1. {ಮದುವೆ ಕುರಿತು ಬೋಧನೆ} [PS] ನೀವು ಬರೆದು ಕೇಳಿರುವ ಸಂಗತಿಗಳ ಬಗ್ಗೆ ಈಗ ನಾನು ಚರ್ಚಿಸುತ್ತೇನೆ. ಪುರುಷನು ಮದುವೆ ಮಾಡಿಕೊಳ್ಳದಿರುವುದು ಒಳ್ಳೆಯದೇ ಸರಿ.
2. ಆದರೆ ಲೈಂಗಿಕ ಪಾಪ ಅಪಾಯಕರವಾದದ್ದು. ಆದ್ದರಿಂದ ಪ್ರತಿಯೊಬ್ಬ ಪುರುಷನಿಗೂ ಸ್ವಂತ ಹೆಂಡತಿ ಇದ್ದರೆ ಮತ್ತು ಪ್ರತಿಯೊಬ್ಬ ಸ್ತ್ರೀಗೂ ಸ್ವಂತ ಗಂಡನು ಇದ್ದರೆ ಒಳ್ಳೆಯದು.
3. ಗಂಡನು ತನ್ನ ಹೆಂಡತಿಗೆ ದಾಂಪತ್ಯ ಜೀವನದಲ್ಲಿ ಸಲ್ಲತಕ್ಕದ್ದನ್ನೆಲ್ಲ ಸಲ್ಲಿಸಲಿ. ಮತ್ತು ಹೆಂಡತಿಯು ತನ್ನ ಗಂಡನಿಗೆ ದಾಂಪತ್ಯ ಜೀವನದಲ್ಲಿ ಸಲ್ಲತಕ್ಕದ್ದನ್ನೆಲ್ಲ ಸಲ್ಲಿಸಲಿ.
4. ಹೆಂಡತಿಗೆ ತನ್ನ ಸ್ವಂತ ದೇಹದ ಮೇಲೆ ಅಧಿಕಾರವಿಲ್ಲ. ಆಕೆಯ ಗಂಡನಿಗೆ ಆಕೆಯ ದೇಹದ ಮೇಲೆ ಅಧಿಕಾರವಿದೆ. ಅದೇರೀತಿ, ಗಂಡನಿಗೆ ತನ್ನ ಸ್ವಂತ ದೇಹದ ಮೇಲೆ ಅಧಿಕಾರವಿಲ್ಲ. ಅವನ ಹೆಂಡತಿಗೆ ಅವನ ದೇಹದ ಮೇಲೆ ಅಧಿಕಾರವಿದೆ.
5. ಆದ್ದರಿಂದ ಗಂಡ ಮತ್ತು ಹೆಂಡತಿ ಒಬ್ಬರಿಗೊಬ್ಬರು ದಾಂಪತ್ಯ ಕರ್ತವ್ಯಗಳನ್ನು ನೆರವೇರಿಸಲು ನಿರಾಕರಿಸಬಾರದು. ಅವರು ತಮ್ಮ ಸಮಯವನ್ನು ಪ್ರಾರ್ಥನೆಯಲ್ಲಿ ವಿನಿಯೋಗಿಸುವುದಕ್ಕಾಗಿ ಸ್ವಲ್ಪಕಾಲ ಲೈಂಗಿಕ ಸಂಬಂಧದಿಂದ ದೂರವಿರಬಹುದು. ಆದರೆ ಅದಕ್ಕೆ ಪರಸ್ಪರ ಸಮ್ಮತಿಯಿರಬೇಕು. ಬಳಿಕ ಮತ್ತೆ ಒಂದಾಗಬೇಕು, ಇಲ್ಲವಾದರೆ ನಿಮ್ಮ ಬಲಹೀನತೆಯನ್ನು ಕಂಡು ಸೈತಾನನು ಪಾಪಕ್ಕೆ ಪ್ರಚೋಧಿಸಬಹುದು.
