1. ತಾನು ಆರಿಸಿರುವ ಅರಸನಾದ ಸೈರಸನಿಗೆ ಯೆಹೋವನು ಹೇಳುವುದೇನೆಂದರೆ: “ನಾನು ಸೈರಸನ ಬಲಗೈಯನ್ನು ಹಿಡಿಯುವೆನು. ಅರಸರುಗಳಿಂದ ಅವರ ಅಧಿಕಾರವನ್ನು ತೆಗೆದುಬಿಡುವಂತೆ ಅವನಿಗೆ ಸಹಾಯ ಮಾಡುವೆನು. ನಗರದ್ವಾರಗಳು ಅವನ ಮುನ್ನುಗ್ಗುವಿಕೆಯನ್ನು ನಿಲ್ಲಿಸದು. ನಗರದ್ವಾರವನ್ನು ತೆರೆದು ಸೈರಸನು ಒಳಗೆ ಪ್ರವೇಶಿಸುವಂತೆ ಮಾಡುವೆನು.”
|
2. ಸೈರಸನೇ, ನಿನ್ನ ಸೈನ್ಯವು ಮುನ್ನುಗ್ಗುವದು. ನಾನು ನಿನ್ನ ಮುಂದೆ ಹೋಗಿ ಪರ್ವತಗಳನ್ನು ನೆಲಸಮ ಮಾಡುವೆನು. ಹಿತ್ತಾಳೆಯ ನಗರ ದ್ವಾರಗಳನ್ನು ಪುಡಿಪುಡಿ ಮಾಡುವೆನು. ದ್ವಾರಗಳ ಕಬ್ಬಿಣದ ಅಗುಳಿಗಳನ್ನು ತುಂಡು ಮಾಡಿ ಬಿಡುವೆನು.
|
3. ಕತ್ತಲೆಯಲ್ಲಿ ಕೂಡಿಸಿಟ್ಟಿದ್ದ ಐಶ್ವರ್ಯವನ್ನೂ ಗುಪ್ತವಾಗಿಟ್ಟಿದ್ದ ನಿಕ್ಷೇಪವನ್ನೂ ನಾನು ನಿನಗೆ ಕೊಡುವೆನು. ನಾನೇ ಯೆಹೋವನೆಂದು ನೀನು ತಿಳಿಯುವಂತೆ ಇದನ್ನು ಮಾಡುವೆನು. ನಾನೇ ಇಸ್ರೇಲರ ದೇವರಾದ ಯೆಹೋವನು. ನಿನ್ನನ್ನು ಹೆಸರೆತ್ತಿ ಕರೆಯುತ್ತಿದ್ದೇನೆ.
|
4. ನಾನು ನನ್ನ ಸೇವಕನಾದ ಯಾಕೋಬನಿಗಾಗಿ ಇದನ್ನೆಲ್ಲಾ ಮಾಡುತ್ತಿದ್ದೇನೆ. ನಾನು ಆರಿಸಿಕೊಂಡ ಜನಾಂಗವಾದ ಇಸ್ರೇಲಿಗಾಗಿ ಇದನ್ನೆಲ್ಲಾ ಮಾಡುತ್ತಿದ್ದೇನೆ. ಸೈರಸನೇ, ನಾನು ನಿನ್ನ ಹೆಸರೆತ್ತಿ ಕರೆದಿದ್ದೇನೆ. ನೀನು ನನ್ನನ್ನು ತಿಳಿಯದವನಾಗಿದ್ದರೂ ನಾನು ನಿನಗೆ ಬಿರುದನ್ನು ಅನುಗ್ರಹಿಸಿದ್ದೇನೆ.
|
5. ಯೆಹೋವನೆಂಬ ನಾನೊಬ್ಬನೇ ದೇವರು. ನನ್ನ ಹೊರತು ಬೇರೆ ದೇವರುಗಳಿಲ್ಲ. ನೀನು ಬಟ್ಟೆಗಳನ್ನು ಧರಿಸಿಕೊಳ್ಳುವಂತೆ ಮಾಡಿದವನು ನಾನೇ. ಆದರೂ ನೀನು ನನ್ನನ್ನು ತಿಳಿದಿಲ್ಲ.
