1. {ರೂಬೇನನ ವಂಶಾವಳಿ} [PS] ಇಸ್ರಾಯೇಲನ ಚೊಚ್ಚಲ ಮಗನಾದ ರೂಬೇನನ ವಂಶಾವಳಿ. ರೂಬೇನನು ಚೊಚ್ಚಲ ಮಗನಾಗಿದ್ದರೂ ಅವನು ತನ್ನ ತಂದೆಯ ಉಪಪತ್ನಿಯೊಂದಿಗೆ ಸಂಗಮಿಸಿ ಹಾಸಿಗೆಯನ್ನು ಹೊಲೆ ಮಾಡಿದ್ದರಿಂದ ಅವನ ಹಕ್ಕು ಇಸ್ರಾಯೇಲನ ಮಗನಾದ ಯೋಸೇಫನ ಕುಲಕ್ಕೆ ಕೊಡಲ್ಪಟ್ಟಿತು.
2. ಆದರೆ ಯೆಹೂದನು ಎಲ್ಲಾ ಸಹೋದರರಲ್ಲಿ ಬಲಿಷ್ಠನಾದುದರಿಂದಲೂ, ರಾಜಾಧಿಕಾರವು ಇವನ ಕುಲಕ್ಕೆ ಬಂದುದರಿಂದಲೂ ಯೋಸೇಫನು ವಂಶಾವಳಿಯ ಪಟ್ಟಿಗಳಲ್ಲಿ ಚೊಚ್ಚಲ ಮಗನೆಂದು ಲಿಖಿತವಾಗಲಿಲ್ಲ. ಆದರೂ ಚೊಚ್ಚಲ ಮಗನಿಗೆ ಸಿಕ್ಕತಕ್ಕ ಪಾಲು ಅವನಿಗೆ ಸಿಕ್ಕಿತು.
3. ಇಸ್ರಾಯೇಲನ ಚೊಚ್ಚಲ ಮಗನಾದ ರೂಬೇನನ ಮಕ್ಕಳು: ಹನೋಕ್, ಫಲ್ಲೂ, ಹೆಚ್ರೋನ್ ಮತ್ತು ಕರ್ಮೀ.
4. ಯೋವೇಲನ ವಂಶಾವಳಿ: ಇವನ ಮಗ ಶೆಮಾಯ; ಶೆಮಾಯನ ಮಗ ಗೋಗ್.
5. ಗೋಗನ ಮಗ ಶಿಮ್ಮೀ; ಇವನ ಮಗ ಮೀಕ. ಮೀಕನ ಮಗ ರೆವಾಯ, ಇವನ ಮಗ ಬಾಳ್.
6. ಬಾಳನ ಮಗ ಬೇರ. ರೂಬೇನ್ಯರ ಪ್ರಭುಗಳಲ್ಲೊಬ್ಬನಾಗಿದ್ದ ಇವನನ್ನು ಅಶ್ಶೂರದ ಅರಸನಾದ ತಿಗ್ಲತ್ ಫಿಲ್ನೇಸರನು ಸೆರೆಯೊಯ್ದನು.
7. ವಂಶಾವಳಿಯ ಪಟ್ಟಿಯಲ್ಲಿ ಇವನ ಗೋತ್ರ ಸಂಬಂಧಿಗಳಾಗಿ ಲಿಖಿತರಾದವರು ನಾಯಕನಾದ ಯೆಗೀಯೇಲ್, ಜೆಕರ್ಯ, ಬೆಳ ಇವರೇ. ಬೆಳನು ಅಜಾಜನ ಮಗ.
8. ಬೆಳನು ಅಜಾಜನ ಮಗ. ಅಜಾಜನು ಶೆಮಯನ ಮಗ. ಶೆಮಯನು ಯೋವೇಲನ ಮಗ. ಯೋವೇಲ್ಯರು ಅರೋಯೇರಿನಿಂದ ನೆಬೋ ಮತ್ತು ಬಾಳ್ಮೆಯೋನ್ ಎಂಬ ಸ್ಥಳಗಳವರೆಗೂ ವಾಸಿಸುತ್ತಿದ್ದರು.
9. ಪೂರ್ವ ದಿಕ್ಕಿನಲ್ಲಿ ಯೂಫ್ರೆಟಿಸ್ ನದಿಯ ಈಚೆಯಲ್ಲಿರುವ ಅರಣ್ಯವು ಇವರ ಮೇರೆ. ಇವರಿಗೆ ಗಿಲ್ಯಾದ್ ದೇಶದಲ್ಲಿ ಅನೇಕ ದನ ಕುರಿಹಿಂಡುಗಳಿದ್ದವು.
