1. {ಜೆರುಸಲೇಮಿನ ನಾಶನದ ಕುರಿತು ಮುನ್ನೆಚ್ಚರಿಕೆ} [PS] “ನರಪುತ್ರನೇ, ಒಂದು ಇಟ್ಟಿಗೆಯನ್ನು ತೆಗೆದುಕೊ, ಅದನ್ನು ನಿನ್ನ ಮುಂದೆ ಇಟ್ಟು ಅದರ ಮೇಲೆ ಒಂದು ಚಿತ್ರವನ್ನು ಅಂದರೆ ಜೆರುಸಲೇಮ್ ನಗರದ ಚಿತ್ರವನ್ನು ಕೊರೆ.
2. ಆಮೇಲೆ, ನೀನೇ ಒಂದು ಸೈನ್ಯದೊಂದಿಗೆ ಆ ನಗರವನ್ನು ಮುತ್ತಿಗೆ ಹಾಕಿದವನಂತೆ ನಟನೆ ಮಾಡು. ನಗರದ ಸುತ್ತಲೂ ಮಣ್ಣಿನ ದಿಬ್ಬಗಳನ್ನು ಮಾಡಿ ನೀನು ಅದಕ್ಕೆ ಧಾಳಿ ಮಾಡಲು ಸಹಾಯವಾಗುವಂತೆ ಮಾಡು. ನಗರದ ಪೌಳಿಗೋಡೆಯ ತನಕ ಒಂದು ರಸ್ತೆಯನ್ನು ತಯಾರಿಸು. ಒಂದು ಭಿತ್ತಿಭೇದಕ ಯಂತ್ರವನ್ನು ತಂದು ಸೈನ್ಯದ ಪಾಳೆಯಗಳನ್ನು ನಗರದ ಸುತ್ತಲೂ ನಿರ್ಮಿಸು.
3. ಆ ಬಳಿಕ ಒಂದು ಕಬ್ಬಿಣದ ರೊಟ್ಟಿ ಕಲ್ಲನ್ನು ನಿನಗೂ ನಗರಕ್ಕೂ ಮಧ್ಯೆ ಇಡು. ಅದು ನಿನಗೂ ನಗರಕ್ಕೂ ನಡುವೆ ಇರುವ ಕಬ್ಬಿಣದ ಗೋಡೆಯಂತಿರುವುದು. ಈ ರೀತಿಯಾಗಿ ನೀನು ಆ ನಗರಕ್ಕೆ ವಿರುದ್ಧವಾಗಿರುವಂತೆ ಕಂಡು ಬರುವಿ. ನೀನು ಆ ನಗರಕ್ಕೆ ಮುತ್ತಿಗೆ ಹಾಕಿ ಅದರ ಮೇಲೆ ಯುದ್ಧ ಮಾಡುವಿ. ಯಾಕೆಂದರೆ, ಶೀಬ್ರದಲ್ಲೇ ಏನು ಸಂಭವಿಸುತ್ತದೆ ಎಂಬುದಕ್ಕೆ ಇಸ್ರೇಲ್ ಜನರಿಗೆ ಇದು ಸೂಚನೆಯಾಗಿದೆ. [PE][PS]
4. “ಆಮೇಲೆ ನೀನು ನಿನ್ನ ಎಡಮಗ್ಗುಲಲ್ಲಿ ಮಲಗಿಕೊಂಡು ಇಸ್ರೇಲ್ ಜನರ ದೋಷವನ್ನು ನಿನ್ನ ಎಡಮಗ್ಗುಲ ಮೇಲೆ ಹಾಕು. ನೀನು ನಿನ್ನ ಎಡಮಗ್ಗುಲಲ್ಲಿ ಮಲಗಿರುವಷ್ಟು ದಿನ ಇಸ್ರೇಲರ ದೋಷಗಳನ್ನು ಹೊತ್ತುಕೊಳ್ಳುವೆ.
