1. {ಪ್ರಥಮ ಫಲ} [PS] “ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶವನ್ನು ನೀವು ಬೇಗನೆ ಪ್ರವೇಶಿಸಲಿದ್ದೀರಿ. ಆ ದೇಶವನ್ನು ಸ್ವಾಧೀನಮಾಡಿಕೊಂಡು ಅಲ್ಲಿ ನೆಲೆಸುವಿರಿ.
2. ಯೆಹೋವನು ಕೊಡುವ ಆ ದೇಶದಲ್ಲಿ ನೀವು ಪ್ರಥಮ ಬೆಳೆಯನ್ನು ಕೂಡಿಸುವಿರಿ. ಪುಟ್ಟಿಗಳಲ್ಲಿ ಧಾನ್ಯವನ್ನು ಕೂಡಿಸುವಾಗ ಪ್ರಥಮ ಭಾಗವನ್ನು ಪ್ರತ್ಯೇಕವಾಗಿಟ್ಟು ದೇವರಾದ ಯೆಹೋವನು ತನ್ನ ಆಲಯಕ್ಕಾಗಿ ಆರಿಸುವ ಸ್ಥಳಕ್ಕೆ ಅದನ್ನು ತೆಗೆದುಕೊಂಡು ಹೋಗಿ.
3. ಅಲ್ಲಿ ಸೇವೆ ಮಾಡುತ್ತಿರುವ ಯಾಜಕನಿಗೆ, ‘ಯೆಹೋವನು ನನ್ನ ಪೂರ್ವಿಕರಿಗೆ ಒಂದು ದೇಶವನ್ನು ಕೊಡುವುದಾಗಿ ವಾಗ್ದಾನ ಮಾಡಿದನು. ನಾನು ಆ ದೇಶಕ್ಕೆ ಬಂದಿರುತ್ತೇನೆ’ ಎಂದು ಹೇಳಬೇಕು. [PE][PS]
4. “ಯಾಜಕನು ನಿಮ್ಮ ಕೈಯಲ್ಲಿರುವ ಪುಟ್ಟಿಯನ್ನು ತೆಗೆದುಕೊಂಡು ಯೆಹೋವನ ಯಜ್ಞವೇದಿಕೆಯ ಎದುರು ಇಡುವನು.
5. ಆಗ ನಿಮ್ಮ ದೇವರಾದ ಯೆಹೋವನ ಸನ್ನಿಧಾನದಲ್ಲಿ ನೀವು ಹೀಗೆ ಅರಿಕೆ ಮಾಡಬೇಕು: ‘ನಮ್ಮ ಪೂರ್ವಿಕರು ಊರೂರು ತಿರುಗುತ್ತಿದ್ದ ಅರಾಮ್ಯರಾಗಿದ್ದರು. ಅವರು ಈಜಿಪ್ಟನ್ನು ಸೇರಿ ಅಲ್ಲಿಯೇ ನೆಲೆಸಿದರು. ಅಲ್ಲಿಗೆ ಅವರು ಹೋದಾಗ ಅವರು ಕೆಲವರೇ ಆಗಿದ್ದರು. ಆದರೆ ಕಾಲಕ್ರಮೇಣ ಅವರು ದೊಡ್ಡ ಜನಾಂಗವಾಗಿ ಅಭಿವೃದ್ಧಿ ಹೊಂದಿದರು.
6. ಈಜಿಪ್ಟಿನವರು ನಮ್ಮನ್ನು ಕಠಿಣವಾಗಿ ನೋಡಿಕೊಳ್ಳುತ್ತಿದ್ದರು. ನಮ್ಮನ್ನು ಗುಲಾಮರಾಗಿ ಉಪಯೋಗಿಸಿದರು. ನಮ್ಮನ್ನು ಹಿಂಸಿಸಿ, ಕಷ್ಟಕರವಾದ ಕೆಲಸವನ್ನು ಕೊಟ್ಟರು.
7. ಆಗ ನಾವು ನಮ್ಮ ಪೂರ್ವಿಕರ ದೇವರಾದ ಯೆಹೋವನಿಗೆ ಮೊರೆಯಿಟ್ಟೆವು. ಆತನು ನಮ್ಮ ಕೂಗನ್ನು ಆಲಿಸಿದನು; ನಮ್ಮ ಸಂಕಟ, ವೇದನೆಗಳನ್ನು ನೋಡಿದನು.
