1. {ಸಂಸೋನನ ಜನನ} [PS] ಇಸ್ರೇಲರು ಮತ್ತೆ ಯೆಹೋವನಿಗೆ ವಿರೋಧವಾಗಿ ದುಷ್ಕೃತ್ಯಗಳನ್ನು ಮಾಡಿದರು. ಆದ್ದರಿಂದ ಫಿಲಿಷ್ಟಿಯರು ನಲವತ್ತು ವರ್ಷ ಅವರನ್ನು ಆಳುವಂತೆ ಯೆಹೋವನು ಮಾಡಿದನು. [PE][PS]
2. ಚೊರ್ಗಾ ನಗರದಲ್ಲಿ ಒಬ್ಬ ಮನುಷ್ಯನಿದ್ದನು. ಅವನ ಹೆಸರು ಮಾನೋಹ, ಅವನು ದಾನ್ ಕುಲದವನಾಗಿದ್ದನು. ಮಾನೋಹನಿಗೆ ಒಬ್ಬ ಹೆಂಡತಿಯಿದ್ದಳು. ಆದರೆ ಅವಳು ಬಂಜೆಯಾಗಿದ್ದಳು.
3. ಒಮ್ಮೆ ಯೆಹೋವನ ದೂತನು ಮಾನೋಹನ ಹೆಂಡತಿಗೆ ಪ್ರತ್ಯಕ್ಷನಾಗಿ, “ನೀನು ಮಕ್ಕಳನ್ನು ಪಡೆಯಲು ಸಾಧ್ಯವಾಗಿಲ್ಲ; ಆದರೆ ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ.
4. ದ್ರಾಕ್ಷಾರಸವನ್ನಾಗಲಿ ಬೇರೆ ಯಾವ ಮದ್ಯವನ್ನಾಗಲಿ ಕುಡಿಯಬೇಡ; ಯಾವ ನಿಷಿದ್ಧ ಪದಾರ್ಥವನ್ನೂ ಊಟಮಾಡಬೇಡ.
5. ಏಕೆಂದರೆ ನೀನು ಗರ್ಭವತಿಯಾಗಿರುವೆ ಮತ್ತು ನಿನಗೊಬ್ಬ ಮಗನು ಹುಟ್ಟಲಿದ್ದಾನೆ. ಅವನು ಹುಟ್ಟಿದಂದಿನಿಂದಲೇ ದೇವರಿಗೆ ಪ್ರತಿಷ್ಠಿತನಾಗಿದ್ದಾನೆ. ಆದ್ದರಿಂದ ಅವನ ಕೂದಲನ್ನು ಕತ್ತರಿಸಕೂಡದು. ಅವನು ಇಸ್ರೇಲರನ್ನು ಫಿಲಿಷ್ಟಿಯರ ಹಿಡಿತದಿಂದ ಬಿಡಿಸುವನು” ಎಂದು ಹೇಳಿದನು. [PE][PS]
6. ಆಗ ಆ ಸ್ತ್ರೀಯು ತನ್ನ ಗಂಡನ ಬಳಿಗೆ ಹೋಗಿ, “ಒಬ್ಬ ದೇವಪುರುಷನು ನನ್ನಲ್ಲಿಗೆ ಬಂದನು. ಅವನು ದೇವರಿಂದ ಬಂದ ದೇವದೂತನಂತೆ ಕಂಡನು. ನನಗೆ ಭಯವಾಯಿತು. ನಾನು ಅವನಿಗೆ, ‘ನೀನು ಎಲ್ಲಿಂದ ಬಂದೆ?’ ಎಂದು ಕೇಳಲಿಲ್ಲ; ಅವನೂ ನನಗೆ ತನ್ನ ಹೆಸರನ್ನು ಹೇಳಲಿಲ್ಲ.
