1. {ಸಂಸೋನನು ಫಿಲಿಷ್ಟಿಯರನ್ನು ಪೀಡಿಸಿದನು} [PS] ಗೋಧಿಯ ಸುಗ್ಗಿಕಾಲದಲ್ಲಿ ಸಂಸೋನನು ತನ್ನ ಹೆಂಡತಿಯನ್ನು ನೋಡಲು ಹೋದನು. ಅವನು ತನ್ನ ಸಂಗಡ ಒಂದು ಮರಿಹೋತವನ್ನು ತೆಗೆದುಕೊಂಡು ಹೋದನು. ಆಕೆಯ ತಂದೆಗೆ ಅವನು, “ನನ್ನ ಹೆಂಡತಿಯ ಕೋಣೆಗೆ ಹೋಗಬೇಕು” ಎಂದನು. [PE][PS] ಆದರೆ ಆಕೆಯ ತಂದೆಯು ಸಂಸೋನನನ್ನು ಒಳಗೆ ಬಿಡಲಿಲ್ಲ.
2. ಅವನು ಸಂಸೋನನಿಗೆ, “ನೀನು ಅವಳನ್ನು ದ್ವೇಷಿಸುವೆ ಎಂದು ತಿಳಿದು ಮದುವೆಯಲ್ಲಿ ನಿನ್ನೊಂದಿಗಿದ್ದ ಉತ್ತಮ ಪುರುಷನೊಬ್ಬನಿಗೆ ಅವಳನ್ನು ಮದುವೆ ಮಾಡಿಕೊಟ್ಟೆ. ಅವಳ ತಂಗಿಯು ಆಕೆಗಿಂತ ಹೆಚ್ಚು ಸುಂದರಿಯಾಗಿದ್ದಾಳೆ. ಆಕೆಯನ್ನು ನೀನು ಮದುವೆಯಾಗು” ಎಂದನು. [PE][PS]
3. ಸಂಸೋನನು ಅವನಿಗೆ, “ಫಿಲಿಷ್ಟಿಯರಾದ ನಿಮಗೆ ತೊಂದರೆಕೊಡಲು ನನಗೊಂದು ಒಳ್ಳೆಯ ಕಾರಣ ಸಿಕ್ಕಿತು. ಈಗ ಯಾರೂ ನನ್ನದು ತಪ್ಪೆಂದು ಹೇಳುವುದಿಲ್ಲ” ಎಂದು ಹೇಳಿದನು. [PE][PS]
4. ಸಂಸೋನನು ಹೊರಗೆ ಹೋಗಿ ಮುನ್ನೂರು ನರಿಗಳನ್ನು ಹಿಡಿದನು. ಅವುಗಳಲ್ಲಿ ಎರಡೆರಡು ನರಿಗಳನ್ನು ಹಿಡಿದು ಒಂದರ ಬಾಲವನ್ನು ಮತ್ತೊಂದರ ಬಾಲಕ್ಕೆ ಕಟ್ಟಿದನು. ನರಿಗಳ ಪ್ರತಿಯೊಂದು ಜೋಡಿಯ ಬಾಲಗಳ ಮಧ್ಯದಲ್ಲಿ ಒಂದು ಪಂಜನ್ನು ಕಟ್ಟಿದನು.
