1. {ಎಸ್ತೇರಳು ರಾಜನನ್ನು ಸಂದರ್ಶಿಸಿದ್ದು} [PS] ಮೂರನೇ ದಿವಸದಲ್ಲಿ ಎಸ್ತೇರಳು ವಿಶೇಷ ಬಟ್ಟೆಗಳನ್ನು ಧರಿಸಿ ಅರಸನ ಅರಮನೆಯ ಒಳಾಂಗಣದಲ್ಲಿ ನಿಂತುಕೊಂಡಳು. ಅದು ರಾಜ ದರ್ಬಾರಿನ ಮುಂದೆ ಇತ್ತು. ರಾಜನು ಸಿಂಹಾಸನದ ಮೇಲೆ, ಪ್ರಜೆಗಳು ಪ್ರವೇಶಿಸುವ ಬಾಗಿಲಿಗೆ ಎದುರಾಗಿ ಕುಳಿತಿದ್ದನು.
2. ಅರಸನು ಒಳಾಂಗಣದಲ್ಲಿ ನಿಂತಿದ್ದ ಎಸ್ತೇರಳನ್ನು ಕಂಡ ಕೂಡಲೇ ಆಕೆಯನ್ನು ಮೆಚ್ಚಿಕೊಂಡು ತನ್ನ ಕೈಯಲ್ಲಿದ್ದ ರಾಜದಂಡವನ್ನು ಆಕೆಯ ಕಡೆಗೆ ಚಾಚಿದನು. ಆಗ ಎಸ್ತೇರಳು ಒಳಾಂಗಣವನ್ನು ಪ್ರವೇಶಿಸಿ ರಾಜನ ಬಳಿ ಹೋದಳು ಮತ್ತು ರಾಜದಂಡದ ತುದಿಯನ್ನು ತನ್ನ ಬೆರಳಿನಿಂದ ಮುಟ್ಟಿದಳು. [PE][PS]
3. “ಎಸ್ತೇರ್ ರಾಣಿಯೇ, ಯಾವುದು ನಿನ್ನ ಮನಸ್ಸನ್ನು ಭಾದಿಸುತ್ತದೆ? ನನ್ನನ್ನು ಏನು ಕೇಳಲು ಬಂದಿರುವಿ? ಕೇಳು, ನಾನು ನಿನಗೆ ಅರ್ಧ ರಾಜ್ಯವನ್ನು ಕೇಳಿದರೂ ಕೊಡುವೆನು” ಎಂದು ರಾಜನು ಅಂದನು. [PE][PS]
4. ಅದಕ್ಕೆ ಎಸ್ತೇರಳು, “ನಾನು ಒಂದು ಔತಣವನ್ನು ಸಿದ್ಧಪಡಿಸಿರುತ್ತೇನೆ. ಅದಕ್ಕೆ ನೀವೂ, ಹಾಮಾನನೂ ಬರಬೇಕು ಎಂದು ವಿನಂತಿಸುತ್ತೇನೆ” ಎಂದಳು. [PE][PS]
5. ಆಗ ಅರಸನು, “ಹಾಮಾನನನ್ನು ಬೇಗನೇ ಕರೆಯಿಸಿರಿ, ಎಸ್ತೇರಳು ಹೇಳಿದಂತೆ ನಾವು ಮಾಡುವೆವು” ಅಂದನು. [PE][PS] ಹಾಗೆ ಅರಸನೂ ಹಾಮಾನನೂ ಎಸ್ತೇರಳು ಅವರಿಗಾಗಿ ಮಾಡಿದ ಔತಣಕ್ಕೆ ಹೋದರು.
6. ಅವರು ದ್ರಾಕ್ಷಾರಸವನ್ನು ಸೇವಿಸುತ್ತಿರುವಾಗ ರಾಜನು ಎಸ್ತೇರಳನ್ನು ತಿರಿಗಿ ವಿಚಾರಿಸಿದನು, “ನೀನು ನನ್ನನ್ನು ಏನು ಕೇಳಬೇಕೆಂದಿದ್ದೀ? ಏನೂ ಬೇಕಾದರೂ ಕೇಳು. ನಾನು ಕೊಡುತ್ತೇನೆ. ಹೇಳು ಏನುಬೇಕು? ನನ್ನ ಅರ್ಧ ರಾಜ್ಯವನ್ನು ಕೇಳಿದರೂ ನಾನು ಕೊಡುತ್ತೇನೆ” ಅಂದನು. [PE][PS]
7. ಅದಕ್ಕೆ ಎಸ್ತೇರಳು, “ನನ್ನ ಬಿನ್ನಹವೇನೆಂದರೆ:
8. ರಾಜನು ಸಮ್ಮತಿಸುವದಾದರೆ ಮತ್ತು ನಾನು ಕೇಳಿಕೊಳ್ಳುವುದನ್ನು ಕೊಡಲು ರಾಜನಿಗೆ ಇಷ್ಟವಾದರೆ, ನಾಳೆ ನಾನು ಇನ್ನೊಂದು ಔತಣ ಸಮಾರಂಭವನ್ನು ಏರ್ಪಡಿಸುತ್ತೇನೆ. ಅದಕ್ಕೆ ನೀವೂ ಹಾಮಾನನೂ ಬರಬೇಕು. ಆಗ ನಾನು ನನಗೇನುಬೇಕೆಂದು ತಿಳಿಸುವೆನು” ಅಂದಳು. [PS]
9. {ಮೊರ್ದೆಕೈ ಮೇಲೆ ಹಾಮಾನನ ರೋಷ} [PS] ಹಾಮಾನನು ಹರ್ಷ ತುಂಬಿದವನಾಗಿ ರಾಜ ಸನ್ನಿಧಿಯಿಂದ ತನ್ನ ಮನೆಗೆ ತೆರಳಿದನು. ಆದರೆ ಹೆಬ್ಬಾಗಿಲ ಬಳಿಯಲ್ಲಿ ಮೊರ್ದೆಕೈಯನ್ನು ನೋಡಿದಾಗ ಅವನ ಮೇಲೆ ಹಾಮಾನನ ಕೋಪ ಉಕ್ಕಿ ಬಂತು. ಯಾಕೆಂದರೆ ಮೊರ್ದೆಕೈ ಹಾಮಾನನಿಗೆ ಯಾವ ಗೌರವವನ್ನೂ ಕೊಟ್ಟಿರಲಿಲ್ಲ. ಮತ್ತು ಅವನಿಗೆ ಭಯಪಡಲಿಲ್ಲ. ಇದು ಹಾಮಾನನನ್ನು ಸಿಟ್ಟಿಗೇರುವಂತೆ ಮಾಡಿತು.