6. ಸ್ವಲ್ಪಕಾಲ ಅಗಲಿ ದೂರವಿರುವುದಕ್ಕೆ ಅನುಮತಿ ಕೊಡಲು ನಾನು ಇದನ್ನು ಹೇಳುತ್ತಿದ್ದೇನೆ. ಇದು ಆಜ್ಞೆಯಲ್ಲ.
7. ಎಲ್ಲಾ ಜನರು ನಮ್ಮಂತೆ ಇರಬೇಕೆಂದು ನಮ್ಮ ಅಭಿಲಾಷೆ. ಆದರೆ ಪ್ರತಿಯೊಬ್ಬ ವ್ಯಕ್ತಿಯು ದೇವರಿಂದ ತನ್ನದೇ ಆದ ವರವನ್ನು ಹೊಂದಿದ್ದಾನೆ. ಒಬ್ಬ ವ್ಯಕ್ತಿಗೆ ಒಂದು ವರವಿದ್ದರೆ ಮತ್ತೊಬ್ಬನಿಗೆ ಇನ್ನೊಂದು ವರವಿದೆ. [PE][PS]
8. ವಿವಾಹವಾಗಿಲ್ಲದ ಜನರಿಗೆ ಮತ್ತು ವಿಧವೆಯರಿಗೆ ನಾನು ಹೇಳುವುದೇನೆಂದರೆ: ಅವರು ನನ್ನಂತೆ ಒಬ್ಬಂಟಿಗರಾಗಿ ಇರುವುದೇ ಅವರಿಗೆ ಒಳ್ಳೆಯದು.
9. ಆದರೆ ಅವರು ತಮ್ಮ ದೇಹಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲಾಗದಿದ್ದರೆ, ಅವರು ಮದುವೆಯಾಗಬೇಕು. ಲೈಂಗಿಕ ಆಸೆಯಿಂದ ಬೆಂದು ಹೋಗುವುದಕ್ಕಿಂತಲೂ ಮದುವೆ ಮಾಡಿಕೊಳ್ಳುವುದೇ ಉತ್ತಮವಾಗಿದೆ. [PE][PS]
10. ಮದುವೆಯಾಗಿರುವವರಿಗೆ ನಾನು ಈ ಆಜ್ಞೆಯನ್ನು ಕೊಡುತ್ತೇನೆ. (ಈ ಆಜ್ಞೆಯು ನನ್ನದಲ್ಲ. ಪ್ರಭುವಿನದು.) ಹೆಂಡತಿಯು ತನ್ನ ಗಂಡನನ್ನು ಬಿಟ್ಟುಬಿಡಬಾರದು.
11. ಹೆಂಡತಿಯು ತನ್ನ ಗಂಡನನ್ನು ಬಿಟ್ಟುಬಿಟ್ಟರೆ ಆಕೆಯು ಮತ್ತೆ ಮದುವೆ ಮಾಡಿಕೊಳ್ಳಕೂಡದು, ಇಲ್ಲವಾದರೆ ಆಕೆ ತನ್ನ ಗಂಡನ ಸಂಗಡ ಮತ್ತೆ ಒಂದಾಗಬೇಕು. ಇದೇ ರೀತಿ, ಗಂಡನು, ತನ್ನ ಹೆಂಡತಿಯನ್ನು ಬಿಟ್ಟುಬಿಡಬಾರದು. [PE][PS]
12. ಉಳಿದೆಲ್ಲ ಜನರ ವಿಷಯದಲ್ಲಿ ನಾನು ಹೇಳುವುದೇನೆಂದರೆ (ಈ ಸಂಗತಿಗಳನ್ನು ಹೇಳುತ್ತಿರುವವನು ನಾನೇ ಹೊರತು ಪ್ರಭುವಲ್ಲ.) ಕ್ರಿಸ್ತನಲ್ಲಿ ಸಹೋದರನಾದ ಒಬ್ಬನಿಗೆ ಕ್ರಿಸ್ತ ವಿಶ್ವಾಸಿಯಲ್ಲದ ಹೆಂಡತಿಯಿದ್ದರೆ ಮತ್ತು ಆಕೆ ಅವನೊಂದಿಗೆ ಬಾಳ್ವೆಮಾಡಲು ಇಚ್ಛಿಸಿದರೆ ಅವನು ಆಕೆಗೆ ವಿವಾಹವಿಚ್ಛೇದನ ಕೊಡಕೂಡದು.
