1. ಅಮ್ಮೋನಿಯನಾದ ನಾಹಾಷನು ಒಂದು ತಿಂಗಳ ನಂತರ, ತನ್ನ ಸೈನ್ಯದೊಂದಿಗೆ ಯಾಬೇಷ್‌ಗಿಲ್ಯಾದಿಗೆ ಮುತ್ತಿಗೆ ಹಾಕಿದನು. ಯಾಬೇಷಿನ ಜನರೆಲ್ಲ ನಾಹಾಷನಿಗೆ, “ನೀನು ನಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳುವುದಾದರೆ, ನಾವು ನಿನ್ನ ಸೇವೆಮಾಡುತ್ತೇವೆ” ಎಂದು ಹೇಳಿದರು. [PE][PS]
2. ಆದರೆ ಅಮ್ಮೋನಿಯನಾದ ನಾಹಾಷನು, “ನಾನು ನಿಮ್ಮಲ್ಲಿ ಪ್ರತಿಯೊಬ್ಬರ ಬಲಗಣ್ಣನ್ನು ಕಿತ್ತುಹಾಕಿದಾಗ ಮಾತ್ರ ನಿಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತೇನೆ. ಆಗ ಇಸ್ರೇಲರಿಗೆಲ್ಲಾ ಅವಮಾನವಾಗುವುದು” ಎಂದು ಉತ್ತರಿಸಿದನು. [PE][PS]
3. ಯಾಬೇಷಿನ ಹಿರಿಯರು ನಾಹಾಷನಿಗೆ, “ನಮಗೆ ಏಳು ದಿನಗಳವರೆಗೆ ಸಮಯ ಕೊಡು. ನಾವು ಇಸ್ರೇಲಿನ ಎಲ್ಲಾ ಕಡೆಗೆ ದೂತರನ್ನು ಕಳುಹಿಸುತ್ತೇವೆ. ನಮ್ಮನ್ನು ರಕ್ಷಿಸಲು ಯಾರೂ ಬರದಿದ್ದರೆ ನಾವೆಲ್ಲ ನಿನ್ನ ಬಳಿಗೆ ಬರುತ್ತೇವೆ ಹಾಗೂ ನಿನಗೆ ಅಧೀನರಾಗುತ್ತೇವೆ” ಎಂದು ಹೇಳಿದರು. [PS]
4. {ಸೌಲನು ಯಾಬೇಷ್ ಗಿಲ್ಯಾದನ್ನು ರಕ್ಷಿಸುವನು} [PS] ಸೌಲನು ವಾಸವಾಗಿದ್ದ ಗಿಬೆಯಕ್ಕೆ ಸಂದೇಶಕರು ಬಂದು ಜನರಿಗೆ ಸುದ್ದಿಯನ್ನು ತಿಳಿಸಿದರು. ಜನರು ಗಟ್ಟಿಯಾಗಿ ಅತ್ತರು.
5. ಸೌಲನು ಹಸುಗಳನ್ನು ಹೊಡೆದುಕೊಂಡು ಹೊಲಕ್ಕೆ ಹೋಗಿದ್ದನು. ಸೌಲನು ಹೊಲದಿಂದ ಬಂದಾಗ ಜನರೆಲ್ಲ ಅಳುವುದು ಕೇಳಿಸಿತು. ಸೌಲನು, “ಏನಾಯಿತು? ಜನರು ಅಳುತ್ತಿರುವುದೇಕೆ?” ಎಂದು ಕೇಳಿದನು. [PE][PS] ಆಗ ಜನರೆಲ್ಲ ಯಾಬೇಷಿನ ಸಂದೇಶಕರು ಹೇಳಿದ್ದನ್ನೆಲ್ಲ ಸೌಲನಿಗೆ ತಿಳಿಸಿದರು.
6. ಅವರು ಹೇಳಿದ್ದನ್ನು ಕೇಳಿದಾಗ ದೇವರಾತ್ಮನು ಸೌಲನ ಮೈಮೇಲೆ ಮಹಾಶಕ್ತಿಯೊಡನೆ ಬಂದಿತು. ಸೌಲನು ಬಹುಕೋಪಗೊಂಡನು.
