ತೀತನಿಗೆ 2 : 1 (OCVKN)
ಸುವಾರ್ತೆಗಾಗಿ ಒಳ್ಳೆಯದನ್ನು ಮಾಡುವುದು ನೀನಾದರೋ ಸ್ವಸ್ಥಬೋಧನೆಗೆ ಅನುಗುಣವಾಗಿ ಉಪದೇಶಿಸು.
ತೀತನಿಗೆ 2 : 2 (OCVKN)
ವೃದ್ಧರು ಆತ್ಮ ಸಂಯಮವುಳ್ಳವರೂ ಗೌರವಕ್ಕೆ ಯೋಗ್ಯರೂ ಸ್ವಯಂನಿಯಂತ್ರಿತರೂ ನಂಬಿಕೆ, ಪ್ರೀತಿ, ತಾಳ್ಮೆ ಇವುಗಳಲ್ಲಿ ಬದಲಾಗದವರೂ ಆಗಿರಬೇಕೆಂದು ಉಪದೇಶಿಸು.
ತೀತನಿಗೆ 2 : 3 (OCVKN)
ಅದೇ ಪ್ರಕಾರ, ವೃದ್ಧಸ್ತ್ರೀಯರು ನಡತೆಯಲ್ಲಿ ಭಕ್ತಿಗೆ ತಕ್ಕ ಹಾಗೆ ಇರುವವರಾಗಿರಬೇಕು. ಅವರು ಸುಳ್ಳಾಗಿ ದೂರುವವರೂ ಮದ್ಯಾಸಕ್ತರೂ ಆಗಿರದೆ, ಒಳ್ಳೆಯವುಗಳನ್ನು ಬೋಧಿಸುವವರಾಗಿರಬೇಕು ಎಂದು ಅವರಿಗೆ ಉಪದೇಶಿಸು.
ತೀತನಿಗೆ 2 : 4 (OCVKN)
ಇದಲ್ಲದೆ ದೇವರ ವಾಕ್ಯವು ದೂಷಣೆಯಾಗದಂತೆ ಯೌವನ ಸ್ತ್ರೀಯರು ತಮ್ಮ ಗಂಡಂದಿರನ್ನು ಮತ್ತು ಮಕ್ಕಳನ್ನು ಪ್ರೀತಿಸುವವರೂ
ತೀತನಿಗೆ 2 : 5 (OCVKN)
ಸ್ವಶಿಸ್ತನ್ನು ಹೊಂದಿದವರೂ ಪತಿವ್ರತೆಯರೂ ಮನೆಯಲ್ಲಿ ಕೆಲಸ ಮಾಡುವವರೂ ದಯೆವುಳ್ಳವರೂ ತಮ್ಮ ಗಂಡಂದಿರಿಗೆ ಅಧೀನರೂ ಆಗಿರಬೇಕೆಂದು ವೃದ್ಧಸ್ತ್ರೀಯರಿಂದ ಕಲಿತುಕೊಳ್ಳಿರಿ.
ತೀತನಿಗೆ 2 : 6 (OCVKN)
ಹಾಗೆಯೇ, ಯೌವನಸ್ಥರು ಆತ್ಮ ಸ್ವಶಿಸ್ತನ್ನು ಹೊಂದಿದವರಾಗಿರಬೇಕೆಂದು ಅವರನ್ನು ಪ್ರೋತ್ಸಾಹಿಸು.
ತೀತನಿಗೆ 2 : 7 (OCVKN)
ಎಲ್ಲಾ ವಿಷಯಗಳಲ್ಲಿ ನಿನ್ನನ್ನು ಸತ್ಕಾರ್ಯ ಮಾಡುವುದರಲ್ಲಿ ಆದರ್ಶವಾಗಿ ತೋರಿಸು. ಬೋಧನೆಯಲ್ಲಿ ಪ್ರಾಮಾಣಿಕತೆಯನ್ನೂ ಗಂಭೀರತೆಯನ್ನೂ
ತೀತನಿಗೆ 2 : 8 (OCVKN)
ನಿಂದೆಗೆ ಹೊರತಾದ ಸ್ವಸ್ಥ ಮಾತುಗಳನ್ನಾಡುವವನಾಗಿರು. ಇದರಿಂದ ವಿರೋಧಿಸುವವನು ನಿನ್ನ ವಿಷಯದಲ್ಲಿ ಕೆಟ್ಟದ್ದೇನೂ ಹೇಳುವುದಕ್ಕಾಗದೆ ನಾಚಿಕೆ ಪಡುವನು.
