ಕೀರ್ತನೆಗಳು 89 : 1 (OCVKN)
ಯೆಹೋವ ದೇವರ ಮಹಾ ಪ್ರೀತಿಯನ್ನು ಯುಗಯುಗಕ್ಕೂ ಹಾಡುವೆನು. ತಲತಲಾಂತರಕ್ಕೂ ನಿಮ್ಮ ನಂಬಿಗಸ್ತಿಕೆಯನ್ನು ನನ್ನ ಬಾಯಿ ತಿಳಿಯಪಡಿಸುವುದು.
ಕೀರ್ತನೆಗಳು 89 : 2 (OCVKN)
ಎಂದೆಂದಿಗೂ ನಿಮ್ಮ ಪ್ರೀತಿಯನ್ನು ಸಾರುವೆನು. ಪರಲೋಕದಲ್ಲಿ ನಿಮ್ಮ ನಂಬಿಗಸ್ತಿಕೆಯನ್ನು ಸ್ಥಿರಪಡಿಸಿದ್ದೀರಿ ಎಂದು ಘೋಷಿಸುವೆನು.
ಕೀರ್ತನೆಗಳು 89 : 3 (OCVKN)
ನೀವು ಹೇಳಿದ್ದೇನಂದರೆ, “ನಾನು ಆಯ್ದುಕೊಂಡವನ ಸಂಗಡ ನಾನು ಒಡಂಬಡಿಕೆ ಮಾಡಿಕೊಂಡಿದ್ದೇನೆ. ನಾನು ನನ್ನ ಸೇವಕನಾದ ದಾವೀದನಿಗೆ ಪ್ರಮಾಣ ಮಾಡಿದ್ದೇನೆ.
ಕೀರ್ತನೆಗಳು 89 : 4 (OCVKN)
‘ಎಂದೆಂದಿಗೂ ನಿಮ್ಮ ಸಂತತಿಯನ್ನು ಸ್ಥಿರಪಡಿಸುವೆನು ತಲತಲಾಂತರಕ್ಕೂ ನಿಮ್ಮ ಸಿಂಹಾಸನವನ್ನು ಕಟ್ಟುವೆನು.’ ”
ಕೀರ್ತನೆಗಳು 89 : 5 (OCVKN)
ಯೆಹೋವ ದೇವರೇ, ಆಕಾಶಗಳು ನಿಮ್ಮ ಅದ್ಭುತಗಳನ್ನೂ ಪರಿಶುದ್ಧರ ಸಭೆಯಲ್ಲಿ ನಿಮ್ಮ ನಂಬಿಗಸ್ತಿಕೆಯನ್ನೂ ಕೊಂಡಾಡುವುವು.
ಕೀರ್ತನೆಗಳು 89 : 6 (OCVKN)
ಪ್ರಪಂಚದಲ್ಲಿ ಯೆಹೋವ ದೇವರಿಗೆ ಸಮಾನನಾದವನು ಯಾರು? ಪರಲೋಕ ಜೀವಿಗಳಲ್ಲಿ ಯೆಹೋವ ದೇವರಿಗೆ ಸಮಾನನಾದವನು ಯಾರು?
ಕೀರ್ತನೆಗಳು 89 : 7 (OCVKN)
ಅವರು ಪರಿಶುದ್ಧರ ಸಭೆಯಲ್ಲಿ ಭಯಭಕ್ತಿಗೆ ಪಾತ್ರರಾದ ದೇವರು. ತಮ್ಮ ಎಲ್ಲಾ ಪರಿವಾರದವರಿಗಿಂತ ಅವರು ಅತಿಶಯವಾದವರು.
