1. {ಯೆರೆಮೀಯನನ್ನು ಕಾರಾಗೃಹದಲ್ಲಿಡಲಾಯಿತು} [PS] ನೆಬೂಕದ್ನೆಚ್ಚರನು ಬಾಬಿಲೋನಿನ ರಾಜನಾಗಿದ್ದನು. ನೆಬೂಕದ್ನೆಚ್ಚರನು ಯೆಹೋಯಾಕೀಮನ ಮಗನಾದ ಕೊನ್ಯನ ಸ್ಥಾನದಲ್ಲಿ ಚಿದ್ಕೀಯನನ್ನು ಯೆಹೂದದ ರಾಜನನ್ನಾಗಿ ನೇಮಿಸಿದ್ದನು. ಚಿದ್ಕೀಯನು ರಾಜನಾದ ಯೋಷೀಯನ ಮಗನಾಗಿದ್ದನು.
2. ಆದರೆ ಯೆಹೋವನು ಯೆರೆಮೀಯನಿಗೆ ಪ್ರವಾದನೆ ಮಾಡಲು ಹೇಳಿದ ಸಂದೇಶಗಳ ಕಡೆಗೆ ಗಮನ ಕೊಡಲಿಲ್ಲ. ಚಿದ್ಕೀಯನ ಸೇವಕರು ಮತ್ತು ಯೆಹೂದದ ಜನರು ಯೆಹೋವನ ಸಂದೇಶಗಳಿಗೆ ಯಾವ ಗಮನವನ್ನೂ ಕೊಡಲಿಲ್ಲ. [PE][PS]
3. ರಾಜನಾದ ಚಿದ್ಕೀಯನು ಶೆಲೆಮ್ಯನ ಮಗನಾದ ಯೆಹೂಕಲನನ್ನು ಮತ್ತು ಮಾಸೇಯನ ಮಗನಾದ ಯಾಜಕ ಚೆಫನನನ್ನು ಒಂದು ಸಂದೇಶದೊಂದಿಗೆ ಯೆರೆಮೀಯನಲ್ಲಿಗೆ ಕಳುಹಿಸಿದನು. ಯೆರೆಮೀಯನಿಗೆ ಅವರು ತಂದ ಸಂದೇಶ ಹೀಗಿತ್ತು: “ಯೆರಮೀಯನೇ, ನಮ್ಮ ದೇವರಾದ ಯೆಹೋವನನ್ನು ನಮಗಾಗಿ ಪ್ರಾರ್ಥಿಸು.” [PE][PS]
4. (ಆ ಕಾಲದಲ್ಲಿ ಯೆರೆಮೀಯನನ್ನು ಇನ್ನೂ ಕಾರಾಗೃಹದಲ್ಲಿಟ್ಟಿರಲಿಲ್ಲ. ಅವನು ತನ್ನ ಮನಬಂದ ಕಡೆ ಹೋಗಲು ಸಬತಂತ್ರನಾಗಿದ್ದನು.
5. ಅದಲ್ಲದೆ ಆಗ ಫರೋಹನ ಸೈನ್ಯವು ಈಜಿಪ್ಟಿನಿಂದ ಯೆಹೂದದ ಕಡೆಗೆ ಹೊರಟಿತ್ತು. ಜೆರುಸಲೇಮ್ ನಗರವನ್ನು ಸ್ವಾಧೀನಪಡಿಸಿಕೊಳ್ಳುವ ಉದ್ದೇಶದಿಂದ ಬಾಬಿಲೋನ್ ಸೈನ್ಯವು ಜೆರುಸಲೇಮ್ ನಗರಕ್ಕೆ ಮುತ್ತಿಗೆ ಹಾಕಿತ್ತು. ಆಗ ಈಜಿಪ್ಟಿನ ಸೈನ್ಯವು ತಮ್ಮ ಕಡೆ ಬರುತ್ತಿದೆ ಎಂಬ ಸಮಾಚಾರವು ಬಂದಿತು. ಅದನ್ನು ಕೇಳಿ ಬಾಬಿಲೋನಿನ ಸೈನ್ಯವು ಈಜಿಪ್ಟಿನ ಸೈನ್ಯವನ್ನೆದುರಿಸಲು ಜೆರುಸಲೇಮನ್ನು ಬಿಟ್ಟುಹೋಗಿತ್ತು.) [PE][PS]
6. ಪ್ರವಾದಿಯಾದ ಯೆರೆಮೀಯನಿಗೆ ಯೆಹೋವನಿಂದ ಸಂದೇಶ ಬಂದಿತು:
