ಮೊದಲ ಪಸ್ಕಹಬ್ಬ 1 ಐಗುಪ್ತ ದೇಶದಲ್ಲಿ ಯೆಹೋವನು ಮೋಶೆ ಮತ್ತು ಆರೋನರ ಸಂಗಡ ಮಾತನಾಡಿ ಹೇಳಿದ್ದೇನೆಂದರೆ, 2 “ಎಲ್ಲಾ ತಿಂಗಳುಗಳಲ್ಲಿ ಇದೇ ನಿಮಗೆ ಮೊದಲ ತಿಂಗಳಾಗಿರಬೇಕು. ಇದೇ ನಿಮಗೆ ಪ್ರತಿ ವರ್ಷದ ಮೊದಲನೆಯ ತಿಂಗಳಾಗಿರುವುದು. 3 ಇದರ ವಿಷಯದಲ್ಲಿ ನೀವು ಇಸ್ರಾಯೇಲರ ಸಮೂಹಕ್ಕೆಲ್ಲಾ ಹೀಗೆ ಅಪ್ಪಣೆಮಾಡಬೇಕು, ‘ಈ ತಿಂಗಳಿನ ಹತ್ತನೆಯ ದಿನದಲ್ಲಿ ನಿಮ್ಮ ನಿಮ್ಮ ಗೋತ್ರಗಳ ಪ್ರತಿಯೊಂದು ಮನೆಯವರು ಒಂದೊಂದು ಕುರಿಮರಿಯನ್ನಾಗಲಿ, ಆಡುಮರಿಯನ್ನಾಗಲಿ ತೆಗೆದುಕೊಳ್ಳಬೇಕು. 4 ಕುಟುಂಬವು ಚಿಕ್ಕದಾಗಿದ್ದರೆ, ಒಂದು ಕುರಿಮರಿಯನ್ನು ಪೂರ್ಣವಾಗಿ ತಿನ್ನುವುದಕ್ಕೆ ಆಗದೆ ಹೋದ ಪಕ್ಷಕ್ಕೆ ನೆರೆಮನೆಯ ಕುಟುಂಬದವರೊಂದಿಗೆ ಸೇರಿ, ಒಬ್ಬೊಬ್ಬನು ಎಷ್ಟೆಷ್ಟು ತಿನ್ನುವನೆಂದು ಗೊತ್ತುಮಾಡಿಕೊಂಡು ಜನಗಳ ಸಂಖ್ಯಾನುಸಾರ ಮರಿಗಳನ್ನು ತೆಗೆದುಕೊಳ್ಳಲಿ. 5 ಆ ಮರಿಯು ಊನವಿಲ್ಲದ ಒಂದು ವರ್ಷದ ಗಂಡುಮರಿಯಾಗಿರಬೇಕು. ನೀವು ಕುರಿಗಳಿಂದಾಗಲಿ ಅಥವಾ ಆಡುಗಳಿಂದಾಗಲಿ ಅದನ್ನು ತೆಗೆದುಕೊಳ್ಳಬಹುದು. 6 ಈ ತಿಂಗಳಿನ ಹದಿನಾಲ್ಕನೆಯ ದಿನದವರೆಗೆ ಅವುಗಳನ್ನು ಇಟ್ಟುಕೊಂಡಿದ್ದು, ಆ ದಿನದ ಸಂಜೆ ವೇಳೆಯಲ್ಲಿ ಇಸ್ರಾಯೇಲರ ಸಮೂಹದವರೆಲ್ಲರೂ ಒಟ್ಟಿಗೆ ಸೇರಿ ಅವುಗಳನ್ನು ವಧಿಸಬೇಕು. 7 ಅವರು ಅವುಗಳ ರಕ್ತದಲ್ಲಿ ಸ್ವಲ್ಪವನ್ನು ತೆಗೆದು ತಾವು ಆ ಭೋಜನವನ್ನು ಮಾಡುವ ಮನೆಬಾಗಿಲಿನ ಎರಡು ನಿಲುವುಪಟ್ಟಿಗಳಿಗೂ, ಮೇಲಿನ ಪಟ್ಟಿಗೂ ಹಚ್ಚಬೇಕು. 