13. ಅದೇರೀತಿ, ಸ್ತ್ರೀಯೊಬ್ಬಳಿಗೆ ಕ್ರಿಸ್ತ ವಿಶ್ವಾಸಿಯಲ್ಲದ ಗಂಡನು ಇದ್ದರೆ ಮತ್ತು ಅವನು ಆಕೆಯೊಂದಿಗೆ ಬಾಳ್ವೆಮಾಡಲು ಇಚ್ಛಿಸಿದರೆ ಆಕೆ ಅವನಿಗೆ ವಿವಾಹವಿಚ್ಛೇದನ ಕೊಡಕೂಡದು.
14. ಕ್ರಿಸ್ತ ವಿಶ್ವಾಸಿಯಲ್ಲದ ಗಂಡನು ತನ್ನ ಕ್ರೈಸ್ತ ಹೆಂಡತಿಯ ಮೂಲಕ ಪವಿತ್ರನಾಗುತ್ತಾನೆ. ಅದೇರೀತಿ, ಕ್ರಿಸ್ತ ವಿಶ್ವಾಸಿಯಲ್ಲದ ಹೆಂಡತಿಯು ತನ್ನ ಕ್ರೈಸ್ತ ಗಂಡನ ಮೂಲಕ ಪವಿತ್ರಳಾಗುತ್ತಾಳೆ. ಇದು ಸತ್ಯವಾಗಿಲ್ಲದಿದ್ದರೆ, ನಿಮ್ಮ ಮಕ್ಕಳು ಪವಿತ್ರರಾಗುತ್ತಿರಲಿಲ್ಲ. ಆದರೆ ಈಗ ನಿಮ್ಮ ಮಕ್ಕಳು ಪವಿತ್ರರಾಗಿದ್ದಾರೆ. [PE][PS]
15. ಆದರೆ ಕ್ರಿಸ್ತ ವಿಶ್ವಾಸಿಯಲ್ಲದ ವ್ಯಕ್ತಿಯು ಬಿಟ್ಟು ಹೋಗಲು ನಿರ್ಧರಿಸಿದರೆ, ಆ ವ್ಯಕ್ತಿಯು ಬಿಟ್ಟು ಹೋಗಲಿ. ಈ ರೀತಿ ಸಂಭವಿಸಿದರೆ, ಕ್ರೈಸ್ತ ಸಹೋದರನಾಗಲಿ ಕ್ರೈಸ್ತ ಸಹೋದರಿಯಾಗಲಿ ವಿವಾಹ ಬಂಧನದಿಂದ ಬಿಡುಗಡೆಯಾಗಿದ್ದಾರೆ. ದೇವರು ನಮ್ಮನ್ನು ಸಮಾಧಾನದ ಜೀವಿತಕ್ಕೆ ಕರೆದನು.
16. ಹೆಂಡತಿಯರೇ, ನೀವು ನಿಮ್ಮ ಗಂಡಂದಿರನ್ನು ರಕ್ಷಿಸಬಹುದು. ಗಂಡಂದಿರೇ, ನೀವು ನಿಮ್ಮ ಹೆಂಡತಿಯರನ್ನು ರಕ್ಷಿಸಬಹುದು. ಆದರೆ ಮುಂದೆ ಏನಾಗುವುದೋ ನಮಗೆ ಗೊತ್ತಿಲ್ಲ. [PS]
17. {ದೇವರ ಕರೆಗೆ ತಕ್ಕಂತೆ ಜೀವಿಸಿರಿ} [PS] ಆದರೂ ದೇವರು ಪ್ರತಿಯೊಬ್ಬನಿಗೆ ಜೀವನದಲ್ಲಿ ಯಾವ ಸ್ಥಿತಿಯನ್ನು ನೇಮಿಸಿದ್ದಾನೋ ಅಂದರೆ ದೇವರು ನಿಮ್ಮನ್ನು ಕರೆದಾಗ ನೀವು ಯಾವ ಸ್ಥಿತಿಯಲ್ಲಿದ್ದಿರೋ ಅದೇ ಸ್ಥಿತಿಯಲ್ಲಿ ಮುಂದುವರಿಯಬೇಕು. ನಾನು ಎಲ್ಲಾ ಸಭೆಗಳಿಗೂ ಇದನ್ನೇ ಆಜ್ಞಾಪಿಸುತ್ತೇನೆ.
