1. {ಜ್ಞಾನಕ್ಕಾಗಿ ಸೊಲೊಮೋನನ ಬೇಡಿಕೆ} [PS] ಸೊಲೊಮೋನನು ಈಜಿಪ್ಟಿನ ರಾಜನಾದ ಫರೋಹನ ಮಗಳನ್ನು ಮದುವೆಯಾಗಿ ಅವನೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಂಡನು. ಸೊಲೊಮೋನನು ಅವಳನ್ನು ದಾವೀದನಗರಕ್ಕೆ ಕರೆದು ತಂದನು. ಸೊಲೊಮೋನನು ಆ ಸಮಯದಲ್ಲಿ ತನ್ನ ಅರಮನೆಯನ್ನು ಮತ್ತು ಯೆಹೋವನ ದೇವಾಲಯಗಳನ್ನು ನಿರ್ಮಿಸುತ್ತಿದ್ದನು. ಜೆರುಸಲೇಮಿನ ಸುತ್ತಲೂ ಒಂದು ಗೋಡೆಯನ್ನು ಸಹ ಸೊಲೊಮೋನನು ನಿರ್ಮಿಸುತ್ತಿದ್ದನು.
2. ದೇವಾಲಯದ ನಿರ್ಮಾಣವು ಇನ್ನೂ ಪೂರ್ಣಗೊಂಡಿರಲಿಲ್ಲ. ಆದ್ದರಿಂದ ಜನರು ಅದುವರೆವಿಗೂ ಎತ್ತರವಾದ ಸ್ಥಳಗಳಲ್ಲಿ ಯಜ್ಞವೇದಿಕೆಯ ಮೇಲೆ ಪಶುಗಳ ಯಜ್ಞಗಳನ್ನು ಸಮರ್ಪಿಸುತ್ತಿದ್ದರು.
3. ಸೊಲೊಮೋನನು ತನಗೆ ಯೆಹೋವನ ಮೇಲಿದ್ದ ಪ್ರೀತಿಯನ್ನು ತೋರ್ಪಡಿಸಿದನು. ಅವನ ತಂದೆಯಾದ ದಾವೀದನು ಅವನಿಗೆ ಮಾಡಬೇಕೆಂದು ಹೇಳಿದ್ದ ಎಲ್ಲ ಕಾರ್ಯಗಳನ್ನು ಮಾಡುವುದರ ಮೂಲಕ ವಿಧೇಯತೆಯನ್ನು ತೋರ್ಪಡಿಸಿದನು. ಆದರೆ ಸೊಲೊಮೋನನು ತನಗೆ ದಾವೀದನು ಹೇಳದೆ ಇದ್ದ ಕೆಲವು ಕಾರ್ಯಗಳನ್ನೂ ಮಾಡಿದನು. ಸೊಲೊಮೋನನು ಎತ್ತರವಾದ ಸ್ಥಳಗಳನ್ನು ಯಜ್ಞವನ್ನರ್ಪಿಸಲು ಮತ್ತು ಧೂಪಹಾಕಲು ಉಪಯೋಗಿಸುತ್ತಿದ್ದನು. [PE][PS]
4. ರಾಜನಾದ ಸೊಲೊಮೋನನು ಯಜ್ಞವನ್ನು ಅರ್ಪಿಸಲು ಗಿಬ್ಯೋನಿಗೆ ಹೋದನು. ಅದು ಅತ್ಯಂತ ಮುಖ್ಯವಾದ ಎತ್ತರದ ಸ್ಥಳವಾದುದರಿಂದ ಅವನು ಅಲ್ಲಿಗೆ ಹೋದನು. ಸೊಲೊಮೋನನು ಒಂದು ಸಾವಿರ ಯಜ್ಞಗಳನ್ನು ಯಜ್ಞವೇದಿಕೆಯ ಮೇಲೆ ಅರ್ಪಿಸಿದನು.