8 ಆ ರಾತ್ರಿಯಲ್ಲಿಯೇ ಆ ಮಾಂಸವನ್ನು ಭೋಜನಮಾಡಬೇಕು. ಅದನ್ನು ಬೆಂಕಿಯಲ್ಲಿ ಸುಟ್ಟು ಹುಳಿಯಿಲ್ಲದ ರೊಟ್ಟಿಗಳ ಮತ್ತು ಕಹಿಯಾದ ಸೊಪ್ಪಿನ ಪಲ್ಯಗಳ ಸಂಗಡ ಊಟಮಾಡಬೇಕು. 9 ಅದನ್ನು ಹಸಿಯಾಗಿಯೂ ನೀರಿನಲ್ಲಿ ಬೇಯಿಸಿಯೂ ತಿನ್ನಕೂಡದು. ಅದರ ತಲೆ, ತೊಡೆ, ಹೊಟ್ಟೆ, ಇವುಗಳ ಸಹಿತವಾಗಿ ಬೆಂಕಿಯಲ್ಲೇ ಸುಟ್ಟು ತಿನ್ನಬೇಕು. 10 ಮರುದಿನದ ಬೆಳಗಿನವರೆಗೆ ಅದರಲ್ಲಿ ಸ್ವಲ್ಪವನ್ನಾದರೂ ಉಳಿಸಕೂಡದು, ಬೆಳಗಿನವರೆಗೆ ಉಳಿದದ್ದನ್ನು ಬೆಂಕಿಯಿಂದ ಸುಟ್ಟುಬಿಡಬೇಕು. 11 ಆ ಭೋಜನವನ್ನು ಮಾಡಬೇಕಾದ ಕ್ರಮ ಹೇಗೆಂದರೆ: ನೀವು ನಡುವನ್ನು ಕಟ್ಟಿಕೊಂಡು, ಕೆರವನ್ನು ಮೆಟ್ಟಿಕೊಂಡು, ಕೋಲುಹಿಡಿದು, * ಅಥವಾ ಹೊರಟುಹೋಗಲು ಸಿದ್ಧರಾಗುವುದು. ತ್ವರೆಯಾಗಿ ಮಾಡಬೇಕು. ಇದು ಯೆಹೋವನಿಗೆ ಆಚರಿಸತಕ್ಕ † ಪಸ್ಕಹಬ್ಬ ಅಂದರೆ ಸಂಹಾರದೂತನು ಐಗುಪ್ತ್ಯ ಚೊಚ್ಚಲುಗಳನ್ನು ಸಂಹರಿಸಿದಾಗ ಇಸ್ರಾಯೇಲರನ್ನು ಸಂಹರಿಸದೆ ದಾಟಿಹೋದದ್ದನ್ನು ನೆನಪಿಸಿಕೊಳ್ಳುವುದಕ್ಕಾಗಿ ಆಚರಿಸುವ ಹಬ್ಬ. ಪಸ್ಕಹಬ್ಬವು. 12 ಆ ರಾತ್ರಿ ನಾನು ಐಗುಪ್ತದೇಶದ ಮೇಲೆ ಹಾದುಹೋಗಿ ಮನುಷ್ಯರಲ್ಲಾಗಲಿ, ಪಶುಗಳಲ್ಲಾಗಲಿ, ಚೊಚ್ಚಲಾಗಿರುವುದನ್ನೆಲ್ಲಾ ಸಂಹರಿಸುವೆನು. ಐಗುಪ್ತ ದೇಶದ ಸಮಸ್ತ ದೇವತೆಗಳಿಗೂ ‡ ಅಥವಾ ಐಗುಪ್ತದೇಶದ ಸಮಸ್ತ ದೇವತೆಗಳು ಸುಳ್ಳಾದ ದೇವತೆಗಳೆಂದು ನಾನು ಸಾಬೀತುಪಡಿಸುತ್ತೇನೆ. ನ್ಯಾಯತೀರಿಸುವೆನು. ನಾನೇ ಯೆಹೋವನು. 