1. ಮುಂದಿನ ದಿವಸಗಳಲ್ಲಿ ಯೆಹೋವನು ಯಾಕೋಬನ ಮೇಲೆ ಮತ್ತೆ ಪ್ರೀತಿತೋರುವನು. ಯೆಹೋವನು ಮತ್ತೆ ಇಸ್ರೇಲರನ್ನು ಆರಿಸುವನು. ಆ ಸಮಯದಲ್ಲಿ ಅವರ ದೇಶವನ್ನು ಅವರಿಗೆ ಹಿಂತಿರುಗಿಸುವನು. ಆಗ ಯೆಹೂದ್ಯರಲ್ಲದವರು ಯೆಹೂದ್ಯರೊಂದಿಗೆ ಸೇರಿಕೊಳ್ಳುವರು. ಅವರೆಲ್ಲರೂ ಒಂದೇ ವಂಶದವರಾಗುವರು. ಅದು ಯಾಕೋಬನ ವಂಶ.
|
2. ಆ ಜನಾಂಗಗಳವರು ಇಸ್ರೇಲರನ್ನು ಇಸ್ರೇಲ್ ದೇಶಕ್ಕೆ ನಡಿಸುವರು. ಆ ಪರಜನಾಂಗಗಳ ಗಂಡಸರು ಹೆಂಗಸರು ಇಸ್ರೇಲರ ಗುಲಾಮರಾಗಿರುವರು. ಹಿಂದಿನ ದಿವಸಗಳಲ್ಲಿ ಆ ಜನರು ಇಸ್ರೇಲರನ್ನು ಬಲವಂತದಿಂದ ತಮ್ಮ ಗುಲಾಮರನ್ನಾಗಿ ಮಾಡಿದರು. ಆದರೆ ಈಗ ಇಸ್ರೇಲರು ಆ ಜನಾಂಗಗಳನ್ನು ಸೋಲಿಸಿ ಅವರನ್ನು ಆಳುವರು.
|
3. ಯೆಹೋವನು ನಿಮ್ಮ ಪ್ರಯಾಸವನ್ನು ನಿವಾರಿಸಿ ನಿಮ್ಮನ್ನು ಆದರಿಸುವನು. ಹಿಂದಿನ ದಿವಸಗಳಲ್ಲಿ ನೀವು ಗುಲಾಮರಾಗಿರುವಾಗ ಜನರು ನಿಮ್ಮನ್ನು ಬಹಳವಾಗಿ ಹಿಂಸಿಸಿದರು; ಬಲವಂತದಿಂದ ಕಷ್ಟಕರವಾದ ಕೆಲಸವನ್ನು ನಿಮ್ಮಿಂದ ಮಾಡಿಸಿದರು. ಆದರೆ ಯೆಹೋವನು ಆ ಸಂಕಟಗಳಿಂದ ನಿಮ್ಮನ್ನು ಪಾರುಮಾಡುವನು.
|
4. ಆ ಸಮಯದಲ್ಲಿ ಬಾಬಿಲೋನಿನ ಅರಸನ ಬಗ್ಗೆ ನೀವು ಹೀಗೆ ಹಾಡುವಿರಿ: ಅರಸನು ನಮ್ಮನ್ನಾಳುವಾಗ ಬಹಳ ಕ್ರೂರವಾಗಿದ್ದನು. ಆದರೆ ಈಗ ಅವನ ಆಳ್ವಿಕೆಯು ಅಂತ್ಯವಾಯಿತು.
|
6. ಬಾಬಿಲೋನಿನ ಅರಸನು ತನ್ನ ದುಷ್ಟತನದಲ್ಲಿ ಜನರನ್ನು ಹೊಡೆಯಿಸಿದನು. ಹೊಡೆಯುವದನ್ನು ಅವನು ನಿಲ್ಲಿಸಲೇ ಇಲ್ಲ. ಆ ದುಷ್ಟ ಅರಸನು ಜನರನ್ನು ಸಿಟ್ಟಿನಿಂದಲೇ ಆಳಿದನು. ಜನರನ್ನು ಹಿಂಸೆಪಡಿಸುವದನ್ನು ಅವನು ನಿಲ್ಲಿಸಲಿಲ್ಲ.