5. ನೀನು ಮುನ್ನೂರತೊಂಭತ್ತು ದಿವಸಗಳ ತನಕ ಇಸ್ರೇಲರ ದೋಷಗಳನ್ನು ಹೊತ್ತುಕೊಳ್ಳಬೇಕು. ಈ ರೀತಿಯಾಗಿ ಇಸ್ರೇಲರು ಎಷ್ಟು ಕಾಲ ಶಿಕ್ಷೆ ಅನುಭವಿಸುವರೆಂದು ತೋರಿಸುತ್ತೇನೆ. ಆ ಒಂದು ದಿವಸವು ಒಂದು ವರ್ಷದಂತಿರುವುದು. [PE][PS]
6. “ಅನಂತರ ನೀನು ನಿನ್ನ ಬಲಗಡೆಯಲ್ಲಿ ನಲವತ್ತು ದಿವಸಗಳ ಕಾಲ ಮಲಗಬೇಕು. ಈ ಸಾರಿ ನೀನು ಯೆಹೂದದ ದೋಷಗಳನ್ನು ನಲವತ್ತು ದಿವಸ ಹೊತ್ತುಕೊಳ್ಳುವೆ. ಒಂದು ದಿವಸವು ಒಂದು ವರ್ಷಕ್ಕೆ ಸಮಾನ. ಯೆಹೂದವು ಎಷ್ಟು ಕಾಲ ಶಿಕ್ಷೆಯನ್ನು ಅನುಭವಿಸಬೇಕೆಂದು ಇದು ತೋರಿಸುವುದು.” [PE][PS]
7. ದೇವರು ಮತ್ತೆ ಹೇಳಿದ್ದೇನೆಂದರೆ: “ಈಗ ನೀನು ನಿನ್ನ ಬಟ್ಟೆಯ ತೋಳನ್ನು ಮೇಲಕ್ಕೆ ಮಡಿಚಿ ನಿನ್ನ ಕೈಯನ್ನು ಇಟ್ಟಿಗೆಯ ಮೇಲೆ ಚಾಚು. ಜೆರುಸಲೇಮ್ ನಗರದ ಮೇಲೆ ಯುದ್ಧ ಮಾಡುವವನಂತೆ ನಟಿಸು. ಪಟ್ಟಣದ ವಿರುದ್ಧವಾಗಿ ಪ್ರವಾದಿಸು.
8. ನೋಡು, ಈಗ ನಾನು ನಿನ್ನನ್ನು ಹಗ್ಗದಿಂದ ಕಟ್ಟುತ್ತಿದ್ದೇನೆ. ನೀನು ಜೆರುಸಲೇಮ್ ನಗರದ ಮೇಲೆ ನಿನ್ನ ಆಕ್ರಮಣವನ್ನು ಮುಗಿಸುವ ತನಕ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೊರಳಲು ನಿನ್ನಿದಾಗುವದಿಲ್ಲ.” [PE][PS]
9. ದೇವರು ಮತ್ತೆ ಹೇಳಿದ್ದೇನೆಂದರೆ: “ನೀನು ರೊಟ್ಟಿಯನ್ನು ಮಾಡಲು ಕಾಳುಗಳನ್ನು ತರಬೇಕು. ಸ್ವಲ್ಪ ಗೋಧಿ, ಬಾರ್ಲಿ, ಅಲಸಂದೆ, ಸಾವೆ, ಕಡಲೆ ಇವುಗಳನ್ನೆಲ್ಲಾ ಒಂದು ಬೋಗುಣಿಯಲ್ಲಿ ಹಾಕಿ ಬೀಸಿ ಹಿಟ್ಟು ಮಾಡು. ಈ ಹಿಟ್ಟನ್ನು ನಾದಿ ರೊಟ್ಟಿ ಮಾಡು. ನೀನು ಮುನ್ನೂರತೊಂಭತ್ತು ದಿವಸಗಳ ಕಾಲ ನಿನ್ನ ಎಡಮಗ್ಗುಲಲ್ಲಿ ಮಲಗಿರುವಾಗ ಅದನ್ನು ಮಾತ್ರ ತಿನ್ನುವೆ.
10. ನೀನು ದಿನವೊಂದಕ್ಕೆ ಎಂಟು ರೊಟ್ಟಿಗಳನ್ನು ತಿನ್ನುವೆ. ನೀನು ಅವುಗಳನ್ನು ಪ್ರತಿದಿನ ಒಂದೇ ಸಮಯದಲ್ಲಿ ತಿನ್ನಬೇಕು.
11. ನೀನು ದಿನಕ್ಕೆ ಮೂರು ಲೋಟ ನೀರನ್ನು ಮಾತ್ರ ಕುಡಿಯಬೇಕು. ನೀನು ಅವುಗಳನ್ನು ಪ್ರತಿದಿನ ಒಂದೇ ಸಮಯದಲ್ಲಿ ಕುಡಿಯಬೇಕು.
