ರೋಮಾಪುರದವರಿಗೆ 2 : 1 (OCVKN)
ದೇವರ ನೀತಿಯ ತೀರ್ಪು ಆದ್ದರಿಂದ, ಯಾವ ಕಾರಣಕ್ಕಾಗಿ ನೀನು ಇತರರಿಗೆ ತೀರ್ಪು ಮಾಡುತ್ತಿರುವೆಯೋ ಅದನ್ನೇ ನೀನೂ ಮಾಡುತ್ತಿರುವುದರಿಂದ ನಿನ್ನನ್ನು ನೀನೇ ತೀರ್ಪು ಮಾಡಿಕೊಂಡ ಹಾಗಾಯಿತು. ಇತರರ ಮೇಲೆ ತೀರ್ಪುಮಾಡುವ ನಿನಗೆ ಹೇಳುವುದಕ್ಕೆ ನೆಪವಿಲ್ಲ.
ರೋಮಾಪುರದವರಿಗೆ 2 : 2 (OCVKN)
ಆದರೆ ಅಂಥಾ ಅಪರಾಧಗಳನ್ನು ಮಾಡುವವರ ವಿಷಯದಲ್ಲಿ ದೇವರು ಮಾಡುವ ತೀರ್ಪು ಸತ್ಯಕ್ಕನುಸಾರವಾಗಿಯೇ ಇರುವುದೆಂದು ನಾವು ಬಲ್ಲೆವು.
ರೋಮಾಪುರದವರಿಗೆ 2 : 3 (OCVKN)
ಮನುಷ್ಯನೇ, ಅಂಥವುಗಳನ್ನು ನಡೆಸುವವರ ಮೇಲೆ ತೀರ್ಪುಮಾಡುತ್ತಿರುವ ನೀನು ದೇವರ ತೀರ್ಪಿನಿಂದ ತಪ್ಪಿಸಿಕೊಂಡೇನೆಂದು ನೆನಸುತ್ತೀಯೋ?
ರೋಮಾಪುರದವರಿಗೆ 2 : 4 (OCVKN)
ದೇವರ ದಯೆ, ಐಶ್ವರ್ಯ, ಸಹನೆ ಮತ್ತು ದೀರ್ಘಶಾಂತಿ ಇವುಗಳನ್ನು ತಾತ್ಸಾರ ಮಾಡುತ್ತೀಯೋ? ದೇವರ ಒಳ್ಳೆಯತನವು ನಿನ್ನನ್ನು ಪಶ್ಚಾತ್ತಾಪಕ್ಕೆ ನಡೆಸುತ್ತದೆಂಬುದು ನಿನಗೆ ತಿಳಿಯದೋ?
ರೋಮಾಪುರದವರಿಗೆ 2 : 5 (OCVKN)
ನೀನು ನಿನ್ನ ಕಠಿಣವಾದ ಮತ್ತು ಪಶ್ಚಾತ್ತಾಪ ಪಡದ ಹೃದಯದಿಂದ, ನಿನಗೋಸ್ಕರ ದೇವರ ನೀತಿಯುಳ್ಳ ತೀರ್ಪು ಪ್ರಕಟವಾಗುವ ಕೋಪದ ದಿನಕ್ಕಾಗಿ ದೇವರ ಕೋಪವನ್ನು ಸಂಗ್ರಹಿಸಿಕೊಳ್ಳುತ್ತಿದ್ದಿ.
ರೋಮಾಪುರದವರಿಗೆ 2 : 6 (OCVKN)
ದೇವರು, “ಪ್ರತಿಯೊಬ್ಬನಿಗೂ ಅವನವನ ಕೃತ್ಯಗಳಿಗೆ ತಕ್ಕ ಪ್ರತಿಫಲ ಕೊಡುವರು.”* ಕೀರ್ತನೆ 62:12; ಜ್ಞಾನೋಕ್ತಿ 24:12
ರೋಮಾಪುರದವರಿಗೆ 2 : 7 (OCVKN)
ಯಾರು ಮಹಿಮೆ, ಮಾನ, ಅಮರತ್ವ ಸತ್ಕ್ರಿಯೆಗಳನ್ನು ಸಹನೆಯಿಂದ ಮಾಡುತ್ತಾರೋ ಅವರಿಗೆ ದೇವರು ನಿತ್ಯಜೀವವನ್ನು ಕೊಡುವರು.