13 ಆದರೆ ನೀವು ಇರುವ ಎಲ್ಲಾ ಮನೆಗಳ ಬಾಗಿಲಿಗೆ ಹಚ್ಚಿರುವ ರಕ್ತವು ನಿಮಗೆ ಗುರುತಾಗಿರುವುದು. ಆ ರಕ್ತವನ್ನು ನಾನು ನೋಡುವಾಗ ನಿಮಗೆ ಯಾವ ನಷ್ಟವನ್ನೂ ಮಾಡದೇ ಮುಂದಕ್ಕೆ ದಾಟಿಹೋಗುವೆನು. ನಾನು ಐಗುಪ್ತ್ಯದವರನ್ನು ಸಂಹರಿಸುವಾಗ ನಿಮಗೆ ಯಾವ ಹಾನಿಯೂ ಉಂಟಾಗುವುದಿಲ್ಲ. 14 ಈ ದಿನವು ನಿಮಗೆ ಜ್ಞಾಪಕಾರ್ಥವಾಗಿರುವುದು. ಯೆಹೋವನ ಘನಕ್ಕಾಗಿ ಆ ಹಬ್ಬವನ್ನು ತಲತಲಾಂತರಕ್ಕೂ ಆಚರಿಸಬೇಕು. ಅದನ್ನು ಶಾಶ್ವತನಿಯಮವೆಂದು ಎಂದೆಂದಿಗೂ ಆಚರಿಸಬೇಕು. ಹುಳಿಯಿಲ್ಲದ ರೊಟ್ಟಿಯ ಹಬ್ಬ 15 “ ‘ಏಳು ದಿನಗಳವರೆಗೆ ನೀವು ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಮೊದಲನೆಯ ದಿನದಲ್ಲಿಯೇ ಹುಳಿಹಿಟ್ಟನ್ನು ನಿಮ್ಮ ಮನೆಯೊಳಗಿಂದ ತೆಗೆದುಬಿಡಬೇಕು. ಏಕೆಂದರೆ ಮೊದಲನೆಯ ದಿನದಿಂದ ಏಳನೆಯ ದಿನದವರೆಗೆ ಹುಳಿರೊಟ್ಟಿಯನ್ನು ತಿನ್ನುವವನು ಇಸ್ರಾಯೇಲಿನೊಳಗಿಂದ ತೆಗೆದುಹಾಕಲ್ಪಡಬೇಕು. 16 ಮೊದಲನೆಯ ದಿನದಲ್ಲಿ ಪರಿಶುದ್ಧ ದೇವಾರಾಧನೆಗಾಗಿ ಸಭೆ ಸೇರಬೇಕು. ಏಳನೆಯ ದಿನದಲ್ಲಿಯೂ ದೇವಾರಾಧನೆಗಾಗಿ ಸಭೆ ಸೇರಬೇಕು. ಈ ಎರಡು ದಿನಗಳಲ್ಲಿ ಯಾವ ಕೆಲಸವನ್ನು ಮಾಡಕೂಡದು. ಊಟಕ್ಕೆ ಬೇಕಾದದ್ದನ್ನು ಮಾತ್ರ ಮಾಡಬಹುದೇ ಹೊರತು ಬೇರೆ ಯಾವ ಕೆಲಸವನ್ನು ಮಾಡಬಾರದು. 17 ನೀವು ಹುಳಿಯಿಲ್ಲದ ರೊಟ್ಟಿಯ ಹಬ್ಬವನ್ನು ಆಚರಿಸಬೇಕು. ಏಕೆಂದರೆ ಈ ದಿನದಲ್ಲಿಯೇ ನಾನು ನಿಮ್ಮ ಸೈನ್ಯಗಳನ್ನು ಐಗುಪ್ತ ದೇಶದೊಳಗಿಂದ ಹೊರಗೆ ಬರಮಾಡಿದ್ದರಿಂದ ನೀವೂ, ನಿಮ್ಮ ಸಂತತಿಯವರೂ ಈ ದಿನವನ್ನು ಆಚರಣೆಗೆ ತರಬೇಕು. ಇದು ಶಾಶ್ವತವಾದ ನಿಯಮವಾಗಿದೆ. 