|
8. ನೀನು ದುಷ್ಟ ಅರಸನಾಗಿದ್ದೆ, ಈಗ ನಿನಗೆ ಅಂತ್ಯವು ಬಂತು. ತುರಾಯಿ ಮರಗಳೂ ಲೆಬನೋನಿನ ದೇವದಾರು ವೃಕ್ಷಗಳೂ ಹರ್ಷಗೊಂಡಿವೆ. ಆ ಮರಗಳು ಹೀಗೆ ಹೇಳುತ್ತಿವೆ: ಅರಸನು ನಮ್ಮನ್ನು ಕಡಿದುರುಳಿಸಿದನು. ಈಗ ಅರಸನೇ ಉರುಳಿಬಿದ್ದಿದ್ದಾನೆ. ಅವನು ಮತ್ತೆಂದಿಗೂ ಏಳುವುದಿಲ್ಲ.
|
9. ನೀನು ಬರುವದರಿಂದ ಮರಣದ ಸ್ಥಳವಾಗಿರುವ ನರಕವು ಉತ್ಸಾಹಗೊಂಡಿದೆ. ನಿನ್ನನ್ನು ಎದುರುಗೊಳ್ಳುವದಕ್ಕಾಗಿ ಪಾತಾಳವು ಲೋಕದ ಎಲ್ಲಾ ಅಧಿಪತಿಗಳ ಆತ್ಮಗಳನ್ನು ಎಬ್ಬಿಸಿದೆ. ಅರಸರು ತಮ್ಮ ಸಿಂಹಾಸನದಲ್ಲಿ ನಿಂತುಕೊಳ್ಳುವಂತೆ ಪಾತಾಳವು ಮಾಡುತ್ತಿದೆ. ಅವರು ನಿನ್ನ ಬರುವಿಕೆಯನ್ನು ಕಾಯುತ್ತಿದ್ದಾರೆ.
|
10. “ಈಗ ನೀನು ನಮ್ಮಂತೆಯೇ ಸತ್ತ ಶರೀರವಾಗಿರುವೆ. ಈಗ ನೀನು ನಮ್ಮಂತೆಯೇ ಆಗಿರುವೆ” ಎಂದು ಅವರು ನಿನ್ನನ್ನು ಗೇಲಿಮಾಡುವರು.
|
11. ನಿನ್ನ ಜಂಬವು ಪಾತಾಳಕ್ಕೆ ಕಳುಹಿಸಲಾಗಿದೆ. ನಿನ್ನ ಹಾರ್ಪ್ವಾದ್ಯದ ಸ್ವರವು ನಿನ್ನ ಅಹಂಕಾರದ ಆತ್ಮವನ್ನು ಸಾರಿಹೇಳುತ್ತವೆ. ಹುಳಗಳು ನಿನ್ನ ಶರೀರವನ್ನು ತಿಂದುಬಿಡುವವು. ಹಾಸಿಗೆಯೋ ಎಂಬಂತೆ ನೀನು ಅವುಗಳ ಮೇಲೆ ಮಲಗಿಕೊಳ್ಳುವೆ. ಹುಳಗಳು ನಿನ್ನ ಶರೀರವನ್ನು ಕಂಬಳಿಯಂತೆ ಮುಚ್ಚಿಕೊಳ್ಳುವವು.
|
12. ನೀನು ಉದಯ ನಕ್ಷತ್ರದಂತೆ ಇರುವೆ. ಆದರೆ ನೀನು ಆಕಾಶದಿಂದ ಕೆಳಗೆ ಬಿದ್ದಿರುವೆ. ಹಿಂದಿನ ಕಾಲದಲ್ಲಿ ಲೋಕದ ಎಲ್ಲಾ ರಾಜ್ಯಗಳು ನಿನಗೆ ಅಡ್ಡಬಿದ್ದವು. ಆದರೆ ಈಗ ನೀನು ಉರುಳಿಸಲ್ಪಟ್ಟಿರುವೆ.