ರೋಮಾಪುರದವರಿಗೆ 2 : 8 (OCVKN)
ಯಾರು ಸ್ವಾರ್ಥಿಗಳಾಗಿದ್ದು ಸತ್ಯವನ್ನು ಅನುಸರಿಸದೆ ಅನೀತಿಯನ್ನು ಅನುಸರಿಸುತ್ತಾರೋ ಅವರ ವಿರುದ್ಧ ದೇವರಿಗೆ ಕೋಪವೂ ಆಕ್ರೋಶವೂ ಬರುತ್ತವೆ.
ರೋಮಾಪುರದವರಿಗೆ 2 : 9 (OCVKN)
ಕೆಟ್ಟದ್ದನ್ನು ನಡೆಸುವ ಪ್ರತಿ ಮನುಷ್ಯನಿಗೆ ಕಷ್ಟವೂ ಸಂಕಟವೂ ಬರುತ್ತವೆ, ಯೆಹೂದ್ಯರಿಗೆ ಮೊದಲು, ಅನಂತರ ಯೆಹೂದ್ಯರಲ್ಲದವರಿಗೂ ಸಹ.
ರೋಮಾಪುರದವರಿಗೆ 2 : 10 (OCVKN)
ಆದರೆ ಒಳ್ಳೆಯದನ್ನು ನಡೆಸುವ ಪ್ರತಿಯೊಬ್ಬನಿಗೆ ಮಹಿಮೆಯೂ ಗೌರವವೂ ಸಮಾಧಾನವೂ ಉಂಟಾಗುತ್ತವೆ. ಯೆಹೂದ್ಯರಿಗೆ ಮೊದಲು, ಅನಂತರ ಯೆಹೂದ್ಯರಲ್ಲದವರಿಗೂ ಸಹ.
ರೋಮಾಪುರದವರಿಗೆ 2 : 11 (OCVKN)
ರೋಮಾಪುರದವರಿಗೆ 2 : 12 (OCVKN)
ನಿಯಮವಿಲ್ಲದವರಾಗಿ ಪಾಪಮಾಡಿದವರು ನಿಯಮವಿಲ್ಲದೆಯೇ ನಾಶಹೊಂದುವರು. ನಿಯಮಕ್ಕೆ ಅಧೀನರಾಗಿದ್ದು ಪಾಪಮಾಡಿದವರು ನಿಯಮದ ಮೂಲಕವಾಗಿ ತೀರ್ಪನ್ನು ಹೊಂದುವರು.
ರೋಮಾಪುರದವರಿಗೆ 2 : 13 (OCVKN)
ಯಾರೂ ನಿಯಮವನ್ನು ಕೇಳಿದ ಮಾತ್ರಕ್ಕೆ ದೇವರ ಮುಂದೆ ನೀತಿವಂತರಾಗುವುದಿಲ್ಲ. ಆದರೆ ನಿಯಮಕ್ಕೆ ವಿಧೇಯರಾಗುವವರೇ ನೀತಿವಂತರಾಗುವರು.
ರೋಮಾಪುರದವರಿಗೆ 2 : 14 (OCVKN)
ನಿಯಮವಿಲ್ಲದ ಯೆಹೂದ್ಯರಲ್ಲದವರು ಸ್ವಾಭಾವಿಕವಾಗಿ ನಿಯಮದಲ್ಲಿ ಹೇಳಿದಂತೆ ನಡೆಯುವಾಗ ಅವರಿಗೆ ನಿಯಮವಿಲ್ಲದಿದ್ದರೂ ಅವರ ಅಂತರಂಗವೇ ನಿಯಮವಾಗಿದೆ.