7. ಆದರೆ ಅವನು ನನಗೆ, ‘ನೀನು ಗರ್ಭವತಿಯಾಗಿರುವೆ; ನಿನಗೊಬ್ಬ ಮಗನು ಹುಟ್ಟುತ್ತಾನೆ. ನೀನು ದ್ರಾಕ್ಷಾರಸವನ್ನಾಗಲಿ ಬೇರೆ ಯಾವ ಮದ್ಯವನ್ನಾಗಲಿ ಕುಡಿಯಬೇಡ. ಯಾವ ನಿಷಿದ್ಧ ಆಹಾರವನ್ನೂ ತಿನ್ನಬೇಡ. ಏಕೆಂದರೆ ಆ ಹುಡುಗನು ಹುಟ್ಟಿದಂದಿನಿಂದ ಸಾಯುವವರೆಗೂ ದೇವರಿಗೆ ಪ್ರತಿಷ್ಠಿತನಾಗಿರುವನು ಎಂದು ಹೇಳಿದನು’ ” ಅಂದಳು. [PE][PS]
8. ಆಗ ಮಾನೋಹನು ಯೆಹೋವನಿಗೆ, “ಸ್ವಾಮೀ, ಆ ದೇವಪುರುಷನನ್ನು ನಮ್ಮಲ್ಲಿಗೆ ಇನ್ನೊಮ್ಮೆ ದಯವಿಟ್ಟು ಕಳುಹಿಸೆಂದು ಬೇಡಿಕೊಳ್ಳುತ್ತೇವೆ. ಹುಟ್ಟಿಲಿರುವ ಮಗನಿಗಾಗಿ ನಾವು ಮಾಡಬೇಕಾದದ್ದನ್ನು ಅವನು ನಮಗೆ ತಿಳಿಸಲಿ” ಎಂದು ಬೇಡಿಕೊಂಡನು. [PE][PS]
9. ದೇವರು ಮಾನೋಹನ ಪ್ರಾರ್ಥನೆಯನ್ನು ಕೇಳಿದನು. ದೇವದೂತನು ಮತ್ತೊಮ್ಮೆ ಆ ಸ್ತ್ರೀಯ ಬಳಿಗೆ ಬಂದನು. ಆಗ ಅವಳು ಹೊಲದಲ್ಲಿ ಕುಳಿತಿದ್ದಳು; ಅವಳ ಗಂಡ ಅಲ್ಲಿರಲಿಲ್ಲ.
10. ಆ ಸ್ತ್ರೀಯು ಓಡಿಹೋಗಿ ತನ್ನ ಗಂಡನಿಗೆ, “ಆ ಮನುಷ್ಯನು ತಿರುಗಿ ಬಂದಿದ್ದಾನೆ, ಆ ದಿನ ನನ್ನಲ್ಲಿಗೆ ಬಂದ ಮನುಷ್ಯನು ಈಗ ಇಲ್ಲಿದ್ದಾನೆ” ಅಂದಳು. [PE][PS]
11. ಮಾನೋಹನು ಎದ್ದು ತನ್ನ ಹೆಂಡತಿಯನ್ನು ಹಿಂಬಾಲಿಸಿದನು. ಅವನು ಆ ಮನುಷ್ಯನ ಹತ್ತಿರ ಬಂದಾಗ, “ನನ್ನ ಹೆಂಡತಿಯ ಜೊತೆಗೆ ಹಿಂದೆ ಮಾತನಾಡಿದ ಮನುಷ್ಯನು ನೀನೋ?” ಎಂದು ಕೇಳಿದನು. [PE][PS] ಆ ದೇವದೂತನು, “ಹೌದು, ನಾನೇ” ಅಂದನು. [PE][PS]
12. ಮಾನೋಹನು, “ನೀನು ಹೇಳಿದ್ದು ನೆರವೇರುವುದೆಂದು ನಾನು ನಂಬುತ್ತೇನೆ. ಆ ಮಗುವಿಗೋಸ್ಕರ ನಾವು ಮಾಡತಕ್ಕದ್ದೇನು? ಅವನನ್ನು ಹೇಗೆ ನಡಿಸತಕ್ಕದ್ದು” ಎಂದು ಕೇಳಿದನು. [PE][PS]
13. ಯೆಹೋವನ ದೂತನು ಮಾನೋಹನಿಗೆ, “ನಿನ್ನ ಹೆಂಡತಿಯು ನಾನು ಹೇಳಿದ್ದೆಲ್ಲವನ್ನು ಮಾಡಬೇಕು. ಅವಳು ದ್ರಾಕ್ಷಾಫಲಗಳನ್ನು ತಿನ್ನಬಾರದು; ದ್ರಾಕ್ಷಾರಸವನ್ನಾಗಲಿ ಬೇರೆ ಯಾವ ಮದ್ಯವನ್ನಾಗಲಿ ಕುಡಿಯಬಾರದು.
