1 ಯೆಹೂದ ದೇಶದ ಅರಸರಾಗಿದ್ದ ಉಜ್ಜೀಯ, ಯೋತಾಮ, ಆಹಾಜ, ಹಿಜ್ಕೀಯ ಇವರ ಕಾಲದಲ್ಲಿ ಯೆಹೂದ ಮತ್ತು ಯೆರೂಸಲೇಮಿನ ವಿಷಯವಾಗಿ ಆಮೋಚನ ಮಗನಾದ ಯೆಶಾಯನಿಗೆ ಆದ ದರ್ಶನವು. ದಂಗೆಕೋರ ರಾಷ್ಟ್ರ 2 ಆಕಾಶಗಳೇ, ಕೇಳಿರಿ. ಭೂಮಿಯೇ, ಕಿವಿಗೊಡು. ಏಕೆಂದರೆ ಯೆಹೋವ ದೇವರು ಮಾತನಾಡುತ್ತಿದ್ದಾರೆ: “ನಾನು ಸಾಕಿ ಸಲಹಿದ ಮಕ್ಕಳೇ ನನಗೆ ವಿರೋಧವಾಗಿ ತಿರುಗಿಬಿದ್ದಿದ್ದಾರೆ. 3 ಎತ್ತು ತನ್ನ ಯಜಮಾನನನ್ನು, ಕತ್ತೆಯು ತನ್ನ ಒಡೆಯನ ಕೊಟ್ಟಿಗೆಯನ್ನು ತಿಳಿದಿರುವುವು. ಆದರೆ ಇಸ್ರಾಯೇಲಿಗೆ ತಿಳಿದಿಲ್ಲ. ನನ್ನ ಜನರಿಗೂ ತಿಳಿಯುವುದಿಲ್ಲ.” 4 ಅಯ್ಯೋ ಪಾಪಿಷ್ಠ ಜನಾಂಗವೇ, ದುಷ್ಟತನದ ಭಾರವನ್ನು ಹೊತ್ತಿರುವ ಪ್ರಜೆಯೇ! ದುಷ್ಟ ಸಂತತಿಯೇ, ಭ್ರಷ್ಟರಾದ ಮಕ್ಕಳೇ! ಯೆಹೋವ ದೇವರನ್ನು ಅವರು ತೊರೆದುಬಿಟ್ಟಿದ್ದಾರೆ. ಇಸ್ರಾಯೇಲಿನ ಪರಿಶುದ್ಧರನ್ನು ತಿರಸ್ಕರಿಸಿದ್ದಾರೆ ಅವರಿಂದ ದೂರವಾಗಿದ್ದಾರೆ. 5 ನೀವು ಹೆಚ್ಚೆಚ್ಚಾಗಿ ತಿರುಗಿಬಿದ್ದು ಏಕೆ ನೀವು ಇನ್ನು ಹೊಡೆಯಿಸಿಕೊಳ್ಳುತ್ತೀರಿ? ತಲೆಯೆಲ್ಲಾ ಗಾಯವಾಗಿದೆ, ಹೃದಯವೆಲ್ಲಾ ಬಾಧಿತವಾಗಿದೆ. 6 ಅಂಗಾಲಿನಿಂದ ನಡುನೆತ್ತಿಯವರೆಗೂ ಬಾಸುಂಡೆ, ಪೆಟ್ಟು, ಮಾಗದ ಗಾಯಗಳೇ ಹೊರತು ಏನೂ ಸೌಖ್ಯವಿಲ್ಲ. ಅವುಗಳನ್ನು ತೊಳೆಯಲಿಲ್ಲ, ಕಟ್ಟಿಲ್ಲ, ಇಲ್ಲವೆ ಎಣ್ಣೆ ಸವರಿ ಮೃದು ಮಾಡಿಲ್ಲ. 7 ನಿಮ್ಮ ದೇಶವು ಹಾಳಾಗಿದೆ. ನಿಮ್ಮ ಪಟ್ಟಣಗಳು ಬೆಂಕಿಯಿಂದ ಸುಟ್ಟುಹೋಗಿವೆ. ನಿಮ್ಮ ಹೊಲಗಳನ್ನು ಪರರು ನಿಮ್ಮೆದುರಿಗೆ ನುಂಗಿಬಿಡುತ್ತಿದ್ದಾರೆ. ಅದು ಇತರ ಜನರಿಂದ ಕೆಡವಿಬಿದ್ದು ಹಾಳಾಗಿದೆ. 