1. ಈ ಸಂಗತಿಗಳಾದ ಮೇಲೆ, ಅಬ್ರಾಮನಿಗೆ ದರ್ಶನದಲ್ಲಿ ಯೆಹೋವನ ಸಂದೇಶ ಬಂದಿತು. ದೇವರು ಅವನಿಗೆ, “ಅಬ್ರಾಮನೇ ಭಯಪಡಬೇಡ; ನಾನೇ ನಿನಗೆ ಗುರಾಣಿಯಾಗಿದ್ದೇನೆ. ನಾನು ನಿನಗೆ ದೊಡ್ಡ ಪ್ರತಿಫಲವನ್ನು ಕೊಡುತ್ತೇನೆ” ಎಂದು ಹೇಳಿದನು.
|
2. ಅದಕ್ಕೆ ಅಬ್ರಾಮನು, “ದೇವರಾದ ಯೆಹೋವನೇ, ನೀನು ನನಗೆ ಏನೇ ಕೊಟ್ಟರೂ ನನಗೆ ಸಂತೋಷವಾಗುವುದಿಲ್ಲ. ಯಾಕೆಂದರೆ, ನನಗೆ ಮಗನೇ ಇಲ್ಲ. ಆದ್ದರಿಂದ ನಾನು ಸತ್ತಮೇಲೆ ನನ್ನ ಆಸ್ತಿಯೆಲ್ಲ ನನ್ನ ಸೇವಕನಾದ ದಮಸ್ಕದ ಎಲೀಯೆಜರನ ಪಾಲಾಗುವುದು” ಎಂದು ಹೇಳಿದನು.
|
3. ಮತ್ತೆ ಅಬ್ರಾಮನು, “ನೀನು ನನಗೆ ಮಗನನ್ನೇ ಕೊಟ್ಟಿಲ್ಲ. ಆದ್ದರಿಂದ ನನ್ನ ಮನೆಯಲ್ಲಿ ಹುಟ್ಟಿದ ಸೇವಕನೊಬ್ಬನು ನನಗಿರುವುದನ್ನೆಲ್ಲ ಪಡೆದುಕೊಳ್ಳುವನು” ಎಂದು ಹೇಳಿದನು.
|
4. ಆಗ ಯೆಹೋವನು ಅಬ್ರಾಮನಿಗೆ, “ನಿನ್ನ ಆಸ್ತಿಯನ್ನೆಲ್ಲ ಪಡೆದುಕೊಳ್ಳುವವನು ನಿನ್ನ ಸೇವಕನಲ್ಲ. ನೀನೇ ಮಗನನ್ನು ಪಡೆಯುವೆ; ನಿನ್ನ ಮಗನೇ ನಿನ್ನ ಆಸ್ತಿಯನ್ನೆಲ್ಲಾ ಪಡೆಯುವನು” ಎಂದು ಹೇಳಿದನು.
|
5. ನಂತರ ದೇವರು ಅಬ್ರಾಮನನ್ನು ಹೊರಗೆ ಕರೆದುಕೊಂಡು ಬಂದು ಅವನಿಗೆ, “ಆಕಾಶದ ಕಡೆಗೆ ಕಣ್ಣೆತ್ತಿ ನಕ್ಷತ್ರಗಳನ್ನು ನೋಡು. ನೀನು ಲೆಕ್ಕ ಮಾಡಲಾರದಷ್ಟು ನಕ್ಷತ್ರಗಳಿವೆ. ಮುಂದಿನ ಕಾಲದಲ್ಲಿ ನಿನ್ನ ಕುಟುಂಬವು ಅದೇ ರೀತಿಯಲ್ಲಿರುವುದು” ಎಂದು ಹೇಳಿದನು.
|
7. ಆತನು ಅಬ್ರಾಮನಿಗೆ, “ಯೆಹೋವನಾದ ನಾನು ನಿನ್ನನ್ನು ಕಲ್ದೀಯರ ಊರ್ ಪಟ್ಟಣದಿಂದ ಬರಮಾಡಿದೆನು. ನಿನಗೆ ಈ ದೇಶವನ್ನು ಕೊಡಬೇಕೆಂತಲೂ ನೀನು ಈ ದೇಶವನ್ನು ಹೊಂದಿಕೊಳ್ಳಬೇಕೆಂತಲೂ ನಾನು ನಿನ್ನನ್ನು ಬರಮಾಡಿದೆನು” ಎಂದು ಹೇಳಿದನು.
