1. {ಯಾಜಕರ ಕೋಣೆಗಳು} [PS] ಆಮೇಲೆ ಆ ಮನುಷ್ಯನು ನನ್ನನ್ನು ಉತ್ತರದ್ವಾರದ ಮೂಲಕ ಹೊರಗಿನ ಪ್ರಾಕಾರಕ್ಕೆ ಕರೆದುಕೊಂಡು ಹೋದನು. ಅವನು ನನ್ನನ್ನು ಪಶ್ಚಿಮದಲ್ಲಿರುವ ಅನೇಕ ಕೋಣೆಗಳಿದ್ದ ಕಟ್ಟಡಕ್ಕೆ ಕರೆದುಕೊಂಡು ಹೋದನು. ಅದು ಇಕ್ಕಟ್ಟಾದ ಸ್ಥಳದ ಪಶ್ಚಿಮದಲ್ಲಿತ್ತು ಮತ್ತು ಕಟ್ಟಡವು ಉತ್ತರ ಭಾಗದಲ್ಲಿತ್ತು.
2. ಈ ಕಟ್ಟಡವು ನೂರು ಮೊಳ ಉದ್ದವಾಗಿದ್ದು ಐವತ್ತು ಮೊಳ ಅಗಲವಿತ್ತು. ಉತ್ತರ ಭಾಗದ ಪ್ರಾಕಾರದೊಳಗಿಂದ ಜನರು ಒಳಪ್ರವೇಶಿಸುತ್ತಿದ್ದರು.
3. ಆ ಕಟ್ಟಡವು ಮೂರು ಅಂತಸ್ತಿನಷ್ಟು ಎತ್ತರವಿದ್ದು ಅದಕ್ಕೆ ಅನೇಕ ಮೇಲಂತಸ್ತುಗಳಿದ್ದವು. ಇಪ್ಪತ್ತು ಮೊಳದ ಒಳಗಿನ ಪ್ರಾಕಾರವು ಆಲಯಕ್ಕೂ ಕಟ್ಟಡಕ್ಕೂ ನಡುವೆ ಇತ್ತು. ಎದುರಿನ ಕೋಣೆಗಳು ಹೊರಗಿನ ಪ್ರಾಕಾರದ ನೆಲಗಟ್ಟಿಗೆ ಮುಖಮಾಡಿದ್ದವು.
4. ಇದರ ಪ್ರವೇಶ ದ್ವಾರವು ಉತ್ತರ ದಿಕ್ಕಿನಲ್ಲಿದ್ದಾಗ್ಯೂ, ಹತ್ತು ಮೊಳ ಅಗಲ, ನೂರು ಮೊಳ ಉದ್ದದ ದಾರಿಯು ಆ ಕಟ್ಟಡದ ದಕ್ಷಿಣ ಭಾಗದಲ್ಲಿತ್ತು.
5. (5-6) ಈ ಕಟ್ಟಡವು ಮೂರು ಅಂತಸ್ತು ಎತ್ತರವಿದ್ದಾಗ್ಯೂ ಇದಕ್ಕೆ ಹೊರಗಿನ ಪ್ರಾಕಾರಕ್ಕೆ ಇದ್ದಂತೆ ಸ್ತಂಭಗಳಿರಲಿಲ್ಲ. ಮೇಲಿನ ಅಂತಸ್ತಿನ ಕೋಣೆಗಳು, ಮಧ್ಯ ಮತ್ತು ಕೆಳಗಿನ ಅಂತಸ್ತುಗಳ ಕೋಣೆಗಳಿಂದ ಹಿಂದಕ್ಕೆ ಇದ್ದವು. ಮೇಲಿನಂತಸ್ತು, ಮಧ್ಯ ಅಂತಸ್ತಿಗಿಂತ ಕಿರಿದಾಗಿತ್ತು. ಮತ್ತು ಮಧ್ಯ ಅಂತಸ್ತು ಕೆಳಗಿನ ಅಂತಸ್ತಿಗಿಂತ ಅಗಲದಲ್ಲಿ ಕಿರಿದಾಗಿತ್ತು. ಯಾಕೆಂದರೆ ಮೇಲಂತಸ್ತುಗಳು ಆ ಜಾಗವನ್ನು ಆಕ್ರಮಿಸಿದ್ದವು.