|
13. ನೀನು ಯಾವಾಗಲೂ ನಿನ್ನೊಳಗೆ, “ನಾನು ಉನ್ನತವಾದ ಆಕಾಶಕ್ಕೆ ಹೋಗುವೆನು. ನಾನು ದೇವರ ನಕ್ಷತ್ರಗಳಿಗಿಂತ ಮೇಲೆ ನನ್ನ ಸಿಂಹಾಸನವನ್ನು ಸ್ಥಾಪಿಸುವೆನು. ನಾನು ಜಾಫೋನ್ ಎಂಬ ಪವಿತ್ರ ಪರ್ವತದಲ್ಲಿ ಕುಳಿತುಕೊಳ್ಳುವೆನು. ಆ ಪರ್ವತದಲ್ಲಿ ನಾನು ದೇವರುಗಳನ್ನು ಸಂಧಿಸುವೆನು.
|
15. ಆದರೆ ಅದು ಸಂಭವಿಸಲಿಲ್ಲ. ನೀನು ಆಕಾಶಕ್ಕೆ ದೇವರೊಂದಿಗೆ ಹೋಗಲಿಲ್ಲ. ನೀನು ಆಳವಾದ ಗುಂಡಿಗೆ ದಬ್ಬಲ್ಪಟ್ಟಿ. ಮರಣಸ್ಥಳವಾಗಿರುವ ಪಾತಾಳಕ್ಕೆ ನೀನು ದಬ್ಬಲ್ಪಟ್ಟೆ.
|
16. ನಿನ್ನನ್ನು ನೋಡುವ ಜನರು ನಿನ್ನ ಬಗ್ಗೆ ಯೋಚಿಸುವರು. ನೀನು ಕೇವಲ ಸತ್ತ ಹೆಣವೆಂದು ತಿಳಿದು, “ಭೂಮಿಯ ಮೇಲಿನ ರಾಜ್ಯಗಳಲ್ಲಿ ಮಹಾಭೀತಿಯನ್ನುಂಟು ಮಾಡಿದವನು ಇವನೋ?
|
17. ನಗರಗಳನ್ನು ನಾಶಮಾಡಿ ಭೂಮಿಯನ್ನು ಬೆಂಗಾಡನ್ನಾಗಿ ಮಾಡಿದವನು ಇವನೋ? ಯುದ್ಧದಲ್ಲಿ ಜನರನ್ನು ಸೆರೆಹಿಡಿದು ಅವರನ್ನು ಮನೆಗಳಿಗೆ ಬಿಡದೆ ಇದ್ದವನು ಇವನೋ?” ಎಂದು ಕೇಳುವರು.
|
19. ಆದರೆ ದುಷ್ಟ ಅರಸನಾದ ನೀನು ನಿನ್ನ ಸಮಾಧಿಯಿಂದ ತೆಗೆದುಹಾಕಲ್ಪಟ್ಟಿರುವೆ. ಮರದಿಂದ ಬೇರ್ಪಡಿಸಿದ ಕೊಂಬೆಯಂತೆ ನೀನಿರುವೆ. ಯುದ್ಧದಲ್ಲಿ ಸತ್ತ ಸೈನಿಕನಂತೆ ನೀನಿರುವೆ. ಬೇರೆ ಸೈನಿಕರು ಅವನ ಮೇಲೆ ನಡೆದಾಡುವರು. ಈಗ ನೀನು ಸಾಧಾರಣ ಹೆಣದಂತೆ ಇರುವೆ. ಸಮಾಧಿಯ ಬಟ್ಟೆಗಳಿಂದ ನೀನು ಸುತ್ತಲ್ಪಟ್ಟಿರುವೆ.
|
20. ಬೇರೆ ಅನೇಕ ಅರಸರು ಸತ್ತುಹೋದರು. ಅವರೆಲ್ಲರಿಗೂ ಸ್ವಂತ ಸಮಾಧಿ ಇದೆ. ಆದರೆ ನೀನು ಅವರೊಂದಿಗೆ ಸೇರಲಾರೆ. ಯಾಕೆಂದರೆ ನಿನ್ನ ರಾಜ್ಯವನ್ನು ನೀನೇ ನಾಶಮಾಡಿರುವೆ. ನೀನು ನಿನ್ನ ಜನರನ್ನೇ ಸಾಯಿಸಿರುವೆ. ಆದರೆ ನೀನು ನಾಶಮಾಡಿದಂತೆ ನಾಶಮಾಡಲು ನಿನ್ನ ಮಕ್ಕಳಿಗೆ ಅವಕಾಶಕೊಡಲಾಗದು.