5. ಸಂಸೋನನು ಆ ಪಂಜುಗಳಿಗೆ ಬೆಂಕಿ ಹಚ್ಚಿ ಆ ನರಿಗಳನ್ನು ಫಿಲಿಷ್ಟಿಯರ ಪೈರುಗಳಿದ್ದ ಹೊಲಗಳಲ್ಲಿ ಓಡಾಡಲು ಬಿಟ್ಟನು. ಈ ರೀತಿ ಅವನು ಅವರ ಹೊಲಗಳಲ್ಲಿ ಬೆಳೆದ ಪೈರನ್ನೂ ಮತ್ತು ಅವರು ಕೊಯ್ದುಹಾಕಿದ ತೆನೆಗೂಡುಗಳನ್ನೂ ಸುಟ್ಟುಹಾಕಿದನು. ಅವನು ಅವರ ದ್ರಾಕ್ಷಿಯ ತೋಟಗಳನ್ನು ಮತ್ತು ಆಲಿವ್ ಮರಗಳನ್ನು ಸುಟ್ಟುಹಾಕಿದನು. [PE][PS]
6. “ಇದನ್ನು ಮಾಡಿದವರು ಯಾರು?” ಎಂದು ಫಿಲಿಷ್ಟಿಯರು ವಿಚಾರಿಸಿದರು. [PE][PS] ಒಬ್ಬನು, “ತಿಮ್ನಾ ನಗರದವನ ಅಳಿಯನಾದ ಸಂಸೋನನು ಇದನ್ನು ಮಾಡಿದನು. ಸಂಸೋನನ ಮಾವನು ಸಂಸೋನನ ಹೆಂಡತಿಯನ್ನು ಮದುವೆಯಲ್ಲಿದ್ದ ಉತ್ತಮ ಪುರುಷನೊಬ್ಬನಿಗೆ ಮದುವೆಮಾಡಿಕೊಟ್ಟಿದ್ದಕ್ಕಾಗಿ ಅವನು ಹೀಗೆಲ್ಲಾ ಮಾಡಿದನು” ಎಂದು ಹೇಳಿದನು. ಆಗ ಫಿಲಿಷ್ಟಿಯರು ಸಂಸೋನನ ಹೆಂಡತಿಯನ್ನು ಮತ್ತು ಅವಳ ತಂದೆಯನ್ನು ಸುಟ್ಟುಹಾಕಿದರು. [PE][PS]
7. ಸಂಸೋನನು ಫಿಲಿಷ್ಟಿಯರಿಗೆ, “ನೀವು ನನಗೆ ಈ ದುಷ್ಕೃತ್ಯವನ್ನು ಮಾಡಿರುವುದರಿಂದ ನಾನೂ ನಿಮಗೆ ಕೇಡನ್ನು ಮಾಡುತ್ತೇನೆ” ಎಂದು ಹೇಳಿ, [PE][PS]
8. ಅವರ ಮೇಲೆ ಆಕ್ರಮಣ ಮಾಡಿ ಅವರಲ್ಲಿ ಅನೇಕರನ್ನು ಕೊಂದುಹಾಕಿದನು. ಆಮೇಲೆ ಅವನು ಹೋಗಿ ಒಂದು ಗುಹೆಯಲ್ಲಿ ಇದ್ದುಬಿಟ್ಟನು. ಆ ಗುಹೆಯು ಏಟಾಮಿನ ಬಂಡೆಯ ಬಳಿಯಲ್ಲಿತ್ತು. [PE][PS]
9. ಆಗ ಫಿಲಿಷ್ಟಿಯರು ಯೆಹೂದಕ್ಕೆ ಹೋಗಿ, ಅವರು ಲೆಹೀ ಎಂಬ ಸ್ಥಳದ ಬಳಿ ಪಾಳೆಯಮಾಡಿಕೊಂಡರು ಮತ್ತು ಯುದ್ಧದ ಸಿದ್ಧತೆ ಮಾಡತೊಡಗಿದರು.