7. “ಇಸ್ರೇಲಿನ ದೇವರಾದ ಯೆಹೋವನು ಹೀಗೆನ್ನುತ್ತಾನೆ: ‘ಯೆಹೂಕಲನೇ ಮತ್ತು ಚೆಫನ್ಯನೇ, ಯೆಹೂದದ ರಾಜನಾದ ಚಿದ್ಕೀಯನು ನನಗೆ ಪ್ರಶ್ನೆಗಳನ್ನು ಕೇಳುವದಕ್ಕಾಗಿ ನಿಮ್ಮನ್ನು ನನ್ನಲ್ಲಿಗೆ ಕಳಿಸಿದ್ದಾನೆಂಬುದು ನನಗೆ ಗೊತ್ತು. ರಾಜನಾದ ಚಿದ್ಕೀಯನಿಗೆ ಹೀಗೆ ಹೇಳಿರಿ. ಬಾಬಿಲೋನಿನ ಸೈನ್ಯದ ವಿರುದ್ಧ ನಿಮಗೆ ಸಹಾಯ ಮಾಡಲು ಇಲ್ಲಿಗೆ ಬರುವದಕ್ಕಾಗಿ ಫರೋಹನ ಸೈನ್ಯವು ಈಜಿಪ್ಟಿನಿಂದ ಹೊರಟಿತು. ಆದರೆ ಫರೋಹನ ಸೈನ್ಯವು ಈಜಿಪ್ಟಿಗೆ ಹಿಂದಿರುಗುವುದು.
8. ಬಳಿಕ ಬಾಬಿಲೋನಿನ ಸೈನ್ಯವು ಇಲ್ಲಿಗೆ ಬರುವುದು. ಅವರು ಜೆರುಸಲೇಮಿನ ಮೇಲೆ ಧಾಳಿ ಮಾಡುವರು. ಆಗ ಬಾಬಿಲೋನಿನ ಆ ಸೈನ್ಯವು ಜೆರುಸಲೇಮನ್ನು ವಶಪಡಿಸಿಕೊಂಡು ಅದನ್ನು ಸುಟ್ಟುಹಾಕುವುದು.’
9. ಯೆಹೋವನು ಹೀಗೆನ್ನುತ್ತಾನೆ: ‘ಜೆರುಸಲೇಮ್ ನಿವಾಸಿಗಳೇ “ಬಾಬಿಲೋನ್ ಸೈನಿಕರು ಖಂಡಿತವಾಗಿಯೂ ನಮ್ಮನ್ನು ಬಿಟ್ಟುಹೋಗುವರು” ಎಂದು ನಿಮಗೆ ನೀವೇ ಹೇಳಿಕೊಂಡು ನಿಮ್ಮನ್ನು ಮೂರ್ಖರನ್ನಾಗಿ ಮಾಡಿಕೊಳ್ಳಬೇಡಿ, ಅವರು ನಿಮ್ಮನ್ನು ಬಿಟ್ಟುಹೋಗುವದಿಲ್ಲ.
10. ಜೆರುಸಲೇಮಿನ ಜನರೇ, ನಿಮ್ಮ ಮೇಲೆ ಧಾಳಿ ಮಾಡುವ ಬಾಬಿಲೋನಿನ ಎಲ್ಲಾ ಸೈನಿಕರನ್ನು ನೀವು ಸೋಲಿಸಿದರೂ ಅವರ ಗುಡಾರದಲ್ಲಿ ಕೆಲವು ಜನ ಗಾಯಗೊಂಡವರು ಉಳಿದಿರುತ್ತಾರೆ. ಆ ಗಾಯಾಳುಗಳೇ ತಮ್ಮ ಗುಡಾರದಿಂದ ಹೊರಬಂದು ಜೆರುಸಲೇಮನ್ನು ಸುಟ್ಟುಹಾಕುವರು.’ ” [PE][PS]
11. ಈಜಿಪ್ಟ್ ದೇಶದ ಫರೋಹನ ಸೈನ್ಯದೊಂದಿಗೆ ಕಾದಾಡಲು ಬಾಬಿಲೋನಿನ ಸೈನ್ಯವು ಜೆರುಸಲೇಮನ್ನು ಬಿಟ್ಟುಹೋದ ಮೇಲೆ
12. ಯೆರೆಮೀಯನು ಜೆರುಸಲೇಮಿನಿಂದ ಬೆನ್ಯಾಮೀನ್ ಪ್ರದೇಶಕ್ಕೆ ಹೋಗ ಬಯಸಿದನು. ತನ್ನ ಮನೆತನಕ್ಕೆ ಸೇರಿದ ಆಸ್ತಿಯ ವಿಭಜನೆಗಾಗಿ ಅವನು ಹೋಗುತ್ತಿದ್ದನು.