5. ಸೊಲೊಮೋನನು ಗಿಬ್ಯೋನಿನಲ್ಲಿದ್ದಾಗ, ಯೆಹೋವನು ರಾತ್ರಿ ಕನಸಿನಲ್ಲಿ ಅವನಿಗೆ ದರ್ಶನವನ್ನು ನೀಡಿ, “ನೀನು ಏನುಬೇಕಾದರೂ ಕೇಳು. ನಾನು ಅದನ್ನು ನಿನಗೆ ಕೊಡುತ್ತೇನೆ” ಎಂದು ಹೇಳಿದನು. [PE][PS]
6. ಸೊಲೊಮೋನನು, “ನಿನ್ನ ಸೇವಕನೂ ನನ್ನ ತಂದೆಯೂ ಆದ ದಾವೀದನಿಗೆ ನೀನು ಬಹಳ ದಯಾಪರನಾಗಿದ್ದೆ. ಅವನು ನಿನ್ನನ್ನು ಅನುಸರಿಸಿದನು. ಅವನು ಒಳ್ಳೆಯವನಾಗಿದ್ದು ನೀತಿವಂತನಾಗಿ ಬದುಕಿದನು. ಅವನ ನಂತರ ಅವನ ಮಗನನ್ನು ಅವನ ಸಿಂಹಾಸನದಲ್ಲಿ ಕುಳ್ಳಿರಿಸಿ ಆಳಲು ನೇಮಿಸಿ ನೀನು ಮಹಾಕೃಪೆಯನ್ನು ತೋರಿಸಿದೆ.
7. ನನ್ನ ದೇವರಾದ ಯೆಹೋವನೇ, ನನ್ನ ತಂದೆಯ ಸ್ಥಾನದಲ್ಲಿ ನನ್ನನ್ನು ನೀನು ರಾಜನನ್ನಾಗಿ ಮಾಡಿದೆ. ಆದರೆ ನಾನೊಬ್ಬ ಚಿಕ್ಕ ಮಗುವಿನಂತಿದ್ದೇನೆ. ನಾನು ಮಾಡಬೇಕಾದ ಕಾರ್ಯಗಳನ್ನು ಮಾಡಲು ಇರಬೇಕಾದ ಬುದ್ದಿವಂತಿಕೆಯು ನನ್ನಲ್ಲಿಲ್ಲ.
8. ನಿನ್ನ ಸೇವಕನಾದ ನಾನು, ನೀನೇ ಆರಿಸಿಕೊಂಡಿರುವ ಜನರ ನಡುವೆ ಇದ್ದೇನೆ. ಇಲ್ಲಿ ಅನೇಕಾನೇಕ ಜನರಿದ್ದಾರೆ. ಅವರನ್ನು ಎಣಿಸಲಾಗದು, ಒಬ್ಬ ಆಡಳಿತಗಾರನು ಅವರ ಮಧ್ಯದಲ್ಲಿದ್ದು ಅನೇಕ ತೀರ್ಪುಗಳನ್ನು ಮಾಡಬೇಕಾಗುತ್ತದೆ.
9. ಆದ್ದರಿಂದ ನಿನ್ನ ಜನರನ್ನು ಒಳ್ಳೆಯ ರೀತಿಯಲ್ಲಿ ಆಳಲು ಮತ್ತು ಅವರಿಗೆ ಸರಿಯಾದ ತೀರ್ಪುಗಳನ್ನು ನೀಡಲು ನನಗೆ ವಿವೇಕವನ್ನು ಕರುಣಿಸು. ಇದು ನನಗೆ ಸರಿ ಮತ್ತು ತಪ್ಪುಗಳ ನಡುವಿರುವ ಭೇದವನ್ನು ತಿಳಿಸಿಕೊಡುತ್ತದೆ. ನನಗೆ ಉತ್ತಮವಾದ ವಿವೇಕವಿಲ್ಲದಿದ್ದರೆ, ನಾನು ಈ ಮಹಾಜನಾಂಗವನ್ನು ಆಳುವುದು ಸಾಧ್ಯವಾಗುವುದಿಲ್ಲ” ಎಂದು ಉತ್ತರಿಸಿದನು. [PE][PS]
10. ಸೊಲೊಮೋನನ ಈ ಕೋರಿಕೆಯನ್ನು ಕೇಳಿ ಯೆಹೋವನಿಗೆ ಸಂತೋಷವಾಯಿತು.
