ಪ್ರಕಟನೆ 17 : 1 (OCVKN)
ಮೃಗದ ಮೇಲಿನ ಸ್ತ್ರೀ ಏಳು ಬೋಗುಣಿಗಳನ್ನು ಹಿಡಿದಿದ್ದ ಏಳು ದೂತರಲ್ಲೊಬ್ಬನು ನನಗೆ, “ಬಾ, ಬಹಳ ನೀರುಗಳ ಮೇಲೆ ಕುಳಿತಿರುವ ಮಹಾಜಾರಸ್ತ್ರೀಗಾಗುವ ನ್ಯಾಯತೀರ್ಪನ್ನು ನಿನಗೆ ತೋರಿಸುತ್ತೇನೆ.
ಪ್ರಕಟನೆ 17 : 2 (OCVKN)
ಅವಳೊಂದಿಗೆ ಭೂರಾಜರು ಜಾರತ್ವ ಮಾಡಿದರು. ಭೂನಿವಾಸಿಗಳು ಆಕೆಯ ಜಾರತ್ವವೆಂಬ ದ್ರಾಕ್ಷಾರಸವನ್ನು ಕುಡಿದು ಮತ್ತರಾದರು,” ಎಂದು ಹೇಳಿದನು.
ಪ್ರಕಟನೆ 17 : 3 (OCVKN)
ಅನಂತರ ಅವನು ನನ್ನನ್ನು ಆತ್ಮನಲ್ಲಿ ಅರಣ್ಯಕ್ಕೆ ಒಯ್ದನು. ಅಲ್ಲಿ ಒಬ್ಬ ಸ್ತ್ರೀಯು, ಹತ್ತು ಕೊಂಬುಗಳೂ ಏಳು ತಲೆಗಳೂ ಇದ್ದು, ದೇವದೂಷಣೆಯ ಹೆಸರುಗಳಿಂದ ತುಂಬಿರುವ ಕಡುಗೆಂಪು ಬಣ್ಣದ ಮೃಗದ ಮೇಲೆ ಕುಳಿತಿರುವುದನ್ನು ಕಂಡೆನು.
ಪ್ರಕಟನೆ 17 : 4 (OCVKN)
ಆ ಸ್ತ್ರೀಯು ನೇರಳೆ ಮತ್ತು ಕಡುಗೆಂಪು ಬಣ್ಣದ ವಸ್ತ್ರಗಳನ್ನು ಧರಿಸಿಕೊಂಡು ಚಿನ್ನ, ಅಮೂಲ್ಯವಾದ ಹರಳು, ಮುತ್ತುಗಳಿಂದ ಅಲಂಕರಿಸಿಕೊಂಡಿದ್ದಳು. ಆಕೆಯು ತನ್ನ ಕೈಯಲ್ಲಿ ಅಸಹ್ಯವಾದ ವಸ್ತುಗಳಿಂದಲೂ ಮತ್ತು ತನ್ನ ಅಶುದ್ಧ ಅನೈತಿಕತೆಯಿಂದಲೂ ತುಂಬಿದ ಚಿನ್ನದ ಬಟ್ಟಲನ್ನು ಹಿಡಿದುಕೊಂಡಿದ್ದಳು.
ಪ್ರಕಟನೆ 17 : 5 (OCVKN)
ಆಕೆಯ ಹಣೆಯ ಮೇಲೆ: <*>“ಮಹಾ ಬಾಬಿಲೋನ್,* <*>ಜಾರ ಸ್ತ್ರೀಯರಿಗೂ* <*>ಭೂಮಿಯ ಎಲ್ಲಾ ಅಸಹ್ಯವಾದವುಗಳಿಗೂ ತಾಯಿ!”* ಎಂದು ನಿಗೂಢ ಹೆಸರು ಬರೆದಿತ್ತು.
ಪ್ರಕಟನೆ 17 : 6 (OCVKN)
ಆ ಸ್ತ್ರೀಯು ಪರಿಶುದ್ಧರ ರಕ್ತವನ್ನೂ ಮತ್ತು ಯೇಸುವಿನ ಸಾಕ್ಷಿಗಳಾಗಿದ್ದವರ ರಕ್ತವನ್ನೂ ಕುಡಿದಿರುವುದನ್ನು ನಾನು ಕಂಡೆನು. ಆಕೆಯನ್ನು ನಾನು ಕಂಡಾಗ, ಬಹು ಆಶ್ಚರ್ಯಗೊಂಡೆನು.