6.
7. ಕೋಣೆಗಳ ಉದ್ದಕ್ಕೆ ಅನುಸಾರವಾಗಿ ಒಂದು ಗೋಡೆಯು ಹೊರಗಿನ ಪ್ರಾಕಾರಕ್ಕೆ ಸಮವಾಗಿ ಇತ್ತು. ಇದು ಕೋಣೆಗಳೆದುರು ಐವತ್ತು ಮೊಳ ಉದ್ದವಾಗಿತ್ತು.
8. ಹೊರಗಿನ ಪ್ರಾಕಾರಕ್ಕೆ ಸರಿಯಾಗಿ ಹೋಗಿದ್ದ ಕೋಣೆಗಳ ಸಾಲು ಐವತ್ತು ಮೊಳ ಉದ್ದವಾಗಿತ್ತು. ಆದರೆ ಆಲಯದ ಬಳಿಯಲ್ಲಿದ್ದ ಕಟ್ಟಡವು ನೂರು ಮೊಳ ಉದ್ದವಾಗಿತ್ತು.
9. ಕಟ್ಟಡದ ಪೂರ್ವ ಭಾಗದಲ್ಲಿ ಪ್ರವೇಶ ದ್ವಾರವು ಇತ್ತು. ಇದರ ಮೂಲಕ ಹೊರಗಿನ ಪ್ರಾಕಾರದಿಂದ ಜನರು ಒಳ ಪ್ರವೇಶ ಮಾಡಬಹುದು.
10. ಈ ಪ್ರವೇಶ ದ್ವಾರವು ಪ್ರಾಕಾರದ ಬದಿಯಲ್ಲಿ ಗೋಡೆಯು ಪ್ರಾರಂಭವಾಗುವಲ್ಲಿಯೇ ಇತ್ತು. [PE][PS] ಬೇರೆ ಕಟ್ಟಡ ಮತ್ತು ಕಿರಿದಾದ ಜಾಗಕ್ಕೆ ತಾಗಿ ದಕ್ಷಿಣದಿಕ್ಕಿನಲ್ಲಿ ಕೋಣೆಗಳು ಇದ್ದವು.
11. ಈ ಕೋಣೆಗಳ ಎದುರಿನಲ್ಲಿ ದಾರಿಯು ಇತ್ತು. ಇದು ಉತ್ತರ ದಿಕ್ಕಿನಲ್ಲಿದ್ದ ಕೋಣೆಗಳಂತೆ ಇತ್ತು. ಅವುಗಳ ಅಳತೆಯೂ ಬಾಗಿಲು ಕದಗಳ ವಿನ್ಯಾಸವೂ ಒಂದೇ ಆಗಿತ್ತು.
12. ಕೆಳಗಿನ ಕೋಣೆಗಳ ಪ್ರವೇಶ ದ್ವಾರವು ಕಟ್ಟಡದ ಪೂರ್ವ ಭಾಗದಲ್ಲಿದ್ದು ಗೋಡೆಯ ಬದಿಯಲ್ಲಿದ್ದ ದಾರಿಯಿಂದ ಜನರು ಒಳಪ್ರವೇಶ ಮಾಡಬಹುದಾಗಿತ್ತು. [PE][PS]
13. ಅವನು ನನಗೆ ಹೀಗೆ ಹೇಳಿದನು, “ನಿಯಮಿತ ಇಕ್ಕಟ್ಟಾದ ಸ್ಥಳದ ಬಳಿಯಲ್ಲಿ ಇರುವ ಉತ್ತರದ ಮತ್ತು ದಕ್ಷಿಣದ ಕೋಣೆಗಳು ಪವಿತ್ರವಾದವುಗಳು. ಅವು ಯೆಹೋವನಿಗೆ ಯಜ್ಞ ಸಮರ್ಪಿಸುವ ಯಾಜಕರಿಗಾಗಿ ಇವೆ. ಅಲ್ಲಿ ಯಾಜಕರು ಅತಿ ಪವಿತ್ರ ಕಾಣಿಕೆಪದಾರ್ಥಗಳನ್ನು ತಿನ್ನುವರು. ಮತ್ತು ಅಲ್ಲಿ ಅತಿ ಪವಿತ್ರ ಕಾಣಿಕೆಗಳನ್ನಿಡುವರು. ಯಾಕೆಂದರೆ ಆ ಸ್ಥಳವು ಪವಿತ್ರವಾದದ್ದು. ಅತಿ ಪವಿತ್ರ ಕಾಣಿಕೆ ಯಾವುವೆಂದರೆ, ಧಾನ್ಯಸಮರ್ಪಣೆ, ಪಾಪಪರಿಹಾರಕಯಜ್ಞ, ದೋಷಪರಿಹಾರಕಯಜ್ಞ, ಸಮಾಧಾನಯಜ್ಞದ ಕಾಣಿಕೆ.