8. ಆಮೇಲೆ ಯೆಹೋವನು ತನ್ನ ಭುಜಪರಾಕ್ರಮದಿಂದ ನಮ್ಮನ್ನು ಈಜಿಪ್ಟಿನಿಂದ ಹೊರತಂದನು. ಆತನು ಅದ್ಭುತಕಾರ್ಯಗಳನ್ನು, ಆಶ್ಚರ್ಯಕರವಾದ ಕಾರ್ಯಗಳನ್ನು ಮಾಡಿದನು.
9. ಅಲ್ಲಿಂದ ನಮ್ಮನ್ನು ಕರೆದುತಂದು ನಮಗೆ ಈ ಒಳ್ಳೆಯ ದೇಶವನ್ನು ಕೊಟ್ಟನು.
10. ಈಗ, ಯೆಹೋವನೇ, ನೀನು ಕೊಟ್ಟ ದೇಶದಲ್ಲಿ ಬೆಳೆದ ಬೆಳೆಯಲ್ಲಿ ಪ್ರಥಮ ಫಲಗಳನ್ನು ತಂದಿದ್ದೇನೆ.’ [PE][PS] “ಆ ಪ್ರಥಮ ಬೆಳೆಯನ್ನು ನಿಮ್ಮ ದೇವರಾದ ಯೆಹೋವನ ಮುಂದೆ ಸುರಿದು ಆರಾಧಿಸಬೇಕು.
11. ನೀವೂ ನಿಮ್ಮ ಹೆಂಡತಿ ಮಕ್ಕಳೂ ಸೇರಿ ಅಲ್ಲಿ ಊಟಮಾಡಿ ಸಂತೋಷಿಸಬೇಕು. ನಿಮ್ಮ ಊರಿನಲ್ಲಿರುವ ಲೇವಿಯರೊಂದಿಗೆ ಮತ್ತು ಪರದೇಶಸ್ಥರೊಂದಿಗೆ ನಿಮ್ಮ ಪ್ರಥಮ ಫಲಗಳನ್ನು ಹಂಚಿಕೊಳ್ಳಿರಿ. [PE][PS]
12. “ಪ್ರತೀ ಮೂರನೆಯ ವರ್ಷವು ದಶಮಾಂಶದ ವರ್ಷವಾಗಿರುವುದು. ಆಗ ನಿಮ್ಮ ಬೆಳೆಯ ಹತ್ತನೆಯ ಒಂದು ಅಂಶವನ್ನು ಲೇವಿಯರಿಗೂ ಪರದೇಶಸ್ಥರಿಗೂ ಅನಾಥರಿಗೂ ವಿಧವೆಯರಿಗೂ ಕೊಡಬೇಕು. ಆಗ ಅವರಿಗೆ ಊಟಮಾಡಲು ಸಾಕಷ್ಟು ಇರುವುದು.
13. ನಿನ್ನ ದೇವರಾದ ಯೆಹೋವನಿಗೆ ನೀನು ಹೀಗೆ ಹೇಳಬೇಕು: ‘ನನ್ನ ಮನೆಯೊಳಗಿಂದ ನನ್ನ ಬೆಳೆಯ ಪರಿಶುದ್ಧ ಭಾಗವನ್ನು ತೆಗೆದು ಲೇವಿಯರಿಗೆ, ಪರದೇಶಸ್ಥರಿಗೆ, ಅನಾಥರಿಗೆ, ವಿಧವೆಯರಿಗೆ ಕೊಟ್ಟಿರುತ್ತೇನೆ. ನಿನ್ನ ಕಟ್ಟಳೆಗಳನ್ನೆಲ್ಲಾ ಅನುಸರಿಸಿದ್ದೇನೆ. ನಿನ್ನ ಆಜ್ಞೆಗಳಿಗೆ ವಿಧೇಯನಾಗಲು ನಿರಾಕರಿಸಲಿಲ್ಲ, ನಾನು ಅವುಗಳನ್ನು ಮರೆಯಲಿಲ್ಲ.