13. ಆದರೆ ಯೆರೆಮೀಯನು ಜೆರುಸಲೇಮಿನ ಬೆನ್ಯಾಮೀನ್ ಹೆಬ್ಬಾಗಿಲಿನ ಹತ್ತಿರ ಹೋದಾಗ ಪಹರೆದಾರರ ಮುಖ್ಯಸ್ಥನು ಅವನನ್ನು ಹಿಡಿದುಕೊಂಡನು. ಆ ಮುಖ್ಯಸ್ಥನ ಹೆಸರು ಇರೀಯ. ಇರೀಯನು ಶೆಲೆಮ್ಯನ ಮಗನು; ಶೆಲೆಮ್ಯನು ಹನನ್ಯನ ಮಗನು. ಮುಖ್ಯಸ್ಥನಾದ ಇರೀಯನು ಯೆರೆಮೀಯನನ್ನು ಹಿಡಿದುಕೊಂಡು, “ಯೆರೆಮೀಯನೇ, ನೀನು ಬಾಬಿಲೋನಿನ ಕಡೆ ಸೇರಿಕೊಳ್ಳುವದಕ್ಕಾಗಿ ನಮ್ಮನ್ನು ಬಿಟ್ಟುಹೋಗುತ್ತಿರುವೆ” ಎಂದನು. [PE][PS]
14. “ಅದು ನಿಜವಲ್ಲ, ಬಾಬಿಲೋನಿನವರ ಕಡೆ ಸೇರಿಕೊಳ್ಳಲು ನಾನು ಬಿಟ್ಟುಹೋಗುತ್ತಿಲ್ಲ” ಎಂದು ಯೆರೆಮೀಯನು ಇರೀಯನಿಗೆ ಹೇಳಿದನು. ಆದರೆ ಇರೀಯನು ಯೆರೆಮೀಯನ ಮಾತುಗಳನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಇರೀಯನು ಯೆರೆಮೀಯನನ್ನು ಬಂಧಿಸಿ ಜೆರುಸಲೇಮಿನ ರಾಜಾಧಿಕಾರಿಗಳ ಬಳಿಗೆ ಕರೆದೊಯ್ದನು.
15. ಆ ಅಧಿಕಾರಿಗಳು ಯೆರೆಮೀಯನ ಮೇಲೆ ತುಂಬಾ ಕೋಪಗೊಂಡರು. ಯೆರೆಮೀಯನನ್ನು ಹೊಡೆಯಬೇಕೆಂದು ಅವರು ಆಜ್ಞೆಯಿತ್ತರು. ಆಮೇಲೆ ಅವರು ಯೆರೆಮೀಯನನ್ನು ಸೆರೆಮನೆಯಲ್ಲಿಟ್ಟರು. ಆ ಸೆರೆಮನೆಯು ಯೆಹೋನಾಥಾನನೆಂಬುವನ ಮನೆಯಲ್ಲಿತ್ತು. ಯೆಹೋನಾಥಾನನು ಯೆಹೂದದ ರಾಜನ ಲಿಫಿಗಾರನಾಗಿದ್ದನು. ಯೆಹೋನಾಥಾನನ ಮನೆಯನ್ನು ಸೆರೆಮನೆಯನ್ನಾಗಿ ಮಾಡಲಾಗಿತ್ತು.
16. ಅವರು ಯೆರೆಮೀಯನನ್ನು ಯೆಹೋನಾಥಾನನ ನೆಲಮನೆಯ ಒಂದು ಕೋಣೆಯಲ್ಲಿಟ್ಟರು. ಆ ಕೋಣೆಯು ನೆಲಮನೆಯ ಕೆಳಭಾಗದಲ್ಲಿತ್ತು. ಯೆರೆಮೀಯನು ಅಲ್ಲಿ ಬಹಳ ದಿವಸಗಳವರೆಗೆ ಇದ್ದನು. [PE][PS]
17. ಆಗ ರಾಜನಾದ ಚಿದ್ಕೀಯನು ಯೆರೆಮೀಯನನ್ನು ತನ್ನ ಅರಮನೆಗೆ ಕರೆತರಿಸಿದನು. ಚಿದ್ಕೀಯನು ಯೆರೆಮೀಯನೊಂದಿಗೆ ರಹಸ್ಯವಾಗಿ ಮಾತನಾಡಿ, “ಯೆಹೋವನಿಂದ ಏನಾದರೂ ಸಂದೇಶವಿದೆಯೊ?” ಎಂದು ಕೇಳಿದನು. [PE][PS] “ಹೌದು, ಯೆಹೋವನಿಂದ ಒಂದು ಸಂದೇಶವಿದೆ. ಚಿದ್ಕೀಯನೇ, ನಿನ್ನನ್ನು ಬಾಬಿಲೋನಿನ ರಾಜನಿಗೆ ಒಪ್ಪಿಸಲಾಗುವುದು” ಎಂದು ಯೆರೆಮೀಯನು ಉತ್ತರಿಸಿದನು.