18 ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದ ಸಾಯಂಕಾಲ ಮೊದಲುಗೊಂಡು ಅದೇ ತಿಂಗಳಿನ ಇಪ್ಪತ್ತೊಂದನೆಯ ದಿನದ ಸಾಯಂಕಾಲದವರೆಗೆ ನೀವು ಹುಳಿಯಿಲ್ಲದ ರೊಟ್ಟಿಗಳನ್ನೇ ತಿನ್ನಬೇಕು. 19 ಆ ಏಳು ದಿನಗಳವರೆಗೆ ನಿಮ್ಮ ಮನೆಗಳಲ್ಲಿ ಹುಳಿಹಿಟ್ಟು ಇರಬಾರದು. ಹುಳಿ ಬೆರಸಿದ್ದನ್ನು ಯಾರು ತಿನ್ನುವರೋ ಅವನು ಪರದೇಶದವನಾಗಲಿ, ಸ್ವದೇಶದವನಾಗಲಿ ಇಸ್ರಾಯೇಲ ಸಮೂಹದೊಳಗಿಂದ ತೆಗೆದುಹಾಕಲ್ಪಡಬೇಕು. 20 ನೀವು ನಿಮ್ಮ ಮನೆಗಳಲ್ಲಿ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕೇ ಹೊರತು, ಹುಳಿಕಲಸಿದ ಯಾವುದನ್ನೂ ತಿನ್ನಕೂಡದು’ ” ಎಂದು ಆಜ್ಞಾಪಿಸಿದನು. ಮೊದಲನೆಯ ಪಸ್ಕ ಹಬ್ಬದ ಆಚರಣೆ 21 ಆಗ ಮೋಶೆಯು ಇಸ್ರಾಯೇಲರ ಹಿರಿಯರೆಲ್ಲರನ್ನೂ ಕರೆಯಿಸಿ ಅವರಿಗೆ, “ನೀವು, ನಿಮ್ಮ ನಿಮ್ಮ ಕುಟುಂಬಗಳಿಗೋಸ್ಕರ ಮಂದೆಯಿಂದ ಮರಿಗಳನ್ನು ಆರಿಸಿಕೊಂಡು ಪಸ್ಕಹಬ್ಬಕ್ಕೆ ಕೊಯ್ಯಿರಿ. 22 ಹಿಸ್ಸೋಪ್ ಗಿಡದ ಕಟ್ಟನ್ನು ತೆಗೆದುಕೊಂಡು ಬೋಗುಣಿಯಲ್ಲಿರುವ ರಕ್ತದಲ್ಲಿ ಅದನ್ನು ಅದ್ದಿ ಬಾಗಿಲಿನ ಮೇಲಿನ ಅಡ್ಡಪಟ್ಟಿಗೂ, ಅದರ ಪಕ್ಕದಲ್ಲಿರುವ ಎರಡು ನಿಲುವುಪಟ್ಟಿಗಳಿಗೂ ಹಚ್ಚಬೇಕು. ತರುವಾಯ ನಿಮ್ಮಲ್ಲಿ ಒಬ್ಬರೂ ಬೆಳಗಾಗುವವರೆಗೆ ಮನೆಯ ಬಾಗಿಲನ್ನು ಬಿಟ್ಟು ಹೊರಗೆ ಹೋಗಬಾರದು. 