|
6. ನಾನೊಬ್ಬನೇ ದೇವರೆಂದು ಎಲ್ಲರೂ ತಿಳಿದುಕೊಳ್ಳಲಿ ಎಂದು ನಾನು ಇದನ್ನೆಲ್ಲಾ ಮಾಡುತ್ತಿದ್ದೇನೆ. ಪೂರ್ವದಿಂದ ಪಶ್ಚಿಮದ ತನಕ ಜನರೆಲ್ಲರೂ ನಾನೇ ದೇವರೆಂದೂ ನನ್ನ ಹೊರತು ಬೇರೆ ದೇವರಿಲ್ಲವೆಂದೂ ತಿಳಿದುಕೊಳ್ಳುವರು.
|
7. ನಾನು ಬೆಳಕನ್ನೂ ಕತ್ತಲೆಯನ್ನೂ ಮಾಡಿದೆನು. ಸಮಾಧಾನವನ್ನೂ ತೊಂದರೆಗಳನ್ನೂ ಉಂಟುಮಾಡಿದೆನು. ನಾನೇ ಯೆಹೋವನು. ಇವೆಲ್ಲವನ್ನು ನಾನು ಮಾಡುವೆನು.
|
8. ಆಕಾಶದಲ್ಲಿರುವ ಮೋಡಗಳು ಒಳ್ಳೆಯತನವನ್ನು ಭೂಮಿಯ ಮೇಲೆ ಮಳೆಯಂತೆ ಸುರಿಸಲಿ. ಭೂಮಿಯು ತೆರೆಯಲ್ಪಡಲಿ; ರಕ್ಷಣೆಯು ಬೆಳೆಯಲಿ. ಒಳ್ಳೆತನವು ಅದರೊಂದಿಗೆ ಬೆಳೆಯಲಿ. ಯೆಹೋವನೆಂಬ ನಾನೇ ಅವನನ್ನು ನಿರ್ಮಿಸಿದೆನು.”
|
9. “ಈ ಜನರನ್ನು ನೋಡು. ತಮ್ಮನ್ನು ಸೃಷ್ಟಿದಾತನೊಂದಿಗೆ ವಾದಿಸುತ್ತಿದ್ದಾರೆ. ನನ್ನೊಂದಿಗೆ ವಾದಿಸುವದನ್ನು ನೋಡಿರಿ! ಅವರು ಒಡೆಯಲ್ಪಟ್ಟ ಮಣ್ಣಿನ ಮಡಿಕೆಯ ತುಂಡುಗಳಂತಿದ್ದಾರೆ. ಒಬ್ಬನು ಮೃದುವಾದ ಜೇಡಿಮಣ್ಣಿನಿಂದ ಮಡಿಕೆಯನ್ನು ಮಾಡುತ್ತಾನೆ. ಆ ಮಡಿಕೆಯು ಕುಂಬಾರನಿಗೆ, ‘ನೀನು ಮಾಡುತ್ತಿರುವುದೇನು?’ ಎಂದು ಪ್ರಶ್ನಿಸುವದಿಲ್ಲ. ತಯಾರಿಸಲ್ಪಟ್ಟ ವಸ್ತುಗಳಿಗೆ ತಯಾರಿಸಿದವನನ್ನು ಪ್ರಶ್ನಿಸುವ ಅಧಿಕಾರವಿಲ್ಲ. ಜನರು ಈ ಜೇಡಿಮಣ್ಣಿನಂತೆ ಇದ್ದಾರೆ.