10. ಇವರು ಸೌಲನ ಕಾಲದಲ್ಲಿ ಹಗ್ರೀಯರೊಡನೆ ಯುದ್ಧಮಾಡಿ, ಅವರನ್ನು ಸಂಹರಿಸಿ, ಗಿಲ್ಯಾದಿನ ಪೂರ್ವದಿಕ್ಕಿನ ಪ್ರಾಂತ್ಯಗಳಲ್ಲಿದ್ದ ಅವರ ಡೇರೆಗಳಲ್ಲಿ ವಾಸಮಾಡ ತೊಡಗಿದನು. [PS]
11. {ಗಾದನ ವಂಶಾವಳಿ} [PS] ರೂಬೇನ್ಯರ ಎದುರಿನಲ್ಲಿ ಬಾಷಾನ್ ಸೀಮೆಯ ಸಲ್ಕದವರೆಗೂ ವಾಸಿಸುತ್ತಿದ್ದವರು ಗಾದ್ ಕುಲದವರು:
12. ಪ್ರಧಾನನಾದ ಯೋವೇಲ್, ಎರಡನೆಯವನಾದ ಶಾಫಾಮ್, ಯನ್ನೈ, ಬಾಷಾನಿನಲ್ಲಿರುವ ಶಾಫಾಟ್ ಇವರೂ ನಾಯಕರಾಗಿದ್ದರು.
13. ಮೀಕಾಯೇಲ್, ಮೆಷುಲ್ಲಾಮ್, ಶೆಬ, ಯೋರೈ, ಯಕ್ಕಾನ್, ಜೀಯ ಮತ್ತು ಏಬೆರ್ ಎಂಬ ಏಳು ಕುಟುಂಬಗಳೂ ಇವರ ಕುಲಸಂಬಂಧಿಗಳು.
14. ಇವರು ಅಬೀಹೈಲನ ಮಕ್ಕಳು: ಅಬೀಹೈಲನು ಹೂರೀಯ ಮಗ, ಇವನು ಯಾರೋಹನ ಮಗ. ಯಾರೋಹನು ಗಿಲ್ಯಾದನ ಮಗ, ಇವನು ಮೀಕಾಯೇಲನ ಮಗ. ಮೀಕಾಯೇಲನು ಯೆಷೀಷೈಯನ ಮಗ, ಇವನು ಯಹ್ದೋವಿನ ಮಗ, ಇವನು ಅಹೀಬೂಜನ ಮಗ.
15. ಅಹೀಬೂಜನು ಅಬ್ದೀಯೇಲನ ಮಗ. ಅಬ್ದೀಯೇಲನು ಗೂನೀಯನ ಮಗ. ಇವನು ಇವರ ಗೋತ್ರದ ಮೂಲಪುರುಷನು. [PE][PS]
16. ಗಾದ್ಯರು ಗಿಲ್ಯಾದಿನಲ್ಲಿಯೂ ಬಾಷಾನಿನಲ್ಲಿಯೂ, ಅದರ ಗ್ರಾಮಗಳಲ್ಲಿಯೂ, ಶಾರೋನಿನ ಎಲ್ಲಾ ಹುಲ್ಲುಗಾವಲುಗಳಲ್ಲಿಯೂ ಅವುಗಳ ಮೇರೆಗಳಲ್ಲಿಯೂ ವಾಸಿಸುತ್ತಿದ್ದರು.
17. ಅವರೆಲ್ಲರೂ ಯೆಹೂದ್ಯರ ಅರಸನಾದ ಯೋತಾಮನ ಕಾಲದಲ್ಲಿಯೂ, ಇಸ್ರಾಯೇಲರ ಅರಸನಾದ ಯಾರೊಬ್ಬಾಮನ ಕಾಲದಲ್ಲಿಯೂ ವಂಶಾವಳಿಯ ಪಟ್ಟಿಯಲ್ಲಿ ದಾಖಲಿಸಲ್ಪಟ್ಟರು. [PE][PS]
18. ರೂಬೇನ್ಯರು, ಗಾದ್ಯರು, ಮನಸ್ಸೆ ಕುಲದ ಅರ್ಧ ಜನರು ಇವರಲ್ಲಿ ರಣವೀರರೂ ಗುರಾಣಿ ಖಡ್ಗಗಳನ್ನು ಹಿಡಿಯುವವರೂ, ಬಿಲ್ಲನ್ನು ಬೊಗ್ಗಿಸುವವರೂ, ಯುದ್ಧ ನಿಪುಣರೂ ಆಗಿರುವ ನಲ್ವತ್ತನಾಲ್ಕು ಸಾವಿರದ ಏಳು ನೂರ ಅರವತ್ತು ಸೈನಿಕರಿದ್ದರು.
19. ಅವರು ಹೋಗಿ ಹಗ್ರೀಯ, ಯೆಟೂರ್, ನಾಫೀಷ್ ಮತ್ತು ನೋದಾಬ್ ಇವರೊಡನೆಯೂ ಯುದ್ಧಮಾಡಿದರು.
