ರೋಮಾಪುರದವರಿಗೆ 7 : 1 (OCVKN)
ಕ್ರಿಸ್ತ ಯೇಸುವಿನವರು ನಿಯಮಕ್ಕೆ ಅಧೀನರಲ್ಲ ಪ್ರಿಯರೇ, ನಿಯಮವನ್ನು ತಿಳಿದವರಿಗೆ ನಾನು ಹೇಳುವುದೇನೆಂದರೆ, ಒಬ್ಬ ಮನುಷ್ಯನು ಜೀವದಿಂದಿರುವ ತನಕ ಮಾತ್ರ ನಿಯಮಕ್ಕೆ ಅವನ ಮೇಲೆ ಅಧಿಕಾರ ಇರುತ್ತದೆಂದು ನೀವು ಬಲ್ಲಿರಿ.
ರೋಮಾಪುರದವರಿಗೆ 7 : 2 (OCVKN)
ಒಬ್ಬ ಮದುವೆಯಾದ ಹೆಣ್ಣು ಮಗಳು ಕಾನೂನಿಗನುಸಾರವಾಗಿ ಅವಳ ಪತಿಯು ಜೀವದಿಂದಿರುವ ತನಕ ಮಾತ್ರ ಅವನಿಗೆ ಬದ್ಧಳಾಗಿರುತ್ತಾಳೆ. ಆದರೆ ಪತಿಯು ಸತ್ತರೆ ಆಕೆಯು ಮದುವೆಯ ಕಾನೂನಿನಿಂದ ಬಿಡುಗಡೆ ಹೊಂದಿದವಳಾಗಿರುತ್ತಾಳೆ.
ರೋಮಾಪುರದವರಿಗೆ 7 : 3 (OCVKN)
ಹೀಗಿರುವಾಗ, ಅವಳ ಪತಿಯು ಜೀವಂತನಾಗಿರುವಾಗ ಆಕೆಯು ಇನ್ನೊಬ್ಬನನ್ನು ಮದುವೆಯಾದರೆ ವ್ಯಭಿಚಾರಿಣಿ ಎಂದು ಎನಿಸಿಕೊಳ್ಳುವಳು. ಆದರೆ ಪತಿಯು ಸತ್ತರೆ, ಆಕೆಯು ಬೇರೊಬ್ಬನನ್ನು ಮದುವೆಯಾದರೂ ಆ ಕಾನೂನಿನಿಂದ ಅವಳು ಬಿಡುಗಡೆ ಆಗಿರಲಾಗಿ ವ್ಯಭಿಚಾರಿಣಿ ಎಂದು ಎನಿಸಿಕೊಳ್ಳುವುದಿಲ್ಲ.
ರೋಮಾಪುರದವರಿಗೆ 7 : 4 (OCVKN)
ಆದ್ದರಿಂದ, ನನ್ನ ಪ್ರಿಯರೇ, ನೀವು ದೇವರಿಗೆ ಫಲಕೊಡುವವರಾಗಬೇಕೆಂದು ಸತ್ತವರೊಳಗಿಂದ ಎದ್ದುಬಂದಾತನಿಗೆ ಸೇರಿದವರಾಗಲು ಕ್ರಿಸ್ತ ಯೇಸುವಿನ ದೇಹದ ಮೂಲಕ ನಿಯಮದ ಪಾಲಿಗೆ ಸತ್ತಿರಿ.
ರೋಮಾಪುರದವರಿಗೆ 7 : 5 (OCVKN)
ಮಾಂಸಭಾವಕ್ಕನುಸಾರವಾಗಿ ನಾವು ಜೀವಿಸುತ್ತಿದ್ದಾಗ, ನಿಯಮದಿಂದ ಉತ್ತೇಜನಗೊಂಡ ಪಾಪದ ದುರಾಶೆಗಳು ನಮ್ಮ ದೇಹದಲ್ಲಿ ಕಾರ್ಯ ನಡೆಸುತ್ತಿದ್ದವು. ಆದ್ದರಿಂದ ನಾವು ಮರಣಕ್ಕೆ ಫಲಗಳನ್ನು ಹುಟ್ಟಿಸುತ್ತಿದ್ದೆವು.