|
10. ತಂದೆಯು ಮಕ್ಕಳನ್ನು ಹುಟ್ಟಿಸುತ್ತಾನೆ. ಮಕ್ಕಳು ತಂದೆಯನ್ನು, ‘ನನಗೆ ಜೀವ ಯಾಕೆ ಕೊಟ್ಟೇ?’ ಎಂದು ಕೇಳಲಾಗುವುದಿಲ್ಲ. ಮಕ್ಕಳು ತಮ್ಮ ತಾಯಿಗೆ, ‘ನನ್ನನ್ನು ಯಾಕೆ ಹೆತ್ತದ್ದು ಎಂದು ಕೇಳಲಾಗುವುದಿಲ್ಲ.”‘
|
11. ದೇವರಾದ ಯೆಹೋವನು ಇಸ್ರೇಲರ ಪರಿಶುದ್ಧನಾಗಿದ್ದಾನೆ. ಆತನು ಇಸ್ರೇಲನ್ನು ಸೃಷ್ಟಿಸಿದನು. ಯೆಹೋವನು ಹೇಳುವದೇನೆಂದರೆ, “ನಾನು ಕೈಯಾರೆ ಮಾಡಿದ ಮಕ್ಕಳ ಬಗ್ಗೆ ನೀನು ಪ್ರಶ್ನಿಸುವಿಯಾ? ನಾನು ಏನು ಮಾಡಬೇಕೆಂದು ನೀನು ನನಗೆ ಆಜ್ಞಾಪಿಸುವಿಯೋ?
|
12. ಭೂಮಿಯನ್ನು ನಿರ್ಮಿಸಿದವನೂ ಅದರಲ್ಲಿ ವಾಸಿಸುವ ಎಲ್ಲಾ ಜನರನ್ನು ಉಂಟು ಮಾಡಿದವನೂ ನಾನೇ. ನನ್ನ ಸ್ವಹಸ್ತದಿಂದ ಆಕಾಶಮಂಡಲವನ್ನು ನಿರ್ಮಿಸಿದ್ದೇನೆ. ಆಕಾಶದಲ್ಲಿರುವ ಎಲ್ಲಾ ನಕ್ಷತ್ರಪುಂಜಗಳನ್ನು ನನ್ನ ಹತೋಟಿಯಲ್ಲಿಟ್ಟಿದ್ದೇನೆ.
|
13. ನಾನು ಸೈರಸನಿಗೆ ಸುಕಾರ್ಯಗಳನ್ನು ಮಾಡಲು ಶಕ್ತಿಯನ್ನು ಕೊಟ್ಟಿದ್ದೇನೆ. ಅವನ ಕೆಲಸಗಳನ್ನೆಲ್ಲಾ ಸುಲಭಗೊಳಿಸುತ್ತೇನೆ. ಸೈರಸನು ನನ್ನ ಪಟ್ಟಣವನ್ನು ಮತ್ತೆ ಕಟ್ಟುವನು; ನನ್ನ ಜನರಿಗೆ ಸ್ವಾತಂತ್ರ್ಯವನ್ನು ಕೊಡುವನು. ನನ್ನ ಜನರನ್ನು ಸೈರಸನು ನನಗೆ ಮಾರಿ ಬಿಡುವದಿಲ್ಲ. ಈ ಕಾರ್ಯಗಳನ್ನೆಲ್ಲ ಮಾಡುವದಕ್ಕೆ ನಾನು ಅವನಿಗೆ ಹಣ ಕೊಡುವ ಅವಶ್ಯವಿಲ್ಲ. ಜನರು ಸ್ವತಂತ್ರರಾಗುವರು. ಇದಕ್ಕಾಗಿ ನನಗೇನೂ ಖರ್ಚು ಇಲ್ಲ.” ಇದು ಸರ್ವಶಕ್ತನಾದ ಯೆಹೋವನ ನುಡಿ.
|
14. ಯೆಹೋವನು ಹೇಳುವದೇನೆಂದರೆ, “ಈಜಿಪ್ಟ್ ಮತ್ತು ಇಥಿಯೋಪ್ಯ ಐಶ್ವರ್ಯವುಳ್ಳ ರಾಜ್ಯಗಳಾಗಿವೆ. ಇಸ್ರೇಲೇ, ನೀನು ಆ ಐಶ್ವರ್ಯವನ್ನು ಪಡೆದುಕೊಳ್ಳುವೆ. ಸೆಬಾದ ಉನ್ನತ ಜನರು ನಿನ್ನವರಾಗುವರು. ಅವರು ತಮ್ಮ ಕುತ್ತಿಗೆಗಳಲ್ಲಿ ಸಂಕೋಲೆಗಳಿಂದ ಬಂಧಿತರಾಗಿ ನಿಮ್ಮ ಹಿಂದೆ ನಡೆಯುವರು. ಅವರು ನಿಮ್ಮ ಮುಂದೆ ಅಡ್ಡಬಿದ್ದು, ‘ಇಸ್ರೇಲೇ, ದೇವರು ನಿಜವಾಗಿ ನಿಮ್ಮೊಂದಿಗಿದ್ದಾನೆ. ಬೇರೆ ದೇವರುಗಳೇ ಇಲ್ಲ’“ ಎಂದು ನಿಮ್ಮಲ್ಲಿ ಪ್ರಾರ್ಥಿಸುವರು.
