ತೀತನಿಗೆ 1 : 1 (OCVKN)
ದೇವರು ಆಯ್ದುಕೊಂಡವರ ನಂಬಿಕೆಗನುಸಾರವೂ ಭಕ್ತಿಗನುಸಾರವಾದ ಸತ್ಯದ ತಿಳುವಳಿಕೆಗನುಸಾರವೂ ದೇವರ ಸೇವಕನೂ ಕ್ರಿಸ್ತ ಯೇಸುವಿನ ಅಪೊಸ್ತಲನೂ ಆಗಿರುವ ಪೌಲನೆಂಬ ನನಗೆ
ತೀತನಿಗೆ 1 : 2 (OCVKN)
ಸುಳ್ಳಾಡದ ದೇವರು, ಕಾಲಾರಂಭಕ್ಕೆ ಮುಂಚೆಯೇ ನಿತ್ಯಜೀವದ ನಿರೀಕ್ಷೆಯನ್ನು ವಾಗ್ದಾನಮಾಡಿದ್ದಾರೆ.
ತೀತನಿಗೆ 1 : 3 (OCVKN)
ತಮ್ಮ ವಾಕ್ಯ ಸಾರುವುದರ ಮೂಲಕ ತಕ್ಕ ಕಾಲದಲ್ಲಿ ಪ್ರಕಟಿಸಿ ನಮ್ಮ ರಕ್ಷಕರಾದ ದೇವರ ಆಜ್ಞೆಗನುಸಾರವಾಗಿ ನನಗೆ ಒಪ್ಪಿಸಿದರು.
ತೀತನಿಗೆ 1 : 4 (OCVKN)
ನಮ್ಮಲ್ಲಿ ಹುದುವಾಗಿರುವ ವಿಶ್ವಾಸಕ್ಕೆ ಅನುಸಾರವಾಗಿ ನನ್ನ ನಿಜಕುಮಾರನಾದ ತೀತನಿಗೆ ಬರೆಯುವುದು: ತಂದೆಯಾದ ದೇವರಿಂದಲೂ ನಮಗೆ ರಕ್ಷಕ ಹಾಗೂ ಕರ್ತ ಆಗಿರುವ ಕ್ರಿಸ್ತ ಯೇಸುವಿನಿಂದಲೂ ಕೃಪೆಯೂ ಕರುಣೆಯೂ ಶಾಂತಿಯೂ ಆಗಲಿ.
ತೀತನಿಗೆ 1 : 5 (OCVKN)
ಸಭಾಹಿರಿಯರ ಆಯ್ಕೆ ಕ್ರೇತದ್ವೀಪದಲ್ಲಿ ಪೂರ್ಣಗೊಳಿಸದ ಕಾರ್ಯಗಳನ್ನು ನೀನು ಕ್ರಮಪಡಿಸಿ ನಾನು ನಿನಗೆ ಆಜ್ಞಾಪಿಸಿದ ಪ್ರಕಾರ ಪ್ರತಿಯೊಂದು ಪಟ್ಟಣದಲ್ಲಿ ಹಿರಿಯರನ್ನು ನೇಮಿಸಬೇಕೆಂದು ನಿನ್ನನ್ನು ಅಲ್ಲೇ ಬಿಟ್ಟು ಬಂದೆನು.
ತೀತನಿಗೆ 1 : 6 (OCVKN)
ಸಭೆಯ ಹಿರಿಯನು, ನಿಂದಾರಹಿತನೂ ಪತ್ನಿಗೆ ನಂಬಿಗಸ್ತನೂ ಆಗಿರಬೇಕು. ಅವನ ಮಕ್ಕಳು ವಿಶ್ವಾಸಿಗಳಾಗಿರಬೇಕು. ಅವರು ದುರ್ಮಾಗಿಗಳು ಇಲ್ಲವೆ ತಿರುಗಿ ಬೀಳುವವರೂ ಎಂಬ ಆರೋಪವನ್ನು ಹೊಂದಿರಬಾರದು.
ತೀತನಿಗೆ 1 : 7 (OCVKN)
ಏಕೆಂದರೆ ಸಭಾಧ್ಯಕ್ಷನು ದೇವರ ಕಾರ್ಯಭಾರವನ್ನು ಉಳ್ಳವನಾಗಿರುವುದರಿಂದ ನಿಂದಾರಹಿತನಾಗಿರಬೇಕು; ಅವನು ಗರ್ವಿಷ್ಠನೂ ಮುಂಗೋಪಿಯೂ ಮದ್ಯಪಾನ ಮಾಡುವವನೂ ಹೊಡೆದಾಡುವವನೂ ನೀಚಲಾಭವನ್ನು ಆಶಿಸುವವನೂ ಆಗಿರಬಾರದು.
ತೀತನಿಗೆ 1 : 8 (OCVKN)
ಆದರೆ, ಅವನು ಅತಿಥಿ ಸತ್ಕಾರ ಮಾಡುವವನೂ ಒಳ್ಳೆಯದನ್ನು ಪ್ರೀತಿಸುವವನೂ ಸ್ವಯಂನಿಯಂತ್ರವುಳ್ಳವನೂ ನ್ಯಾಯವಂತನೂ ಪರಿಶುದ್ಧನೂ ಶಿಸ್ತುಳ್ಳವನಾಗಿರಬೇಕು.