ರೋಮಾಪುರದವರಿಗೆ 2 : 15 (OCVKN)
ಅವರು ತಮ್ಮ ನಡತೆಯಿಂದಲೇ ನಿಯಮವು ತಮ್ಮ ಹೃದಯದಲ್ಲಿ ಬರೆದಿದೆ ಎಂಬುದನ್ನು ತೋರಿಸುತ್ತಾರೆ. ಇದಕ್ಕೆ ಅವರ ಮನಸ್ಸು ಸಾಕ್ಷಿಕೊಡುತ್ತದೆ. ಅವರ ಯೋಚನೆಗಳು ಒಂದಕ್ಕೊಂದು ಇದು ತಪ್ಪು ಅಥವಾ ತಪ್ಪಲ್ಲ ಎಂಬುದನ್ನು ಸೂಚಿಸುತ್ತವೆ.
ರೋಮಾಪುರದವರಿಗೆ 2 : 16 (OCVKN)
ನಾನು ಸಾರುವ ಸುವಾರ್ತೆಯ ಪ್ರಕಾರ ದೇವರು ಕ್ರಿಸ್ತ ಯೇಸುವಿನ ಮೂಲಕವಾಗಿ ಮನುಷ್ಯರ ಗುಟ್ಟುಗಳನ್ನು ವಿಚಾರಿಸುವ ದಿನದಲ್ಲಿ ಇವೆಲ್ಲಾ ಸಂಭವಿಸುವುದು.
ರೋಮಾಪುರದವರಿಗೆ 2 : 17 (OCVKN)
ಯೆಹೂದ್ಯರು ಮತ್ತು ಮೋಶೆಯ ನಿಯಮ ಆದರೆ, ನೀನು ಯೆಹೂದ್ಯನೆನಿಸಿಕೊಂಡವನೂ ನಿಯಮದಲ್ಲಿ ಭರವಸೆಯಿಟ್ಟವನೂ ದೇವರಿಗೆ ಸೇರಿದವನೂ
ರೋಮಾಪುರದವರಿಗೆ 2 : 18 (OCVKN)
ದೇವರ ಚಿತ್ತವನ್ನು ಬಲ್ಲವನೂ ನಿಯಮದಿಂದ ಉಪದೇಶವನ್ನು ಹೊಂದಿ ಯಾವುದು ಉತ್ತಮವಾದದ್ದೆಂದು ಅನುಮೋದಿಸುವವನೂ ಆಗಿದ್ದೀ.
ರೋಮಾಪುರದವರಿಗೆ 2 : 19 (OCVKN)
ನಿನಗೆ ನಿಯಮದ ಜ್ಞಾನ ಮತ್ತು ಸತ್ಯವು ಇರುವುದರಿಂದ ನೀನು ಕುರುಡರಿಗೆ ಮಾರ್ಗದರ್ಶಿಯೂ ಕತ್ತಲೆಯಲ್ಲಿರುವವರಿಗೆ ಬೆಳಕೂ
ರೋಮಾಪುರದವರಿಗೆ 2 : 20 (OCVKN)
ತಿಳುವಳಿಕೆಯಿಲ್ಲದವರಿಗೆ ಶಿಕ್ಷಕನೂ ಬಾಲಕರಿಗೆ ಉಪಾಧ್ಯಾಯನೂ ಆಗಿದ್ದೀಯೆಂದು ಧೈರ್ಯವಾಗಿದ್ದೀಯಲ್ಲಾ?
ರೋಮಾಪುರದವರಿಗೆ 2 : 21 (OCVKN)
ಇತರರಿಗೆ ಉಪದೇಶಿಸುವ ನೀನು, ನಿನಗೆ ನೀನೇ ಉಪದೇಶ ಮಾಡಿಕೋ. ಕದಿಯಬಾರದೆಂದು ಸಾರುವ ನೀನು ಕದಿಯುತ್ತೀಯೋ?
ರೋಮಾಪುರದವರಿಗೆ 2 : 22 (OCVKN)
ವ್ಯಭಿಚಾರ ಮಾಡಬಾರದೆಂದು ಹೇಳುವ ನೀನು ವ್ಯಭಿಚಾರ ಮಾಡುತ್ತೀಯೋ? ವಿಗ್ರಹಗಳಲ್ಲಿ ಅಸಹ್ಯಪಡುವ ನೀನು ದೇವಾಲಯಗಳನ್ನು ದೋಚುತ್ತೀಯೋ?