ಪ್ರಕಟನೆ 17 : 7 (OCVKN)
ಆಗ ದೂತನು ನನಗೆ: “ನೀನೇಕೆ ಆಶ್ಚರ್ಯಪಟ್ಟೆ? ನಾನು ನಿನಗೆ ಆ ಸ್ತ್ರೀಯ ವಿಷಯವಾಗಿಯೂ ಅವಳು ಹೊತ್ತುಕೊಂಡಿದ್ದ ಏಳು ತಲೆಗಳೂ ಹತ್ತು ಕೊಂಬುಗಳೂ ಇದ್ದ ಮೃಗದ ವಿಷಯವಾಗಿಯೂ ಇರುವ ಗೂಡಾರ್ಥವನ್ನು ನಿನಗೆ ತಿಳಿಸುವೆನು.
ಪ್ರಕಟನೆ 17 : 8 (OCVKN)
ನೀನು ಕಂಡ ಮೃಗವು ಒಮ್ಮೆ ಇತ್ತು, ಈಗ ಇಲ್ಲ, ಪಾತಾಳದೊಳಗಿನಿಂದ ಮೇಲೆ ಬಂದು ವಿನಾಶಕ್ಕೆ ಹೊರಡಲಿದೆ. ಲೋಕದ ಸೃಷ್ಟಿಯಾದ ದಿನದಿಂದ ಯಾರ ಯಾರ ಹೆಸರುಗಳು ಜೀವಗ್ರಂಥದಲ್ಲಿ ಬರೆದಿರುವುದಿಲ್ಲವೋ, ಆ ಭೂನಿವಾಸಿಗಳು ಮೃಗವನ್ನು ನೋಡಿ ಆ ಮೃಗವು ಹಿಂದೆ ಇತ್ತು, ಈಗ ಇಲ್ಲ, ಇನ್ನು ಮೇಲೆ ಬರಲಿದೆ ಎಂದು ಆಶ್ಚರ್ಯಗೊಳ್ಳುವರು.
ಪ್ರಕಟನೆ 17 : 9 (OCVKN)
“ಆ ಏಳು ತಲೆಗಳು, ಆ ಸ್ತ್ರೀ ಕುಳಿತುಕೊಂಡಿರುವ ಏಳು ಬೆಟ್ಟಗಳಾಗಿವೆ. ಅವು ಏಳು ರಾಜರುಗಳಾಗಿರುತ್ತವೆ.
ಪ್ರಕಟನೆ 17 : 10 (OCVKN)
ಅವರಲ್ಲಿ ಐದು ರಾಜರು ಬಿದ್ದಿದ್ದಾರೆ; ಒಬ್ಬನು ಇದ್ದಾನೆ, ಇನ್ನೊಬ್ಬನು ಇನ್ನೂ ಬಂದಿಲ್ಲ. ಅವನು ಬಂದಾಗ ಸ್ವಲ್ಪಕಾಲ ಇರಬೇಕಾಗುತ್ತದೆ.
ಪ್ರಕಟನೆ 17 : 11 (OCVKN)
ಹಿಂದೆ ಇದ್ದು ಈಗ ಇಲ್ಲದ ಆ ಮೃಗವು ಎಂಟನೆಯವನು. ಅವನು ಆ ಏಳು ಜನರಲ್ಲಿ ಸೇರಿದವನಾಗಿದ್ದು, ವಿನಾಶಕ್ಕೆ ಹೋಗುತ್ತಿದ್ದಾನೆ.
ಪ್ರಕಟನೆ 17 : 12 (OCVKN)
“ನೀನು ಕಂಡ ಆ ಹತ್ತು ಕೊಂಬುಗಳು ಇನ್ನೂ ರಾಜ್ಯವನ್ನು ಹೊಂದದಿರುವ ಹತ್ತು ರಾಜರುಗಳಾಗಿದ್ದಾರೆ. ಆದರೆ ಅವು ರಾಜರಂತೆ ಒಂದು ಗಳಿಗೆಯವರೆಗೆ ಮೃಗದೊಂದಿಗೆ ಅಧಿಕಾರ ಹೊಂದುವವು.