8 ಚೀಯೋನ್ ಪುತ್ರಿಯು ದ್ರಾಕ್ಷಿ ತೋಟದಲ್ಲಿರುವ ಮನೆಯ ಹಾಗೆಯೂ, ಸೌತೆಕಾಯಿಯ ಹೊಲದ ಗುಡಿಸಿಲಿನ ಹಾಗೂ ಮುತ್ತಿಗೆ ಹಾಕಿರುವ ಪಟ್ಟಣದ ಹಾಗೆಯೂ ಇದೆ. 9 ಸೇನಾಧೀಶ್ವರ ಯೆಹೋವ ದೇವರು ನಮಗೆ ಮಿಕ್ಕಿದ್ದರಲ್ಲಿ ಸ್ವಲ್ಪವನ್ನಾದರೂ ಉಳಿಸದೆ ಹೋಗಿದ್ದರೆ, ನಾವು ಸೊದೋಮಿನಂತೆ ಆಗುತ್ತಿದ್ದೆವು, ಗೊಮೋರಕ್ಕೆ ಸಮಾನವಾಗಿಯೂ ಇರುತ್ತಿದ್ದೆವು. 10 ಸೊದೋಮಿನ ಅಧಿಪತಿಗಳೇ, ನೀವು ಯೆಹೋವ ದೇವರ ಮಾತನ್ನು ಕೇಳಿರಿ. ಗೊಮೋರದ ಪ್ರಜೆಗಳೇ! ನಮ್ಮ ದೇವರ ನಿಯಮಕ್ಕೆ ಕಿವಿಗೊಡಿರಿ. 11 “ನೀವು ಲೆಕ್ಕವಿಲ್ಲದಷ್ಟು ಯಜ್ಞಗಳನ್ನು ನನಗೆ ಅರ್ಪಿಸುವ ಉದ್ದೇಶವೇನು?” ಎಂದು ಯೆಹೋವ ದೇವರು ನುಡಿಯುತ್ತಾರೆ. “ಟಗರುಗಳ ದಹನಬಲಿಗಳು, ಪುಷ್ಟಪಶುಗಳ ಕೊಬ್ಬು ಇದೆಲ್ಲಾ ನನಗೆ ಬೇಸರ. ಹೋರಿ, ಕುರಿ, ಹೋತಗಳ ರಕ್ತಕ್ಕೆ, ನಾನು ಸಂತೋಷಪಡುವುದಿಲ್ಲ. 12 ನೀವು ನನ್ನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳಬೇಕೆಂದು ಬರುತ್ತೀರಲ್ಲಾ, ನನ್ನ ಪ್ರಾಕಾರಗಳನ್ನು ತುಳಿಯಲು ಯಾರು ನಿಮ್ಮನ್ನು ಕೇಳಿಕೊಂಡರು. 13 ಇನ್ನು ವ್ಯರ್ಥವಾದ ಕಾಣಿಕೆಗಳನ್ನು ತರಬೇಡಿರಿ! ನಿಮ್ಮ ಧೂಪವು ನನಗೆ ಅಸಹ್ಯ. ಅಮಾವಾಸ್ಯೆಗಳು, ಸಬ್ಬತ್ ದಿನಗಳು, ಸಭೆಗಳು ಕೂಡುವುದು ಇವು ಬೇಡ. ದುಷ್ಟತನದಿಂದ ಕೂಡಿದ ವಿಶೇಷ ಕೂಟವನ್ನು ಸಹ ಸಹಿಸಲಾರೆನು. 14 ನಿಮ್ಮ ಅಮಾವಾಸ್ಯೆಗಳನ್ನೂ, ನೇಮಕವಾದ ಹಬ್ಬಗಳನ್ನೂ ನನ್ನ ಆತ್ಮವು ದ್ವೇಷಿಸುತ್ತದೆ. ಅವು ನನಗೆ ಭಾರ, ಸಹಿಸಲು ಬೇಸರ. 15 ನೀವು ಪ್ರಾರ್ಥಿಸಲು ನಿಮ್ಮ ಕೈಗಳನ್ನು ಚಾಚುವಾಗ, ನನ್ನ ಕಣ್ಣುಗಳನ್ನು ನಿಮಗೆ ಮರೆಮಾಡುವೆನು; ಹೌದು, ನೀವು ಬಹು ಪ್ರಾರ್ಥನೆಗಳನ್ನು ಮಾಡಿದರೂ ನಾನು ಕೇಳೆನು. “ನಿಮ್ಮ ಕೈಗಳು ರಕ್ತದಿಂದ ತೊಯ್ದಿವೆ! 