23 ಯೆಹೋವನು ಐಗುಪ್ತ್ಯರನ್ನು ಹತಮಾಡುವುದಕ್ಕೆ ದೇಶದ ನಡುವೆ ಹಾದುಹೋಗುವನು. ಆಗ ನಿಮ್ಮ ನಿಮ್ಮ ಮನೆಬಾಗಿಲಿನ ಮೇಲಣ ಪಟ್ಟಿಯಲ್ಲಿಯೂ, ಎರಡು ನಿಲುವು ಪಟ್ಟಿಗಳಲ್ಲಿಯೂ ಆ ರಕ್ತವನ್ನು ಕಂಡು ಮುಂದಕ್ಕೆ ದಾಟಿ ಹೋಗುವನು. ನಿಮ್ಮ ಪ್ರಾಣ ತೆಗೆಯುವುದಕ್ಕೆ ಸಂಹಾರಕನು ನಿಮ್ಮ ಮನೆಗಳಲ್ಲಿ ಬರುವುದೇ ಇಲ್ಲ. 24 ಇದು ನಿಮಗೂ, ನಿಮ್ಮ ಸಂತತಿಯವರಿಗೂ ಶಾಶ್ವತವಾದ ನಿಯಮವೆಂದು ಆಚರಿಸಬೇಕು. 25 ಯೆಹೋವನು ತನ್ನ ಮಾತಿನ ಮೇರೆಗೆ ನಿಮಗೆ ಕೊಡುವ ದೇಶಕ್ಕೆ ನೀವು ಬಂದಾಗ, ಈ ಆಚರಣೆಯನ್ನು ಕೈಕೊಳ್ಳಬೇಕು. 26 ಮುಂದೆ ನಿಮ್ಮ ಮಕ್ಕಳು, ‘ನೀವು ನಡೆಸುವ ಈ ಆಚರಣೆ ಏನು?’ ಎಂದು ನಿಮ್ಮನ್ನು ಕೇಳುವಾಗ, 27 ನೀವು ಅವರಿಗೆ, ‘ಯೆಹೋವನು ಐಗುಪ್ತ್ಯರನ್ನು ಸಂಹರಿಸಿದಾಗ ಐಗುಪ್ತ ದೇಶದಲ್ಲಿದ್ದ ಇಸ್ರಾಯೇಲರ ಮನೆಗಳಲ್ಲಿ ಪ್ರವೇಶಿಸದೆ ಮುಂದಕ್ಕೆ ದಾಟಿ ನಮ್ಮ ಮನೆಯವರನ್ನು ಉಳಿಸಿದ್ದರಿಂದ ನಾವು ಯೆಹೋವನ ಪಸ್ಕವೆಂಬ ಈ ಆಚರಣೆಯನ್ನು ನಡೆಸಲೇಬೇಕು ಎಂದು ಹೇಳಬೇಕು’ ” ಎಂದನು. ಆಗ ಜನರು ತಲೆಬಾಗಿ ಯೆಹೋವನಿಗೆ ನಮಸ್ಕರಿಸಿದರು. 28 ಇಸ್ರಾಯೇಲರು ಅಲ್ಲಿಂದ ಹೊರಟು ಯೆಹೋವನು ಮೋಶೆ ಆರೋನರಿಗೆ ಆಜ್ಞಾಪಿಸಿದ ಪ್ರಕಾರವೇ ಮಾಡಿದರು. ಐಗುಪ್ತ್ಯರ ಚೊಚ್ಚಲುಗಳು ಸತ್ತುಹೋದದ್ದು 29 ಮಧ್ಯರಾತ್ರಿಯಲ್ಲಿ ಯೆಹೋವನು ಸಿಂಹಾಸನದಲ್ಲಿರುವ ಫರೋಹನ ಚೊಚ್ಚಲು ಮಗನು ಮೊದಲುಗೊಂಡು ಸೆರೆಯಲ್ಲಿದ್ದ ಸೆರೆಯವನ ಚೊಚ್ಚಲು ಮಗನವರೆಗೂ, ಐಗುಪ್ತ ದೇಶದಲ್ಲಿದ್ದ ಎಲ್ಲಾ ಚೊಚ್ಚಲು ಮಕ್ಕಳನ್ನೂ ಸಂಹಾರ ಮಾಡಿದನು. ಪಶುಗಳ ಚೊಚ್ಚಲು ಮರಿಗಳನ್ನೂ ಸಂಹಾರಮಾಡಿದನು. 