14. ನಾನು ದುಃಖದಲ್ಲಿರುವಾಗ ಆ ಆಹಾರವನ್ನು ಊಟಮಾಡಲಿಲ್ಲ. ಈ ಬೆಳೆಯನ್ನು ಶೇಖರಿಸುವಾಗ ನಾನು ಅಶುದ್ಧನಾಗಿರಲಿಲ್ಲ. ಸತ್ತವರಿಗಾಗಿ ಈ ಆಹಾರವನ್ನು ಅರ್ಪಿಸಲಿಲ್ಲ. ನನ್ನ ದೇವರಾದ ಯೆಹೋವನೇ, ನಾನು ನಿನ್ನ ಆಜ್ಞೆಗಳಿಗೆ ವಿಧೇಯನಾಗಿದ್ದೇನೆ. ನೀನು ಆಜ್ಞಾಪಿಸಿದ ಎಲ್ಲಾ ಕಾರ್ಯಗಳನ್ನು ನಾನು ಮಾಡಿದ್ದೇನೆ.
15. ನಿನ್ನ ಪರಿಶುದ್ಧ ನಿವಾಸದಿಂದ ನನ್ನನ್ನು ನೋಡು. ನಿನ್ನ ಜನಾಂಗವಾದ ಇಸ್ರೇಲನ್ನು ಆಶೀರ್ವದಿಸು. ನೀನು ನಮಗೆ ಕೊಟ್ಟಿರುವ ದೇಶವನ್ನು ಆಶೀರ್ವದಿಸು. ಸಮೃದ್ಧಿಯಿಂದ ಕೂಡಿದ ಈ ದೇಶವನ್ನು ನಮಗೆ ಕೊಡುವೆ ಎಂದು ನಮ್ಮ ಪೂರ್ವಿಕರಿಗೆ ನೀನು ವಾಗ್ದಾನ ಮಾಡಿರುವೆ.’ [PS]
16. {ಯೆಹೋವನ ಆಜ್ಞೆಗಳಿಗೆ ವಿಧೇಯರಾಗಿರಿ} [PS] “ಈ ಎಲ್ಲಾ ಕಟ್ಟಳೆಗಳನ್ನು ಮತ್ತು ನಿಯಮಗಳನ್ನು ಅನುಸರಿಸಲು ನಿಮ್ಮ ದೇವರಾದ ಯೆಹೋವನು ಇಂದು ನಿಮಗೆ ಆಜ್ಞಾಪಿಸುತ್ತಾನೆ. ನಿಮ್ಮ ಪೂರ್ಣಹೃದಯದಿಂದಲೂ ಆತ್ಮದಿಂದಲೂ ಅವುಗಳನ್ನು ಎಚ್ಚರಿಕೆಯಿಂದ ಅನುಸರಿಸಿರಿ.
17. ಯೆಹೋವನು ನಿಮ್ಮ ದೇವರೆಂದು ನೀವು ಈ ದಿನ ಪ್ರತಿಜ್ಞೆ ಮಾಡಿದ್ದೀರಿ. ಆತನು ಹೇಳಿದ ಎಲ್ಲಾ ಕಟ್ಟಳೆ, ವಿಧಿ, ನಿಯಮಗಳನ್ನು ಅನುಸರಿಸುವಿರೆಂದು ಪ್ರತಿಜ್ಞೆ ಮಾಡಿರುತ್ತೀರಿ. ಆತನು ಹೇಳಿದ್ದನ್ನೆಲ್ಲಾ ಮಾಡುವುದಾಗಿ ಹೇಳಿರುವಿರಿ.
18. ಈ ಹೊತ್ತು ಯೆಹೋವನು ನಿಮ್ಮನ್ನು ತನ್ನ ಸ್ವಂತ ಜನಾಂಗವೆಂದು ಸ್ವೀಕರಿಸಿದ್ದಾನೆ ಎಂದು ವಾಗ್ದಾನ ಮಾಡುತ್ತಾನೆ. ನೀವು ಆತನ ಎಲ್ಲಾ ಆಜ್ಞೆಗಳಿಗೆ ವಿಧೇಯರಾಗಬೇಕು.
19. ಎಲ್ಲಾ ಜನಾಂಗಗಳಿಗಿಂತ ನಿಮ್ಮನ್ನು ಬಲಿಷ್ಠರಾದ ಜನಾಂಗವನ್ನಾಗಿ ಮಾಡುವನು. ದೇವರು ನಿಮಗೆ ಜನರಿಂದ ಹೊಗಳಿಕೆಯನ್ನು, ಪ್ರಖ್ಯಾತಿಯನ್ನು ಮತ್ತು ಗೌರವವನ್ನು ಬರಮಾಡುವನು; ಆತನು ವಾಗ್ದಾನ ಮಾಡಿದಂತೆಯೇ ನೀವು ಪವಿತ್ರ ಜನರಾಗುವಿರಿ.” [PE]