16 “ನಿಮ್ಮನ್ನು ತೊಳೆದುಕೊಂಡು ಶುದ್ಧಮಾಡಿಕೊಳ್ಳಿರಿ. ನನ್ನ ಕಣ್ಣೆದುರಿನಿಂದ ನಿಮ್ಮ ದುಷ್ಟಕೃತ್ಯಗಳನ್ನು ತೆಗೆದುಹಾಕಿರಿ. ಕೆಟ್ಟದ್ದನ್ನು ನಿಲ್ಲಿಸಿಬಿಡಿರಿ. 17 ಒಳ್ಳೆಯದನ್ನು ಮಾಡಲು ಕಲಿತುಕೊಳ್ಳಿರಿ. ನ್ಯಾಯವನ್ನು ಹುಡುಕಿರಿ. ಹಿಂಸೆಪಡುವವರನ್ನು ಉಪಚರಿಸಿರಿ. ಅನಾಥರಿಗೆ ನ್ಯಾಯತೀರಿಸಿರಿ. ವಿಧವೆಯರ ಪರವಾಗಿ ವಾದಿಸಿರಿ. 18 “ಈಗ ಬನ್ನಿರಿ, ನಾವು ಒಟ್ಟಾಗಿ ವಾದಿಸೋಣ,” ಎಂದು ಯೆಹೋವ ದೇವರು ಹೇಳುತ್ತಾರೆ. “ನಿಮ್ಮ ಪಾಪಗಳು ಕಡುಕೆಂಪಾಗಿದ್ದರೂ ಹಿಮದಂತೆ ಬೆಳ್ಳಗಾಗುವುವು. ರಕ್ತದಂತೆ ಕಡುಕೆಂಪಾಗಿದ್ದರೂ ಉಣ್ಣೆಯಂತೆ ಆಗುವುವು. 19 ನೀವು ಒಪ್ಪಿ ವಿಧೇಯರಾದರೆ ದೇಶದ ಸತ್ಫಲವನ್ನು ಸವಿಯುವಿರಿ. 20 ಆದರೆ ನೀವು ತಿರಸ್ಕರಿಸಿ ತಿರುಗಿಬಿದ್ದರೆ, ಖಡ್ಗದ ಬಾಯಿಗೆ ತುತ್ತಾಗುವಿರಿ,” ಏಕೆಂದರೆ ಯೆಹೋವ ದೇವರೇ ಇದನ್ನು ನುಡಿದಿದ್ದಾರೆ. 21 ನಂಬಿಗಸ್ತಿಕೆಯ ಪಟ್ಟಣವು ವ್ಯಭಿಚಾರದ ಪಟ್ಟಣವಾಗಿದೆಯಲ್ಲಾ! ಅದು ನ್ಯಾಯದಿಂದ ತುಂಬಿ ನೀತಿಯಲ್ಲಿ ನೆಲೆಯಾಗಿತ್ತು. ಆದರೆ ಈಗ ಕೊಲೆಗಾರರಿಂದ ತುಂಬಿದೆ. 22 ನಿನ್ನ ಬೆಳ್ಳಿಯು ಕಂದಾಯಿತು. ನಿನ್ನ ದ್ರಾಕ್ಷಾರಸವು ನೀರಿನಿಂದ ಬೆರಕೆಯಾಯಿತು. 