ಕೀರ್ತನೆಗಳು 89 : 8 (OCVKN)
ಸೇನಾಧೀಶ್ವರ ಯೆಹೋವ ದೇವರೇ, ನಿಮ್ಮ ಹಾಗೆ ಶಕ್ತರು ಯಾರು ಇದ್ದಾರೆ? ಯೆಹೋವ ದೇವರೇ, ನೀವು ಶಕ್ತರು, ನಿಮ್ಮ ನಂಬಿಗಸ್ತಿಕೆಯು ನಿಮ್ಮನ್ನು ಸುತ್ತುವರಿದಿದೆ.
ಕೀರ್ತನೆಗಳು 89 : 9 (OCVKN)
ನೀವು ಸಮುದ್ರದ ಏರುವಿಕೆಯನ್ನು ಆಳುತ್ತೀರಿ. ಅದರ ತೆರೆಗಳು ಏಳುವಾಗ ಅವುಗಳನ್ನು ಸುಮ್ಮನಿರಿಸುತ್ತೀರಿ.
ಕೀರ್ತನೆಗಳು 89 : 10 (OCVKN)
ಹತನಾದವನಂತೆ ನೀವು ರಹಬನ್ನು ಜಯಿಸಿದ್ದೀರಿ. ನಿಮ್ಮ ಭುಜಬಲದಿಂದ ನಿಮ್ಮ ಶತ್ರುಗಳನ್ನು ಚದರಿಸಿದ್ದೀರಿ.
ಕೀರ್ತನೆಗಳು 89 : 11 (OCVKN)
ಆಕಾಶಗಳು ನಿಮ್ಮವು, ಭೂಮಿಯು ಸಹ ನಿಮ್ಮದು. ಲೋಕವನ್ನೂ ಅದರಲ್ಲಿರುವುದೆಲ್ಲವನ್ನೂ ನೀವು ಉಂಟುಮಾಡಿದ್ದೀರಿ.
ಕೀರ್ತನೆಗಳು 89 : 12 (OCVKN)
ಉತ್ತರವನ್ನೂ ದಕ್ಷಿಣವನ್ನೂ ನೀವೇ ನಿರ್ಮಿಸಿದ್ದೀರಿ. ತಾಬೋರೂ, ಹೆರ್ಮೋನೂ ನಿಮ್ಮ ಹೆಸರಿನಲ್ಲಿ ಉತ್ಸಾಹ ಧ್ವನಿಗೈಯುತ್ತವೆ.
ಕೀರ್ತನೆಗಳು 89 : 13 (OCVKN)
ನಿಮ್ಮ ಭುಜವು ಶಕ್ತಿಯುತವಾದದ್ದು. ನಿಮ್ಮ ಕೈ ಬಲವುಳ್ಳದ್ದು; ನಿಮ್ಮ ಬಲಗೈ ಉನ್ನತವಾದದ್ದು.
ಕೀರ್ತನೆಗಳು 89 : 14 (OCVKN)
ನೀತಿಯೂ, ನ್ಯಾಯವೂ ನಿಮ್ಮ ಸಿಂಹಾಸನದ ಅಸ್ತಿವಾರವಾಗಿವೆ. ಪ್ರೀತಿಯೂ, ಸತ್ಯತೆಯೂ ನಿಮ್ಮ ಮುಂದೆ ಹೋಗುತ್ತವೆ.
ಕೀರ್ತನೆಗಳು 89 : 15 (OCVKN)
ನಿಮ್ಮ ಉತ್ಸಾಹ ಧ್ವನಿಯನ್ನು ಕೇಳಿದ ಜನರು ಧನ್ಯರು. ಯೆಹೋವ ದೇವರೇ, ನಿಮ್ಮ ಸನ್ನಿಧಿಯ ಬೆಳಕಿನಲ್ಲಿ ನಡೆಯುವವರು ಧನ್ಯರು.
ಕೀರ್ತನೆಗಳು 89 : 16 (OCVKN)
ನಿಮ್ಮ ಹೆಸರಿನಿಂದ ದಿನವೆಲ್ಲಾ ಉಲ್ಲಾಸಪಟ್ಟು, ನಿಮ್ಮ ನೀತಿಯಲ್ಲಿ ಅವರು ಉನ್ನತಕ್ಕೇರುವರು.
