ಕೀರ್ತನೆಗಳು 98 : 1 (OCVKN)
ಯೆಹೋವ ದೇವರಿಗೆ ಹೊಸಹಾಡನ್ನು ಹಾಡಿರಿ; ಏಕೆಂದರೆ ಅವರು ಅದ್ಭುತಗಳನ್ನು ಮಾಡಿದ್ದಾರೆ; ಅವರ ಬಲಗೈಯೂ, ಅವರ ಪರಿಶುದ್ಧ ಭುಜವು ಅವರಿಗೆ ಜಯವನ್ನು ತಂದಿವೆ.
ಕೀರ್ತನೆಗಳು 98 : 2 (OCVKN)
ಯೆಹೋವ ದೇವರು ತಮ್ಮ ರಕ್ಷಣೆಯನ್ನು ತಿಳಿಯಪಡಿಸಿದ್ದಾರೆ; ರಾಷ್ಟ್ರಗಳಿಗೆ ತಮ್ಮ ನೀತಿಯನ್ನು ಪ್ರಕಟಪಡಿಸಿದ್ದಾರೆ.
ಕೀರ್ತನೆಗಳು 98 : 3 (OCVKN)
ಇಸ್ರಾಯೇಲರ ಕಡೆಗೆ ತಮ್ಮ ಪ್ರೀತಿಯನ್ನೂ, ತಮ್ಮ ಸತ್ಯತೆಯನ್ನೂ ಜ್ಞಾಪಕ ಮಾಡಿಕೊಂಡಿದ್ದಾರೆ; ಭೂಮಿಯ ಅಂತ್ಯಗಳಲ್ಲೆವೂ ನಮ್ಮ ದೇವರ ರಕ್ಷಣೆಯನ್ನು ನೋಡಿವೆ.
ಕೀರ್ತನೆಗಳು 98 : 4 (OCVKN)
ಸಮಸ್ತ ಭೂನಿವಾಸಿಗಳೇ, ಯೆಹೋವ ದೇವರಿಗೆ ಆನಂದಘೋಷ ಮಾಡಿರಿ. ಉತ್ಸಾಹಧ್ವನಿ ಮಾಡಿ ಸಂಗೀತದಿಂದ ಸ್ತುತಿಹಾಡಿರಿ.
ಕೀರ್ತನೆಗಳು 98 : 5 (OCVKN)
ಯೆಹೋವ ದೇವರಿಗೆ ಕಿನ್ನರಿಯಿಂದ ಗಾನಮಾಡಿರಿ. ಕಿನ್ನರಿಯಿಂದಲೂ, ಕೀರ್ತನೆಯ ಶಬ್ದದಿಂದಲೂ ಹಾಡಿರಿ.
ಕೀರ್ತನೆಗಳು 98 : 6 (OCVKN)
ತುತೂರಿಗಳಿಂದಲೂ, ಹೌದು, ಟಗರಿನ ಕೊಂಬಿನಿಂದಲೂ ಯೆಹೋವ ರಾಜರ ಮುಂದೆ ಆನಂದಘೋಷ ಮಾಡಿರಿ.
ಕೀರ್ತನೆಗಳು 98 : 7 (OCVKN)
ಸಮುದ್ರವೂ, ಅದರಲ್ಲಿರುವುದೆಲ್ಲವೂ, ಲೋಕವೂ, ಅದರ ನಿವಾಸಿಗಳೂ ಪ್ರತಿಧ್ವನಿಸಲಿ.
ಕೀರ್ತನೆಗಳು 98 : 8 (OCVKN)
ನದಿಗಳು ಚಪ್ಪಾಳೆ ತಟ್ಟಲಿ. ಬೆಟ್ಟಗಳು ಒಟ್ಟುಗೂಡಿ ಆನಂದ ಕೀರ್ತನೆ ಹಾಡಲಿ.
ಕೀರ್ತನೆಗಳು 98 : 9 (OCVKN)
ಅವು ಯೆಹೋವ ದೇವರ ಮುಂದೆ ಹಾಡಲಿ, ಏಕೆಂದರೆ ಅವರು ಭೂಮಿಗೆ ನ್ಯಾಯತೀರಿಸಲು ಬರುತ್ತಾರೆ. ಅವರು ಲೋಕಕ್ಕೆ ನೀತಿಗನುಸಾರವಾಗಿಯೂ ಜನರಿಗೆ ನ್ಯಾಯಾನುಸಾರವಾಗಿಯೂ ತೀರ್ಪು ನೀಡುವರು.
❮
❯