18. ದೇವರಿಂದ ಕರೆಯಲ್ಪಟ್ಟ ವ್ಯಕ್ತಿಯು ಮೊದಲೇ ಸುನ್ನತಿ ಮಾಡಿಸಿಕೊಂಡವನಾಗಿದ್ದರೆ, ಅವನು ಸುನ್ನತಿಯಿಲ್ಲದಂಥವನಾಗಬಾರದು. ದೇವರಿಂದ ಕರೆಯಲ್ಪಟ್ಟ ವ್ಯಕ್ತಿಯು ಸುನ್ನತಿಯನ್ನು ಹೊಂದಿಲ್ಲದವನಾಗಿದ್ದರೆ, ಅವನು ಸುನ್ನತಿಯನ್ನು ಮಾಡಿಸಿಕೊಳ್ಳಬಾರದು.
19. ಸುನ್ನತಿಯನ್ನು ಮಾಡಿಸಿಕೊಳ್ಳುವುದಾಗಲಿ ಮಾಡಿಸಿಕೊಳ್ಳದಿರುವುದಾಗಲಿ ಮುಖ್ಯವಲ್ಲ. ದೇವರ ಆಜ್ಞೆಗಳಿಗೆ ವಿಧೇಯರಾಗುವುದೇ ಮುಖ್ಯವಾದದ್ದು.
20. ದೇವರು ಕರೆದಾಗ ಪ್ರತಿಯೊಬ್ಬನು ಯಾವ ಸ್ಥಿತಿಯಲ್ಲಿದ್ದನೋ ಅದೇ ಸ್ಥಿತಿಯಲ್ಲಿ ಇರಬೇಕು.
21. ದೇವರು ನಿನ್ನನ್ನು ಕರೆದಾಗ ನೀನು ಗುಲಾಮನಾಗಿದ್ದರೆ, ಚಿಂತಿಸಬೇಡ. ಆದರೆ ನೀನು ಬಿಡುಗಡೆಯಾಗಲು ಸಾಧ್ಯವಿದ್ದರೆ, ಬಿಡುಗಡೆಯಾಗು.
22. ದೇವರು ಕರೆದಾಗ ಗುಲಾಮನಾಗಿದ್ದವನು ಪ್ರಭುವಿನಲ್ಲಿ ಬಿಡುಗಡೆಯಾಗಿದ್ದಾನೆ. ಅವನು ಪ್ರಭುವಿಗೆ ಸೇರಿದವನಾಗಿದ್ದಾನೆ. ಅದೇರೀತಿಯಲ್ಲಿ ದೇವರು ಕರೆದಾಗ ಸ್ವತಂತ್ರನಾಗಿದ್ದವನು ಈಗ ಕ್ರಿಸ್ತನ ಗುಲಾಮನಾಗಿದ್ದಾನೆ.
23. ನಿಮ್ಮನ್ನು ಕ್ರಯಕ್ಕೆ ಕೊಂಡುಕೊಳ್ಳಲಾಗಿದೆ. ಆದ್ದರಿಂದ ನೀವು ಮನುಷ್ಯರ ಗುಲಾಮರಾಗಬೇಡಿ.