|
21. ಅವನ ಮಕ್ಕಳನ್ನು ಕೊಲ್ಲಲು ಸಿದ್ಧಗೊಳ್ಳಿರಿ. ಅವರ ತಂದೆಯ ದುಷ್ಟತನಕ್ಕಾಗಿ ಅವರನ್ನು ಕೊಲ್ಲಿರಿ. ಅವನ ಮಕ್ಕಳು ದೇಶವನ್ನು ಇನ್ನೆಂದಿಗೂ ತಮ್ಮ ವಶಕ್ಕೆ ತೆಗೆದುಕೊಳ್ಳಲಾರರು. ಅವರು ಪ್ರಪಂಚವನ್ನು ಇನ್ನೆಂದಿಗೂ ತಮ್ಮ ಪಟ್ಟಣಗಳಿಂದ ತುಂಬಿಸಲಾರರು.
|
22. ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ನಾನು ಎದ್ದುನಿಂತು ಅವರಿಗೆ ವಿರುದ್ಧವಾಗಿ ಹೋರಾಡುವೆನು. ನಾನು ಹೆಸರುವಾಸಿಯಾದ ಬಾಬಿಲೋನ್ ನಗರವನ್ನು ನಾಶಮಾಡುವೆನು. ಬಾಬಿಲೋನಿನ ಎಲ್ಲಾ ಜನರನ್ನು ನಾಶಮಾಡುವೆನು. ಅವರ ಮಕ್ಕಳನ್ನು ಮತ್ತು ಮರಿಮಕ್ಕಳನ್ನು ನಾಶಮಾಡುವೆನು” ಯೆಹೋವನೇ ಈ ಮಾತುಗಳನ್ನು ನುಡಿದಿದ್ದಾನೆ.
|
23. ಯೆಹೋವನು ಹೇಳುವದೇನೆಂದರೆ: “ನಾನು ಬಾಬಿಲೋನನ್ನು ಪ್ರಾಣಿಗಳ ವಾಸಸ್ಥಳವನ್ನಾಗಿ ಬದಲಾಯಿಸುವೆನು. ಆ ಸ್ಥಳವು ಜವುಗು ನೆಲವಾಗಿರುವುದು. ‘ನಾಶನವೆಂಬ ಪೊರಕೆಯಿಂದ’ ಅದನ್ನು ಗುಡಿಸುವೆನು.” ಇದು ಸರ್ವಶಕ್ತನಾದ ಯೆಹೋವನ ನುಡಿ.
|
24. ಸರ್ವಶಕ್ತನಾದ ಯೆಹೋವನು ಒಂದು ವಾಗ್ದಾನವನ್ನು ಮಾಡಿದ್ದಾನೆ. ಆತನು ಹೇಳುವುದೇನೆಂದರೆ: “ನಾನು ಯೋಚಿಸಿದಂತೆಯೇ ಇವೆಲ್ಲವೂ ನೆರವೇರುವುದು ಎಂದು ನಿಮಗೆ ಖಂಡಿತವಾಗಿ ಹೇಳುತ್ತೇನೆ.
|
25. ನನ್ನ ದೇಶದಲ್ಲಿ ಅಶ್ಶೂರದ ರಾಜನನ್ನು ನಾಶಮಾಡುವೆನು. ನನ್ನ ಪರ್ವತಗಳ ಮೇಲೆ ಆ ರಾಜನ ಮೇಲೆ ತುಳಿದುಕೊಂಡು ನಡೆದಾಡುವೆನು. ಆ ರಾಜನು ನನ್ನ ಜನರನ್ನು ಗುಲಾಮರನ್ನಾಗಿ ಮಾಡಿದನು. ಅವರ ಹೆಗಲಿನ ಮೇಲೆ ನೊಗವನ್ನಿಟ್ಟನು. ಆ ನೊಗವು ಯೆಹೂದದ ಹೆಗಲಿನಿಂದ ತೆಗೆಯಲ್ಪಡುವದು.
|
26. ಹೀಗೆ ಮಾಡಲು ನಾನೇ ಆಲೋಚಿಸಿದ್ದೇನೆ. ನನ್ನ ಯೋಜನೆಯಂತೆಯೇ ಘಟನೆಗಳು ಸಂಭವಿಸುತ್ತವೆ. ನನ್ನ ಭುಜಬಲದಿಂದ ಜನಾಂಗಗಳನ್ನು ಶಿಕ್ಷಿಸುವೆನು.”
