1. {#1ದಾವೀದನು ಅಮ್ಮೋನಿಯರನ್ನು ಸೋಲಿಸಿದ್ದು } [PS]ಇದಾದನಂತರ ಅಮ್ಮೋನಿಯರ ಅರಸನಾದ ನಾಹಾಷನು ಸತ್ತನು. ಅವನಿಗೆ ಬದಲಾಗಿ ಅವನ ಮಗನು ಅರಸನಾದನು.
2. ದಾವೀದನು, “ನಾಹಾಷನು ನನಗೆ ದಯೆತೋರಿಸಿದ್ದರಿಂದ ನಾನೂ ಅವನ ಮಗನಾದ ಹಾನೂನನಿಗೆ ದಯೆತೋರಿಸುವೆನು” ಅಂದುಕೊಂಡು ಪಿತೃಶೋಕದಲ್ಲಿದ್ದ ಹಾನೂನನನ್ನು ಸಂತೈಸುವುದಕ್ಕೋಸ್ಕರ ದೂತರನ್ನು ಕಳುಹಿಸಿದನು. ದಾವೀದನ ಸೇವಕರು ಹಾನೂನನನ್ನು ಸಂತೈಸುವುದಕ್ಕೋಸ್ಕರ ಅಮ್ಮೋನಿಯರ ದೇಶಕ್ಕೆ ಬಂದರು.
3. ಆಗ ಅಮ್ಮೋನ್ ಪ್ರಭುಗಳು ಹಾನೂನನಿಗೆ, “ದಾವೀದನು ನಿನ್ನ ಬಳಿಗೆ ಸಂತೈಸುವವರನ್ನು ಕಳುಹಿಸಿದ್ದರಿಂದ ಅವನು ನಿನ್ನ ತಂದೆಯನ್ನು ಸನ್ಮಾನಿಸುವವನಾಗಿದ್ದಾನೆಂದು ನೆನಸುತ್ತೀಯೋ? ಅವನ ಆಳುಗಳು ದೇಶವನ್ನು ಸಂಚರಿಸಿ ನೋಡಿ, ಅದನ್ನು ಸ್ವಾಧೀನಮಾಡಿಕೊಳ್ಳಬೇಕೆಂದು ಬಂದಿದ್ದಾರೆ” ಎಂದು ಹೇಳಿದರು.
4. ಆದುದರಿಂದ ಹಾನೂನನು ದಾವೀದನ ಸೇವಕರನ್ನು ಹಿಡಿಸಿ, ಗಡ್ಡದ ಅರ್ಧ ಭಾಗವನ್ನು ಬೋಳಿಸಿ, ಅವರ ಸೊಂಟದ ಕೆಳಭಾಗದ ನಿಲುವಂಗಿಗಳನ್ನು ಕತ್ತರಿಸಿ ಕಳುಹಿಸಿಬಿಟ್ಟನು.
5. ಅವರು ಹೋಗಿ ಈ ವರ್ತಮಾನವನ್ನು ದಾವೀದನಿಗೆ ಹೇಳಿಕಳುಹಿಸಿದಾಗ ಅವನು ಬಹಳ ಅವಮಾನಹೊಂದಿ ಅವರಿಗೆ ಆಳುಗಳ ಮುಖಾಂತರವಾಗಿ, “ನಿಮ್ಮ ಗಡ್ಡ ಬೆಳೆಯುವವರೆಗೆ ನೀವು ಯೆರಿಕೋವಿನಲ್ಲಿದ್ದು ಅನಂತರ ಬನ್ನಿರಿ” ಎಂದು ಹೇಳಿಸಿದನು. [PE]
6. {#1ದಾವೀದನ ಯುದ್ಧಭಟರ ಶೂರಕೃತ್ಯಗಳು } [PS]ತಾವು ದಾವೀದನಿಗೆ ಅಸಹ್ಯರಾದೆವೆಂದು ಹಾನೂನನೂ ಮತ್ತು ಅಮ್ಮೋನಿಯರೂ ತಿಳಿದು ಎರಡು ನದಿಗಳ ಮಧ್ಯದಲ್ಲಿರುವ ಅರಾಮ್ ಸೀಮೆಯಿಂದಲೂ, ಮಾಕದಿಂದಲೂ, ಚೋಬಾ ರಾಜ್ಯದಿಂದಲೂ ರಥಗಳನ್ನೂ, ರಾಹುತರನ್ನು ತರಿಸುವುದಕ್ಕೋಸ್ಕರ ಸಾವಿರ ತಲಾಂತು ಬೆಳ್ಳಿಯನ್ನೂ ಕಳುಹಿಸಿದರು.