10. ಆದರೆ ಹಾಮಾನನು ತನ್ನ ಕೋಪವನ್ನು ಹಿಡಿತದಲ್ಲಿಟ್ಟುಕೊಂಡು ತನ್ನ ಮನೆಗೆ ಹೋದನು. ಅಲ್ಲಿ ತನ್ನ ಸ್ನೇಹಿತರನ್ನೂ ತನ್ನ ಹೆಂಡತಿಯಾದ ಜೆರೆಷಳನ್ನೂ ಕರೆದು
11. ತನ್ನ ಸಂಪತ್ತಿನ ವಿಷಯ ಕೊಚ್ಚಿಗೊಂಡನು. ತನ್ನ ಸ್ನೇಹಿತರಲ್ಲಿ ತನ್ನ ಮಕ್ಕಳ ವಿಚಾರವಾಗಿ ಹೆಗ್ಗಳಿಕೆಯಿಂದ ಮಾತಾಡುತ್ತಿದ್ದನು. ಮಾತ್ರವಲ್ಲದೆ ಅರಸನು ತನ್ನನ್ನು ಅತ್ಯುನ್ನತ ಸ್ಥಾನಕ್ಕೆ ಏರಿಸಿ ಇತರ ಎಲ್ಲಾ ನಾಯಕರುಗಳ ಮೇಲೆ ನೇಮಿಸಿದನು.
12. “ಅಷ್ಟೇ ಅಲ್ಲ” ಹಾಮಾನನು ಮುಂದುವರಿಸುತ್ತಾ, “ಎಸ್ತೇರ್ ರಾಣಿಯು ಅರಸನೊಡನೆ ನನ್ನೊಬ್ಬನನ್ನೇ ಕರೆದು ಔತಣ ಮಾಡಿಸಿದಳು. ನಾಳೆಯ ಔತಣ ಸಮಾರಂಭಕ್ಕೂ ಅರಸನೊಡನೆ ನನ್ನನ್ನು ತಿರಿಗಿ ಬರಲು ಆಮಂತ್ರಿಸಿರುತ್ತಾಳೆ.
13. ಆದರೆ ನಾನು ಹೆಬ್ಬಾಗಿಲ ಬಳಿಯಲ್ಲಿ ಕುಳಿತುಕೊಳ್ಳುತ್ತಿರುವ ಮೊರ್ದೆಕೈಯನ್ನು ನೋಡುವಾಗ ನನ್ನ ಸಂತೋಷವೆಲ್ಲವೂ ಮಾಯವಾಗುತ್ತದೆ” ಎಂದು ಹೇಳಿದನು. [PE][PS]
14. ಇದನ್ನು ಕೇಳಿದ ಹಾಮಾನನ ಹೆಂಡತಿ ಜೆರೆಷಳೂ ಮತ್ತು ಅವನ ಮಿತ್ರವೃಂದದವರೂ ಅವನಿಗೊಂದು ಸಲಹೆಯನ್ನಿತ್ತರು. “ಒಂದು ಗಲ್ಲು ಮರವನ್ನು ನೆಡಿಸು. ಅದು ಎಪ್ಪತ್ತೈದು ಅಡಿ ಎತ್ತರವಿರಲಿ. ನಾಳೆ ಮುಂಜಾನೆ ಮೊರ್ದೆಕೈಯನ್ನು ಗಲ್ಲಿಗೇರಿಸಲು ಅರಸನಿಂದ ಅಪ್ಪಣೆ ತೆಗೆದುಕೋ. ಅನಂತರ ಅರಸನೊಂದಿಗೆ ಔತಣ ಸಮಾರಂಭಕ್ಕೆ ಹೋಗಿ ಸಂತೋಷಪಡು.” [PE][PS] ಇದನ್ನು ಕೇಳಿ ಹಾಮಾನನು ಸಂತೋಷಗೊಂಡನು. ಕೂಡಲೇ ಸೇವಕನನ್ನು ಕರೆಸಿ ಗಲ್ಲುಮರವನ್ನು ಸಿದ್ಧಮಾಡಲು ಆಜ್ಞಾಪಿಸಿದನು. [PE]