24. ಸಹೋದರ ಸಹೋದರಿಯರೇ, ದೇವರು ನಿಮ್ಮನ್ನು ಕರೆದಾಗ ನಿಮ್ಮಲ್ಲಿ ಪ್ರತಿಯೊಬ್ಬರು ಯಾವ ಸ್ಥಿತಿಯಲ್ಲಿದ್ದಿರೋ ಅದೇ ಸ್ಥಿತಿಯಲ್ಲಿ ದೇವರೊಂದಿಗೆ ಹೊಸ ಜೀವನದಲ್ಲಿ ಮುಂದುವರಿಯಬೇಕು. [PS]
25. {ಮದುವೆ ಮಾಡಿಕೊಳ್ಳುವುದರ ಬಗ್ಗೆ ಪ್ರಶ್ನೆಗಳು} [PS] ಮದುವೆಯಾಗಿಲ್ಲದ ಜನರ ಬಗ್ಗೆ ಈಗ ನಾನು ಬರೆಯುತ್ತೇನೆ. ಇದರ ಬಗ್ಗೆ ಪ್ರಭುವಿನಿಂದ ಬಂದ ಯಾವ ಆಜ್ಞೆಯೂ ನನ್ನಲ್ಲಿಲ್ಲ. ಆದರೆ ನಾನು ನನ್ನ ಅಭಿಪ್ರಾಯವನ್ನು ನಿಮಗೆ ಕೊಡುತ್ತೇನೆ. ನಾನು ಪ್ರಭುವಿನಿಂದ ಕರುಣೆಯನ್ನು ಹೊಂದಿಕೊಂಡಿರುವುದರಿಂದ ನಂಬಿಕೆಗೆ ಅರ್ಹನಾಗಿದ್ದೇನೆ.
26. ಇದು ಕಷ್ಟಕಾಲವಾಗಿದೆ. ಆದ್ದರಿಂದ, ನೀವು ಯಾವ ಸ್ಥಿತಿಯಲ್ಲಿದ್ದೀರೋ ಅದೇ ಸ್ಥಿತಿಯಲ್ಲಿರುವುದು ಒಳ್ಳೆಯದೆಂಬುದು ನನ್ನ ಆಲೋಚನೆ.
27. ನಿನಗೆ ಹೆಂಡತಿಯಿದ್ದರೆ, ಆಕೆಯಿಂದ ಬಿಡುಗಡೆ ಹೊಂದಲು ಪ್ರಯತ್ನಿಸಬೇಡ. ನಿನಗೆ ಮದುವೆಯಾಗಿಲ್ಲದಿದ್ದರೆ, ಹೆಂಡತಿಯನ್ನು ಹುಡುಕಲು ಪ್ರಯತ್ನಿಸಬೇಡ.
28. ಆದರೆ ನೀನು ಮದುವೆಯಾಗಲು ನಿರ್ಧರಿಸಿದರೆ, ಅದು ಪಾಪವೇನಲ್ಲ. ಮದುವೆಯಾಗಿಲ್ಲದ ಹುಡುಗಿಯು ಮದುವೆಯಾಗುವುದು ಪಾಪವಲ್ಲ. ಆದರೆ ಮದುವೆಯಾಗುವ ಜನರಿಗೆ ಈ ಲೋಕದಲ್ಲಿ ಕಷ್ಟವಿದೆ. ನೀವು ಈ ಕಷ್ಟದಿಂದ ವಿಮುಕ್ತರಾಗಿರಬೇಕೆಂಬುದು ನನ್ನ ಅಪೇಕ್ಷೆಯಾಗಿದೆ. [PE][PS]
29. ಸಹೋದರ ಸಹೋದರಿಯರೇ, ನನ್ನ ಅಭಿಪ್ರಾಯ ಇದು: ನಮಗೆ ಹೆಚ್ಚು ಸಮಯ ಉಳಿದಿಲ್ಲ. ಆದ್ದರಿಂದ, ಹೆಂಡತಿಯರನ್ನು ಹೊಂದಿರುವ ಜನರು ಹೆಂಡತಿಯರಿಲ್ಲದವರಂತೆ ಪ್ರಭುವಿನ ಸೇವೆಗಾಗಿ ತಮ್ಮ ಸಮಯವನ್ನು ಉಪಯೋಗಿಸಬೇಕು.