14. ಅವಳು ನಿಷಿದ್ಧವಾದ ಯಾವ ಆಹಾರವನ್ನೂ ತಿನ್ನಬಾರದು. ಹೀಗೆ ನಾನು ಅವಳಿಗೆ ಆಜ್ಞಾಪಿಸಿದ್ದನ್ನೆಲ್ಲಾ ಮಾಡಬೇಕು” ಎಂದು ಹೇಳಿದನು. [PE][PS]
15. ಆಗ ಮಾನೋಹನು ಯೆಹೋವನ ದೂತನಿಗೆ, “ನೀನು ಸ್ವಲ್ಪಹೊತ್ತು ಇಲ್ಲಿಯೇ ಇರಬೇಕೆಂಬುದು ನಮ್ಮ ಇಚ್ಛೆ. ನಾವು ನಿನ್ನ ಊಟಕ್ಕಾಗಿ ಒಂದು ಮರಿಹೋತವನ್ನು ಬೇಯಿಸಿ ಬಡಿಸುತ್ತೇವೆ” ಎಂದನು. [PE][PS]
16. ಆಗ ಯೆಹೋವನ ದೂತನು ಮಾನೋಹನಿಗೆ, “ನೀನು ನನ್ನನ್ನು ಹೋಗದಂತೆ ನಿಲ್ಲಿಸಿಕೊಂಡರೂ ಸಹ ನಾನು ನಿಮ್ಮ ಆಹಾರವನ್ನು ಊಟ ಮಾಡುವುದಿಲ್ಲ. ಏನಾದರೂ ಕೊಡಬೇಕೆಂದು ನಿನಗೆ ಮನಸ್ಸಿದ್ದರೆ ಅದನ್ನು ಯೆಹೋವನಿಗೆ ಸರ್ವಾಂಗಹೋಮವಾಗಿ ಸಮರ್ಪಿಸು” ಅಂದನು. (ಅವನು ಯೆಹೋವನ ದೂತನೆಂಬುದು ಮಾನೋಹನಿಗೆ ಗೊತ್ತಿರಲಿಲ್ಲ.) [PE][PS]
17. ಆದ್ದರಿಂದ ಮಾನೋಹನು ಯೆಹೋವನ ದೂತನಿಗೆ, “ನೀನು ಹೇಳಿದ್ದು ನೆರವೇರಿದಾಗ ನಿನ್ನನ್ನು ಸನ್ಮಾನಿಸಬೇಕೆಂದಿರುತ್ತೇವೆ. ನಿನ್ನ ಹೆಸರೇನು?” ಎಂದು ಕೇಳಿದನು. [PE][PS]
18. ಯೆಹೋವನ ದೂತನು, “ನೀನು ನನ್ನ ಹೆಸರನ್ನು ಏಕೆ ಕೇಳುವೆ? ಅದು ನೀನು ನಂಬಲಾರದಷ್ಟು ಆಶ್ಚರ್ಯಕರವಾದದ್ದು” ಅಂದನು. [PE][PS]
19. ಮಾನೋಹನು ಒಂದು ಮರಿಹೋತವನ್ನೂ ಧಾನ್ಯದ್ರವ್ಯವನ್ನೂ ತಂದು ಬಂಡೆಯ ಮೇಲಿಟ್ಟು ಯೆಹೋವನಿಗೆ ಸಮರ್ಪಿಸಿದನು.