ಕೀರ್ತನೆಗಳು 89 : 17 (OCVKN)
ಏಕೆಂದರೆ ಅವರ ಬಲವೂ ಮಹಿಮೆಯೂ ನೀವೇ. ನಿಮ್ಮ ಮೆಚ್ಚುಗೆಯಿಂದ ನಮ್ಮ ಬಲವೆಂಬ ಕೊಂಬು ಉನ್ನತವಾಗುವುದು.
ಕೀರ್ತನೆಗಳು 89 : 18 (OCVKN)
ನಮ್ಮ ಗುರಾಣಿಯು ಯೆಹೋವ ದೇವರದೇ. ನಮ್ಮ ಅರಸರು ಇಸ್ರಾಯೇಲರ ಪರಿಶುದ್ಧರಾಗಿರುವರು.
ಕೀರ್ತನೆಗಳು 89 : 19 (OCVKN)
ಆ ಕಾಲದಲ್ಲಿ ನೀವು ದರ್ಶನದಲ್ಲಿ ನಿಮ್ಮ ಭಕ್ತರಿಗೆ ಹೇಳಿದ್ದೇನೆಂದರೆ: “ಒಬ್ಬ ಶೂರನಿಗೆ ನಾನು ಬಲವನ್ನು ಅನುಗ್ರಹಿಸಿದ್ದೇನೆ. ಪ್ರಜೆಗಳಲ್ಲಿ ಒಬ್ಬ ಯೌವನಸ್ಥನನ್ನು ಆರಿಸಿ ಉನ್ನತ ಸ್ಥಾನದಲ್ಲಿಟ್ಟಿದ್ದೇನೆ.
ಕೀರ್ತನೆಗಳು 89 : 20 (OCVKN)
ನನ್ನ ಸೇವಕನಾದ ದಾವೀದನನ್ನು ಕಂಡು, ನನ್ನ ಪರಿಶುದ್ಧ ಎಣ್ಣೆಯಿಂದ ಅವನನ್ನು ಅಭಿಷೇಕಿಸಿದ್ದೇನೆ.
ಕೀರ್ತನೆಗಳು 89 : 21 (OCVKN)
ನನ್ನ ಕೈ ಅವನನ್ನು ಪರಿಪಾಲಿಸುವುದು; ನನ್ನ ಭುಜವು ಅವನನ್ನು ಬಲಪಡಿಸುವುದು.
ಕೀರ್ತನೆಗಳು 89 : 22 (OCVKN)
ಶತ್ರುವು ಅವನನ್ನು ಜಯಿಸಲಾರನು. ಯಾವ ದುಷ್ಟನೂ ಅವನನ್ನು ಹಿಂಸೆಪಡಿಸನು.
ಕೀರ್ತನೆಗಳು 89 : 23 (OCVKN)
ಅವನ ಮುಂದೆ ಅವನ ವೈರಿಗಳನ್ನು ಓಡಿಸಿಬಿಡುವೆನು; ಅವನ ವಿರೋಧಿಗಳನ್ನು ದಂಡಿಸುವೆನು.
ಕೀರ್ತನೆಗಳು 89 : 24 (OCVKN)
ನನ್ನ ನಂಬಿಗಸ್ತಿಕೆಯೂ ಪ್ರೀತಿಯೂ ಅವನ ಸಂಗಡ ಇರುವುವು. ನನ್ನ ಹೆಸರಿನಲ್ಲಿ ಅವನ ಬಲವೆಂಬ ಕೊಂಬು ಉನ್ನತವಾಗುವುದು.
ಕೀರ್ತನೆಗಳು 89 : 25 (OCVKN)
ಸಮುದ್ರ ಹಾಗು ನದಿಗಳ ಮೇಲೆ ಅವನ ಬಲಗೈಯನ್ನೂ ಇರಿಸುವೆನು.