ರೋಮಾಪುರದವರಿಗೆ 7 : 6 (OCVKN)
ಈಗಲಾದರೋ ಒಂದು ಕಾಲದಲ್ಲಿ ನಮ್ಮನ್ನು ಯಾವುದು ಬಂಧನದಲ್ಲಿರಿಸಿತ್ತೋ ಅದಕ್ಕೆ ಸತ್ತವರಾಗಿದ್ದು ನಿಯಮದಿಂದ ಬಿಡುಗಡೆ ಹೊಂದಿದವರಾಗಿರುತ್ತೇವೆ. ಹೀಗೆ ನಾವು ಲಿಖಿತವಾದ ಹಳೆಯ ನಿಯಮದಂತೆ ನಡೆಯದೆ ಆತ್ಮದಿಂದ ನವಜೀವನದಲ್ಲಿ ನಡೆಯುವರಾಗಿದ್ದೇವೆ.
ರೋಮಾಪುರದವರಿಗೆ 7 : 7 (OCVKN)
ನಿಯಮವೂ ಪಾಪವೂ ಹಾಗಾದರೆ ನಾವು ಏನು ಹೇಳೋಣ? ನಿಯಮವೇ ಪಾಪವಾಗಿದೆಯೋ? ಎಂದಿಗೂ ಇಲ್ಲ. ಆದರೂ ನಿಯಮವನ್ನು ಬಿಟ್ಟು ಬೇರಾವುದರ ಮೂಲಕವೂ ಪಾಪವೆಂದರೆ ಏನೆಂದು ನನಗೆ ತಿಳಿದುಕೊಳ್ಳಲು ಸಾಧ್ಯವಿರಲಿಲ್ಲ. ನಿಯಮವು, “ದುರಾಶೆ ಪಡಬೇಡ,”* ವಿಮೋ 20:17; ಧರ್ಮೋ 5:21 ಎಂದು ಹೇಳದೆ ಇರುತ್ತಿದ್ದರೆ ದುರಾಶೆ ಎಂದರೆ ಏನೆಂದು ನಾನು ತಿಳಿಯಲು ಸಾಧ್ಯವಿರಲಿಲ್ಲ.
ರೋಮಾಪುರದವರಿಗೆ 7 : 8 (OCVKN)
ಆದರೆ ಪಾಪವು, ಆ ಆಜ್ಞೆಯಿಂದ ಅನುಕೂಲ ಹೊಂದಿ ನನ್ನಲ್ಲಿ ಎಲ್ಲಾ ವಿಧದ ಆಶೆಗಳನ್ನು ಉಂಟುಮಾಡಿತು. ಏಕೆಂದರೆ ನಿಯಮವಿಲ್ಲದೆ ಪಾಪವು ಸತ್ತದ್ದಾಗಿರುತ್ತದೆ.
ರೋಮಾಪುರದವರಿಗೆ 7 : 9 (OCVKN)
ಒಮ್ಮೆ ನಾನು ನಿಯಮವಿಲ್ಲದೆ ಜೀವಿಸುತ್ತಿದ್ದೆನು. ಆದರೆ ಯಾವಾಗ ಆಜ್ಞೆಯು ಬಂದಿತೋ ಆಗ ಪಾಪವು ಜೀವಂತವಾಯಿತು, ನಾನು ಸತ್ತವನಾದೆನು.
ರೋಮಾಪುರದವರಿಗೆ 7 : 10 (OCVKN)
ಜೀವವನ್ನು ತರಲಿಕ್ಕಾಗಿ ಕೊಟ್ಟಿರುವ ಆಜ್ಞೆಯೇ ಮರಣವನ್ನು ಉಂಟುಮಾಡುವುದಾಯಿತು ಎಂದು ಕಂಡುಕೊಂಡೆನು.
ರೋಮಾಪುರದವರಿಗೆ 7 : 11 (OCVKN)
ಪಾಪವು ಆಜ್ಞೆಯಿಂದ ಅನುಕೂಲ ಹೊಂದಿ ನನ್ನನ್ನು ವಂಚಿಸಿ, ಅದೇ ನನ್ನನ್ನು ಮರಣಕ್ಕೆ ಒಳಪಡಿಸಿತು.