|
8. ಅದಕ್ಕೆ ಅಬ್ರಾಮನು, “ಯೆಹೋವನೇ, ನನ್ನ ಒಡೆಯನೇ, ನನಗೆ ಈ ದೇಶವು ದೊರೆಯುತ್ತದೆಯೆಂದು ಖಚಿತಪಡಿಸಿಕೊಳ್ಳುವುದು ಹೇಗೆ?” ಎಂದು ಕೇಳಿದನು.
|
9. ದೇವರು ಅಬ್ರಾಮನಿಗೆ, “ನಾವು ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳೋಣ. ಮೂರು ವರ್ಷದ ಒಂದು ಹಸುವನ್ನೂ ಮೂರು ವರ್ಷದ ಒಂದು ಆಡನ್ನೂ ಮತ್ತು ಮೂರು ವರ್ಷದ ಒಂದು ಟಗರನ್ನೂ ತೆಗೆದುಕೊಂಡು ಬಾ. ಇದಲ್ಲದೆ ಒಂದು ಬೆಳವಕ್ಕಿಯನ್ನೂ ಒಂದು ಪಾರಿವಾಳವನ್ನೂ ತೆಗೆದುಕೊಂಡು ಬಾ” ಎಂದು ಹೇಳಿದನು.
|
10. ಅಬ್ರಾಮನು ದೇವರಿಗೋಸ್ಕರ ಅವುಗಳನ್ನೆಲ್ಲ ತೆಗೆದುಕೊಂಡು ಬಂದನು. ಅಬ್ರಾಮನು ಅವುಗಳನ್ನು ಕತ್ತರಿಸಿ ಎರಡೆರಡು ಹೋಳು ಮಾಡಿದನು. ಆಮೇಲೆ ಅಬ್ರಾಮನು ತುಂಡಿಗೆ ತುಂಡನ್ನು ಎದುರಾಗಿಟ್ಟನು. ಅಬ್ರಾಮನು ಪಕ್ಷಿಗಳನ್ನು ಮಾತ್ರ ಎರಡೆರಡು ಹೋಳು ಮಾಡಲಿಲ್ಲ.
|
11. ಸ್ವಲ್ಪ ಸಮಯದ ನಂತರ, ದೊಡ್ಡ ಪಕ್ಷಿಗಳು ಆ ಪ್ರಾಣಿಗಳ ಮಾಂಸವನ್ನು ತಿನ್ನಲು ಹಾರಿ ಬಂದವು. ಆದರೆ ಅಬ್ರಾಮನು ಅವುಗಳನ್ನು ಓಡಿಸಿಬಿಟ್ಟನು.
|
12. ಸಾಯಂಕಾಲವಾಯಿತು, ಸೂರ್ಯ ಮುಳುಗತೊಡಗಿದಾಗ ಅಬ್ರಾಮನಿಗೆ ಗಾಢ ನಿದ್ರೆ ಬಂದಿತು. ಅವನು ನಿದ್ರೆ ಮಾಡುತ್ತಿರುವಾಗ ಕಾರ್ಗತ್ತಲಾಯಿತು.
|
13. ಆಗ ಯೆಹೋವನು ಅಬ್ರಾಮನಿಗೆ, “ನಿನಗೆ ಈ ವಿಷಯಗಳು ತಿಳಿದಿರಬೇಕು. ನಿನ್ನ ಸಂತತಿಯವರು ಪರದೇಶಿಯರಾಗಿ ತಮ್ಮದಲ್ಲದ ದೇಶದಲ್ಲಿ ವಾಸಮಾಡುವರು. ಅಲ್ಲಿನ ಜನರು ಅವರನ್ನು ಗುಲಾಮರನ್ನಾಗಿ ಮಾಡಿಕೊಳ್ಳುವರು. ಅಲ್ಲಿ ಅವರು ನಾನೂರು ವರ್ಷಗಳವರೆಗೆ ಬಾಧೆಪಡುವರು.