20. ಮಾನೋಹ ಮತ್ತು ಅವನ ಹೆಂಡತಿಯ ಕಣ್ಣೆದುರಿನಲ್ಲಿಯೇ ಯಜ್ಞವೇದಿಕೆಯಿಂದ ಆಕಾಶಕ್ಕೆ ಹೋಗುತ್ತಿರುವ ಅಗ್ನಿಜ್ವಾಲೆಯಲ್ಲಿ ಆ ಯೆಹೋವನ ದೂತನು ಆಕಾಶಕ್ಕೆ ಏರಿ ಹೋದನು. [PE][PS] ಮಾನೋಹ ಮತ್ತು ಅವನ ಹೆಂಡತಿ ಅದನ್ನು ಕಂಡು ನೆಲದ ಮೇಲೆ ಅಡ್ಡಬಿದ್ದರು.
21. ಆ ಮನುಷ್ಯನು ನಿಜವಾಗಿಯೂ ಯೆಹೋವನ ದೂತನೆಂದು ಕೊನೆಗೆ ಮಾನೋಹನು ಅರಿತುಕೊಂಡನು. ಯೆಹೋವನ ದೂತನು ಅವರಿಗೆ ಪುನಃ ಕಾಣಿಸಲಿಲ್ಲ.
22. ನಂತರ ಮಾನೋಹನು ತನ್ನ ಹೆಂಡತಿಗೆ, “ನಾವು ದೇವರನ್ನು ಕಣ್ಣಾರೆ ಕಂಡೆವು, ಆದ್ದರಿಂದ ಖಂಡಿತವಾಗಿ ನಾವು ಸತ್ತುಹೋಗುತ್ತೇವೆ” ಅಂದನು. [PE][PS]
23. ಆದರೆ ಅವನ ಹೆಂಡತಿಯು ಅವನಿಗೆ, “ಯೆಹೋವನು ನಮ್ಮನ್ನು ಕೊಲ್ಲಬಯಸುವುದಿಲ್ಲ. ಯೆಹೋವನು ನಮ್ಮನ್ನು ಕೊಲ್ಲಬೇಕೆಂದಿದ್ದರೆ ಆತನು ನಮ್ಮ ಕೈಯಿಂದ ಸರ್ವಾಂಗಹೋಮವನ್ನೂ ಧಾನ್ಯಸಮರ್ಪಣೆಯನ್ನೂ ಸ್ವೀಕರಿಸುತ್ತಿರಲಿಲ್ಲ; ಆತನು ಇವುಗಳನ್ನೆಲ್ಲಾ ನಮಗೆ ತೋರಿಸುತ್ತಿರಲಿಲ್ಲ; ಇದನ್ನೆಲ್ಲ ನಮಗೆ ಹೇಳುತ್ತಿರಲಿಲ್ಲ” ಅಂದಳು. [PE][PS]
24. ಆ ಸ್ತ್ರೀಗೆ ಒಂದು ಗಂಡುಮಗು ಜನಿಸಿತು. ಅವಳು ಅದಕ್ಕೆ ಸಂಸೋನ ಎಂದು ಹೆಸರಿಟ್ಟಳು. ಸಂಸೋನನು ಬೆಳೆದು ದೊಡ್ಡವನಾದನು. ಯೆಹೋವನು ಅವನನ್ನು ಆಶೀರ್ವದಿಸಿದನು.
25. ಅವನು ಮಾಹಾನೆಹದಾನ ನಗರದಲ್ಲಿದ್ದಾಗ ಯೆಹೋವನ ಆತ್ಮವು ಸಂಸೋನನನ್ನು ಪ್ರೇರೇಪಿಸತೊಡಗಿತು. ಈ ನಗರವು ಚೊರ್ಗ ಮತ್ತು ಎಷ್ಟಾವೋಲ್ ನಗರಗಳ ಮಧ್ಯದಲ್ಲಿದೆ. [PE]