1. {#1ಹಿಜ್ಕೀಯನ ರೋಗ ನಿವಾರಣೆ } [PS]ಆ ಕಾಲದಲ್ಲಿ ಹಿಜ್ಕೀಯನನ್ನು ಮರಣಕರವಾದ ರೋಗವು ಬಾಧಿಸಿತು. ಆಗ ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನು ಅವನ ಬಳಿಗೆ ಬಂದು ಅವನಿಗೆ, “ ‘ನಿನ್ನ ಮನೆಯ ಕಾರ್ಯಗಳನ್ನೆಲ್ಲಾ ಕ್ರಮಪಡಿಸಿ ಸೂಕ್ತಮಾಡಿಕೋ, ನೀನು ಮರಣ ಹೊಂದುವಿ’ ಎಂದು ಯೆಹೋವನು ತಿಳಿಸಿದ್ದಾನೆ” ಎಂದು ಹೇಳಿದನು.
2. ಇದನ್ನು ಕೇಳಿದೊಡನೆ ಹಿಜ್ಕೀಯನು ಗೋಡೆಯ ಕಡೆಗೆ ತಿರುಗಿಕೊಂಡು ಯೆಹೋವನಿಗೆ ಪ್ರಾರ್ಥಿಸಿ, ಹೀಗೆ ವಿಜ್ಞಾಪಿಸಿಕೊಂಡನು.
3. “ಯೆಹೋವನೇ, ದಯವಿಟ್ಟು ನಾನು ನಂಬಿಗಸ್ತನಾಗಿಯೂ ನಿನಗೆ, ಪ್ರಾಮಾಣಿಕನಾಗಿಯೂ ಶ್ರದ್ಧೆಯಿಂದಲೂ ನಡೆದುಕೊಂಡು ನಿನ್ನ ದೃಷ್ಟಿಯಲ್ಲಿ ಒಳ್ಳೆಯವನಾಗಿದ್ದುದನ್ನು ನೆನಪುಮಾಡಿಕೋ” ಎಂದು ಹೇಳಿ ಹಿಜ್ಕೀಯನು ಬಹಳವಾಗಿ ಕಣ್ಣೀರಿಟ್ಟು ಪ್ರಾರ್ಥಿಸಿದನು. [PE]
4. [PS]ಯೆಶಾಯನು ಅರಮನೆಯ ಮಧ್ಯಪ್ರಾಕಾರವನ್ನು ದಾಟುವುದಕ್ಕೆ ಮೊದಲು ಯೆಹೋವನಿಂದ ಅಪ್ಪಣೆಯಾಯಿತು.
5. “ನೀನು ಹಿಂದಿರುಗಿ ಹೋಗಿ, ನನ್ನ ಜನಗಳ ಪ್ರಭುವಾಗಿರುವ ಹಿಜ್ಕೀಯನಿಗೆ, ‘ನಿನ್ನ ಪಿತೃವಾದ ದಾವೀದನ ದೇವರಾದ ಯೆಹೋವನು ಹೇಳಿದ್ದೇನೆಂದರೆ, ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ, ನಿನ್ನ ಕಣ್ಣೀರನ್ನು ನೋಡಿದ್ದೇನೆ. ನೀನು ಗುಣಹೊಂದಿ ಮೂರನೆಯ ದಿನ ನನ್ನ ಆಲಯಕ್ಕೆ ಬರುವೆ.
6. ಇದಲ್ಲದೆ, ನಿನ್ನ ಆಯುಷ್ಯಕ್ಕೆ ಹದಿನೈದು ವರ್ಷಗಳನ್ನು ಹೆಚ್ಚಿಸಿದ್ದೇನೆ, ನಿನ್ನನ್ನೂ, ಈ ಪಟ್ಟಣವನ್ನೂ ಅಶ್ಶೂರನ ಅರಸನ ಕೈಗೆ ಬೀಳದಂತೆ ತಪ್ಪಿಸುವೆನು. ನನಗಾಗಿಯೂ, ನನ್ನ ಸೇವಕನಾದ ದಾವೀದನಿಗಾಗಿಯೂ ಈ ಪಟ್ಟಣವನ್ನು ಉಳಿಸಿ ಕಾಪಾಡುವೆನು’ ಎಂಬುದಾಗಿ ನಿನ್ನ ಪೂರ್ವಿಕನಾದ ದಾವೀದನ ದೇವರಾಗಿರುವ ಯೆಹೋವನು ಹೇಳುತ್ತಾನೆ ಎಂದು ತಿಳಿಸು” ಅಂದನು.
