1. ಜೋರ್ಡನ್ ನದಿಯ ಪಶ್ಚಿಮದ ಎಲ್ಲ ಅರಸರು ಈ ವಿಷಯಗಳ ಬಗ್ಗೆ ಕೇಳಿದರು. ಇವರು ಹಿತ್ತಿಯರ, ಅಮೋರಿಯರ, ಕಾನಾನ್ಯರ, ಪೆರಿಜ್ಜೀಯರ, ಹಿವ್ವಿಯರ, ಯೆಬೂಸಿಯರ ರಾಜರಾಗಿದ್ದರು. ಅವರು ಬೆಟ್ಟಪ್ರದೇಶಗಳಲ್ಲಿ ಮತ್ತು ಸಮತಲ ಪ್ರದೇಶಗಳಲ್ಲಿ ವಾಸವಾಗಿದ್ದರು. ಅವರು ಭೂಮಧ್ಯಸಾಗರದ ತೀರ ಪ್ರದೇಶದಲ್ಲಿ, ಲೆಬನೋನಿನವರೆಗೆ ಸಹ ವಾಸವಾಗಿದ್ದರು.
|
2. ಈ ಎಲ್ಲ ಅರಸರು ಒಂದು ಕಡೆ ಸೇರಿದರು. ಅವರು ಯೆಹೋಶುವನ ಮತ್ತು ಇಸ್ರೇಲರ ವಿರುದ್ಧ ಯುದ್ಧ ಮಾಡುವ ಯೋಜನೆಗಳನ್ನು ಹಾಕಿಕೊಂಡರು.
|
4. ಇಸ್ರೇಲರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಒಂದು ಉಪಾಯಮಾಡಿದರು. ಅವರು ಹರುಕು-ಮುರುಕಾದ ಹಳೆಯ ದ್ರಾಕ್ಷಾರಸದ ಬುದ್ದಲಿಗಳನ್ನು ತಮ್ಮ ಕತ್ತೆಗಳ ಬೆನ್ನ ಮೇಲೆ ಹೇರಿಸಿದರು; ತಾವು ಬಹುದೂರ ಪ್ರಯಾಣ ಮಾಡಿ ಬಂದಿರುವುದಾಗಿ ತೋರಿಸಲು ತಮ್ಮ ಕತ್ತೆಗಳ ಮೇಲೆ ಹಳೆಯ ಗೋಣಿಚೀಲಗಳನ್ನು ಹಾಕಿದರು.
|
5. ಅವರು ಹಳೆಯ ಪಾದರಕ್ಷೆಗಳನ್ನು ಮೆಟ್ಟಿಕೊಂಡರು; ಹಳೆಯ ಬಟ್ಟೆಗಳನ್ನು ಧರಿಸಿಕೊಂಡರು; ಒಣಗಿದ ಮತ್ತು ಕೆಟ್ಟುಹೋದ ರೊಟ್ಟಿಗಳನ್ನು ಕಟ್ಟಿಕೊಂಡರು. ಹೀಗೆ ಅವರು ಬಹುದೂರ ಪ್ರಯಾಣಮಾಡಿ ಬಂದವರಂತೆ ತೋರಿಸಿಕೊಂಡರು.
|
6. ಅವರು ಇಸ್ರೇಲರ ಪಾಳೆಯಕ್ಕೆ ಹೋದರು. ಈ ಪಾಳೆಯವು ಗಿಲ್ಗಾಲಿನ ಹತ್ತಿರ ಇತ್ತು. ಅವರು ಯೆಹೋಶುವನ ಬಳಿಗೆ ಹೋಗಿ ಅವನಿಗೆ, “ನಾವು ಬಹುದೂರ ದೇಶದಿಂದ ಪ್ರಯಾಣ ಮಾಡಿ ಬಂದಿದ್ದೇವೆ. ನಾವು ನಿಮ್ಮ ಜೊತೆ ಶಾಂತಿ ಒಪ್ಪಂದವನ್ನು ಮಾಡಿಕೊಳ್ಳಲು ಇಚ್ಛಿಸುತ್ತೇವೆ” ಎಂದು ಹೇಳಿದರು.
