1. ಚೀಯೋನೇ, ಎಚ್ಚರಗೊಳ್ಳು, ಎದ್ದೇಳು! ನಿನ್ನ ಉಡುಪನ್ನು ಹಾಕಿಕೋ; ನಿನ್ನ ಪ್ರತಾಪವನ್ನು ಧರಿಸಿಕೋ. ಪರಿಶುದ್ಧ ಜೆರುಸಲೇಮೇ, ಎದ್ದುನಿಲ್ಲು. ಸುನ್ನತಿಯಿಲ್ಲದವರೂ ಅಶುದ್ಧರೂ ನಿನ್ನಲ್ಲಿಗೆ ಮತ್ತೇ ಪ್ರವೇಶಿಸರು.
|
2. ನಿನ್ನ ಧೂಳನ್ನು ಝಾಡಿಸು. ನಿನ್ನ ಮನೋಹರವಾದ ವಸ್ತ್ರಗಳನ್ನು ಧರಿಸಿಕೋ. ಚೀಯೋನಿನ ಕುಮಾರ್ತೆಯಾದ ಜೆರುಸಲೇಮೇ, ನೀನು ಒಮ್ಮೆ ಸೆರೆಯಾಳಾಗಿದ್ದೆ. ಈಗ ನೀನು ನಿನ್ನ ಕುತ್ತಿಗೆಗೆ ಬಂಧಿಸಲ್ಪಟ್ಟ ಸಂಕೋಲೆಗಳಿಂದ ಬಿಡಿಸಿಕೋ.
|
3. ಯೆಹೋವನು ಹೇಳುವದೇನೆಂದರೆ: “ನಾನು ನಿನ್ನನ್ನು ಮಾರಿದ್ದು ಹಣಕ್ಕಾಗಿಯಲ್ಲ; ಆದುದರಿಂದ ನಾನು ನಿನ್ನನ್ನು ಹಣಕೊಡದೆ ಬಿಡುಗಡೆ ಮಾಡುವೆನು.”
|
4. ನನ್ನ ಒಡೆಯನಾದ ಯೆಹೋವನು ಹೇಳುವದೇನೆಂದರೆ: “ನನ್ನ ಜನರು ಮೊದಲು ಈಜಿಪ್ಟಿನಲ್ಲಿ ನೆಲೆಸಲು ಹೋಗಿ, ನಂತರ ಅಲ್ಲಿ ಅವರು ದಾಸರಾದರು. ಆ ಬಳಿಕ ಅಶ್ಶೂರವು ಅವರನ್ನು ಗುಲಾಮರನ್ನಾಗಿ ಮಾಡಿತು.
|
5. ಈಗ ನೋಡು, ಸಂಭವಿಸಿದ್ದನ್ನು ಗಮನಿಸು. ಇನ್ನೊಂದು ಜನಾಂಗವು ಅವರನ್ನು ಗುಲಾಮರನ್ನಾಗಿ ಮಾಡಿತು. ಈ ದೇಶವು ನನ್ನ ಜನರನ್ನು ತೆಗೆದುಕೊಂಡು ಹೋಗಲು ಹಣ ಕೊಡಲಿಲ್ಲ. ಈ ದೇಶವು ನನ್ನ ಜನರ ಮೇಲೆ ದಬ್ಬಾಳಿಕೆ ನಡಿಸಿ ನಕ್ಕಿತ್ತು. ಈಗ ಜನರು ನನ್ನನ್ನೂ ನನ್ನ ಹೆಸರನ್ನೂ ಯಾವಾಗಲೂ ಗೇಲಿ ಮಾಡುತ್ತಾರೆ.”
|
6. ಯೆಹೋವನು ಹೇಳುವದೇನೆಂದರೆ, “ಜನರು ನನ್ನನ್ನು ತಿಳಿದುಕೊಳ್ಳಲೆಂದು ಹೀಗಾಯಿತು. ನಾನು ಯಾರೆಂದು ನನ್ನ ಜನರಿಗೆ ಗೊತ್ತಾಗುವದು. ನನ್ನ ಜನರಿಗೆ ನನ್ನ ಹೆಸರಿನ ಪರಿಚಯವಾಗುವದು. “ನಾನೇ” ಎಂಬಾತನಾದ ನಾನೇ ಅವರ ಸಂಗಡ ಮಾತನಾಡುತ್ತಿದ್ದೇನೆ ಎಂದು ಅವರಿಗೆ ಗೊತ್ತಾಗುವದು.”
|
7. ಒಬ್ಬ ಸಂದೇಶವಾಹಕನು ಬೆಟ್ಟದ ಮೇಲಿನಿಂದ ಒಳ್ಳೆಯ ಸಮಾಚಾರವನ್ನು ತರುವದು ಎಷ್ಟೋ ಅಂದವಾಗಿದೆ. ಸಂದೇಶಕಾರನು, “ನಮಗೆ ಸಮಾಧಾನವಿದೆ, ನಾವು ರಕ್ಷಿಸಲ್ಪಟ್ಟಿದ್ದೇವೆ. ಚೀಯೋನೇ, ನಿನ್ನ ದೇವರು ಅರಸನಾಗಿದ್ದಾನೆ!” ಎಂಬ ಸಂದೇಶವನ್ನು ಕೇಳುವದು ಎಷ್ಟೋ ಸಂತೋಷ ಕೊಡುವದಾಗಿದೆ.