ತೀತನಿಗೆ 2 : 9 (OCVKN)
ಸೇವಕರು ತಮ್ಮ ಸ್ವಂತ ಯಜಮಾನರಿಗೆ ಅಧೀನರಾಗಿದ್ದು ಎಲ್ಲವುಗಳಲ್ಲಿ ಅವರನ್ನು ಮೆಚ್ಚಿಸುವವರಾಗಿ ಎದುರು ಮಾತನಾಡದೆ,
ತೀತನಿಗೆ 2 : 10 (OCVKN)
ಯಾವುದನ್ನೂ ಕದ್ದಿಟ್ಟುಕೊಳ್ಳದೆ, ನಮ್ಮ ರಕ್ಷಕರಾದ ದೇವರ ಉಪದೇಶವನ್ನು ಎಲ್ಲಾ ವಿಷಯಗಳಲ್ಲಿಯೂ ಅಲಂಕರಿಸುವಂತೆ, ಒಳ್ಳೆಯ ನಂಬಿಗಸ್ತರೆಂದು ಎಲ್ಲದರಲ್ಲಿಯೂ ತೋರಿಸಬೇಕೆಂದು ಅವರನ್ನು ಉಪದೇಶಿಸು.
ತೀತನಿಗೆ 2 : 11 (OCVKN)
ಏಕೆಂದರೆ ಎಲ್ಲಾ ಮನುಷ್ಯರಿಗೆ ರಕ್ಷಣೆಯನ್ನು ತರುವ ದೇವರ ಕೃಪೆಯೂ ಪ್ರತ್ಯಕ್ಷವಾಯಿತು.
ತೀತನಿಗೆ 2 : 12 (OCVKN)
ನಾವು ಭಕ್ತಿಹೀನತೆಯನ್ನೂ ಲೋಕದ ಆಶೆಗಳನ್ನೂ ತೊರೆದು, ಈಗಿನ ಲೋಕದಲ್ಲಿ ಸ್ವಶಿಸ್ತನ್ನು ಹೊಂದಿದವವರಾಗಿಯೂ ನೀತಿವಂತರಾಗಿಯೂ ಭಕ್ತಿಯುಳ್ಳವರಾಗಿಯೂ ಬದುಕಬೇಕೆಂತಲೂ ದೇವರ ಕೃಪೆಯು ನಮಗೆ ಬೋಧಿಸುತ್ತದೆ.
ತೀತನಿಗೆ 2 : 13 (OCVKN)
ನಮಗೆ ರಕ್ಷಕರೂ ಮಹಾ ದೇವರೂ ಆಗಿರುವ ಕ್ರಿಸ್ತ ಯೇಸುವಿನ ಭಾಗ್ಯಕರವಾದ ಮಹಿಮೆಯ ಪ್ರತ್ಯಕ್ಷತೆಯ ನಿರೀಕ್ಷೆಯನ್ನೂ ಎದುರು ನೋಡುತ್ತಿರಬೇಕೆಂದು ಕೃಪೆಯು ನಮಗೆ ಬೋಧಿಸುತ್ತದೆ.
ತೀತನಿಗೆ 2 : 14 (OCVKN)
ಕ್ರಿಸ್ತ ಯೇಸು ನಮ್ಮನ್ನು ಎಲ್ಲಾ ದುಷ್ಟತನದಿಂದ ವಿಮೋಚಿಸಿ ಸತ್ಕ್ರಿಯೆಗಳಲ್ಲಿ ಆಸಕ್ತರಾದ ಸ್ವಂತ ಜನರನ್ನು ತಮಗಾಗಿ ಪರಿಶುದ್ಧ ಮಾಡುವಂತೆ ನಮಗೋಸ್ಕರ ತಮ್ಮನ್ನು ತಾವೇ ಒಪ್ಪಿಸಿಕೊಟ್ಟರು.
ತೀತನಿಗೆ 2 : 15 (OCVKN)
ಈ ಕಾರ್ಯಗಳ ವಿಷಯದಲ್ಲಿ, ನೀನು ಉಪದೇಶಿಸುತ್ತಾ ಇರು. ಪ್ರೋತ್ಸಾಹಮಾಡುತ್ತಾ ಪೂರ್ಣ ಅಧಿಕಾರದಿಂದ ಖಂಡಿಸುತ್ತಾ ಇರು. ಯಾರೂ ನಿನ್ನನ್ನು ತಿರಸ್ಕರಿಸದಿರಲಿ.

1 2 3 4 5 6 7 8 9 10 11 12 13 14 15