11. ಆದ್ದರಿಂದ ದೇವರು ಅವನಿಗೆ, “ನೀನು ನಿನಗಾಗಿ ಹೆಚ್ಚು ಆಯಸ್ಸನ್ನೂ ಕೇಳಲಿಲ್ಲ, ಶ್ರೀಮಂತಿಕೆಯನ್ನೂ ಕೇಳಲಿಲ್ಲ, ನಿನ್ನ ಶತ್ರುಗಳಿಗೆ ಮರಣವನ್ನು ದಯಪಾಲಿಸೆಂದೂ ಕೇಳಲಿಲ್ಲ, ನೀನು ನ್ಯಾಯವಾದ ತೀರ್ಪು ನೀಡಲು ವಿವೇಕವನ್ನು ಕೇಳಿದೆ.
12. ನಿನ್ನ ಕೋರಿಕೆಯನ್ನು ಅನುಗ್ರಹಿಸುವೆನು; ನಿನ್ನನ್ನು ಜ್ಞಾನಿಯನ್ನಾಗಿಯೂ ವಿವೇಕಿಯನ್ನಾಗಿಯೂ ಮಾಡುವೆನು. ಪೂರ್ವಕಾಲದಲ್ಲಿ ನಿನ್ನಂತವರು ಯಾರೊಬ್ಬರೂ ಇರಲಿಲ್ಲ ಎನ್ನುವಷ್ಟು ಜ್ಞಾನಿಯನ್ನಾಗಿ ನಿನ್ನನ್ನು ಮಾಡುತ್ತೇನೆ. ಮುಂದೆ ನಿನ್ನಂತವರು ಯಾರೊಬ್ಬರೂ ಇರುವುದಿಲ್ಲ.
13. ನೀನು ಕೇಳದೆಹೋದ ಬಿನ್ನಹಗಳನ್ನು ನಾನು ನಿನಗೆ ಅನುಗ್ರಹಿಸುತ್ತೇನೆ. ನಿನ್ನ ಜೀವವಿರುವವರೆಗೆ ನೀನು ಶ್ರೀಮಂತನಾಗಿದ್ದು ಘನಮಾನವನ್ನು ಹೊಂದುವಿ. ಪ್ರಪಂಚದಲ್ಲಿ ನಿನ್ನಂತಹ ಉನ್ನತವಾದ ಬೇರೊಬ್ಬ ರಾಜನು ಇರುವುದಿಲ್ಲ.
14. ನೀನು ನನ್ನ ಕಟ್ಟಳೆಗಳನ್ನು ಆಜ್ಞೆಗಳನ್ನು ಅನುಸರಿಸುವುದರ ಮೂಲಕ ನನಗೆ ವಿಧೇಯನಾಗಿರಬೇಕು ಎಂದು ಹೇಳುತ್ತೇನೆ. ನಿನ್ನ ತಂದೆಯಾದ ದಾವೀದನು ನಡೆದ ಮಾರ್ಗದಲ್ಲಿ ನೀನೂ ನಡೆ. ಆಗ ನಾನು ನಿನಗೆ ದೀರ್ಘಾಯುಷ್ಯವನ್ನು ಕೊಡುತ್ತೇನೆ” ಎಂದು ಹೇಳಿದನು. [PE][PS]
15. ಸೊಲೊಮೋನನು ಎಚ್ಚರಗೊಂಡನು. ದೇವರು ಕನಸಿನಲ್ಲಿ ತನ್ನೊಡನೆ ಮಾತನಾಡಿದನೆಂಬುದು ಅವನಿಗೆ ತಿಳಿಯಿತು. ನಂತರ ಸೊಲೊಮೋನನು ಜೆರುಸಲೇಮಿಗೆ ಹೋಗಿ, ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯ ಎದುರಿನಲ್ಲಿ ನಿಂತುಕೊಂಡನು. ಸೊಲೊಮೋನನು ಯೆಹೋವನಿಗೆ ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಅರ್ಪಿಸಿದನು. ಅನಂತರ ಅವನು ತನ್ನ ಆಳ್ವಿಕೆಗೆ ಸಹಾಯ ಮಾಡಿದ ಎಲ್ಲ ನಾಯಕರಿಗೆ ಮತ್ತು ಅಧಿಕಾರಿಗಳಿಗೆ ಒಂದು ಔತಣವನ್ನೇರ್ಪಡಿಸಿದನು. [PE][PS]
16. ಒಂದು ದಿನ ಇಬ್ಬರು ವೇಶ್ಯೆಯರು ಸೊಲೊಮೋನನ ಹತ್ತಿರಕ್ಕೆ ಬಂದರು. ಅವರು ರಾಜನ ಎದುರಿನಲ್ಲಿ ನಿಂತರು.