|
8. ಪಟ್ಟಣವನ್ನು ಕಾಯುವವರು ಸಂತೋಷದಿಂದ ಹರ್ಷಧ್ವನಿ ಮಾಡುತ್ತಾರೆ. ಒಟ್ಟಾಗಿ ಸಂತಸಪಡುತ್ತಿದ್ದಾರೆ. ಯಾಕೆಂದರೆ ಯೆಹೋವನು ಚೀಯೋನಿಗೆ ಹಿಂದಿರುಗುವದನ್ನು ಪ್ರತಿಯೊಬ್ಬನು ನೋಡುವನು.
|
9. ಜೆರುಸಲೇಮೇ, ನಿನ್ನ ಕೆಡವಲ್ಪಟ್ಟ ಕಟ್ಟಡಗಳು ಮತ್ತೆ ಸಂತೋಷಿಸುವವು. ನೀವೆಲ್ಲರೂ ಒಟ್ಟಾಗಿ ಹರ್ಷಿಸುವಿರಿ. ಯಾಕೆಂದರೆ ಯೆಹೋವನು ಜೆರುಸಲೇಮನ್ನು ಬಿಡಿಸಿ ತನ್ನ ಜನರನ್ನು ಸಂತೈಸುವನು.
|
10. ಯೆಹೋವನು ತನ್ನ ಪರಿಶುದ್ಧ ಸಾಮರ್ಥ್ಯವನ್ನು ಎಲ್ಲಾ ಜನಾಂಗಗಳಿಗೆ ಪ್ರದರ್ಶಿಸುವನು. ಯೆಹೋವನು ತನ್ನ ಜನರನ್ನು ರಕ್ಷಿಸುವದನ್ನು ದೂರದೇಶದವರು ನೋಡುವರು.
|
11. ನೀವು ಬಾಬಿಲೋನಿನಿಂದ ಹೊರಟು ಹೋಗಬೇಕು; ನೀವು ಆ ಸ್ಥಳವನ್ನು ಬಿಟ್ಟುಹೋಗಬೇಕು. ಯಾಜಕರೇ, ಆರಾಧನೆಗೆ ಬೇಕಾದ ಸಾಮಗ್ರಿಗಳನ್ನು ಹೊತ್ತುಕೊಳ್ಳಿರಿ. ನಿಮ್ಮನ್ನು ಶುದ್ಧಿ ಮಾಡಿಕೊಳ್ಳಿರಿ; ಅಶುದ್ಧವಾದ ಯಾವುದನ್ನೂ ಮುಟ್ಟದಿರಿ.
|
12. ನೀವು ಬಾಬಿಲೋನಿನಿಂದ ಹೊರಗೆ ಬರುವಿರಿ. ತ್ವರೆಪಟ್ಟು ಬರುವಂತೆ ಅವರು ಬಲವಂತ ಮಾಡುವದಿಲ್ಲ. ನೀವು ಓಡಿ ಹೋಗುವಂತೆ ಅವರು ಒತ್ತಾಯಪಡಿಸುವದಿಲ್ಲ. ನೀವು ಹೊರಗೆ ನಡೆಯುವಿರಿ. ಯೆಹೋವನು ನಿಮ್ಮೊಂದಿಗೆ ನಡೆಯುವನು. ಯೆಹೋವನು ನಿಮ್ಮ ಮುಂದೆ ಇರುವನು. ಇಸ್ರೇಲರ ದೇವರು ನಿಮ್ಮ ಹಿಂದೆಯೂ ಇರುವನು.
|
13. ಯೆಹೋವನು ಹೇಳುವದೇನಂದರೆ, “ನನ್ನ ಸೇವಕನನ್ನು ದೃಷ್ಟಿಸಿರಿ. ಆತನು ಯಶಸ್ವಿಯಾಗುವನು. ಅವನು ಬಹಳ ಮುಖ್ಯವಾದವನಾಗಿರುವನು. ಮುಂದಿನ ದಿವಸಗಳಲ್ಲಿ ಜನರು ಆತನನ್ನು ಸನ್ಮಾನಿಸಿ ಗೌರವಿಸುವರು.
|
14. ಆದರೆ ನನ್ನ ಜನರು ನನ್ನ ಸೇವಕನನ್ನು ನೋಡಿದಾಗ ಆಶ್ಚರ್ಯಗೊಂಡರು. ಆತನು ಮನುಷ್ಯನೆಂಬ ಗುರುತೇ ಅವರಿಗೆ ಸಿಕ್ಕಲಿಲ್ಲ. ಆತನ ರೂಪವು ವಿಕಾರವಾಗುವಷ್ಟರ ಮಟ್ಟಿಗೆ ಆತನು ಗಾಯಗೊಂಡಿದ್ದನು.
|
15. ಅನೇಕ ಜನಾಂಗಗಳವರು ಆತನನ್ನು ಕಂಡು ಆಶ್ಚರ್ಯಪಡುವರು. ಅರಸರು ದಿಗ್ಭ್ರಮೆಯಿಂದ ಆತನನ್ನು ದೃಷ್ಟಿಸಿ ನೋಡುವರು. ಅವರು ನನ್ನ ಸೇವಕನ ಬಗ್ಗೆ ಕೇಳಲಿಲ್ಲ. ಆತನಿಗೆ ಸಂಭವಿಸಿದ್ದನ್ನೇ ನೋಡಿದರು. ಅವರು ಆತನ ವಿಚಾರ ಕೇಳದಿದ್ದರೂ ಅವರಿಗೆ ತಿಳಿದುಬಂತು.”
|