|
7. ಹಿವ್ವಿಯರಾದ ಅವರಿಗೆ ಇಸ್ರೇಲಿನ ಜನರು, “ಒಂದುವೇಳೆ ನೀವು ನಮ್ಮನ್ನು ಮೋಸಗೊಳಿಸಲು ಪ್ರಯತ್ನಿಸುತ್ತಿರಬಹುದು. ಒಂದುವೇಳೆ ನೀವು ನಮ್ಮ ಹತ್ತಿರದಲ್ಲಿಯೇ ವಾಸಮಾಡುತ್ತಿರಬಹುದು; ನೀವು ಎಲ್ಲಿಯವರು ಎಂಬುದು ನಮಗೆ ಗೊತ್ತಾಗುವವರೆಗೆ ನಾವು ನಿಮ್ಮ ಸಂಗಡ ಶಾಂತಿ ಒಪ್ಪಂದವನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ” ಎಂದು ಉತ್ತರಕೊಟ್ಟರು.
|
8. ಹಿವ್ವಿಯರು ಯೆಹೋಶುವನಿಗೆ, “ನಾವು ನಿಮ್ಮ ಸೇವಕರು” ಎಂದು ಹೇಳಿದರು. ಆದರೆ ಯೆಹೋಶುವನು, “ನೀವು ಯಾರು? ಎಲ್ಲಿಂದ ಬಂದಿರುವಿರಿ?” ಎಂದು ಪ್ರಶ್ನಿಸಿದನು.
|
10. ಆತನು ಜೋರ್ಡನ್ ನದಿಯ ಪೂರ್ವದಲ್ಲಿರುವ ಅಮೋರಿಯರ ಇಬ್ಬರು ಅರಸರನ್ನು ಸೋಲಿಸಿದ್ದನ್ನು ನಾವು ಕೇಳಿದೆವು. ಹೆಷ್ಬೋನಿನ ಅರಸನಾದ ಸೀಹೋನ್ ಮತ್ತು ಅಷ್ಟರೋತಿನಲ್ಲಿ ವಾಸವಾಗಿದ್ದ ಬಾಷಾನಿನ ಅರಸನಾದ ಓಗ್ ಇವರೇ ಆ ಅರಸರು.
|
11. ಆದುದರಿಂದ ನಮ್ಮ ಹಿರಿಯರು ಮತ್ತು ನಮ್ಮ ಜನರು ನಮಗೆ, ‘ನಿಮ್ಮ ಪ್ರಯಾಣಕ್ಕೆ ಸಾಕಷ್ಟು ಆಹಾರವನ್ನು ತೆಗೆದುಕೊಂಡು ಹೋಗಿ ಇಸ್ರೇಲರನ್ನು ಭೇಟಿಮಾಡಿ, ‘ನಾವು ನಿಮ್ಮ ಸೇವಕರು. ನಮ್ಮ ಜೊತೆ ಶಾಂತಿ ಒಪ್ಪಂದವನ್ನು ಮಾಡಿಕೊಳ್ಳಿರಿ’ ಎಂದು ಅವರಿಗೆ ತಿಳಿಸಿ’ ಎಂಬುದಾಗಿ ಹೇಳಿ ನಮ್ಮನ್ನು ಕಳುಹಿಸಿದ್ದಾರೆ.
|
12. “ನಮ್ಮ ರೊಟ್ಟಿಯನ್ನು ನೋಡಿರಿ, ನಾವು ಮನೆಯನ್ನು ಬಿಟ್ಟಾಗ ಬಿಸಿಯಾಗಿತ್ತು ಮತ್ತು ಮೃದುವಾಗಿತ್ತು. ಆದರೆ ಈಗ ಅವುಗಳನ್ನು ನೋಡಿರಿ, ಒಣಗಿಹೋಗಿವೆ.
|
13. ನಮ್ಮ ದ್ರಾಕ್ಷಾರಸದ ಬುದ್ದಲಿಗಳನ್ನು ನೋಡಿರಿ, ನಾವು ಮನೆಯನ್ನು ಬಿಟ್ಟಾಗ ಅವು ಹೊಸದಾಗಿದ್ದವು ಮತ್ತು ದ್ರಾಕ್ಷಾರಸದಿಂದ ತುಂಬಿದ್ದವು. ಆದರೆ ಈಗ ಹಳೆಯದಾಗಿ ಹರಿದುಹೋಗಿವೆ. ನಮ್ಮ ಬಟ್ಟೆಗಳನ್ನು ಮತ್ತು ಪಾದರಕ್ಷೆಗಳನ್ನು ನೋಡಿರಿ, ಈಗ ಅವು ದೂರ ಪ್ರಯಾಣದಿಂದ ಹಾಳಾಗಿಹೋಗಿವೆ” ಎಂದು ಹೇಳಿದರು.
