ಪ್ರಕಟನೆ 12 : 1 (OCVKN)
ಸ್ತ್ರೀ ಹಾಗೂ ಘಟಸರ್ಪ ಪರಲೋಕದಲ್ಲಿ ಒಂದು ಮಹಾ ಸೂಚನೆಯು ಕಾಣಿಸಿತು: ಒಬ್ಬ ಸ್ತ್ರೀಯು ಸೂರ್ಯನನ್ನು ಧರಿಸಿಕೊಂಡಿದ್ದಳು, ಆಕೆಯ ಪಾದಗಳ ಕೆಳಗೆ ಚಂದ್ರನಿದ್ದನು. ಆಕೆಯ ತಲೆಯ ಮೇಲೆ ಹನ್ನೆರಡು ನಕ್ಷತ್ರಗಳುಳ್ಳ ಒಂದು ಕಿರೀಟವಿತ್ತು.
ಪ್ರಕಟನೆ 12 : 2 (OCVKN)
ಆಕೆಯು ಗರ್ಭಿಣಿಯಾಗಿದ್ದು, ಪ್ರಸವವೇದನೆಯಿಂದ ನರಳುತ್ತಾ ಕೂಗುತ್ತಿದ್ದಳು.
ಪ್ರಕಟನೆ 12 : 3 (OCVKN)
ಪರಲೋಕದಲ್ಲಿ ಮತ್ತೊಂದು ಸೂಚನೆಯು ಕಾಣಿಸಿತು. ಕೆಂಪಾದ ಮಹಾ ಘಟಸರ್ಪವಿತ್ತು. ಅದಕ್ಕೆ ಏಳು ತಲೆಗಳೂ ಹತ್ತು ಕೊಂಬುಗಳೂ ಇದ್ದವು. ಅದರ ತಲೆಯ ಮೇಲೆ ಏಳು ಮುಕುಟಗಳಿದ್ದವು.
ಪ್ರಕಟನೆ 12 : 4 (OCVKN)
ಅದು ತನ್ನ ಬಾಲದಿಂದ ಆಕಾಶದ ನಕ್ಷತ್ರಗಳಲ್ಲಿ ಮೂರರಲ್ಲೊಂದು ಭಾಗವನ್ನು ಎಳೆದು ಭೂಮಿಗೆ ಚೆಲ್ಲಿತು. ಹೆರುತ್ತಿದ್ದ ಆ ಸ್ತ್ರೀಯು ಹೆತ್ತ ಕೂಡಲೇ, ಆಕೆಯ ಮಗುವನ್ನು ನುಂಗಿಬಿಡಬೇಕೆಂದು ಆ ಘಟಸರ್ಪವು ಅವಳ ಮುಂದೆ ನಿಂತುಕೊಂಡಿತ್ತು.
ಪ್ರಕಟನೆ 12 : 5 (OCVKN)
ಆಕೆ, “ರಾಷ್ಟ್ರಗಳನ್ನು ಕಬ್ಬಿಣದ ಕೋಲಿನಿಂದ ಆಳಬೇಕಾದ”* ಕೀರ್ತನೆ 2:9 ಒಂದು ಗಂಡು ಮಗುವನ್ನು ಹೆತ್ತಳು. ಆಕೆಯ ಕೂಸು ದೇವರ ಬಳಿಗೂ ಅವರ ಸಿಂಹಾಸನದ ಬಳಿಗೂ ಎತ್ತಲಾಯಿತು.
ಪ್ರಕಟನೆ 12 : 6 (OCVKN)
ಆ ಸ್ತ್ರೀಯು ಅರಣ್ಯಕ್ಕೆ ಓಡಿ ಹೋದಳು. ಅಲ್ಲಿ ಆಕೆಗೆ ಸಾವಿರದ ಇನ್ನೂರ ಅರವತ್ತು ದಿನಗಳವರೆಗೆ ಪೋಷಣೆಯಾಗಬೇಕೆಂದು ದೇವರು ಸ್ಥಳವನ್ನು ಸಿದ್ಧಮಾಡಿದ್ದರು.