14. ಈ ಪವಿತ್ರಸ್ಥಳಕ್ಕೆ ಪ್ರವೇಶಿಸುವ ಯಾಜಕರು ತಮ್ಮ ದೀಕ್ಷಾವಸ್ತ್ರಗಳನ್ನು ಅಲ್ಲಿಯೇ ತೆಗೆದಿಟ್ಟು ಹೊರಗಿನ ಪ್ರಾಕಾರಕ್ಕೆ ಹೋಗಬೇಕು. ಯಾಕೆಂದರೆ ಆ ವಸ್ತುಗಳು ಪವಿತ್ರವಾದದ್ದು. ಒಬ್ಬ ಯಾಜಕನು ಇತರ ಜನರು ಇರುವ ಸ್ಥಳಕ್ಕೆ ಹೋಗಬೇಕಿದ್ದಲ್ಲಿ ಅವನು ಕೋಣೆಗೆ ಬಂದು ದೀಕ್ಷಾವಸ್ತ್ರಗಳನ್ನು ತೆಗೆದಿಟ್ಟು ಬೇರೆ ವಸ್ತ್ರಗಳನ್ನು ಹಾಕಿಕೊಂಡು ಹೋಗಬೇಕು.” [PS]
15. {ಹೊರಗಿನ ಪ್ರಾಕಾರ} [PS] ಆಲಯದ ಒಳಭಾಗದ ಅಳತೆಯನ್ನು ಅವನು ತೆಗೆದುಕೊಂಡ ಬಳಿಕ ನನ್ನನ್ನು ಪೂರ್ವದ ದ್ವಾರದಿಂದ ಹೊರತಂದು ಆ ಜಾಗವನ್ನೆಲ್ಲಾ ಅಳೆದನು.
16. ಪೂರ್ವ ಭಾಗವನ್ನು ಅವನು ತನ್ನ ಅಳತೆ ಕೋಲಿನಿಂದ ಅಳೆದನು. ಅದು ಐನೂರು ಮೊಳ ಉದ್ದವಿತ್ತು.
17. ಅವನು ಉತ್ತರ ಭಾಗವನ್ನು ಅಳೆದನು, ಅದು ಐನೂರು ಮೊಳ ಉದ್ದವಿತ್ತು.
18. ಅವನು ದಕ್ಷಿಣದ ಭಾಗವನ್ನು ಅಳೆದನು, ಅದು ಐನೂರು ಮೊಳ ಉದ್ದವಿತ್ತು.
19. ಅನಂತರ ಪಶ್ಚಿಮದ ಭಾಗಕ್ಕೆ ಹೋಗಿ ಅಲ್ಲಿ ಅಳೆದನು. ಅದು ಐನೂರು ಮೊಳ ಉದ್ದವಿತ್ತು.
20. ಆಲಯದ ಸುತ್ತಲೂ ಇದ್ದ ನಾಲ್ಕು ಗೋಡೆಗಳನ್ನು ಅಳೆದನು. ಆ ಗೋಡೆ ಐನೂರು ಮೊಳ ಉದ್ದವಿದ್ದು ಐನೂರು ಮೊಳ ಅಗಲವಿತ್ತು. ಅದು ಪವಿತ್ರಸ್ಥಳವನ್ನೂ ಬೇರೆ ಸ್ಥಳವನ್ನೂ ಬೇರ್ಪಡಿಸಿತ್ತು. [PE]