7. ಅನಂತರ ಯೆಶಾಯನು, ಒಂದು ಅಂಜೂರಹಣ್ಣನ್ನು ತೆಗೆದು ಅವನ ಗಾಯದ ಮೇಲೆ ಇಟ್ಟಾಗ ಹಿಜ್ಕೀಯನು ಗುಣಹೊಂದಿದನು. [PE]
8. [PS]ಹಿಜ್ಕೀಯನು ಯೆಶಾಯನಿಗೆ, “ಯೆಹೋವನು ನನ್ನನ್ನು ಗುಣಪಡಿಸುವನೆಂಬುವುದಕ್ಕೂ, ನಾನು ಮೂರನೆಯ ದಿನ ಆತನ ಆಲಯಕ್ಕೆ ಹೋಗುವೆನೆಂಬುವುದಕ್ಕೂ, ಇರುವ ಗುರುತು ಏನು?” ಎಂದು ಕೇಳಿದನು.
9. ಅದಕ್ಕೆ ಯೆಶಾಯನು, “ಯೆಹೋವನು ನುಡಿದಿದ್ದನ್ನು ನೆರವೇರಿಸುವನು ಎಂಬುದಕ್ಕೆ ಯೆಹೋವನಿಂದ ಉಂಟಾದ ಗುರುತು ಕೇಳುತ್ತಿರುವೆ, ಹಾಗಾದರೆ ನೆರಳು ಹತ್ತು ಮೆಟ್ಟಲು ಮುಂದೆ ಹೋಗಬೇಕೋ? ಹಿಂದೆ ಬರಬೇಕೋ? ಹೇಳು ಹಿಂದೆ ಹೋಗಬೇಕೋ ಹೇಳು?” ಎಂದು ಕೇಳಿದನು. [PE]
10. [PS]ಅದಕ್ಕೆ ಹಿಜ್ಕೀಯನು, “ನೆರಳು ಮುಂದೆ ಹೋಗುವುದು ಸುಲಭ, ಆದುದರಿಂದ ಹತ್ತು ಮೆಟ್ಟಲು ಹಿಂದೆ ಬರುವಂತೆ ಮಾಡು” ಎಂದು ಹೇಳಿದನು.
11. ಆಗ ಪ್ರವಾದಿಯಾದ ಯೆಶಾಯನು ಯೆಹೋವನಿಗೆ ಮೊರೆಯಿಡಲು ಆತನು ಆಹಾಜನ ಗಡಿಯಾರದ ವೇಳಾನುಸಾರ ಹತ್ತು ಮೆಟ್ಟಲು ಮುಂದೆ ಹೋಗಿದ್ದ ನೆರಳನ್ನು ಹತ್ತು ಮೆಟ್ಟಲು ಹಿಂದೆ ಬರುವಂತೆ ಮಾಡಿದನು. [PE]
12. {#1ಬಾಬೆಲಿನಿಂದ ಬಂದ ದೂತರು } [PS]ಅದೇ ಕಾಲದಲ್ಲಿ ಬಲದಾನನ ಮಗನೂ, ಬಾಬೆಲಿನ ಅರಸನೂ ಆದ ಬೆರೋದಕಬಲದಾನ ಎಂಬುವವನು ಹಿಜ್ಕೀಯನು ಅಸ್ವಸ್ಥನಾಗಿದ್ದಾನೆಂದು ಕೇಳಿ, ದೂತರ ಮುಖಾಂತರವಾಗಿ ಅವನಿಗೆ ಪತ್ರವನ್ನೂ, ಬಹುಮಾನವನ್ನೂ ಕಳುಹಿಸಿದನು.
13. ಹಿಜ್ಕೀಯನು ಬಂದಂಥ ದೂತರ ಮಾತನ್ನು ಕೇಳಿ, ಅವರಿಗೆ ಬೆಳ್ಳಿಬಂಗಾರ, ಸುಗಂಧದ್ರವ್ಯ, ಪರಿಮಳತೈಲ, ಮೊದಲಾದ ಪದಾರ್ಥಗಳಿರುವ ಮನೆಯನ್ನೂ, ಆಯುಧಶಾಲೆಯನ್ನೂ, ತನ್ನ ಭಂಡಾರದಲ್ಲಿದ್ದದೆಲ್ಲವನ್ನೂ ತೋರಿಸಿದನು. ಅವನ ಅರಮನೆಯಲ್ಲಿಯೂ, ರಾಜ್ಯದಲ್ಲಿಯೂ ಅವರಿಗೆ ತೋರಿಸದಿದ್ದ ವಸ್ತುವು ಒಂದೂ ಇರಲಿಲ್ಲ. [PE]
14. [PS]ಆಗ ಪ್ರವಾದಿಯಾದ ಯೆಶಾಯನು ಅರಸನಾದ ಹಿಜ್ಕೀಯನ ಬಳಿಗೆ ಬಂದು ಅವನನ್ನು, “ಆ ಮನುಷ್ಯರು ಎಲ್ಲಿಯವರು? ಏನು ಹೇಳಿದರು?” ಎಂದು ಕೇಳಲು ಅವನು, “ಅವರು ಬಹು ದೂರ ದೇಶವಾದ ಬಾಬೆಲಿನಿಂದ ಬಂದವರು” ಎಂದು ಉತ್ತರ ಕೊಟ್ಟನು.