30 ಆ ರಾತ್ರಿಯಲ್ಲಿ ಫರೋಹನೂ, ಅವನ ಪರಿವಾರದವರೂ, ಐಗುಪ್ತ್ಯರೆಲ್ಲರೂ ಎದ್ದು ನೋಡಲಾಗಿ ಸಾವಿಲ್ಲದ ಮನೆ ಒಂದೂ ಇರಲಿಲ್ಲ. ಐಗುಪ್ತ ದೇಶದಲ್ಲಿ ದೊಡ್ಡ ಗೋಳಾಟವಾಯಿತು. 31 ಫರೋಹನು ಆ ರಾತ್ರಿಯಲ್ಲೇ ಮೋಶೆ ಮತ್ತು ಆರೋನರನ್ನು ಕರೆಯಿಸಿ ಅವರಿಗೆ, “ನೀವು ಎದ್ದು ನನ್ನ ಜನರ ಮಧ್ಯದಿಂದ ಹೊರಟುಹೋಗಿರಿ. ನೀವು ಕೇಳಿಕೊಂಡ ಮೇರೆಗೆ ಯೆಹೋವನನ್ನು ಆರಾಧಿಸುವುದಕ್ಕೆ ನೀವು ಮತ್ತು ಇಸ್ರಾಯೇಲರು ಹೊರಟುಹೋಗಿರಿ. 32 ನೀವು ಕೇಳಿಕೊಂಡಂತೆ ನಿಮ್ಮ ಕುರಿದನಗಳ ಹಿಂಡುಗಳನ್ನು ತೆಗೆದುಕೊಂಡು ಹೋಗಿರಿ. ಅದಲ್ಲದೆ ನನ್ನನ್ನೂ ಸಹ ಆಶೀರ್ವದಿಸಿರಿ” ಎಂದನು. ವಿಮೋಚನೆ - ರಾಮ್ಸೇಸ್ ಪಟ್ಟಣದಿಂದ ಸುಕ್ಕೋತಿಗೆ ಪಯಣ 33 ಐಗುಪ್ತರು, “ನಾವೆಲ್ಲರು ಸಾಯುತ್ತೇವೆ” ಎಂದುಕೊಂಡು ಇಸ್ರಾಯೇಲರನ್ನು ತಮ್ಮ ದೇಶದಿಂದ ಬೇಗನೇ ಕಳುಹಿಸಿಬಿಡುವುದಕ್ಕೆ ಅಪೇಕ್ಷೆಪಟ್ಟು ಅವರನ್ನು ಬಲವಂತಮಾಡಿದರು. 34 ಆದುದರಿಂದ ಜನರು ಹಿಟ್ಟಿಗೆ ಹುಳಿಹಾಕುವುದಕ್ಕಿಂತ ಮೊದಲೇ ನಾದುವ ಪಾತ್ರೆಗಳ ಸಂಗಡ ಕಣಕದ ಮುದ್ದೆಯನ್ನು ಬಟ್ಟೆಯಲ್ಲಿ ಗಂಟುಕಟ್ಟಿ ಹೆಗಲಿನ ಮೇಲೆ ಹಾಕಿಕೊಂಡು ಹೊರಟುಹೋದರು. 35 ಇಸ್ರಾಯೇಲರು ಮೋಶೆಯ ಮಾತಿನ ಮೇರೆಗೆ ಐಗುಪ್ತ್ಯರಿಂದ ಬೆಳ್ಳಿ ಬಂಗಾರದ ಒಡವೆಗಳನ್ನು, ಬಟ್ಟೆಗಳನ್ನು ಕೇಳಿ ಪಡೆದುಕೊಂಡರು. 