ಪ್ರಕಟನೆ 12 : 7 (OCVKN)
ಪರಲೋಕದಲ್ಲಿ ಯುದ್ಧನಡೆಯಿತು. ಮೀಕಾಯೇಲನೂ ಅವನ ದೂತರೂ ಘಟಸರ್ಪನ ಮೇಲೆ ಯುದ್ಧಮಾಡಿದರು. ಘಟಸರ್ಪನೂ ಅವನ ದೂತರೂ ಯುದ್ಧಮಾಡಿ ಸೋತುಹೋದರು.
ಪ್ರಕಟನೆ 12 : 8 (OCVKN)
ಅವರಿಗೆ ಸಾಕಷ್ಟು ಸಾಮರ್ಥ್ಯವಿಲ್ಲದ್ದರಿಂದ, ಪರಲೋಕದೊಳಗೆ ಅವರಿಗಿರುವ ಸ್ಥಾನವನ್ನು ಕಳೆದುಕೊಂಡರು.
ಪ್ರಕಟನೆ 12 : 9 (OCVKN)
ಭೂಲೋಕದವರನ್ನೆಲ್ಲಾ ವಂಚಿಸುತ್ತಿದ್ದ ಆ ಮಹಾ ಘಟಸರ್ಪನು ಎಂದರೆ ಪಿಶಾಚನೆಂತಲೂ ಸೈತಾನನೆಂತಲೂ ಕರೆಯಲಾದ ಪುರಾತನ ಸರ್ಪವನ್ನು ಭೂಮಿಗೆ ತಳ್ಳಲಾಯಿತು. ಅವನ ದೂತರನ್ನೂ ಅವನೊಂದಿಗೆ ತಳ್ಳಲಾಯಿತು.
ಪ್ರಕಟನೆ 12 : 10 (OCVKN)
ಆಗ ಪರಲೋಕದಲ್ಲಿ ಮಹಾಧ್ವನಿಯನ್ನು ಕೇಳಿದೆನು. ಅದು, “ರಕ್ಷಣೆಯೂ ಶಕ್ತಿಯೂ ರಾಜ್ಯವೂ ಈಗ ನಮ್ಮ ದೇವರದಾದವು. ದೇವರ ಕ್ರಿಸ್ತ ಆಗಿರುವವರ ಅಧಿಕಾರವು ಈಗ ಸ್ಥಾಪಿತವಾಯಿತು. ಹಗಲಿರುಳು ನಮ್ಮ ಸಹೋದರರ ಮೇಲೆ, ನಮ್ಮ ದೇವರ ಮುಂದೆ ದೂರು ಹೇಳುವ ದೂರುಗಾರನನ್ನು ತಳ್ಳಲಾಗಿದೆ.
ಪ್ರಕಟನೆ 12 : 11 (OCVKN)
ಅವರು ಮರಣದವರೆಗೆ ತಮ್ಮ ಪ್ರಾಣವನ್ನು ಪ್ರೀತಿಸದೆ, ಕುರಿಮರಿಯಾಗಿರುವವರ ರಕ್ತದಿಂದಲೂ ತಮ್ಮ ಸಾಕ್ಷಿಯ ವಾಕ್ಯದಿಂದಲೂ ಅವನನ್ನು ಜಯಿಸಿದರು.