ತೀತನಿಗೆ 1 : 9 (OCVKN)
ಇತರರನ್ನು ಸ್ವಸ್ಥಬೋಧನೆಯಿಂದ ಪ್ರೋತ್ಸಾಹಿಸುವುದಕ್ಕೂ ಎದುರಿಸುವವರನ್ನು ಖಂಡಿಸುವಂತೆ ಮಾತನಾಡುವುದಕ್ಕೂ ಶಕ್ತನಾಗಿರಲು ಅವನು ಬೋಧಿಸಿದ ಪ್ರಕಾರ ನಂಬತಕ್ಕ ವಾಕ್ಯವನ್ನು ದೃಢವಾಗಿ ಹಿಡಿದುಕೊಂಡವನಾಗಿರಬೇಕು.
ತೀತನಿಗೆ 1 : 10 (OCVKN)
ಒಳಿತು ಮಾಡದವರನ್ನು ಗದರಿಸುವುದು ಏಕೆಂದರೆ, ಅನೇಕ ದಂಗೆಕೋರ ಜನರೂ ಬರೀ ಮಾತನಾಡುವವರೂ ಮೋಸಗೊಳಿಸುವವರೂ ಮುಖ್ಯವಾಗಿ ಸುನ್ನತಿಯಾಗಬೇಕೆಂದು ಹೇಳುವ ಗುಂಪಿನವರೂ ಇದ್ದಾರೆ.
ತೀತನಿಗೆ 1 : 11 (OCVKN)
ಅವರು ನೀಚಲಾಭವನ್ನು ಹೊಂದುವುದಕ್ಕಾಗಿ ಮಾಡಬಾರದ ಬೋಧನೆಯನ್ನು ಮಾಡಿ ಇಡೀ ಕುಟುಂಬಗಳನ್ನೇ ಹಾಳು ಮಾಡುತ್ತಿದ್ದಾರೆ. ಆದ್ದರಿಂದ ಅವರ ಬಾಯಿಗಳನ್ನು ಮುಚ್ಚಿಸಬೇಕಾಗಿದೆ.
ತೀತನಿಗೆ 1 : 12 (OCVKN)
“ಕ್ರೇತದವರು ಯಾವಾಗಲೂ ಸುಳ್ಳುಗಾರರೂ ದುಷ್ಟಮೃಗಗಳಂಥವರೂ ಸೋಮಾರಿಗಳಾದ ಹೊಟ್ಟೆಬಾಕರೂ ಆಗಿದ್ದಾರೆ!” ಎಂದು ಅವರ ಸ್ವಂತ ಪ್ರವಾದಿಗಳಲ್ಲಿ ಒಬ್ಬನು ಹೇಳಿದನು.
ತೀತನಿಗೆ 1 : 13 (OCVKN)
ಈ ಸಾಕ್ಷಿಯು ನಿಜವೇ. ಇದರ ದೆಸೆಯಿಂದ ಅವರು ನಂಬಿಕೆಯಲ್ಲಿ ಸ್ವಸ್ಥರಾಗಿರುವಂತೆ ಅವರನ್ನು ಕಠಿಣವಾಗಿ ಖಂಡಿಸು.
ತೀತನಿಗೆ 1 : 14 (OCVKN)
ಅವರು ಯೆಹೂದ್ಯರ ಕಟ್ಟುಕಥೆಗಳಿಗೂ ಸತ್ಯದಿಂದ ದೂರಮಾಡುವ ಮಾನವರ ಆಜ್ಞೆಗಳಿಗೂ ಲಕ್ಷ್ಯಕೊಡಬಾರದು.
ತೀತನಿಗೆ 1 : 15 (OCVKN)
ಶುದ್ಧರಿಗೆ ಎಲ್ಲವೂ ಶುದ್ಧವೇ. ಆದರೆ ಮಲಿನವಾದವರಿಗೂ ಅವಿಶ್ವಾಸಿಗಳಿಗೂ ಯಾವುದೂ ಶುದ್ಧವಲ್ಲ. ಅವರ ಬುದ್ಧಿಯೂ ಮನಸ್ಸಾಕ್ಷಿಯೂ ಮಲಿನವಾಗಿವೆ.
ತೀತನಿಗೆ 1 : 16 (OCVKN)
ತಾವು ದೇವರನ್ನು ತಿಳಿದವರೆಂದು ಅವರು ವಾದಿಸುತ್ತಾರೆ. ಆದರೆ ತಮ್ಮ ಕೃತ್ಯಗಳಿಂದ ದೇವರನ್ನೇ ಅಲ್ಲಗಳೆಯುವರಾಗಿದ್ದಾರೆ. ಅವರು ಅಸಹ್ಯರೂ ಅವಿಧೇಯರೂ ಯಾವ ಸತ್ಕಾರ್ಯಗಳನ್ನು ಮಾಡುವುದಕ್ಕೆ ಅಯೋಗ್ಯರಾಗಿದ್ದಾರೆ.

1 2 3 4 5 6 7 8 9 10 11 12 13 14 15 16