ರೋಮಾಪುರದವರಿಗೆ 7 : 12 (OCVKN)
ಹೀಗಿರಲಾಗಿ, ನಿಯಮವು ಪವಿತ್ರವಾದದ್ದು. ಆಜ್ಞೆಯು ಪವಿತ್ರವೂ ನ್ಯಾಯವೂ ಒಳ್ಳೆಯದೂ ಆಗಿರುತ್ತದೆ.
ರೋಮಾಪುರದವರಿಗೆ 7 : 13 (OCVKN)
ರೋಮಾಪುರದವರಿಗೆ 7 : 14 (OCVKN)
ಹಾಗಾದರೆ ಒಳ್ಳೆಯದಾಗಿರುವ ನಿಯಮವೇ ನನಗೆ ಮರಣಕ್ಕೆ ಕಾರಣವಾಯಿತೋ? ಎಂದಿಗೂ ಇಲ್ಲ! ಆದರೂ ಪಾಪವು ಪಾಪವೇ ಎಂದು ಕಾಣುವಂತೆ ಒಳ್ಳೆಯದಾಗಿರುವ ನಿಯಮದ ಮೂಲಕವೇ ಪಾಪವು ನನ್ನಲ್ಲಿ ಮರಣವು ಉಂಟಾಗುವಂತೆ ಮಾಡಿತು. ಈ ರೀತಿಯಾಗಿ ಆಜ್ಞೆಯ ಮೂಲಕ ಪಾಪವು ಘೋರವಾದದ್ದೇ ಎಂದು ಕಂಡುಬರಲು ಸಾಧ್ಯವಾಯಿತು. ನಿಯಮವು ಆತ್ಮಿಕವಾದದ್ದೆಂದು ಬಲ್ಲೆವು. ಆದರೆ ನರಮಾನವನಾದ ನಾನು ಪಾಪಕ್ಕೆ ಗುಲಾಮನಂತೆ ಮಾರಿಕೊಂಡವನಾಗಿದ್ದೇನೆ.
ರೋಮಾಪುರದವರಿಗೆ 7 : 15 (OCVKN)
ನಾನು ಏನು ಮಾಡುತ್ತೇನೆ ಎಂಬುದನ್ನು ತಿಳಿಯದವನಾಗಿದ್ದೇನೆ. ಏಕೆಂದರೆ ನಾನು ಮಾಡಬೇಕೆಂದು ಬಯಸುವುದನ್ನು ಮಾಡದೆ, ಯಾವುದನ್ನು ದ್ವೇಷಿಸುತ್ತೇನೋ ಅದನ್ನೇ ಮಾಡುವವನಾಗಿದ್ದೇನೆ.
ರೋಮಾಪುರದವರಿಗೆ 7 : 16 (OCVKN)
ನಾನು ಮಾಡಲು ಬಯಸದಿರುವುದನ್ನು ಮಾಡುವುದಾದರೆ, ನಿಯಮವು ಒಳ್ಳೆಯದೆಂದು ಒಪ್ಪುತ್ತೇನೆ.
ರೋಮಾಪುರದವರಿಗೆ 7 : 17 (OCVKN)
ಹೀಗಿರಲಾಗಿ ನಾನು ಬಯಸದಿರುವುದನ್ನು ಮಾಡುವವನು ಇನ್ನು ನಾನಲ್ಲ, ನನ್ನಲ್ಲಿ ನೆಲೆಸಿರುವ ಪಾಪವೇ ಅದನ್ನು ಮಾಡುತ್ತದೆ.
ರೋಮಾಪುರದವರಿಗೆ 7 : 18 (OCVKN)
ನನ್ನಲ್ಲಿ, ಅಂದರೆ ನನ್ನ ಶಾರೀರಿಕ ಸ್ವಭಾವದಲ್ಲಿ ಒಳ್ಳೆಯದೇನೂ ವಾಸವಾಗಿಲ್ಲ ಎಂದು ಬಲ್ಲೆನು. ಏಕೆಂದರೆ ಒಳ್ಳೆಯದನ್ನು ಮಾಡಬೇಕೆಂಬ ಮನಸ್ಸೇನೋ ನನ್ನಲ್ಲಿ ಇದೆ, ಆದರೆ ಅದನ್ನು ಮಾಡುವುದಕ್ಕೆ ನನ್ನಿಂದಾಗದು.