23 ನಿನ್ನ ಪ್ರಭುಗಳು ಎದುರುಬೀಳುವವರೂ, ಕಳ್ಳರ ಜೊತೆಗಾರರೂ ಆಗಿದ್ದಾರೆ. ಪ್ರತಿಯೊಬ್ಬನೂ ಲಂಚ ಪ್ರಿಯನೂ, ಬಹುಮಾನಗಳನ್ನು ಅಪೇಕ್ಷಿಸುವವನೂ ಆಗಿದ್ದಾನೆ. ಅವರು ಅನಾಥರಿಗೆ ನ್ಯಾಯತೀರಿಸರು, ಇಲ್ಲವೆ ವಿಧವೆಯರ ವ್ಯಾಜ್ಯವು ಅವರ ಬಳಿಗೆ ಬರುವುದಿಲ್ಲ. 24 ಆದ್ದರಿಂದ ಸರ್ವಶಕ್ತರಾದ ದೇವರೂ, ಇಸ್ರಾಯೇಲಿನ ಪರಾಕ್ರಮಿಯೂ ಆದ ಯೆಹೋವ ದೇವರು ಹೇಳುವುದೇನೆಂದರೆ, “ಆಹಾ! ನನ್ನ ವೈರಿಗಳ ಮೇಲೆ ನನ್ನ ಕೋಪವನ್ನು ಹೊರಹಾಕುತ್ತೇನೆ ಮತ್ತು ನನ್ನ ಶತ್ರುಗಳ ಮೇಲೆ ಸೇಡು ತೀರಿಸಿಕೊಳ್ಳುತ್ತೇನೆ. 25 ನನ್ನ ಕೈಯನ್ನು ನಿನ್ನ ಕಡೆಗೆ ತಿರುಗಿಸಿ, ನಿನ್ನ ಮಲಿನವನ್ನು ಸಂಪೂರ್ಣವಾಗಿ ನಿವಾರಿಸಿ, ನಿನ್ನ ಎಲ್ಲಾ ಕಲ್ಮಷವನ್ನು ತೆಗೆದುಹಾಕುವೆನು. 26 ನಿನ್ನ ನ್ಯಾಯಾಧಿಪತಿಗಳನ್ನು ಮುಂಚಿನ ಹಾಗೆಯೂ, ನಿನ್ನ ಆಲೋಚನಾಪರರನ್ನು ಪ್ರಾರಂಭದಲ್ಲಿದ್ದ ಹಾಗೆಯೂ ತಿರುಗಿ ಒದಗಿಸಿ ಕೊಡುವೆನು. ತರುವಾಯ ನೀನು ನೀತಿಯುಳ್ಳ ಪಟ್ಟಣವೆಂದೂ, ನಂಬಿಗಸ್ತಿಕೆಯ ಪಟ್ಟಣವೆಂದೂ ಎನಿಸಿಕೊಳ್ಳುವೆ.” 27 ಚೀಯೋನ್ ಪಟ್ಟಣವು ನ್ಯಾಯತೀರ್ಪಿನಿಂದಲೂ, ನೀತಿ ನಂಬಿಕೆಯಿಂದ ಪಶ್ಚಾತ್ತಾಪ ಹೊಂದಿದ ಆಕೆಯ ಜನರೂ ಬಿಡುಗಡೆಯಾಗುವರು. 28 ಆದರೆ ದ್ರೋಹಿಗಳೂ, ಪಾಪಿಗಳೂ ಒಟ್ಟಾಗಿ ನಾಶವಾಗುವರು ಮತ್ತು ಯೆಹೋವ ದೇವರನ್ನು ತೊರೆದವರು ನಿರ್ಮೂಲವಾಗುವರು. 29 “ನೀವು ಇಷ್ಟಪಟ್ಟ ಪವಿತ್ರ ಏಲಾ ಮರಗಳ ನಿಮಿತ್ತ ನಾಚಿಕೊಳ್ಳುವಿರಿ. ಆರಿಸಿಕೊಂಡ ವನಗಳ ವಿಷಯವಾಗಿ ಲಜ್ಜೆಪಡುವಿರಿ. 30 ನೀವು ಬಾಡಿದ ಎಲೆಯುಳ್ಳ ಏಲಾ ಮರದಂತೆಯೂ, ನೀರಿಲ್ಲದ ತೋಟದಂತೆಯೂ ಇರುವಿರಿ. 31 ನಿಮ್ಮಲ್ಲಿನ ಬಲಿಷ್ಠನೇ ಸೆಣಬಿನ ನಾರು, ಅವನ ಕೆಲಸ, ಅವೆರಡೂ ಸೇರಿ ಯಾರೂ ಆರಿಸಲಾಗದಂತೆ ಅವು ಸುಟ್ಟುಹೋಗುವುವು.”