30. ದುಃಖದಿಂದಿರುವ ಜನರು ದುಃಖವಿಲ್ಲದವರಂತೆ ಜೀವಿಸಬೇಕು. ಸಂತೋಷದಿಂದ ಇರುವ ಜನರು ಸಂತೋಷವಿಲ್ಲದ ಜನರಂತೆ ಜೀವಿಸಬೇಕು. ವಸ್ತುಗಳನ್ನು ಕೊಂಡುಕೊಳ್ಳುವ ಜನರು ಏನೂ ಇಲ್ಲದವರಂತೆ ಜೀವಿಸಬೇಕು.
31. ಈ ಲೋಕದ ವಸ್ತುಗಳನ್ನು ಉಪಯೋಗಿಸುವ ಜನರು ತಮಗೆ ಆ ವಸ್ತುಗಳು ಮುಖ್ಯವಲ್ಲವೆಂಬಂತೆ ಜೀವಿಸಬೇಕು. ಏಕೆಂದರೆ, ಈ ಲೋಕದ ಇಂದಿನ ಸ್ಥಿತಿಯು ಬಹು ಬೇಗನೆ ಗತಿಸಿಹೋಗುವುದು. [PE][PS]
32. ನೀವು ಚಿಂತೆ ಇಲ್ಲದೆ ಇರಬೇಕೆಂಬುದೇ ನನ್ನ ಬಯಕೆಯಾಗಿದೆ. ಮದುವೆಯಾಗಿಲ್ಲದ ವ್ಯಕ್ತಿಯು ಪ್ರಭುವಿನ ಸೇವೆಯಲ್ಲಿ ನಿರತನಾಗಿರುತ್ತಾನೆ. ಅವನು ಪ್ರಭುವನ್ನು ಮೆಚ್ಚಿಸಲು ಪ್ರಯತ್ನಿಸುತ್ತಿರುತ್ತಾನೆ.
33. ಆದರೆ ಮದುವೆಯಾಗಿರುವ ವ್ಯಕ್ತಿಯು ಈ ಲೋಕದ ಕಾರ್ಯಗಳಲ್ಲಿ ನಿರತನಾಗಿರುತ್ತಾನೆ. ಅವನು ತನ್ನ ಹೆಂಡತಿಯನ್ನು ಮೆಚ್ಚಿಸಲು ಪ್ರಯತ್ನಿಸುತ್ತಿರುತ್ತಾನೆ.
34. ಅವನು ತನ್ನ ಹೆಂಡತಿಯನ್ನು ಮತ್ತು ಪ್ರಭುವನ್ನು ಮೆಚ್ಚಿಸುವುದರ ಬಗ್ಗೆ ಆಲೋಚಿಸಬೇಕಾಗುತ್ತದೆ. ಮದುವೆಯಾಗಿಲ್ಲದ ಸ್ತ್ರೀಯಾಗಲಿ ಹುಡುಗಿಯಾಗಲಿ ಪ್ರಭುವಿನ ಸೇವೆಯಲ್ಲಿ ನಿರತಳಾಗಿರುತ್ತಾಳೆ. ಆಕೆ ತನ್ನ ದೇಹ ಮತ್ತು ಆತ್ಮಗಳನ್ನು ಸಂಪೂರ್ಣವಾಗಿ ಪ್ರಭುವಿಗೆ ಕೊಡಲು ಬಯಸುತ್ತಾಳೆ. ಆದರೆ ಮದುವೆಯಾದ ಸ್ತ್ರೀಯು ಈ ಲೋಕದ ಕಾರ್ಯಗಳಲ್ಲಿ ನಿರತಳಾಗಿರುತ್ತಾಳೆ. ಆಕೆ ತನ್ನ ಗಂಡನನ್ನು ಮೆಚ್ಚಿಸಲು ಪ್ರಯತ್ನಿಸುತ್ತಿರುತ್ತಾಳೆ.