17. ಒಬ್ಬ ಸ್ತ್ರೀಯು, “ಸ್ವಾಮಿ, ನಾನು ಮತ್ತು ಈ ಸ್ತ್ರೀಯು ಒಂದೇ ಮನೆಯಲ್ಲಿ ವಾಸಿಸುತ್ತಿದ್ದೇವೆ. ನಾವಿಬ್ಬರೂ ಗರ್ಭಿಣಿಯರಾಗಿದ್ದೆವು ಮತ್ತು ನಮ್ಮ ಮಕ್ಕಳಿಗೆ ಜನ್ಮಕೊಡಲು ಸಿದ್ಧರಾಗಿದ್ದೆವು. ಅವಳು ನನ್ನ ಹತ್ತಿರ ಇದ್ದಾಗ ನಾನು ನನ್ನ ಮಗುವಿಗೆ ಜನ್ಮನೀಡಿದೆ.
18. ಮೂರು ದಿನಗಳ ತರುವಾಯ, ಈ ಸ್ತ್ರೀಯೂ ತನ್ನ ಮಗುವಿಗೆ ಜನ್ಮನೀಡಿದಳು. ಮನೆಯಲ್ಲಿ ನಮ್ಮೊಡನೆ ಬೇರೆ ಯಾರೂ ಇರಲಿಲ್ಲ. ಅಲ್ಲಿ ನಾವಿಬ್ಬರೇ ಇದ್ದೆವು.
19. ಒಂದು ರಾತ್ರಿ, ಈ ಸ್ತ್ರೀಯು ಗಾಢನಿದ್ರೆಯಲ್ಲಿ ತನ್ನ ಮಗುವಿನ ಮೇಲೆ ಹೊರಳಿದ್ದರಿಂದ ಆ ಮಗು ಸತ್ತುಹೋಯಿತು.
20. ಅಂದು ರಾತ್ರಿ ನಾನು ಗಾಢನಿದ್ರೆಯಲ್ಲಿರುವಾಗ ಈಕೆಯು ನನ್ನ ಹಾಸಿಗೆಯಿಂದ ನನ್ನ ಮಗುವನ್ನು ತೆಗೆದುಕೊಂಡು ತನ್ನ ಹಾಸಿಗೆಗೆ ಹೋದಳು; ತನ್ನ ಸತ್ತ ಮಗುವನ್ನು ನನ್ನ ಹಾಸಿಗೆಯಲ್ಲಿಟ್ಟಳು.