7. ಸೌಲನು ಒಂದು ಜೊತೆ ಹಸುಗಳನ್ನು ತೆಗೆದುಕೊಂಡು ಅವುಗಳನ್ನು ತುಂಡುತುಂಡಾಗಿ ಕತ್ತರಿಸಿ ಆ ತುಂಡುಗಳನ್ನು ಸಂದೇಶಕರಿಗೆ ಕೊಟ್ಟನು. “ಇಸ್ರೇಲಿನ ನಾಡಿನಲ್ಲೆಲ್ಲಾ ಈ ತುಂಡುಗಳನ್ನು ತೆಗೆದುಕೊಂಡು ಹೋಗಿ ಅವರಿಗೆ, ‘ಸೌಲನನ್ನೂ ಮತ್ತು ಸಮುವೇಲನನ್ನೂ ಹಿಂಬಾಲಿಸಿರಿ, ಸೌಲನನ್ನು ಮತ್ತು ಸಮುವೇಲನನ್ನು ಯಾರು ಹಿಂಬಾಲಿಸುವುದಿಲ್ಲವೋ, ಯಾರು ಅವರಿಗೆ ಸಹಾಯ ಮಾಡುವುದಿಲ್ಲವೋ ಅಂತಹವರ ಹಸುಗಳಿಗೂ ಇದೇ ಗತಿಯಾಗುತ್ತದೆ’ ಎಂದು ತಿಳಿಸಿರಿ” ಎಂದನು. [PE][PS] ಯೆಹೋವನ ಮೇಲೆ ಜನರಲ್ಲಿ ಹೆಚ್ಚು ಭಯವುಂಟಾಯಿತು. ಅವರೆಲ್ಲಾ ಒಂದೇ ಮನಸ್ಸಿನಿಂದ ಒಟ್ಟಾಗಿ ಸೇರಿ ಬಂದರು.
8. ಸೌಲನು ಬೆಜೆಕಿನಲ್ಲಿ ಅವರೆಲ್ಲರನ್ನೂ ಒಟ್ಟುಗೂಡಿಸಿದನು. ಅಲ್ಲಿ ಮೂರು ಲಕ್ಷ ಇಸ್ರೇಲರೂ ಮೂವತ್ತು ಸಾವಿರ ಯೆಹೂದ್ಯರೂ ಇದ್ದರು. [PE][PS]
9. ಸೌಲನು ಮತ್ತು ಅವನ ಸೈನಿಕರು ಯಾಬೇಷಿನ ಸಂದೇಶಕರಿಗೆ, “ಗಿಲ್ಯಾದಿನ ಯಾಬೇಷ್ ಜನರಿಗೆ ನಾಳೆ ನಡುಮಧ್ಯಾಹ್ನದೊಳಗೆ ನಿಮ್ಮನ್ನು ರಕ್ಷಿಸುತ್ತೇವೆಂದು ತಿಳಿಸಿ” ಎಂಬುದಾಗಿ ಹೇಳಿದರು. [PE][PS] ಯಾಬೇಷಿನ ಜನರಿಗೆ ಸೌಲನ ಸಂದೇಶವನ್ನು ಸಂದೇಶಕರು ತಿಳಿಸಿದರು. ಯಾಬೇಷಿನ ಜನರು ಹರ್ಷಿತರಾದರು.