35. ನಿಮಗೆ ಸಹಾಯವಾಗಲೆಂದು ಈ ಸಂಗತಿಗಳನ್ನು ಹೇಳುತ್ತಿದ್ದೇನೆ. ನಾನು ನಿಮ್ಮನ್ನು ನಿಯಂತ್ರಿಸುವುದಕ್ಕೆ ಪ್ರಯತ್ನಿಸುತ್ತಿಲ್ಲ. ಆದರೆ ನೀವು ಸರಿಯಾದ ಮಾರ್ಗದಲ್ಲಿ ಜೀವಿಸಬೇಕೆಂಬುದೇ ನನ್ನ ಬಯಕೆಯಾಗಿದೆ. ನೀವು ನಿಮ್ಮ ಸಮಯವನ್ನು ಬೇರೆ ಕಾರ್ಯಗಳಿಗೆ ಕೊಡದೆ ನಿಮ್ಮನ್ನು ಸಂಪೂರ್ಣವಾಗಿ ಪ್ರಭುವಿಗೆ ಅರ್ಪಿಸಿಕೊಳ್ಳಬೇಕೆಂಬುದು ನನ್ನ ಅಪೇಕ್ಷೆಯಾಗಿದೆ. [PE][PS]
36. ತನ್ನ ಮಗಳ (ಕನ್ನಿಕೆಯ) ಮದುವೆಯ ವಯಸ್ಸು ಮೀರಿ ಹೋಗುವಂತೆ ಬಿಟ್ಟುಕೊಡುವುದು ಒಳ್ಳೆಯದಲ್ಲವೆಂದೂ, ಆಕೆಗೆ ಮದುವೆ ಮಾಡಿಸುವುದು ಅವಶ್ಯಕವೆಂದೂ ಒಬ್ಬನು ಭಾವಿಸಿದರೆ, ಅವನು ತನ್ನ ಇಚ್ಛೆಗನುಸಾರವಾಗಿ ಮಾಡಲಿ. ಅವನು ಅವರಿಗೆ ಮದುವೆ ಮಾಡಿಕೊಡಲಿ. ಅದು ಪಾಪವಲ್ಲ.
37. ಆದರೆ ಮತ್ತೊಬ್ಬನು ಮದುವೆಯ ಅಗತ್ಯವಿಲ್ಲವೆಂದು ತನ್ನ ಮನಸ್ಸಿನಲ್ಲಿ ದೃಢವಾಗಿ ನಿಶ್ಚಯಿಸಿಕೊಂಡಿದ್ದರೆ ಅವನು ತನ್ನ ಇಚ್ಛೆಗನುಸಾರವಾಗಿ ಮಾಡಲು ಸ್ವತಂತ್ರನಾಗಿದ್ದಾನೆ. ಅವನು ತನ್ನ ಮಗಳಿಗೆ ಮದುವೆ ಮಾಡುವುದಿಲ್ಲವೆಂದು ತನ್ನ ಹೃದಯದಲ್ಲಿ ನಿರ್ಧರಿಸಿದ್ದರೆ ಅವನು ಒಳ್ಳೆಯದನ್ನೇ ಮಾಡುತ್ತಿದ್ದಾನೆ.