|
27. ಸರ್ವಶಕ್ತನಾದ ಯೆಹೋವನ ಈ ಸಂಕಲ್ಪವನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಜನರನ್ನು ದಂಡಿಸಲು ಆತನು ಕೈಮೇಲೆತ್ತಿದಾಗ ಯಾರೂ ಆತನನ್ನು ತಡೆಯಲಾರರು.
|
29. ಫಿಲಿಷ್ಟಿಯ ದೇಶವೇ, ನಿನ್ನನ್ನು ಹೊಡೆದ ಅರಸನು ಸತ್ತದ್ದಕ್ಕಾಗಿ ನೀನು ಸಂತೋಷಗೊಂಡಿರುವೆ. ಆದರೆ ನೀನು ಸಂತೋಷಗೊಳ್ಳಬಾರದು. ಅವನ ರಾಜ್ಯಭಾರವು ಅಂತ್ಯವಾಯಿತು ಎಂಬುದು ಸತ್ಯ. ಆದರೆ ಅರಸನ ಮಗನು ರಾಜ್ಯವಾಳುವನು. ಒಂದು ಹಾವು ಇನ್ನೊಂದು ಭಯಂಕರ ಹಾವನ್ನು ಹೆರುವಂತೆ ಅದು ಇರುವದು. ಈ ಹೊಸ ಅರಸನು ನಿಮಗೆ ವೇಗವಾದ ಮತ್ತು ಅಪಾಯಕರವಾದ ಹಾವಾಗುವನು.
|
30. ಆದರೆ ನನ್ನ ಬಡಜನರು ಸುರಕ್ಷಿತವಾಗಿ ಊಟ ಮಾಡುವರು. ಅವರ ಮಕ್ಕಳೂ ಸುರಕ್ಷಿತವಾಗಿರುವರು. ನನ್ನ ಬಡಜನರು ಹಾಯಾಗಿ ಮಲಗಿ ಸುರಕ್ಷಿತರಾಗಿರುವರು. ಆದರೆ ನಿಮ್ಮ ಸಂತಾನದವರು ಹಸಿವೆಯಿಂದ ಸಾಯುವಂತೆ ಮಾಡುವೆನು. ನಿಮ್ಮ ದೇಶದಲ್ಲಿ ಉಳಿದಿರುವ ಜನರೆಲ್ಲರೂ ಸಾಯುವರು.
|
31. ಮಹಾದ್ವಾರಗಳ ಬಳಿಯಲ್ಲಿರುವ ಜನರೇ, ಗೋಳಾಡಿರಿ! ಪಟ್ಟಣದೊಳಗಿರುವ ಜನರೇ, ಕೂಗಾಡಿರಿ! ಫಿಲಿಷ್ಟಿಯದಲ್ಲಿರುವವರೆಲ್ಲರೂ ಭಯಪಡುವರು. ನಿಮ್ಮ ಧೈರ್ಯವು ಮೇಣದಂತೆ ಕರಗಿಹೋಗುವದು. ಇಗೋ, ಉತ್ತರದಿಕ್ಕಿನಲ್ಲಿ ಧೂಳು ಏಳುತ್ತಿದೆ. ಅಶ್ಶೂರದ ಸೈನ್ಯವು ಬರುತ್ತಿದೆ. ಅವರೆಲ್ಲರೂ ಬಲಶಾಲಿಗಳಾದ ವೀರರು.
|
32. ಆ ಸೈನ್ಯದವರು ತಮ್ಮ ದೇಶಕ್ಕೆ ಸಂದೇಶವಾಹಕರನ್ನು ಕಳುಹಿಸುತ್ತಾರೆ. ಆ ಸಂದೇಶವು ಏನಿರಬಹುದು? “ಫಿಲಿಷ್ಟಿಯರು ಸೋತುಹೋದರು, ಆದರೆ ಯೆಹೋವನು ಚೀಯೋನನ್ನು ಬಲಪಡಿಸಿದ್ದಾನೆ. ಆತನ ಬಡಜನರು ರಕ್ಷಣೆಗಾಗಿ ಅಲ್ಲಿಗೆ ಹೋಗಿದ್ದಾರೆ” ಎಂಬುದೇ ಆ ಸಂದೇಶ.
|