|
17. ಆದರೆ ಇಸ್ರೇಲು ಯೆಹೋವನಿಂದ ರಕ್ಷಿಸಲ್ಪಡುವದು. ಆ ರಕ್ಷಣೆಯು ಶಾಶ್ವತವಾದದ್ದು. ಇನ್ನೆಂದಿಗೂ ಇಸ್ರೇಲ್ ನಾಚಿಕೆಗೆ ಒಳಗಾಗುವದಿಲ್ಲ.
|
18. ಯೆಹೋವನು ದೇವರಾಗಿದ್ದಾನೆ. ಆತನು ಭೂಮ್ಯಾಕಾಶಗಳನ್ನು ಉಂಟುಮಾಡಿದ್ದಾನೆ. ಆತನು ಭೂಮಿಯನ್ನು ಅದರ ಸ್ಥಾನದಲ್ಲಿ ಇಟ್ಟಿದ್ದಾನೆ. ಆತನು ಈ ಲೋಕವನ್ನು ಸೃಷ್ಟಿಸಿದ್ದು ಅದು ಶೂನ್ಯವಾಗಿರಲೆಂದಲ್ಲ. ಅದು ಜನಭರಿತವಾಗಿರಲೆಂದೇ ಸೃಷ್ಟಿಸಿದನು. “ನಾನೇ ಯೆಹೋವನು, ನನ್ನ ಹೊರತು ಬೇರೆ ದೇವರುಗಳಿಲ್ಲ.
|
19. ನಾನು ಗುಪ್ತವಾಗಿ ಮಾತನಾಡದೆ ಬಹಿರಂಗವಾಗಿಯೇ ಮಾತನಾಡಿದ್ದೇನೆ. ಈ ಭೂಮಿಯ ಕತ್ತಲೆಯ ಸ್ಥಳದಲ್ಲಿ ನನ್ನ ಮಾತುಗಳನ್ನು ಅಡಗಿಸಿಡಲಿಲ್ಲ. ನನ್ನನ್ನು ಕಂಡುಹಿಡಿಯಲು ಗುಪ್ತಸ್ಥಳದಲ್ಲಿ ಹುಡುಕಿರಿ ಎಂದು ನಾನು ಯಾಕೋಬನ ಜನರಿಗೆ ಹೇಳಲಿಲ್ಲ. ನಾನೇ ಯೆಹೋವನು. ನಾನು ಸತ್ಯವನ್ನೇ ಆಡುವೆನು.
|
20. “ಬೇರೆ ದೇಶಗಳಿಂದ ಪಾರಾಗಿ ಬಂದ ಜನರೇ, ಒಟ್ಟಾಗಿ ಸೇರಿಕೊಂಡು ನನ್ನ ಮುಂದೆ ಬನ್ನಿರಿ. (ಈ ಜನರು ಮರದ ವಿಗ್ರಹಗಳನ್ನು ಇಟ್ಟುಕೊಂಡಿದ್ದಾರೆ. ತಮ್ಮನ್ನು ರಕ್ಷಿಸಲಾರದ ವಿಗ್ರಹಕ್ಕೆ ಅವರು ಪ್ರಾರ್ಥಿಸುತ್ತಿದ್ದಾರೆ. ಅವರು ಮಾಡುವದು ಅವರಿಗೇ ತಿಳಿಯದು.