15. ಯೆಶಾಯನು ತಿರುಗಿ ಹಿಜ್ಕೀಯನನ್ನು, “ಅವರು ನಿನ್ನ ಮನೆಯಲ್ಲಿ ಏನು ನೋಡಿದರು?” ಎಂದು ಕೇಳಲು ಅವನು, “ಅರಮನೆಯಲ್ಲಿ ಇರುವುದೆಲ್ಲವನ್ನೂ ನೋಡಿದರು. ನನ್ನ ಭಂಡಾರದಲ್ಲಿ ನಾನು ಅವರಿಗೆ ತೋರಿಸದಿದ್ದ ಒಂದು ವಸ್ತುವು ಇರುವುದಿಲ್ಲ” ಎಂದನು. [PE]
16. [PS]ಆಗ ಯೆಶಾಯನು ಹಿಜ್ಕೀಯನಿಗೆ, “ಯೆಹೋವನ ಮಾತನ್ನು ಕೇಳು,
17. ‘ಆತನು ನಿನ್ನ ಪೂರ್ವಿಕರ ಕಾಲದಿಂದ ಇಂದಿನವರೆಗೂ ಅರಮನೆಯಲ್ಲಿ ಸಂಗ್ರಹವಾದದ್ದೆಲ್ಲವನ್ನು ಬಾಬಿಲೋನಿಗೆ ಒಯ್ಯಲ್ಪಡುವ ದಿನವು ಬರುವುದು, ಇಲ್ಲಿ ಏನೂ ಉಳಿಯುವುದಿಲ್ಲ ಎಂದು ಯೆಹೋವನು ಹೇಳುತ್ತಾನೆ.
18. ಬಾಬೆಲಿನ ಅರಸನು ಬಂದು ನಿನ್ನಿಂದ ಹುಟ್ಟುವಂಥ ಮಕ್ಕಳನ್ನು ತೆಗೆದುಕೊಂಡು ಹೋಗಿ, ಅವರನ್ನು ತಮ್ಮ ಅರಮನೆಯಲ್ಲಿ ಕಂಚುಕಿಗಳನ್ನಾಗಿ ನೇಮಿಸಿಕೊಳ್ಳುವರು ಎಂದು ಯೆಹೋವನು ಅನ್ನುತ್ತಾನೆ’ ” ಎಂದು ಹೇಳಿದನು. [PE]
19. [PS]ಹಿಜ್ಕೀಯನು ಯೆಶಾಯನಿಗೆ, “ನೀನು ತಿಳಿಸಿದ ಯೆಹೋವನ ಮಾತು ಒಳ್ಳೆಯದಾಗಿದೆ. ನನ್ನ ಜೀವಮಾನ ಕಾಲದಲ್ಲಿ ಸಮಾಧಾನವೂ, ಭದ್ರತೆಯೂ ಇರುವುದಲ್ಲವೇ?” ಎಂದು ಕೊಂಡನು.
20. ಹಿಜ್ಕೀಯನ ಉಳಿದ ಚರಿತ್ರೆಯೂ, ಅವನ ಪರಾಕ್ರಮಕೃತ್ಯಗಳೂ, ಅವನು ಕೆರೆಕಾಲುವೆಗಳನ್ನು ಮಾಡಿಸಿ ಊರೊಳಗೆ ನೀರನ್ನು ತಂದ ವಿವರವೂ ಯೆಹೂದ ರಾಜಕಾಲವೃತ್ತಾಂತ ಪುಸ್ತಕ ಎಂಬ ಗ್ರಂಥದಲ್ಲಿ ಬರೆದಿರುತ್ತವೆ.
21. ಹಿಜ್ಕೀಯನು ಪೂರ್ವಿಕರ ಬಳಿಗೆ ಸೇರಲು ಅವನಿಗೆ ಬದಲಾಗಿ ಅವನ ಮಗನಾದ ಮನಸ್ಸೆಯು ಅರಸನಾದನು. [PE]