ರೋಮಾಪುರದವರಿಗೆ 2 : 23 (OCVKN)
ನಿಯಮದ ಬಗ್ಗೆ ಹೆಚ್ಚಳ ಪಡುವ ನೀನು ನಿಯಮವನ್ನು ಮೀರಿ ನಡೆದು ದೇವರನ್ನು ಅವಮಾನ ಪಡಿಸುತ್ತೀಯೋ?
ರೋಮಾಪುರದವರಿಗೆ 2 : 24 (OCVKN)
ಪವಿತ್ರ ವೇದದಲ್ಲಿ ಬರೆದಿರುವಂತೆ, “ನಿಮ್ಮ ದೆಸೆಯಿಂದ ಯೆಹೂದ್ಯರಲ್ಲದವರಲ್ಲಿ ದೇವರ ನಾಮವು ದೂಷಣೆಗೆ ಗುರಿಯಾಗುತ್ತಿದೆ.”† ಯೆಶಾಯ 52:5; ಯೆಹೆ 36:20,22
ರೋಮಾಪುರದವರಿಗೆ 2 : 25 (OCVKN)
ನೀನು ನಿಯಮವನ್ನು ಕೈಕೊಳ್ಳುವವನಾದರೆ, ಸುನ್ನತಿ ಪ್ರಯೋಜನಕರವಾಗಿರುವುದು. ಆದರೆ ನೀನು ನಿಯಮವನ್ನು ಮೀರಿ ನಡೆಯುವವನಾದರೆ, ನಿನಗೆ ಸುನ್ನತಿಯಾಗಿದ್ದರೂ ಇಲ್ಲದಂತಾಗಿರುವುದು.
ರೋಮಾಪುರದವರಿಗೆ 2 : 26 (OCVKN)
ಸುನ್ನತಿಯಿಲ್ಲದವನು ನಿಯಮಗಳನ್ನು ಕೈಗೊಳ್ಳುವವರೆಗೆ ಸುನ್ನತಿಯಿಲ್ಲದವನಾಗಿದ್ದರೂ ಸುನ್ನತಿಯಿದ್ದವನಂತೆ ಎಣಿಸುವುದಿಲ್ಲವೇ?
ರೋಮಾಪುರದವರಿಗೆ 2 : 27 (OCVKN)
ಅವನು ಶಾರೀರಿಕವಾಗಿ ಸುನ್ನತಿಯಿಲ್ಲದವನಾಗಿದ್ದರೂ ನಿಯಮವನ್ನು ಅನುಸರಿಸುವುದರಿಂದ ಲಿಖಿತ ನಿಯಮವೂ ಸುನ್ನತಿಯೂ ಇದ್ದು ನಿಯಮವನ್ನು ಮೀರಿ ನಡೆಯುವ ನಿನ್ನನ್ನು ದೋಷಿಯೆಂದು ತೀರ್ಪು ಮಾಡುವನಲ್ಲವೇ?
ರೋಮಾಪುರದವರಿಗೆ 2 : 28 (OCVKN)
ಹೊರಗೆ ಮಾತ್ರ ಯೆಹೂದ್ಯನಾಗಿರುವವನು ಯೆಹೂದ್ಯನಲ್ಲ. ಹೊರಗೆ ಶರೀರದಲ್ಲಿ ಮಾತ್ರ ಮಾಡಿರುವ ಸುನ್ನತಿಯು ಸುನ್ನತಿಯಲ್ಲ.
ರೋಮಾಪುರದವರಿಗೆ 2 : 29 (OCVKN)
ಆದರೆ, ಆಂತರ್ಯದಲ್ಲಿ ಯೆಹೂದ್ಯನಾಗಿರುವವನೇ ಯೆಹೂದ್ಯನು. ಹಾಗೆಯೇ ಸುನ್ನತಿಯು ಆತ್ಮನಿಂದ ಹೃದಯದಲ್ಲಿ ಆಗುವಂಥದ್ದಾಗಿದೆ. ಇದು ಲಿಖಿತ ನಿಯಮದಿಂದ ಆಗುವಂಥದಲ್ಲ. ಅಂಥವನಿಗೆ ಮೆಚ್ಚುಗೆಯು ಮನುಷ್ಯರಿಂದ ಬರುವಂಥದಲ್ಲ, ದೇವರಿಂದಲೇ ಬರುವಂಥದ್ದಾಗಿದೆ.
❮
❯