10. ಯೆಹೂದ್ಯರು ಅವರಿಗೆ, “ಫಿಲಿಷ್ಟಿಯರಾದ ನೀವು ನಮ್ಮ ಸಂಗಡ ಯುದ್ಧ ಮಾಡುವುದಕ್ಕೆ ಇಲ್ಲಿಗೇಕೆ ಬಂದಿದ್ದೀರಿ?” ಎಂದು ಕೇಳಿದರು. [PE][PS] ಅದಕ್ಕೆ ಅವರು, “ನಾವು ಸಂಸೋನನನ್ನು ಹಿಡಿಯಲು ಬಂದಿದ್ದೇವೆ. ನಾವು ಅವನನ್ನು ಬಂಧಿಸಬೇಕಾಗಿದೆ. ಅವನು ನಮ್ಮ ಜನರಿಗೆ ಮಾಡಿದ ದ್ರೋಹಕ್ಕಾಗಿ ಅವನನ್ನು ಶಿಕ್ಷಿಸಬೇಕು” ಎಂದು ಉತ್ತರಕೊಟ್ಟರು. [PE][PS]
11. ಆಗ ಯೆಹೂದಕುಲದ ಮೂರು ಸಾವಿರ ಜನರು ಸಂಸೋನನಲ್ಲಿಗೆ ಹೋದರು. ಅವರು ಏಟಾಮಿನ ಬಂಡೆಯ ಬಳಿಯಲ್ಲಿದ್ದ ಗುಹೆಗೆ ಬಂದು ಅವನಿಗೆ, “ನೀನು ನಮಗೆ ಮಾಡಿರುವುದೇನು? ಫಿಲಿಷ್ಟಿಯರು ನಮ್ಮನ್ನು ಆಳುತ್ತಿದ್ದಾರೆ ಎಂಬುದು ನಿನಗೆ ಗೊತ್ತಿಲ್ಲವೇ?” ಎಂದು ಕೇಳಿದರು. [PE][PS] ಸಂಸೋನನು, “ಅವರು ನನಗೆ ಮಾಡಿದ ದ್ರೋಹಕ್ಕಾಗಿ ನಾನು ಅವರನ್ನು ಶಿಕ್ಷಿಸಿದೆ” ಎಂದನು. [PE][PS]
12. ಆಗ ಅವರು ಸಂಸೋನನಿಗೆ, “ನಾವು ನಿನ್ನನ್ನು ಬಂಧಿಸಲು ಬಂದಿದ್ದೇವೆ. ನಾವು ನಿನ್ನನ್ನು ಫಿಲಿಷ್ಟಿಯರಿಗೆ ಕೊಡುತ್ತೇವೆ” ಎಂದರು. [PE][PS] ಸಂಸೋನನು ಯೆಹೂದ್ಯರಿಗೆ, “ನೀವು ನನ್ನನ್ನು ಕೊಲ್ಲುವುದಿಲ್ಲವೆಂದು ಆಣೆಮಾಡಿರಿ” ಅಂದನು. [PE][PS]
13. ಯೆಹೂದ್ಯರು, “ಆಗಲಿ, ನಾವು ನಿನ್ನನ್ನು ಬಂಧಿಸಿ ಫಿಲಿಷ್ಟಿಯರಿಗೆ ಕೊಡುತ್ತೇವೆ. ನಾವು ನಿನ್ನನ್ನು ಕೊಲ್ಲುವುದಿಲ್ಲವೆಂದು ಆಣೆಮಾಡುತ್ತೇವೆ” ಎಂದು ಹೇಳಿದರು. ಅವರು ಸಂಸೋನನನ್ನು ಎರಡು ಹೊಸ ಹಗ್ಗಗಳಿಂದ ಬಂಧಿಸಿ ಗುಹೆಯಿಂದ ಹೊರ ಕರೆತಂದರು. [PE][PS]
14. ಸಂಸೋನನನ್ನು ಲೆಹೀ ಎಂಬ ಸ್ಥಳಕ್ಕೆ ತಂದಾಗ ಫಿಲಿಷ್ಟಿಯರು ಅವನನ್ನು ನೋಡುವದಕ್ಕೆ ಬಂದರು. ಅವರು ಸಂತೋಷದಿಂದ ಆರ್ಭಟಿಸುತ್ತಿದ್ದರು. ಆಗ ಯೆಹೋವನ ಆತ್ಮವು ಪ್ರಬಲವಾಗಿ ಸಂಸೋನನ ಮೇಲೆ ಬಂದಿತು. ಸಂಸೋನನು ಹಗ್ಗಗಳನ್ನು ಸುಟ್ಟದಾರಗಳೊ ಎಂಬಂತೆ ಕಿತ್ತುಹಾಕಿದನು; ಕೈಗೆ ಕಟ್ಟಿದ್ದ ಹಗ್ಗಗಳು ಕಳಚಿಬಿದ್ದವು.