ರೋಮಾಪುರದವರಿಗೆ 7 : 19 (OCVKN)
ನಾನು ಬಯಸುವ ಒಳ್ಳೆಯದನ್ನು ಮಾಡದೆ, ನಾನು ಮಾಡಲು ಬಯಸದೆ ಇರುವ ಕೆಟ್ಟದ್ದನ್ನೇ ಮಾಡುತ್ತಿದ್ದೇನೆ.
ರೋಮಾಪುರದವರಿಗೆ 7 : 20 (OCVKN)
ಮಾಡಬಾರದೆನ್ನುವ ಕೆಲಸವನ್ನು ನಾನು ಮಾಡುತ್ತಿರುವುದಾದರೆ ಅದನ್ನು ಮಾಡಿದವನು ನಾನಲ್ಲ. ನನ್ನಲ್ಲಿ ನೆಲೆಗೊಂಡಿರುವ ಪಾಪವೇ ಅದನ್ನು ಮಾಡುತ್ತಿದೆ.
ರೋಮಾಪುರದವರಿಗೆ 7 : 21 (OCVKN)
ಒಳ್ಳೆಯದನ್ನು ಮಾಡಲು ಬಯಸುತ್ತಿರುವ ನನ್ನಲ್ಲಿ ಕೆಟ್ಟದ್ದು ಇರುವ ನಿಯಮವನ್ನು ಕಾಣುತ್ತಿದ್ದೇನೆ.
ರೋಮಾಪುರದವರಿಗೆ 7 : 22 (OCVKN)
ಏಕೆಂದರೆ ನಾನು ಹೃದಯಪೂರ್ವಕವಾಗಿ ದೇವರ ನಿಯಮದಲ್ಲಿ ಹರ್ಷಗೊಳ್ಳುವವನಾಗಿದ್ದೇನೆ.
ರೋಮಾಪುರದವರಿಗೆ 7 : 23 (OCVKN)
ಆದರೆ ನನ್ನ ಅವಯವಗಳಲ್ಲಿ ಬೇರೊಂದು ನಿಯಮವನ್ನು ಕಾಣುತ್ತಿದ್ದೇನೆ. ಅದು ನನ್ನ ಮನಸ್ಸಿನಲ್ಲಿರುವ ನಿಯಮಕ್ಕೆ ವಿರೋಧವಾಗಿ ಹೋರಾಡುತ್ತಾ ನನ್ನ ಅವಯವಗಳಲ್ಲಿ ಸೇರಿಕೊಂಡಿರುವ ಪಾಪದ ನಿಯಮಕ್ಕೆ ಸೆರೆಯವನನ್ನಾಗಿ ಮಾಡುತ್ತಿದೆ.
ರೋಮಾಪುರದವರಿಗೆ 7 : 24 (OCVKN)
ನಾನು ಎಂಥಾ ದುರವಸ್ಥೆಯುಳ್ಳ ಮನುಷ್ಯನು! ನನ್ನನ್ನು ಈ ಮರಣಕರವಾದ ದೇಹದಿಂದ ಯಾರು ಬಿಡಿಸಬಲ್ಲರು?
ರೋಮಾಪುರದವರಿಗೆ 7 : 25 (OCVKN)
ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಮೂಲಕ ದೇವರಿಗೆ ಸ್ತೋತ್ರ! ಏಕೆಂದರೆ ನನ್ನಷ್ಟಕ್ಕೆ ನಾನೇ ನನ್ನ ಮನಸ್ಸಿನಲ್ಲಿ ದೇವರ ನಿಯಮಕ್ಕೆ ಗುಲಾಮನಾಗಿಯೂ ನನ್ನ ಮಾಂಸಭಾವದ ದೇಹದಲ್ಲಿ ಪಾಪದ ನಿಯಮಕ್ಕೆ ಗುಲಾಮನಾಗಿಯೂ ಇದ್ದೇನೆ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25