38. ಆದ್ದರಿಂದ ಒಬ್ಬನು ತನ್ನ ಮಗಳಿಗೆ ಮದುವೆ ಮಾಡಿಕೊಡುವುದು ಒಳ್ಳೆಯದಾಗಿದೆ. ಅಲ್ಲದೆ ತನ್ನ ಮಗಳಿಗೆ ಮದುವೆ ಮಾಡಿಕೊಡದಿರುವುದು ಮತ್ತಷ್ಟು ಒಳ್ಳೆಯದಾಗಿದೆ [*ಈ ವಚನಗಳನ್ನು ಈ ರೀತಿಯಾಗಿಯೂ ಅನುವಾದಿಸಬಹುದು: 36 “ಒಬ್ಬನು ತನಗೆ ನಿಶ್ಚಿತವಾದ ಕನ್ನಿಕೆಯೊಡನೆ ತಾನು ಸರಿಯಾದ ರೀತಿಯಲ್ಲಿ ವರ್ತಿಸುತ್ತಿಲ್ಲವೆಂದೂ ಆಕೆಗೆ ಮದುವೆಯ ವಯಸ್ಸು ಮೀರಿಹೋಗುತ್ತಿದೆಯೆಂದೂ, ಆದ್ದರಿಂದ, ಆಕೆಯನ್ನು ತಾನು ಮದುವೆಯಾಗಬೇಕೆಂದೂ ಯೋಚಿಸಿದರೆ, ಅವನು ತನ್ನ ಇಚ್ಛೆಗನುಸಾರವಾಗಿ ಮಾಡಲಿ. ಅವರು ಮದುವೆಯಾಗಬೇಕು. ಅದು ಪಾಪವಲ್ಲ. 37 ಆದರೆ ಮತ್ತೊಬ್ಬನು ತನಗೆ ಮದುವೆಯ ಆಗತ್ಯವಿಲ್ಲವೆಂದು ತನ್ನ ಮನಸ್ಸಿನಲ್ಲಿ ದೃಢವಾಗಿ ನಿಶ್ಚಯಿಸಿಕೊಂಡಿದ್ದರೆ ಅವನು ತನ್ನ ಇಚ್ಛೆಗನುಸಾರವಾಗಿ ಮಾಡಲು ಸ್ವತಂತ್ರನಾಗಿದ್ದಾನೆ. ಈ ವ್ಯಕ್ತಿಯು ತನಗೆ ನಿಶ್ಚಿತವಾದ ಕನ್ನಿಕೆಯೊಂದಿಗೆ ತಾನು ಮದುವೆಯಾಗುವುದಿಲ್ಲವೆಂದು ನಿರ್ಧರಿಸಿದರೆ ಅವನು ಒಳ್ಳೆಯದನ್ನೇ ಮಾಡುತ್ತಿದ್ದಾನೆ. 38 ಆದ್ದರಿಂದ ತನಗೆ ನಿಶ್ಚಿತವಾದ ಕನ್ಯೆಯನ್ನು ಮದುವೆಯಾಗುವುದು ಒಳ್ಳೆಯದು; ಮದುವೆಯಾಗದಿರುವುದು ಮತ್ತಷ್ಟು ಒಳ್ಳೆಯದು.”] [PE][PS]
39. ಗಂಡನು ಬದುಕಿರುವ ತನಕ ಹೆಂಡತಿಯು ಅವನೊಂದಿಗೆ ಬಾಳ್ವೆ ನಡೆಸಬೇಕು. ಆದರೆ ಗಂಡನು ಸತ್ತುಹೋದರೆ, ಆ ಸ್ತ್ರೀಯು ತಾನು ಬಯಸಿದವರನ್ನು ಮದುವೆಯಾಗಲು ಸ್ವತಂತ್ರಳಾಗಿದ್ದಾಳೆ. ಆದರೆ ಅವನು ಪ್ರಭುವನ್ನು ಅನುಸರಿಸುವವನಾಗಿರಬೇಕು.
40. ಆಕೆಯು ಮತ್ತೆ ಮದುವೆ ಮಾಡಿಕೊಳ್ಳದಿದ್ದರೆ ಹೆಚ್ಚು ಸಂತೋಷದಿಂದಿರುವಳು. ಇದು ನನ್ನ ಅಭಿಪ್ರಾಯವಾಗಿದೆ. ದೇವರಾತ್ಮನು ನನ್ನೊಳಗಿದ್ದಾನೆಂದು ನಾನು ನಂಬುತ್ತೇನೆ. [PE]