36 ಯೆಹೋವನು ಅವರ ಮೇಲೆ ಐಗುಪ್ತ್ಯರಲ್ಲಿ ದಯೆಯನ್ನು ಹುಟ್ಟಿಸಿದ್ದರಿಂದ ಅವರು ಕೇಳಿಕೊಂಡದ್ದೆಲ್ಲವನ್ನು ಐಗುಪ್ತರು ಕೊಟ್ಟರು. ಹೀಗೆ ಇಸ್ರಾಯೇಲರು ಐಗುಪ್ತ್ಯರ ಸೊತ್ತನ್ನು ಸುಲಿದುಕೊಂಡರು. 37 ಇಸ್ರಾಯೇಲರು ರಾಮ್ಸೇಸ್ ಪಟ್ಟಣದಿಂದ ಹೊರಟು ಸುಕ್ಕೋತಿಗೆ ಬಂದರು. ಹೆಂಗಸರು ಮಕ್ಕಳು ಅಲ್ಲದೆ ಗಂಡಸರು ಮಾತ್ರ ಸುಮಾರು ಆರುಲಕ್ಷ ಮಂದಿ ಇದ್ದರು. 38 ಅವರೊಂದಿಗೆ ಬಹು ಮಂದಿ ಅನ್ಯರೂ ಹೊರಟುಬಂದಿದ್ದರು. ಕುರಿದನಗಳ ಹಿಂಡೂ ಪಶುಗಳೂ ಅವರ ಸಂಗಡ ಹೊರಟುಹೋದವು. 39 ಅವರು ಐಗುಪ್ತ ದೇಶದಿಂದ ತಂದ ನಾದಿದ ಹಿಟ್ಟಿನಿಂದ ಹುಳಿಯಿಲ್ಲದ ರೊಟ್ಟಿಗಳನ್ನು ಮಾಡಿಕೊಂಡರು. ಅವರು ಐಗುಪ್ತ ದೇಶದಿಂದ ಹೊರಡಿಸಲ್ಪಟ್ಟು ಸ್ವಲ್ಪವಾದರೂ ಸಮಯ ಸಿಕ್ಕದೆ ಹೋದದರಿಂದ ಕಣಕದಲ್ಲಿ ಹುಳಿಯನ್ನು ಕಲಸಿರಲಿಲ್ಲ ಮತ್ತು ಬೇರೆ ಯಾವ ಆಹಾರವನ್ನೂ ಸಿದ್ಧಪಡಿಸಿಕೊಂಡಿರಲಿಲ್ಲ. 40 ಇಸ್ರಾಯೇಲರು ಐಗುಪ್ತ ದೇಶದಲ್ಲಿ ಸುಮಾರು ನಾನೂರಮೂವತ್ತು ವರ್ಷ ವಾಸವಾಗಿದ್ದರು. 41 ನಾನೂರಮೂವತ್ತು ವರ್ಷಗಳು ಕಳೆದನಂತರ ಅದೇ ದಿನದಲ್ಲಿಯೇ ಯೆಹೋವನ ಸೈನ್ಯಗಳೆಲ್ಲಾ ಐಗುಪ್ತ ದೇಶವನ್ನು ಬಿಟ್ಟು ಹೊರಟುಹೋದವು. 42 ಯೆಹೋವನು ಆ ರಾತ್ರಿಯಲ್ಲಿಯೇ ಅವರನ್ನು ಐಗುಪ್ತ ದೇಶದಿಂದ ಹೊರಗೆ ಬರಮಾಡಿದ್ದರಿಂದ ಅವರು ಈ ರಾತ್ರಿಯಲ್ಲಿ ಆತನ ಘನಕ್ಕಾಗಿ ಜಾಗರಣೆಯನ್ನು ಮಾಡಿದರು. ಇಸ್ರಾಯೇಲರೆಲ್ಲರೂ ತಲತಲಾಂತರಕ್ಕೂ ಯೆಹೋವನಿಗೆ ಜಾಗರಣೆಯನ್ನು ಆಚರಿಸಬೇಕಾದ ರಾತ್ರಿಯು ಇದೇ ಆಗಿದೆ. ಪಸ್ಕಹಬ್ಬವನ್ನು ಆಚರಿಸಬೇಕಾದ ಕ್ರಮ 43 ಯೆಹೋವನು ಮೋಶೆ ಮತ್ತು ಆರೋನರಿಗೆ ಹೇಳಿದ್ದೇನೆಂದರೆ, “ಪಸ್ಕವನ್ನು ಆಚರಿಸಬೇಕಾದ ಕ್ರಮ ಹೇಗೆಂದರೆ, ಅನ್ಯನೊಬ್ಬನೂ ಅದರಲ್ಲಿ ಭೋಜನ ಮಾಡಬಾರದು. 