18. ಆಮೇಲೆ ಯೆರೆಮೀಯನು ರಾಜನಾದ ಚಿದ್ಕೀಯನನ್ನು ಹೀಗೆ ಕೇಳಿದನು, “ನಾನು ಏನು ತಪ್ಪು ಮಾಡಿದ್ದೇನೆ? ನಾನು ನಿನ್ನ ವಿರುದ್ಧ ಅಥವಾ ನಿನ್ನ ಅಧಿಕಾರಿಗಳ ವಿರುದ್ಧ ಅಥವಾ ಜೆರುಸಲೇಮಿನ ಜನರ ವಿರುದ್ಧ ಯಾವ ಅಪರಾಧವನ್ನು ಮಾಡಿದ್ದೇನೆ? ನೀನು ನನ್ನನ್ನು ಸೆರೆಮನೆಯಲ್ಲಿ ಏಕೆ ಹಾಕಿರುವೆ?
19. ರಾಜನಾದ ಚಿದ್ಕೀಯನೇ, ನಿನ್ನ ಪ್ರವಾದಿಗಳು ಈಗ ಎಲ್ಲಿದ್ದಾರೆ? ಆ ಪ್ರವಾದಿಗಳು ನಿನಗೆ ಸುಳ್ಳುಪ್ರವಾದನೆಯನ್ನು ಮಾಡಿದರು. ‘ಬಾಬಿಲೋನಿನ ರಾಜನು ನಿನ್ನ ಮೇಲಾಗಲಿ ಅಥವಾ ಈ ಯೆಹೂದ ಪ್ರದೇಶದ ಮೇಲಾಗಲಿ ಧಾಳಿ ಮಾಡುವದಿಲ್ಲ’ ಎಂದು ಅವರು ಹೇಳಿದ್ದರು.
20. ಆದರೆ ಯೆಹೂದದ ರಾಜನಾದ ಚಿದ್ಕೀಯನೇ, ದಯವಿಟ್ಟು ನಾನು ಹೇಳುವದನ್ನು ಕೇಳು. ನನ್ನ ಕೋರಿಕೆಯನ್ನು ದಯವಿಟ್ಟು ಕೇಳು. ನನ್ನನ್ನು ಲಿಪಿಕಾರನಾದ ಯೆಹೋನಾಥಾನನ ಮನೆಗೆ ತಿರುಗಿ ಕಳುಹಿಸಬೇಡ. ಇದೇ ನನ್ನ ಬೇಡಿಕೆ. ನೀನು ನನ್ನನ್ನು ಮತ್ತೆ ಅಲ್ಲಿಗೆ ಕಳುಹಿಸಿದರೆ ನಾನು ಅಲ್ಲಿ ಸತ್ತುಹೋಗುತ್ತೇನೆ” ಎಂದನು. [PE][PS]
21. ಆಗ ರಾಜನಾದ ಚಿದ್ಕೀಯನು ಯೆರೆಮೀಯನನ್ನು ಕಾರಾಗೃಹದ ಅಂಗಳದಲ್ಲಿಡಬೇಕೆಂದು ಮತ್ತು ಅವನಿಗೆ ಪೇಟೆಯಿಂದ ರೊಟ್ಟಿಯನ್ನು ತಂದುಕೊಡಬೇಕೆಂದು ಆಜ್ಞೆ ಮಾಡಿದನು. ನಗರದಲ್ಲಿ ರೊಟ್ಟಿ ಇರುವವರೆಗೆ ಯೆರೆಮೀಯನಿಗೆ ರೊಟ್ಟಿಯನ್ನು ಕೊಡಲಾಯಿತು. ಹೀಗೆ ಯೆರೆಮೀಯನು ಕಾರಾಗೃಹದ ಅಂಗಳದಲ್ಲಿ ಬಂಧಿಯಾಗಿದ್ದನು. [PE]