ಪ್ರಕಟನೆ 17 : 13 (OCVKN)
ಅವರು ಏಕ ಮನಸ್ಸುಳ್ಳವರಾಗಿ, ಮೃಗಕ್ಕೆ ತಮ್ಮ ಬಲ ಮತ್ತು ಅಧಿಕಾರವನ್ನು ಕೊಡುವರು.
ಪ್ರಕಟನೆ 17 : 14 (OCVKN)
ಅವರು ಕುರಿಮರಿಯಾದವರ ಮೇಲೆ ಯುದ್ಧಮಾಡುವರು. ಆದರೆ ಕುರಿಮರಿಯಾದವರು ಕರ್ತರ ಕರ್ತರೂ ರಾಜಾಧಿರಾಜರೂ ಆಗಿರುವುದರಿಂದ ಅವರನ್ನು ಜಯಿಸುವರು. ಅವರೊಂದಿಗಿದ್ದವರು ದೇವರಿಂದ ಕರೆಹೊಂದಿದವರೂ ಆಯ್ದುಕೊಂಡವರೂ ನಂಬಿಗಸ್ತರೂ ಆಗಿರುವರು.”
ಪ್ರಕಟನೆ 17 : 15 (OCVKN)
ಅನಂತರ ದೂತನು ನನಗೆ, “ಜಾರಸ್ತ್ರೀ ಕೂತಿದ್ದ ಕಡೆ ನೀನು ಕಂಡ ನೀರುಗಳು, ಪ್ರಜೆಗಳನ್ನೂ ಸಮೂಹಗಳನ್ನೂ ರಾಷ್ಟ್ರಗಳನ್ನೂ ಭಾಷೆಗಳನ್ನೂ ಸೂಚಿಸುತ್ತವೆ.
ಪ್ರಕಟನೆ 17 : 16 (OCVKN)
ನೀನು ಕಂಡ ಆ ಮೃಗ ಮತ್ತು ಹತ್ತು ಕೊಂಬುಗಳು ಆ ಜಾರಸ್ತ್ರೀಯನ್ನು ದ್ವೇಷಿಸಿ, ಆಕೆಯನ್ನು ಗತಿಯಿಲ್ಲದವಳನ್ನಾಗಿಯೂ ಆಕೆಯನ್ನು ಬಟ್ಟೆ ಇಲ್ಲದವಳನ್ನಾಗಿಯೂ ಆಕೆಯ ಮಾಂಸವನ್ನು ತಿಂದು, ಆಕೆಯನ್ನು ಬೆಂಕಿಯಲ್ಲಿ ಸುಟ್ಟುಬಿಡುವವು.
ಪ್ರಕಟನೆ 17 : 17 (OCVKN)
ಏಕೆಂದರೆ, ದೇವರು ತಮ್ಮ ಮನಸ್ಸಿನಲ್ಲಿರುವುದನ್ನು ನಡೆಸುವಂತೆಯೂ ಅವುಗಳ ರಾಜ್ಯವನ್ನು ಮೃಗಕ್ಕೆ ಕೊಡಲು ಒಮ್ಮನಸ್ಸಾಗಿರುವಂತೆಯೂ ಮಾಡಿ, ದೇವರು ತಮ್ಮ ವಾಕ್ಯವನ್ನು ನೆರವೇರಿಸುವುದಕ್ಕಾಗಿ ಇದನ್ನು ಅವುಗಳ ಹೃದಯದಲ್ಲಿಟ್ಟಿದ್ದಾರೆ.
ಪ್ರಕಟನೆ 17 : 18 (OCVKN)
ನೀನು ಕಂಡ ಆ ಸ್ತ್ರೀಯು ಭೂರಾಜರನ್ನು ಆಳುವ ಮಹಾನಗರಿಯೇ,” ಎಂದು ಹೇಳಿದನು.

1 2 3 4 5 6 7 8 9 10 11 12 13 14 15 16 17 18