ಕೀರ್ತನೆಗಳು 96 : 1 (OCVKN)
ಯೆಹೋವ ದೇವರಿಗೆ ಹೊಸಹಾಡನ್ನು ಹಾಡಿರಿ; ಸಮಸ್ತ ಭೂನಿವಾಸಿಗಳೇ, ಯೆಹೋವ ದೇವರಿಗೆ ಹಾಡಿರಿ.
ಕೀರ್ತನೆಗಳು 96 : 2 (OCVKN)
ಯೆಹೋವ ದೇವರಿಗೆ ಹಾಡಿರಿ, ಅವರ ನಾಮವನ್ನು ಸ್ತುತಿಸಿರಿ; ಅವರ ರಕ್ಷಣೆಯನ್ನು ದಿನಂಪ್ರತಿ ಸಾರಿ ಹೇಳಿರಿ.
ಕೀರ್ತನೆಗಳು 96 : 3 (OCVKN)
ಜನಾಂಗಗಳಲ್ಲಿ ಅವರ ಘನತೆಯನ್ನೂ, ಎಲ್ಲಾ ಜನಾಂಗಗಳಲ್ಲಿ ಅವರ ಅದ್ಭುತಗಳನ್ನೂ ವಿವರಿಸಿರಿ.
ಕೀರ್ತನೆಗಳು 96 : 4 (OCVKN)
ಯೆಹೋವ ದೇವರು ಮಹೋನ್ನತರಾಗಿದ್ದಾರೆ, ಬಹು ಸ್ತುತಿಗೆ ಪಾತ್ರರೂ ಆಗಿದ್ದಾರೆ; ಅವರು ಎಲ್ಲಾ ದೇವರುಗಳಿಗಿಂತ ಬಹುಭಯಭಕ್ತಿಗೆ ಪಾತ್ರರಾಗಿದ್ದಾರೆ.
ಕೀರ್ತನೆಗಳು 96 : 5 (OCVKN)
ಏಕೆಂದರೆ ಜನಾಂಗಗಳ ದೇವರುಗಳೆಲ್ಲಾ ವಿಗ್ರಹಗಳಾಗಿವೆ; ಆದರೆ ಯೆಹೋವ ದೇವರು ಆಕಾಶಮಂಡಲವನ್ನು ನಿರ್ಮಿಸಿದವರು.
ಕೀರ್ತನೆಗಳು 96 : 6 (OCVKN)
ಘನತೆಯೂ, ಪ್ರಭೆಯೂ ಅವರ ಮುಂದೆ ಇವೆ; ಬಲವೂ, ಸೌಂದರ್ಯವೂ ಅವರ ಪರಿಶುದ್ಧ ಸ್ಥಳದಲ್ಲಿ ಇವೆ.
ಕೀರ್ತನೆಗಳು 96 : 7 (OCVKN)
ಜನಾಂಗದ ಕುಟುಂಬಗಳೇ, ಯೆಹೋವ ದೇವರ ಮುಂದೆ ನೀವು ಮಹಿಮೆಯನ್ನೂ ಬಲವನ್ನೂ ಅರ್ಪಿಸಿರಿ.
ಕೀರ್ತನೆಗಳು 96 : 8 (OCVKN)
ಯೆಹೋವ ದೇವರ ಹೆಸರಿಗೆ ಸಲ್ಲತಕ್ಕ ಗೌರವವನ್ನು ಸಲ್ಲಿಸಿರಿ; ಕಾಣಿಕೆಯನ್ನು ತೆಗೆದುಕೊಂಡು ಅವರ ಅಂಗಳಗಳಿಗೆ ಬನ್ನಿರಿ.
ಕೀರ್ತನೆಗಳು 96 : 9 (OCVKN)
ಪರಿಶುದ್ಧತೆ ಎಂಬ ಭೂಷಣದೊಡನೆ ಯೆಹೋವ ದೇವರನ್ನು ಆರಾಧಿಸಿರಿ; ಸಮಸ್ತ ಭೂನಿವಾಸಿಗಳೇ, ಅವರ ಮುಂದೆ ಭಯಪಡಿರಿ.
ಕೀರ್ತನೆಗಳು 96 : 10 (OCVKN)
“ಯೆಹೋವ ದೇವರು ಆಳಿಕೆ ಮಾಡುತ್ತಾರೆ; ಆದ್ದರಿಂದ ಲೋಕವು ಸ್ಥಿರವಾಗಿರುವುದು, ಕದಲುವುದಿಲ್ಲ; ಅವರು ಜನರಿಗೆ ನೀತಿಯಲ್ಲಿ ನ್ಯಾಯತೀರಿಸುತ್ತಾರೆ,” ಎಂದು ಎಲ್ಲಾ ಜನಾಂಗಗಳಲ್ಲಿ ಹೇಳಿರಿ.
ಕೀರ್ತನೆಗಳು 96 : 11 (OCVKN)
ಆಕಾಶವು ಸಂತೋಷಿಸಲಿ; ಭೂಮಿಯು ಉಲ್ಲಾಸಪಡಲಿ; ಸಮುದ್ರವೂ, ಅದರಲ್ಲಿರುವುದೆಲ್ಲವೂ ಘೋಷಿಸಲಿ.
ಕೀರ್ತನೆಗಳು 96 : 12 (OCVKN)
ಹೊಲಗಳೂ, ಅವುಗಳಲ್ಲಿರುವ ಸಮಸ್ತವೂ ಉತ್ಸಾಹಪಡಲಿ; ಆಗ ಅಡವಿಯ ಮರಗಳೆಲ್ಲಾ ಯೆಹೋವ ದೇವರ ಮುಂದೆಯೇ ಉತ್ಸಾಹಧ್ವನಿ ಮಾಡಲಿ.
ಕೀರ್ತನೆಗಳು 96 : 13 (OCVKN)
ಸಮಸ್ತ ಸೃಷ್ಟಿಯು ಯೆಹೋವ ದೇವರ ಸನ್ನಿಧಿಯಲ್ಲಿ ಹಾಡಲಿ, ಏಕೆಂದರೆ ಅವರು ಲೋಕಕ್ಕೆ ನೀತಿಯಿಂದಲೂ; ಜನರಿಗೆ ತಮ್ಮ ಸತ್ಯದಿಂದಲೂ ನ್ಯಾಯತೀರಿಸಲು ಬರುತ್ತಾರೆ.

1 2 3 4 5 6 7 8 9 10 11 12 13