12. ನೀನು ಬಾರ್ಲಿ ರೊಟ್ಟಿಗಳನ್ನು ಮಾಡುವಂತೆ ತಿನ್ನುವದಕ್ಕಾಗಿ ನೀನು ಪ್ರತಿದಿನ ರೊಟ್ಟಿಯನ್ನು ಮಾಡಬೇಕು. ಒಣಗಿದ ಮನುಷ್ಯನ ಮಲದಲ್ಲಿ ಅದನ್ನು ಸುಡಬೇಕು. ಈ ಬೆಂಕಿಯ ಮೇಲೆ ರೊಟ್ಟಿಯನ್ನು ಕಾಯಿಸಬೇಕು. ನೀನು ಈ ರೊಟ್ಟಿಯನ್ನು ಜನರ ಮುಂದೆ ಮಾಡಿ ತಿನ್ನಬೇಕು.”
13. ಬಳಿಕ ಯೆಹೋವನು, “ನಾನು ಇಸ್ರೇಲ್ ಜನರನ್ನು ಬಲವಂತವಾಗಿ ಕಳುಹಿಸುವ ಪರದೇಶಗಳಲ್ಲಿ ಅವರು ಅಶುದ್ಧವಾದ ರೊಟ್ಟಿಗಳನ್ನು ತಿನ್ನುತ್ತಾರೆಂದು ಇದು ಸೂಚಿಸುತ್ತದೆ” ಎಂದು ಹೇಳಿದನು. [PE][PS]
14. ಆಗ ನಾನು ಹೇಳಿದ್ದೇನೆಂದರೆ, “ಅಯ್ಯೋ, ನನ್ನ ಒಡೆಯನಾದ ಯೆಹೋವನೇ, ನಾನು ಎಂದೂ ಅಶುದ್ಧ ಆಹಾರವನ್ನು ತಿನ್ನಲಿಲ್ಲ. ತಾನಾಗಿಯೇ ಸತ್ತ ಪ್ರಾಣಿಯ ಮಾಂಸವನ್ನಾಗಲಿ ಕಾಡುಪ್ರಾಣಿಯು ಕೊಂದ ಪ್ರಾಣಿಯ ಮಾಂಸವನ್ನಾಗಲಿ ಎಂದೂ ತಿಂದದ್ದಿಲ್ಲ. ಬಾಲ್ಯ ಪ್ರಾಯದಿಂದ ಈ ದಿವಸ ಪರ್ಯಂತ ಅಶುದ್ಧ ಆಹಾರ ತಿಂದಿಲ್ಲ; ಅಂತಹ ಮಾಂಸವೂ ನನ್ನ ಬಾಯೊಳಕ್ಕೆ ಹೋಗಲಿಲ್ಲ.” [PE][PS]
15. ಆಗ ದೇವರು ನನಗೆ, “ಸರಿ! ಹಾಗಾದರೆ, ರೊಟ್ಟಿಯನ್ನು ಮಾಡುವದಕ್ಕಾಗಿ ಮನುಷ್ಯನ ಮಲದ ಬದಲಾಗಿ ದನದ ಒಣಗಿದ ಸಗಣಿಯನ್ನು ಉಪಯೋಗಿಸು” ಎಂದು ಉತ್ತರಕೊಟ್ಟನು. [PE][PS]
16. ಬಳಿಕ ದೇವರು ನನಗೆ, “ನರಪುತ್ರನೇ, ನಾನು ಜೆರುಸಲೇಮಿಗೆ ರೊಟ್ಟಿಯ ಸರಬರಾಜನ್ನು ನಿಲ್ಲಿಸುವೆನು. ಜನರಿಗೆ ತಿನ್ನಲು ಕೊಂಚ ರೊಟ್ಟಿ ಸಿಗುವುದು. ಆಹಾರವು ಮುಗಿದು ಹೋಗುತ್ತಿರುವದರಿಂದ ಅವರು ಬಹಳವಾಗಿ ಚಿಂತಿಸುವರು. ಅವರಿಗೆ ಸ್ವಲ್ಪವೇ ಕುಡಿಯುವ ನೀರು ಇರುವುದು. ಆ ನೀರನ್ನು ಕುಡಿಯುವಾಗ ಅವರಿಗೆ ಭಯಹಿಡಿಯುವುದು.
17. ಯಾಕೆಂದರೆ ಎಲ್ಲರಿಗೆ ಸಾಕಾಗುವಷ್ಟು ಆಹಾರಸಾಮಾಗ್ರಿಯಾಗಲಿ ನೀರಾಗಲಿ ಇರುವದಿಲ್ಲ. ಅವರು ಒಬ್ಬರನ್ನೊಬ್ಬರು ಕಂಡು ಗಾಬರಿಗೊಳ್ಳುವರು. ತಮ್ಮ ಪಾಪಗಳ ನಿಮಿತ್ತವಾಗಿ ಅವರು ಬಡಕಲಾಗಿಯೂ ಹಸಿವೆಯಿಂದಲೂ ಇರುವರು. [PE]