ಪ್ರಕಟನೆ 12 : 12 (OCVKN)
ಆದ್ದರಿಂದ ಪರಲೋಕವೇ, ಅದರಲ್ಲಿ ವಾಸಮಾಡುವವರೇ ಹರ್ಷಗೊಳ್ಳಿರಿ. ಭೂಮಿಯೇ, ಸಮುದ್ರವೇ, ನಿಮಗೆ ದುರ್ಗತಿ! ಎನ್ನುತ್ತೇನೆ. ಏಕೆಂದರೆ, ಪಿಶಾಚನು ತನಗಿರುವ ಕಾಲವು ಕೊಂಚವೆಂದು ತಿಳಿದು, ಮಹಾ ರೋಷವುಳ್ಳವನಾಗಿ ನಿಮ್ಮ ಕಡೆಗೆ ಇಳಿದು ಬಂದಿದ್ದಾನೆ,” ಎಂಬುದಾಗಿ ಹೇಳಿತು.
ಪ್ರಕಟನೆ 12 : 13 (OCVKN)
ಘಟಸರ್ಪನು ತಾನು ಭೂಮಿಗೆ ತಳ್ಳಲಾಗಿರುವುದನ್ನು ಕಂಡಾಗ, ಅವನು ಗಂಡು ಮಗುವನ್ನು ಹೆತ್ತ ಸ್ತ್ರೀಯನ್ನು ಅಟ್ಟಿಸಿಕೊಂಡು ಹೋದನು.
ಪ್ರಕಟನೆ 12 : 14 (OCVKN)
ಆ ಸ್ತ್ರೀಯು ಅರಣ್ಯದಲ್ಲಿದ್ದ ತನ್ನ ಸ್ಥಳಕ್ಕೆ ಹಾರಿಹೋಗುವುದಕ್ಕಾಗಿ ಆಕೆಗೆ ದೊಡ್ಡ ಹದ್ದಿನ ಎರಡು ರೆಕ್ಕೆಗಳು ಕೊಡಲಾದವು. ಅಲ್ಲಿ ಆಕೆಯು ಒಂದುಕಾಲ, ಎರಡುಕಾಲ ಮತ್ತು ಅರ್ಧಕಾಲ ಸರ್ಪನಿಗೆ ಸಿಗದಂತೆ ಪೋಷಣೆ ಹೊಂದಿದಳು.
ಪ್ರಕಟನೆ 12 : 15 (OCVKN)
ಆ ಸರ್ಪನು ಪ್ರವಾಹದಿಂದ ಸ್ತ್ರೀಯನ್ನು ಸೆಳೆದುಕೊಂಡು ಹೋಗಬೇಕೆಂದು ಆಕೆಯ ಹಿಂದೆ ತನ್ನ ಬಾಯೊಳಗಿಂದ ನೀರನ್ನು ನದಿಯಂತೆ ಬಿಟ್ಟನು.
ಪ್ರಕಟನೆ 12 : 16 (OCVKN)
ಆದರೆ ಭೂಮಿಯು ಆ ಸ್ತ್ರೀಗೆ ಸಹಾಯ ಮಾಡಿತು. ಅದು ಬಾಯಿತೆರೆದು, ಘಟಸರ್ಪನು ತನ್ನ ಬಾಯೊಳಗಿಂದ ಬಿಟ್ಟ ನದಿಯನ್ನು ನುಂಗಿಬಿಟ್ಟಿತು.
ಪ್ರಕಟನೆ 12 : 17 (OCVKN)
ಆಗ ಘಟಸರ್ಪನು ಸ್ತ್ರೀಯ ಮೇಲೆ ಬಹುಕೋಪಗೊಂಡು, ಆಕೆಯ ಸಂತಾನದವರಲ್ಲಿ ಉಳಿದವರ ಮೇಲೆ ಎಂದರೆ, ದೇವರ ಆಜ್ಞೆಗಳನ್ನು ಕೈಗೊಂಡು ನಡೆದು, ಯೇಸುವಿನ ಸಾಕ್ಷಿಯನ್ನು ಹೊಂದಿದವರ ಮೇಲೆ ಯುದ್ಧಮಾಡುವುದಕ್ಕೆ ಹೊರಟನು.

1 2 3 4 5 6 7 8 9 10 11 12 13 14 15 16 17