜಕನಾದ ಹಿಲ್ಕೀಯ, ಶಾಫಾನನ ಮಗನಾದ ಅಹೀಕಾಮ್, ಮೀಕಾಯನ ಮಗನಾದ ಅಕ್ಬೋರ್, ಲೇಖಕನಾದ ಶಾಫಾನ್, ತನ್ನ ಸಹಾಯಕನಾದ ಅಸಾಯ ಎಂಬುವವರಿಗೆ,
13. “ನಮ್ಮ ಪೂರ್ವಿಕರು ನಮಗೆ ಸಿಕ್ಕಿರುವ ಈ ಗ್ರಂಥದಲ್ಲಿನ ಧರ್ಮೋಪದೇಶ ವಾಕ್ಯಗಳಿಗೆ ಕಿವಿಗೊಡದೆಯೂ, ಅವುಗಳನ್ನು ಕೈಕೊಳ್ಳದೆಯೂ ಹೋದುದರಿಂದ ನಾವು ಯೆಹೋವನ ಉಗ್ರಕೋಪಕ್ಕೆ ಪಾತ್ರರಾಗಿದ್ದೇವೆ. ಆದುದರಿಂದ ನೀವು ನನಗಾಗಿಯೂ, ಜನರಿಗಾಗಿಯೂ, ಮತ್ತು ಎಲ್ಲಾ ಯೆಹೂದ್ಯರಿಗಾಗಿಯೂ ಯೆಹೋವನ ಬಳಿಗೆ ಹೋಗಿ ಈ ಗ್ರಂಥದಲ್ಲಿನ ಧರ್ಮೋಪದೇಶ ವಾಕ್ಯಗಳ ಕುರಿತಾಗಿ ವಿಚಾರಿಸಿರಿ” ಎಂದು ಆಜ್ಞಾಪಿಸಿದನು.
14. ಆಗ ಯಾಜಕನಾದ ಹಿಲ್ಕೀಯನು, ಅಹೀಕಾಮ್, ಅಕ್ಬೋರ್, ಶಾಫಾನ್, ಅಸಾಯ, ಎಂಬುವವರು “ಹುಲ್ದ” ಎಂಬ ಪ್ರವಾದಿನಿಯ ಬಳಿಗೆ ಹೋಗಿ ಆಕೆಯ ಹತ್ತಿರ ವಿಚಾರಿಸಿದರು. ಹರ್ಹಸನ ಮೊಮ್ಮಗನೂ, ತಿಕ್ವನ ಮಗನೂ, ಯಾಜಕವಸ್ತ್ರಾಗಾರದ[† ಯಾಜಕವಸ್ತ್ರಾಗಾರದ ಅಥವಾ ರಾಜವಸ್ತ್ರಾಗಾರದ. ] ಅಧಿಪತಿಯೂ ಆಗಿದ್ದ ಶಲ್ಲೂಮನು ಈಕೆಯ ಪತಿ. ಈಕೆಯು ಯೆರೂಸಲೇಮಿನ ಎರಡನೆಯ ಕೇರಿಯಲ್ಲಿ ವಾಸಿಸುತ್ತಿದ್ದಳು.
15. ಹುಲ್ದಳು ಅವರಿಗೆ, “ನಿಮ್ಮನ್ನು ಕಳುಹಿಸಿದವನಿಗೆ ಇಸ್ರಾಯೇಲರ ದೇವರಾದ ಯೆಹೋವನ ಮಾತನ್ನು ತಿಳಿಸಿರಿ.
16. ಯೆಹೋವನು, ‘ಈ ದೇಶದ ಮೇಲೆಯೂ ಮತ್ತು ಜನರ ಮೇಲೆಯೂ ಯೆಹೂದದ ಅರಸನು ಓದಿಸಿದ ಗ್ರಂಥದಲ್ಲಿ ಬರೆದಿರುವ ಎಲ್ಲಾ ಆಪತ್ತುಗಳನ್ನು ಬರಮಾಡುವನು.
17. ಅವರು ನನ್ನನ್ನು ಬಿಟ್ಟು ಅನ್ಯದೇವತೆಗಳಿಗೆ ಧೂಪಹಾಕಿ ತಮ್ಮ ದುಷ್ಕೃತ್ಯಗಳಿಂದ ನನ್ನನ್ನು ಕೋಪಗೊಳ್ಳುವಂತೆ ಮಾಡಿರುವುದರಿಂದ ನನ್ನ ಕೋಪಾಗ್ನಿಯು ಈ ದೇಶದ ಮೇಲೆ ಉರಿಯಹತ್ತಿದೆ, ಅದು ಆರಿಹೋಗುವುದೇ ಇಲ್ಲ’ ಎನ್ನುತ್ತಾನೆ.
18. ತಾನು ಕೇಳಿದ ವಾಕ್ಯಗಳ ವಿಷಯವಾಗಿ ಯೆಹೋವನ ಬಳಿಯಲ್ಲಿ ವಿಚಾರಿಸುವುದಕ್ಕೆ ನಿಮ್ಮನ್ನು ಕಳುಹಿಸಿದ ಯೆಹೂದದ ಅರಸನಿಗೆ ನೀವು ತಿಳಿಸಬೇಕಾದ ಇಸ್ರಾಯೇಲರ ದೇವರಾದ ಯೆಹೋವನ ಮಾತೇನೆಂದರೆ,
19. ‘ನಾನು ಈ ದೇಶವನ್ನೂ, ನಿವಾಸಿಗಳನ್ನೂ, ಶಾಪವಿಸ್ಮಯಗಳಿಗೆ ಗುರಿಮಾಡುವೆನೆಂಬುವುದನ್ನು ನೀನು ಕೇಳಿದಾಗ, ದುಃಖಪಟ್ಟು ಯೆಹೋವನಾದ ನನ್ನ ಮುಂದೆ ತಗ್ಗಿಸಿಕೊಂಡಿದ್ದರಿಂದಲೂ, ಬಟ್ಟೆಗಳನ್ನು ಹರಿದುಕೊಂಡು ಕಣ್ಣೀರು ಸುರಿಸಿದ್ದರಿಂದಲೂ ನಿನ್ನನ್ನು ಲಕ್ಷಿಸಿದೆನು’
20. ಆದುದರಿಂದ, ‘ನಾನು ಈ ದೇಶಕ್ಕೆ ಬರಮಾಡುವ ಶಿಕ್ಷೆಗಳಲ್ಲಿ ನೀನು ಒಂದನ್ನೂ ನೋಡದೆ ಸಮಾಧಾನದಿಂದ ಮರಣಹೊಂದಿ ಸಮಾಧಿ ಸೇರುವಂತೆ ಆಶೀರ್ವದಿಸುವೆನು’ ಎಂದು ಹೇಳಿದ್ದನ್ನು ತಿಳಿಸಿರಿ” ಎಂದು ಹೇಳಿದಳು. ಅವರು ಹಿಂದಿರುಗಿ ಬಂದು ಅರಸನಿಗೆ ಆ ಮಾತುಗಳನ್ನು ತಿಳಿಸಿದರು. [PE]