7. ಆಗ ಮೂವತ್ತೆರಡು ಸಾವಿರ ರಥಬಲದವರೂ, ಮಾಕದ ಅರಸನೂ ಮತ್ತು ಅವನ ದಂಡಾಳುಗಳು ಬಂದು ಅವರ ಸಹಾಯಕ್ಕೋಸ್ಕರ ಮೇದೆಬ ಊರಿನ ಮುಂದೆ ಪಾಳೆಯ ಮಾಡಿಕೊಂಡರು. ಅಮ್ಮೋನಿಯರೂ ತಮ್ಮ ಪಟ್ಟಣಗಳಿಂದ ಯುದ್ಧಕ್ಕೆ ಕೂಡಿಬಂದರು.
8. ಈ ಸುದ್ದಿಯು ದಾವೀದನಿಗೆ ಮುಟ್ಟಿದಾಗ ಅವನು ಯೋವಾಬನನ್ನೂ, ಎಲ್ಲಾ ಶೂರಸೈನಿಕರನ್ನೂ ಕಳುಹಿಸಿದನು.
9. ಕೂಡಲೆ ಅಮ್ಮೋನಿಯರು ಹೊರಗೆ ಬಂದು ಊರ ಬಾಗಿಲಿನ ಬಳಿಯಲ್ಲಿ ವ್ಯೂಹಕಟ್ಟಿದರು. ಅವರ ಸಹಾಯಕ್ಕಾಗಿ ಬಂದ ಅರಸರು ಪ್ರತ್ಯೇಕವಾಗಿ ಮೈದಾನದಲ್ಲಿ ನಿಂತರು.
10. ಯೋವಾಬನು ತನ್ನ ಮುಂದೆಯೂ ಹಿಂದೆಯೂ ಯುದ್ಧ ಪ್ರಾರಂಭವಾದದ್ದನ್ನು ಕಂಡು ಇಸ್ರಾಯೇಲ್ಯರಲ್ಲಿ ಶ್ರೇಷ್ಠರಾದ ಎಲ್ಲಾ ಸೈನಿಕರನ್ನು ಆರಿಸಿಕೊಂಡು, ಅವರನ್ನು ಅರಾಮ್ಯರಿಗೆ ವಿರೋಧವಾಗಿ ನಿಲ್ಲಿಸಿದನು.
11. ಉಳಿದ ಜನರನ್ನು ತನ್ನ ತಮ್ಮನಾದ ಅಬ್ಷೈಯ ವಶಕ್ಕೆ ಕೊಟ್ಟು ಅವನಿಗೆ,
12. “ಅರಾಮ್ಯರು ನನ್ನನ್ನು ಸೋಲಿಸುವಂತೆ ಕಂಡರೆ ನೀನು ನನ್ನ ಸಹಾಯಕ್ಕೆ ಬಾ, ಅಮ್ಮೋನಿಯರು ನಿನ್ನನ್ನು ಸೋಲಿಸುವಂತೆ ಕಂಡರೆ ನಾನು ನಿನ್ನ ಸಹಾಯಕ್ಕೆ ಬರುವೆನು.
13. ಧೈರ್ಯದಿಂದಿರು, ನಮ್ಮ ಜನರಿಗೋಸ್ಕರವೂ, ನಮ್ಮ ದೇವರ ಪಟ್ಟಣಗಳಿಗೋಸ್ಕರವೂ, ನಮ್ಮ ಪೌರುಷವನ್ನು ತೋರಿಸೋಣ. ಯೆಹೋವನು ತನಗೆ ಸರಿಕಾಣುವ ಹಾಗೆ ಮಾಡಲಿ” ಎಂದು ಹೇಳಿ ಅವನನ್ನು ಅಮ್ಮೋನಿಯರಿಗೆ ವಿರುದ್ಧವಾಗಿ ಕಳುಹಿಸಿದನು.