|
14. ಅವರು ಹೇಳುತ್ತಿರುವುದು ನಿಜವೇ ಎಂದು ತಿಳಿದುಕೊಳ್ಳಲು ಇಸ್ರೇಲರು ಅವರ ರೊಟ್ಟಿಯನ್ನು ತಿಂದು ನೋಡಿದರು; ಆದರೆ ತಾವು ಏನು ಮಾಡಬೇಕೆಂದು ಯೆಹೋವನನ್ನು ಕೇಳಲಿಲ್ಲ.
|
15. ಯೆಹೋಶುವನು ಅವರೊಂದಿಗೆ ಶಾಂತಿ ಒಪ್ಪಂದವನ್ನು ಮಾಡಿಕೊಳ್ಳಲು ಒಪ್ಪಿಕೊಂಡನು. ಅವರು ಜೀವಸಹಿತ ಇರಲು ಅವಕಾಶ ಮಾಡಿಕೊಟ್ಟನು. ಯೆಹೋಶುವನ ಈ ಒಪ್ಪಂದಕ್ಕೆ ಇಸ್ರೇಲಿನ ಜನನಾಯಕರು ಒಪ್ಪಿಕೊಂಡರು.
|
17. ಆದುದರಿಂದ ಇಸ್ರೇಲರು ಅವರಿದ್ದ ಸ್ಥಳಕ್ಕೆ ಹೋದರು. ಮೂರನೆಯ ದಿನ ಇಸ್ರೇಲರು ಗಿಬ್ಯೋನ್, ಕೆಫೀರಾ, ಬೇರೋತ್ ಮತ್ತು ಕಿರ್ಯತ್ಯಾರೀಮ್ ಪಟ್ಟಣಗಳಿಗೆ ಬಂದರು.
|
18. ಆದರೆ ಇಸ್ರೇಲರ ಸೈನ್ಯವು ಆ ಪಟ್ಟಣದ ಜನರೊಂದಿಗೆ ಯುದ್ಧಮಾಡಲಿಲ್ಲ. ಅವರು ಆ ಜನರೊಂದಿಗೆ ಶಾಂತಿ ಒಪ್ಪಂದ ಮಾಡಿಕೊಂಡಿದ್ದರು. ಅವರು ಇಸ್ರೇಲಿನ ದೇವರಾದ ಯೆಹೋವನ ಹೆಸರಿನಲ್ಲಿ ಪ್ರಮಾಣ ಮಾಡಿದ್ದರು. ಒಪ್ಪಂದವನ್ನು ಮಾಡಿಕೊಂಡ ಜನನಾಯಕರ ಬಗ್ಗೆ ಜನರೆಲ್ಲರೂ ಅಸಮಾಧಾನ ವ್ಯಕ್ತಪಡಿಸಿದರು.
|
19. ಆದರೆ ಜನನಾಯಕರು, “ನಾವು ಮಾತುಕೊಟ್ಟಿದ್ದೇವೆ; ಇಸ್ರೇಲಿನ ದೇವರಾದ ಯೆಹೋವನ ಮುಂದೆ ಪ್ರಮಾಣ ಮಾಡಿದ್ದೇವೆ; ಈಗ ನಾವು ಅವರ ವಿರುದ್ಧ ಯುದ್ಧ ಮಾಡಲು ಸಾಧ್ಯವಿಲ್ಲ.
|
20. ನಾವು ಅವರನ್ನು ಜೀವಂತವಾಗಿ ಉಳಿಸಲೇಬೇಕು. ನಾವು ಅವರಿಗೆ ಕೊಟ್ಟ ಮಾತನ್ನು ಮೀರಿದರೆ ದೇವರ ಕೋಪಕ್ಕೆ ಗುರಿಯಾಗುತ್ತೇವೆ.
|
21. ಆದ್ದರಿಂದ ಅವರು ಜೀವಂತವಾಗಿ ಉಳಿಯಲಿ. ಆದರೆ ಅವರು ನಮ್ಮ ಸೇವಕರಾಗಲಿ. ಅವರು ನಮಗಾಗಿ ಸೌಧೆಯನ್ನು ಕಡಿಯಲಿ ಮತ್ತು ನಮ್ಮೆಲ್ಲರಿಗಾಗಿ ನೀರು ತಂದುಹಾಕಲಿ” ಎಂದು ಉತ್ತರಿಸಿದರು. ಹೀಗೆ ಜನನಾಯಕರು ಆ ಜನರೊಂದಿಗೆ ಮಾಡಿಕೊಂಡ ಶಾಂತಿ ಒಪ್ಪಂದವನ್ನು ಮುರಿಯಲಿಲ್ಲ.