10. ನಂತರ ಯಾಬೇಷಿನ ಜನರು ಅಮ್ಮೋನಿಯದ ನಾಹಾಷನಿಗೆ, “ನಾವು ನಾಳೆ ನಿನ್ನ ಬಳಿಗೆ ಬರುತ್ತೇವೆ. ಆಗ ನಿನಗೆ ತೋಚಿದ್ದನ್ನು ನಮಗೆ ಮಾಡು” ಎಂದು ಹೇಳಿದರು. [PE][PS]
11. ಮಾರನೆಯ ದಿನ ಬೆಳಿಗ್ಗೆ ಸೌಲನು ತನ್ನ ಸೈನ್ಯವನ್ನು ಮೂರು ಗುಂಪುಗಳಾಗಿ ವಿಂಗಡಿಸಿದನು. ಸೌಲನು ಮತ್ತು ಅವನ ಸೈನಿಕರು ಬೆಳಗಿನ ಜಾವದಲ್ಲೇ ಅಮ್ಮೋನಿಯರ ಶಿಬಿರದೊಳಕ್ಕೆ ನುಗ್ಗಿದರು. ಅವರು ಆ ದಿನ ಬೆಳಗಿನ ಜಾವ ಶಿಬಿರ ರಕ್ಷಕರನ್ನು ಬದಲಾಯಿಸುತ್ತಿದ್ದಂತೆಯೇ ಸೌಲನು ಆಕ್ರಮಣ ಮಾಡಿದನು. ಸೌಲನು ಮತ್ತು ಅವನ ಸೈನಿಕರು ನಡುಮಧ್ಯಾಹ್ನದೊಳಗೆ ಅಮ್ಮೋನಿಯರನ್ನು ಸೋಲಿಸಿದರು. ಅಮ್ಮೋನಿಯ ಸೈನಿಕರೆಲ್ಲರೂ ದಿಕ್ಕುಪಾಲಾಗಿ ಓಡಿಹೋದರು; ಅವರು ಒಟ್ಟಾಗಿ ಸೇರಿಬರಲು ಸಾಧ್ಯವಾಗಲಿಲ್ಲ. [PE][PS]
12. ತರುವಾಯ ಜನರೆಲ್ಲರು ಸಮುವೇಲನಿಗೆ, “ಸೌಲನು ರಾಜನಾಗಿ ಆಳುವುದು ಬೇಕಿಲ್ಲ ಎಂದು ಹೇಳಿದ್ದ ಜನರೆಲ್ಲ ಎಲ್ಲಿ ಹೋದರು? ಅವರನ್ನು ನಮಗೆ ಒಪ್ಪಿಸಿ, ನಾವು ಅವರನ್ನು ಕೊಂದುಹಾಕುತ್ತೇವೆ” ಎಂದು ಹೇಳಿದರು. [PE][PS]
13. ಆದರೆ ಸೌಲನು, “ಯೆಹೋವನು ಇಸ್ರೇಲನ್ನು ರಕ್ಷಿಸಿದ್ದಾನೆ. ಈ ದಿನ ಯಾರನ್ನೂ ಕೊಲ್ಲುವುದು ಬೇಡ” ಎಂದು ಹೇಳಿದನು. [PE][PS]
14. ಬಳಿಕ ಸಮುವೇಲನು, “ನಾವೆಲ್ಲ ಗಿಲ್ಗಾಲಿಗೆ ಹೋಗಿ ಸೌಲನನ್ನು ಮತ್ತೆ ರಾಜನನ್ನಾಗಿ ಮಾಡೋಣ” ಎಂದು ಜನರಿಗೆ ಹೇಳಿದನು. [PE][PS]
15. ಜನರೆಲ್ಲ ಗಿಲ್ಗಾಲಿಗೆ ಹೋದರು. ಅಲ್ಲಿ ಯೆಹೋವನ ಸಮ್ಮುಖದಲ್ಲಿ ಜನರೆಲ್ಲ ಸೌಲನನ್ನು ರಾಜನನ್ನಾಗಿ ಮಾಡಿದರು. ಅವರೆಲ್ಲರು ಯೆಹೋವನಿಗೆ ಸಮಾಧಾನಯಜ್ಞಗಳನ್ನು ಅರ್ಪಿಸಿದರು. ಸೌಲನು ಮತ್ತು ಇಸ್ರೇಲರೆಲ್ಲಾ ಒಂದು ದೊಡ್ಡ ಉತ್ಸವವನ್ನೇ ಮಾಡಿದರು. [PE]