21. ಮುಂಜಾನೆ ನಾನು ಎಚ್ಚರಗೊಂಡು ನನ್ನ ಮಗುವಿಗೆ ಹಾಲು ಕುಡಿಸಲು ಸಿದ್ಧಳಾದಾಗ ಮಗು ಸತ್ತುಹೋಗಿರುವುದನ್ನು ಕಂಡೆನು. ಆ ಮಗುವನ್ನು ನಾನು ಸೂಕ್ಷ್ಮವಾಗಿ ನೋಡಿದಾಗ ಆ ಮಗು ನನ್ನದಲ್ಲವೆಂಬುದು ನನಗೆ ತಿಳಿಯಿತು” ಎಂದು ಹೇಳಿದಳು. [PE][PS]
22. ಆದರೆ ಇನ್ನೊಬ್ಬ ಸ್ತ್ರೀಯು, “ಇಲ್ಲ! ಜೀವಂತವಾಗಿರುವ ಮಗು ನನ್ನದು. ಸತ್ತಿರುವ ಮಗು ನಿನ್ನದು!” ಎಂದು ಹೇಳಿದಳು. [PE][PS] ಆದರೆ ಮೊದಲನೆಯ ಸ್ತ್ರೀಯು, “ಇಲ್ಲ! ನೀನು ಸುಳ್ಳು ಹೇಳುತ್ತಿರುವೆ! ಸತ್ತಿರುವ ಮಗು ನಿನ್ನದು. ಜೀವಂತವಾಗಿರುವ ಮಗು ನನ್ನದು!” ಎಂದು ಹೇಳಿದಳು. ಹೀಗೆ ಆ ಇಬ್ಬರು ಸ್ತ್ರೀಯರು ರಾಜನ ಎದುರಿನಲ್ಲಿ ವಾದಿಸಿದರು. [PE][PS]
23. ಆಗ ರಾಜನಾದ ಸೊಲೊಮೋನನು, “ಜೀವಂತವಾಗಿರುವ ಮಗು ನನ್ನದೆಂದೂ ಸತ್ತಿರುವ ಮಗು ಅವಳದೆಂದೂ ನೀವಿಬ್ಬರೂ ಹೇಳುತ್ತಿದ್ದೀರಲ್ಲವೇ?” ಎಂದು ಹೇಳಿ,
24. ತನ್ನ ಸೇವಕರಿಗೆ, “ಒಂದು ಕತ್ತಿಯನ್ನು ತೆಗೆದುಕೊಂಡು ಬಂದು
25. ಜೀವಂತವಾಗಿರುವ ಮಗುವನ್ನು ಕತ್ತರಿಸಿ ಅವರಿಬ್ಬರಿಗೂ ಅರ್ಧರ್ಧ ಮಗುವನ್ನು ಕೊಟ್ಟುಬಿಡಿ” ಎಂದು ಆಜ್ಞಾಪಿಸಿದನು. [PE][PS]
26. ಆಗ ಎರಡನೆಯ ಸ್ತ್ರೀಯು, “ಈಗ ಸರಿಹೋಯಿತು. ಮಗುವನ್ನು ಎರಡು ಹೋಳುಮಾಡಿ. ಆಗ ನಮ್ಮಿಬ್ಬರಿಗೂ ಅವನಿರುವುದಿಲ್ಲ” ಎಂದಳು. ಆದರೆ ಮೊದಲನೆಯ ಸ್ತ್ರೀಯು, ಅಂದರೆ, ತನ್ನ ಮಗುವಿನ ಮೇಲೆ ತುಂಬಾ ಪ್ರೀತಿಯನ್ನಿಟ್ಟಿದ ನಿಜವಾದ ತಾಯಿಯು ರಾಜನಿಗೆ, “ದಯವಿಟ್ಟು ಆ ಮಗುವನ್ನು ಕೊಲ್ಲಬೇಡಿ ಸ್ವಾಮಿ! ಅವಳಿಗೇ ಕೊಟ್ಟುಬಿಡಿ” ಎಂದು ಹೇಳಿದಳು. [PE][PS]
27. ಆಗ ಸೊಲೊಮೋನನು, “ಮಗುವನ್ನು ಕೊಲ್ಲಬೇಡಿ! ಅದನ್ನು ಮೊದಲನೆಯ ಸ್ತ್ರೀಗೆ ಕೊಡಿ. ಅವಳೇ ನಿಜವಾದ ತಾಯಿ” ಎಂದು ಹೇಳಿದನು. [PE][PS]
28. ಸೊಲೊಮೋನನ ತೀರ್ಪಿನ ವಿಚಾರವು ಇಸ್ರೇಲಿನ ಜನರಿಗೆ ತಿಳಿಯಿತು. ಅವನು ವಿವೇಕಿಯಾದುದರಿಂದ ಅವರು ಅವನನ್ನು ಗೌರವಿಸಿದರು ಮತ್ತು ಸನ್ಮಾನಿಸಿದರು. ಅವನು ದೇವರ ಜ್ಞಾನದಿಂದ ಸಮಂಜಸವಾದ ತೀರ್ಪು ನೀಡುತ್ತಾನೆಂದು ಅವರು ಕಂಡುಕೊಂಡರು. [PE]