|
14. ಆದರೆ ನಾನೂರು ವರ್ಷಗಳಾದ ಮೇಲೆ ಅವರ ಮೇಲೆ ದೊರೆತನ ಮಾಡಿದ ಆ ದೇಶವನ್ನು ನಾನು ದಂಡಿಸುವೆನು; ನಿನ್ನ ಜನರು ಆ ದೇಶವನ್ನು ಬಿಟ್ಟು ಹೊರಡುವರು. ನಿನ್ನ ಜನರು ಅದನ್ನು ಬಿಡುವಾಗ ತಮ್ಮೊಡನೆ ಸಂಪತ್ತುಗಳನ್ನು ತೆಗೆದುಕೊಂಡು ಹೋಗುವರು.
|
15. “ನೀನು ತುಂಬಾ ಮುದುಕನಾಗುವ ತನಕ ಜೀವಿಸಿ ಸಮಾಧಾನದಿಂದ ಸಾಯುವೆ; ನಿನ್ನನ್ನು ನಿನ್ನ ಕುಟುಂಬದವರೊಡನೆ ಸಮಾಧಿ ಮಾಡುವರು.
|
16. ನಾಲ್ಕು ತಲೆಮಾರುಗಳ ನಂತರ ನಿನ್ನ ಜನರು ಈ ನಾಡಿಗೆ ಹಿಂತಿರುಗುವರು. ಆ ಕಾಲದಲ್ಲಿ ನಿನ್ನ ಜನರು ಅಮೋರಿಯರನ್ನು ಸೋಲಿಸುವರು. ಇಲ್ಲಿ ವಾಸಿಸುತ್ತಿರುವ ಅಮೋರಿಯರನ್ನು ನಿನ್ನ ಜನರ ಮೂಲಕ ನಾನೇ ಶಿಕ್ಷಿಸುವೆನು. ಇದು ಮುಂದೆ ನಡೆಯುವ ಸಂಗತಿ. ಯಾಕೆಂದರೆ ಆ ಸಮಯದಲ್ಲಿ ಅಮೋರಿಯರು ಅಂಥ ಶಿಕ್ಷೆ ಅನುಭವಿಸುವಷ್ಟು ಕೆಟ್ಟವರಾಗಿರಲಿಲ್ಲ” ಎಂದು ಹೇಳಿದನು.
|
17. ಸೂರ್ಯನು ಮುಳುಗಿದ ಮೇಲೆ ತುಂಬ ಕತ್ತಲಾಯಿತು. ಕಡಿದುಹಾಕಿದ್ದ ಪ್ರತಿಯೊಂದು ಪ್ರಾಣಿಗಳ ದೇಹದ ಎರಡೆರಡು ಹೋಳುಗಳು ಇನ್ನೂ ನೆಲದ ಮೇಲೆ ಇದ್ದವು. ಆ ಸಮಯದಲ್ಲಿ ಇದ್ದಕ್ಕಿದ್ದಂತೆ ಹೊಗೆ ಮತ್ತು ಬೆಂಕಿಗಳಿಂದ ಕೂಡಿದ ದೀವಿಟಿಗೆಯು ಈ ತುಂಡುಗಳ ನಡುವೆ ಹಾದುಹೋಯಿತು.
|
18. ಆದ್ದರಿಂದ ಅಂದು ಯೆಹೋವನು ಒಂದು ವಾಗ್ದಾನವನ್ನು ಮಾಡಿ ಅಬ್ರಾಮನೊಡನೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡನು. ಯೆಹೋವನು ಅವನಿಗೆ, “ನಾನು ನಿನ್ನ ಸಂತತಿಯವರಿಗೆ ಈ ನಾಡನ್ನು ಕೊಡುವೆನು. ನಾನು ಅವರಿಗೆ ಈಜಿಪ್ಟ್ ನದಿಯಿಂದ ಯೂಫ್ರೇಟೀಸ್ ಮಹಾನದಿಯವರೆಗೂ ಇರುವ ನಾಡನ್ನು ಕೊಡುವೆನು.
|