20. ಅವರು ದೇವರ ಮೇಲೆ ಭರವಸೆ ಇಟ್ಟಿದ್ದರಿಂದ ಮೊರೆಯಿಟ್ಟ ಅವರ ಪ್ರಾರ್ಥನೆಗೆ ಕಿವಿಗೊಟ್ಟು ಯುದ್ಧದಲ್ಲಿ ಜಯವನ್ನು ಅನುಗ್ರಹಿಸಿದನು. ಹಗ್ರೀಯರೂ ಇವರ ಜೊತೆಯಲ್ಲಿದ್ದವರೂ ಅವರ ಕೈಯಲ್ಲಿ ಕೊಡಲ್ಪಟ್ಟರು.
21. ಈ ಯುದ್ಧದಲ್ಲಿ ಅವರ ಹಿಂಡುಗಳನ್ನು ಅಂದರೆ, ಐವತ್ತು ಸಾವಿರ ಒಂಟೆಗಳು, ಎರಡು ಲಕ್ಷದ ಐವತ್ತು ಸಾವಿರ ಕುರಿಗಳೂ, ಎರಡು ಸಾವಿರ ಕತ್ತೆಗಳು ಮತ್ತು ಒಂದು ಲಕ್ಷ ಜನರನ್ನೂ ಕೊಳ್ಳೆಹಿಡಿದರು.
22. ಏಕೆಂದರೆ ದೇವರು ಅವರ ಪರವಾಗಿ ಯುದ್ಧಮಾಡಿದ್ದರಿಂದ ಅವರು ವೈರಿಗಳಲ್ಲಿ ಅನೇಕರನ್ನು ತಿವಿದು ಕೊಂದದ್ದಲ್ಲದೆ, ತಾವು ಸೆರೆಯಾಗಿ ಹೋಗುವವರೆಗೂ ಅವರ ಊರುಗಳಲ್ಲಿ ವಾಸಿಸಿದರು. [PS]
23. {ಯೊರ್ದನಿನ ಪೂರ್ವದಿಕ್ಕಿನಲ್ಲಿದ್ದ ಮನಸ್ಸೆಯ ವಂಶಜರು} [PS] ಮನಸ್ಸೆ ಕುಲದ ಅರ್ಧಜನರು ಬಾಷಾನಿನಿಂದ ಬಾಳ್ ಹೆರ್ಮೋನ್, ಸೆನೀರ್, ಹೆರ್ಮೋನ್ ಗಿರಿ ಇವುಗಳ ವರೆಗೂ ವಿಸ್ತರಿಸಿಕೊಂಡಿರುವ ಪ್ರಾಂತ್ಯಗಳಲ್ಲಿ ವಾಸಿಸಿದರು.
24. ಇವರ ಗೋತ್ರಗಳ ಪ್ರಧಾನ ಪುರುಷರು ಏಫೆರ್, ಇಷ್ಷೀ, ಎಲೀಯೇಲ್, ಅಜ್ರೀಯೇಲ್, ಯೆರೆಮೀಯ, ಹೋದವ್ಯ ಮತ್ತು ಯೆಹ್ತೀಯೇಲ್. ಇವರು ರಣವೀರರೂ ಪ್ರಖ್ಯಾತಿ ಹೊಂದಿದವರು ಗೋತ್ರಪ್ರಧಾನರೂ ಆಗಿದ್ದರು.
25. ಅವರು ತಮ್ಮ ಪೂರ್ವಿಕರ ದೇವರಿಗೆ ದ್ರೋಹಿಗಳಾಗಿದರು. ಯೆಹೋವನು ತಮ್ಮ ಮುಂದೆಯೇ ಸಂಹರಿಸಿದ ಆ ದೇಶದ ನಿವಾಸಿಗಳ ದೇವರುಗಳನ್ನು ಆರಾಧಿಸತೊಡಗಿದರು.
26. ಆದುದರಿಂದ ಅಶ್ಶೂರದ ಅರಸನಾದ ಪೂಲ್, ತಿಗ್ಲತ್ಪಿಲೆಸರ್ ಎಂಬವರು ಇಸ್ರಾಯೇಲ್ ದೇವರ ಪ್ರೇರಣೆಯಿಂದ ಬಂದು ರೂಬೇನ್ಯರು, ಗಾದ್ಯರು, ಮನಸ್ಸೆ ಕುಲದ ಅರ್ಧ ಜನರು ಇವರನ್ನು ಹಲಹ, ಹಾಬೋರ್, ಹಾರ ಎಂಬ ಪ್ರಾಂತ್ಯಗಳಿಗೂ, ಗೋಜಾನ್ ನದಿಯ ಪ್ರದೇಶಗಳಿಗೂ ಸೆರೆ ಹಿಡಿದು ಕರೆದೊಯ್ದರು. ಅವರು ಇಂದಿನವರೆಗೂ ಅಲ್ಲಿಯೇ ನೆಲೆಸುವಂತೆ ಮಾಡಿದ್ದಾನೆ ದೇವರು. [PE]