|
22. ಯೆಹೋಶುವನು ಗಿಬ್ಯೋನಿನ ಜನರನ್ನು ಕರೆದು, “ನೀವು ನಮಗೆ ಸುಳ್ಳು ಹೇಳಿದ್ದೇಕೆ? ನಿಮ್ಮ ನಾಡು ನಮ್ಮ ಪಾಳೆಯದ ಹತ್ತಿರವೇ ಇತ್ತು. ಆದರೆ ನೀವು ನಿಮ್ಮನ್ನು ದೂರದೇಶದವರು ಎಂದು ಹೇಳಿಕೊಂಡಿರಿ.
|
23. ಈಗ ನೀವು ಶಾಪಕ್ಕೆ ಗುರಿಯಾಗಿದ್ದೀರಿ. ದೇವರ ಮಂದಿರಕ್ಕಾಗಿ ಸೌಧೆಯನ್ನು ಕಡಿಯುವುದೂ ನೀರನ್ನು ಹೊರುವುದೂ ನಿಮಗೆಂದಿಗೂ ತಪ್ಪಿದ್ದಿಲ್ಲ” ಎಂದು ಹೇಳಿದನು.
|
24. ಗಿಬ್ಯೋನ್ಯರು, “ನೀವು ನಮ್ಮನ್ನು ಕೊಲ್ಲಬಹುದೆಂಬ ಭಯದಿಂದ ನಾವು ನಿಮಗೆ ಸುಳ್ಳು ಹೇಳಿದೆವು; ದೇವರು ತನ್ನ ಸೇವಕನಾದ ಮೋಶೆಗೆ ಈ ಎಲ್ಲ ಭೂಪ್ರದೇಶವನ್ನು ನಿಮಗೆ ಕೊಡಬೇಕೆಂದು ಆಜ್ಞಾಪಿಸಿರುವುದನ್ನೂ ಈ ಪ್ರದೇಶದ ಎಲ್ಲ ಜನರನ್ನು ಕೊಂದುಬಿಡಬೇಕೆಂದು ನಿಮಗೆ ಹೇಳಿರುವನೆಂದೂ ನಾವು ಕೇಳಿದ್ದೆವು. ಆದ್ದರಿಂದ ನಾವು ನಿಮಗೆ ಸುಳ್ಳು ಹೇಳಿದೆವು.
|
26. ಹೀಗೆ ಗಿಬ್ಯೋನಿನ ಜನರು ಗುಲಾಮರಾದರು. ಆದರೆ ಯೆಹೋಶುವನು ಅವರನ್ನು ಜೀವಂತವಾಗಿ ಉಳಿಸಿದನು. ಇಸ್ರೇಲರು ಅವರನ್ನು ಕೊಲ್ಲದಂತೆ ನೋಡಿಕೊಂಡರು.
|
27. ಯೆಹೋಶುವನು ಗಿಬ್ಯೋನಿನ ಜನರನ್ನು ಇಸ್ರೇಲರ ಸೇವಕರನ್ನಾಗಿ ಮಾಡಿಕೊಂಡನು. ತನ್ನ ನಿವಾಸಕ್ಕಾಗಿ ಯೆಹೋವನು ಆರಿಸಿಕೊಳ್ಳುವ ಸ್ಥಳಗಳಲ್ಲಿ ಅವರು ಇಸ್ರೇಲರಿಗಾಗಿಯೂ ಯೆಹೋವನ ಯಜ್ಞವೇದಿಕೆಗಾಗಿಯೂ ಮರವನ್ನು ಕಡಿಯುತ್ತಿದ್ದರು ಮತ್ತು ನೀರನ್ನು ಹೊರುತ್ತಿದ್ದರು. ಆ ಜನರು ಇಂದಿಗೂ ಗುಲಾಮರಾಗಿಯೇ ಇದ್ದಾರೆ. ಸೂರ್ಯನು ನಿಶ್ಚಲನಾಗಿ ನಿಂತ ದಿನ
|