|
21. ನನ್ನ ಬಳಿಗೆ ಬರಲು ಅವರಿಗೆ ಹೇಳು. ತಾವು ವಿಗ್ರಹಗಳನ್ನು ಯಾಕೆ ನಂಬುತ್ತಾರೆಂದು ನನ್ನೊಂದಿಗೆ ವಾದಿಸಲಿ.) “ಬಹಳ ಕಾಲದ ಹಿಂದೆ ನಡೆದ ಸಂಗತಿಗಳ ಬಗ್ಗೆ ನಿಮಗೆ ತಿಳಿಸಿದವರು ಯಾರು? ಬಹಳ ಕಾಲದಿಂದ ಈ ವಿಷಯಗಳನ್ನು ನಿಮಗೆ ತಿಳಿಸುತ್ತಾ ಬಂದವರು ಯಾರು? ನಾನೇ. ಯೆಹೋವನಾದ ನಾನೇ ನಿಮಗೆಲ್ಲವನ್ನು ತಿಳಿಸಿದೆನು. ನಾನೊಬ್ಬನೇ ದೇವರು. ನನ್ನಂಥ ದೇವರು ಬೇರೆ ಇದ್ದಾರೆಯೇ? ಕರುಣೆಯುಳ್ಳ ದೇವರು ಬೇರೆಲ್ಲಾದರೂ ಇರುವನೇ? ತನ್ನ ಜನರನ್ನು ವಿಮೋಚಿಸುವಂಥ ಬೇರೆ ದೇವರು ಇರುವನೇ? ಇಲ್ಲ! ಬೇರೆ ದೇವರು ಇಲ್ಲ!
|
22. ದೂರದೇಶದಲ್ಲಿರುವ ಜನರೇ, ನೀವು ಸುಳ್ಳುದೇವರನ್ನು ಅವಲಂಬಿಸುವದನ್ನು ನಿಲ್ಲಿಸಿರಿ. ನನ್ನನ್ನು ಹಿಂಬಾಲಿಸಿ ರಕ್ಷಣೆ ಹೊಂದಿರಿ. ನಾನೇ ದೇವರು, ಬೇರೆ ದೇವರುಗಳೇ ಇಲ್ಲ. ನಾನೊಬ್ಬನೇ ದೇವರು.
|
23. “ನನ್ನ ಪರಾಕ್ರಮದಿಂದ ನಾನು ವಾಗ್ದಾನ ಮಾಡುತ್ತೇನೆ. ನನ್ನ ಆಜ್ಞೆಯು ನ್ಯಾಯವಾದದ್ದೂ ನೀತಿಯುಳ್ಳದ್ದೂ ಆಗಿದೆ. ಇಂಥದ್ದು ನಾನು ಆಜ್ಞಾಪಿಸಿದಂತೆಯೇ ಸಂಭವಿಸುವದು. ಎಲ್ಲಾ ಜನರು ನನ್ನ ಮುಂದೆ ಅಡ್ಡ ಬೀಳುವರೆಂದು ನಾನು ವಾಗ್ದಾನ ಮಾಡುತ್ತೇನೆ. ಪ್ರತಿಯೊಬ್ಬನೂ ನನ್ನನ್ನು ಹಿಂಬಾಲಿಸಲು ಪ್ರತಿಜ್ಞೆ ಮಾಡುವನು.
|
24. ಜನರು ಹೀಗನ್ನುವರು: ‘ಶಕ್ತಿಯೂ, ಒಳ್ಳೆಯ ತನವೂ ಯೆಹೋವನಿಂದಲೇ ಬರುವದು.’“ ಕೆಲವರು ಯೆಹೋವನ ಮೇಲೆ ಸಿಟ್ಟುಗೊಂಡಿದ್ದಾರೆ. ಆದರೆ ಆತನ ಸಾಕ್ಷಿಗಳು ಆತನು ಮಾಡಿದ ಕಾರ್ಯಗಳ ಕುರಿತು ಹೇಳುವರು. ಆಗ ಸಿಟ್ಟುಗೊಂಡವರು ನಾಚಿಕೆಗೆ ಒಳಗಾಗುವರು.
|