14. ಯೋವಾಬನೂ ಅವನ ಜನರೂ ಅರಾಮ್ಯರಿಗೆ ವಿರುದ್ಧವಾಗಿ ಯುದ್ಧಪ್ರಾರಂಭಿಸಿದಾಗ ಅರಾಮ್ಯರು ಓಡಿಹೋದರು.
15. ಅವರು ಓಡಿಹೋಗುವುದನ್ನು ಅಮ್ಮೋನಿಯರು ಕಂಡು ಅವರೂ ಅವನ ತಮ್ಮನಾದ ಅಬ್ಷೈಯ ಎದುರಿನಿಂದ ಓಡಿಹೋಗಿ ಪಟ್ಟಣವನ್ನು ಪ್ರವೇಶಿಸಿದರು. ಯೋವಾಬನು ಯೆರೂಸಲೇಮಿಗೆ ಹೋದನು. [PE]
16. [PS]ಅರಾಮ್ಯರಿಗೆ ತಾವು ಇಸ್ರಾಯೇಲರಿಂದ ಅಪಜಯ ಹೊಂದಿದ್ದೇವೆಂದು ಗೊತ್ತಾದಾಗ ಅವರು ಯೂಫ್ರೆಟಿಸ್ ನದಿಯ ಆಚೆಯಲ್ಲಿದ್ದ ಅರಾಮ್ಯರನ್ನು ಕರೆಕಳುಹಿಸಿದರು. ಹದರೆಜರನ ಸೇನಾಧಿಪತಿಯಾದ ಶೋಫಕನು ಅವರ ನಾಯಕನಾದನು.
17. ಈ ಸುದ್ದಿಯು ದಾವೀದನಿಗೆ ಮುಟ್ಟಿದಾಗ ಅವನು ಇಸ್ರಾಯೇಲರನ್ನು ಕೂಡಿಸಿಕೊಂಡು ಯೊರ್ದನ್ ಹೊಳೆಯನ್ನು ದಾಟಿ, ಅರಾಮ್ಯರ ಸಮೀಪಕ್ಕೆ ಬಂದು ಅವರೊಡನೆ ಕಾದಾಡುವುದಕ್ಕೊಸ್ಕರ ವ್ಯೂಹ ಕಟ್ಟಿದನು.
18. ಅರಾಮ್ಯರು ಯುದ್ಧಕ್ಕೆ ನಿಂತಾಗ ಇಸ್ರಾಯೇಲರ ಮುಂದೆ ಸೋತು ಓಡಿಹೋದರು. ದಾವೀದನು ಅರಾಮ್ಯರ ಏಳುಸಾವಿರ ರಥಗಳನ್ನು ಹಾಳುಮಾಡಿ, ನಲ್ವತ್ತು ಸಾವಿರ ಕಾಲಾಳುಗಳನ್ನು ಕೊಂದುಬಿಟ್ಟನು. ಅವನು ಸೇನಾಧಿಪತಿಯಾದ ಶೋಫಕನನ್ನೂ ಕೊಂದನು.
19. ಹದರೆಜರನ ದಾಸರು ಇಸ್ರಾಯೇಲರ ಮುಂದೆ ತಮ್ಮ ಕೈ ಸಾಗದೆಂದು ತಿಳಿದು ದಾವೀದನೊಡನೆ ಒಪ್ಪಂದ ಮಾಡಿಕೊಂಡು ಅವನ ದಾಸರಾದರು. ಅಂದಿನಿಂದ ಅರಾಮ್ಯರು ಅಮ್ಮೋನಿಯರಿಗೆ ಸಹಾಯಮಾಡುವುದಕ್ಕೆ ಮನಸ್ಸು ಮಾಡಲ್ಲಿಲ್ಲ. [PE]