44 ಆದರೆ ನೀವು ಕ್ರಯಕ್ಕೆ ತೆಗೆದುಕೊಂಡ ಪ್ರತಿಯೊಬ್ಬ ಗುಲಾಮನು ಸುನ್ನತಿ ಮಾಡಿಸಿಕೊಂಡ ನಂತರ ಅದನ್ನು ತಿನ್ನಬಹುದು. 45 ಪರದೇಶದವರೂ, ಕೂಲಿಯವರೂ ಅದನ್ನು ತಿನ್ನಬಾರದು. 46 ಅವರವರ ಮನೆಯಲ್ಲಿಯೇ ಅದನ್ನು ಊಟಮಾಡಬೇಕು. ಅದರಲ್ಲಿ ಸ್ವಲ್ಪ ಮಾಂಸವನ್ನಾದರೂ ಮನೆಯಿಂದ ಹೊರಗೆ ತೆಗೆದುಕೊಂಡು ಹೋಗಬಾರದು. ಆ ಪಶುವಿನ ಒಂದು ಎಲುಬನ್ನಾದರೂ ಮುರಿಯಬಾರದು. 47 ಇಸ್ರಾಯೇಲರ ಸಮೂಹದವರೆಲ್ಲರೂ ಈ ಹಬ್ಬವನ್ನು ಆಚರಿಸಬೇಕು. 48 ನಿಮ್ಮ ಬಳಿಯಲ್ಲಿ ವಾಸವಾಗಿರುವ ಪರದೇಶದವನು ಯೆಹೋವನಿಗೆ ಈ ಪಸ್ಕಹಬ್ಬವನ್ನು ಆಚರಿಸಬೇಕೆಂದು ಅಪೇಕ್ಷಿಸಿದರೆ ಅವನೂ, ಅವನಿಗೆ ಸೇರಿರುವ ಗಂಡಸರೆಲ್ಲರೂ ಸುನ್ನತಿಮಾಡಿಸಿಕೊಳ್ಳಬೇಕು. ತರುವಾಯ ಅವನು ಈ ಹಬ್ಬವನ್ನು ಆಚರಿಸುವುದಕ್ಕೆ ಸಮೀಪ ಬರಲಿ. ಅಂಥವನು ಸ್ವದೇಶದವನಂತೆಯೇ ಇರುವನು. ಆದರೆ ಸುನ್ನತಿಮಾಡಿಸಿಕೊಳ್ಳದವನು ಆ ಭೋಜನವನ್ನು ತಿನ್ನಬಾರದು. 49 ಸ್ವದೇಶದವನಿಗೂ, ನಿಮ್ಮಲ್ಲಿ ವಾಸವಾಗಿರುವ ಪರದೇಶದವನಿಗೂ ಒಂದೇ ನಿಯಮವಿರಬೇಕು” ಎಂದನು. 50 ಯೆಹೋವನು ಮೋಶೆ ಮತ್ತು ಆರೋನರಿಗೆ ಆಜ್ಞಾಪಿಸಿದ ಪ್ರಕಾರ ಇಸ್ರಾಯೇಲರೆಲ್ಲರೂ ಮಾಡಿದರು. 51 ಅದೇ ದಿನದಲ್ಲಿ ಯೆಹೋವನು ಇಸ್ರಾಯೇಲರನ್ನು ಅವರವರ ಸೈನ್ಯಗಳ ಪ್ರಕಾರವಾಗಿ ಐಗುಪ್ತ ದೇಶದಿಂದ ಹೊರಗೆ ತಂದನು.