15. ಸಂಸೋನನು ಸತ್ತಕತ್ತೆಯ ದವಡೇ ಎಲುಬನ್ನು ಕಂಡನು. ಅವನು ಆ ದವಡೇ ಎಲುಬನ್ನು ತೆಗೆದುಕೊಂಡು ಅದರಿಂದ ಒಂದು ಸಾವಿರ ಫಿಲಿಷ್ಟಿಯರನ್ನು ಕೊಂದುಹಾಕಿದನು.
16. ಆಗ ಸಂಸೋನನು, “ಕತ್ತೆಯ ದವಡೇ ಎಲುಬಿನಿಂದ [QBR2] ನಾನು ಒಂದು ಸಾವಿರ ಜನರನ್ನು ಕೊಂದೆನು, [QBR] ಕತ್ತೆಯ ದವಡೇ ಎಲುಬಿನಿಂದ [QBR2] ನಾನು ಹೆಣಗಳನ್ನು ರಾಶಿರಾಶಿಯಾಗಿ ಬೀಳಿಸಿದೆನು” ಅಂದನು. [PE][PS]
17. ಬಳಿಕ ಸಂಸೋನನು ದವಡೇ ಎಲುಬನ್ನು ಬಿಸಾಡಿದನು. ಆದ್ದರಿಂದ ಆ ಸ್ಥಳಕ್ಕೆ ರಾಮತ್ ಲೆಹೀ ಎಂದು ಹೆಸರಾಯಿತು. [PE][PS]
18. ಸಂಸೋನನಿಗೆ ತುಂಬ ನೀರಡಿಕೆಯಾಗಿತ್ತು. ಅವನು ಯೆಹೋವನಿಗೆ, “ನಾನು ನಿನ್ನ ಸೇವಕನಾಗಿದ್ದೇನೆ. ನೀನು ನನಗೆ ಈ ಮಹಾವಿಜಯವನ್ನು ಕೊಟ್ಟಿರುವೆ. ದಯವಿಟ್ಟು ಈಗ ನಾನು ನೀರಡಿಕೆಯಿಂದ ಸಾಯಲು ಬಿಡಬೇಡ. ಸುನ್ನತಿ ಮಾಡಿಸಿಕೊಂಡಿಲ್ಲದವರು ನನ್ನನ್ನು ಹಿಡಿದುಕೊಡುವಂತೆ ಮಾಡಬೇಡ” ಎಂದು ಪ್ರಾರ್ಥಿಸಿದನು. [PE][PS]
19. ಲೆಹೀಯ ನೆಲದಲ್ಲಿ ಒಂದು ಸುರಂಗವಿದೆ. ದೇವರು ಆ ಸುರಂಗವನ್ನು ಸೀಳಿ ಅದರೊಳಗಿಂದ ನೀರು ಬರುವಂತೆ ಮಾಡಿದನು. ಸಂಸೋನನು ನೀರು ಕುಡಿದು ಪುನಃ ಚೈತನ್ಯ ಪಡೆದನು. ಆದ್ದರಿಂದ ಅವನು ಆ ನೀರಿನ ಬುಗ್ಗೆಗೆ ಏನ್ ಹಕ್ಕೋರೇ ಎಂದು ಕರೆದನು. ಅದು ಇಂದಿಗೂ ಲೆಹೀ ನಗರದಲ್ಲಿ ಇದೆ. [PE][PS]
20. ಸಂಸೋನನು ಇಪ್ಪತ್ತು ವರ್ಷ ಇಸ್ರೇಲರ ನ್ಯಾಯಾಧೀಶನಾಗಿದ್ದನು. ಅದು ಫಿಲಿಷ್ಟಿಯರ ಕಾಲವಾಗಿತ್ತು. [PE]