ಕೀರ್ತನೆಗಳು 89 : 26 (OCVKN)
ಅವನು, ‘ನೀವು ನನ್ನ ತಂದೆಯೂ ನನ್ನ ದೇವರೂ ನನ್ನ ರಕ್ಷಣೆಯ ಬಂಡೆಯೂ ಆಗಿದ್ದೀರಿ’ ಎಂದು ನನಗೆ ಮೊರೆಯಿಡುವನು.
ಕೀರ್ತನೆಗಳು 89 : 27 (OCVKN)
ನಾನು ಆತನನ್ನು ನನ್ನ ಚೊಚ್ಚಲ ಮಗನನ್ನಾಗಿಯೂ ಭೂಮಿಯ ಅರಸರಿಗಿಂತ ಉನ್ನತನನ್ನಾಗಿಯೂ ಮಾಡಿಕೊಳ್ಳುವೆನು.
ಕೀರ್ತನೆಗಳು 89 : 28 (OCVKN)
ಎಂದೆಂದಿಗೂ ಆತನಿಗೋಸ್ಕರ ನನ್ನ ಪ್ರೀತಿಯನ್ನು ಕಾದಿಡುವೆನು. ನನ್ನ ಒಡಂಬಡಿಕೆಯು ಆತನೊಂದಿಗೆ ದೃಢವಾಗಿರುವುದು.
ಕೀರ್ತನೆಗಳು 89 : 29 (OCVKN)
ಆತನ ಸಂತತಿಯನ್ನು ಸಹ ಎಂದೆಂದಿಗೂ ಆತನ ಸಿಂಹಾಸನವನ್ನು ಆಕಾಶ ಇರುವವರೆಗೂ ಮಾಡುವೆನು.
ಕೀರ್ತನೆಗಳು 89 : 30 (OCVKN)
“ಆತನ ಸಂತತಿಯು ನನ್ನ ನಿಯಮವನ್ನು ಬಿಟ್ಟು, ನನ್ನ ಶಾಸನಗಳನ್ನು ಅನುಸರಿಸಿ ನಡೆಯದೆ,
ಕೀರ್ತನೆಗಳು 89 : 31 (OCVKN)
ಅವರು ನನ್ನ ತೀರ್ಪುಗಳನ್ನು ಮುರಿದು, ನನ್ನ ಆಜ್ಞೆಗಳನ್ನು ಕೈಗೊಳ್ಳದೆ ಹೋದರೆ,
ಕೀರ್ತನೆಗಳು 89 : 32 (OCVKN)
ಕೋಲಿನಿಂದ ಅವರ ದ್ರೋಹವನ್ನೂ ಪೆಟ್ಟುಗಳಿಂದ ಅವರ ಅಕ್ರಮವನ್ನೂ ದಂಡಿಸುವೆನು.
ಕೀರ್ತನೆಗಳು 89 : 33 (OCVKN)
ಆದರೂ ನನ್ನ ಪ್ರೀತಿ, ಕರುಣೆಯನ್ನು ಆತನಿಂದ ಸಂಪೂರ್ಣವಾಗಿ ತೊಲಗಿಸೆನು. ಇಲ್ಲವೆ ನನ್ನ ನಂಬಿಗಸ್ತಿಕೆಯಿಂದ ನಾನು ಜಾರಿಹೋಗೆನು.
ಕೀರ್ತನೆಗಳು 89 : 34 (OCVKN)
ನನ್ನ ಒಡಂಬಡಿಕೆಯನ್ನು ನಾನು ಮುರಿಯೆನು. ಇಲ್ಲವೆ ನನ್ನ ತುಟಿಗಳಿಂದ ಹೊರಟದ್ದನ್ನು ಬದಲಾಯಿಸೆನು.
ಕೀರ್ತನೆಗಳು 89 : 35 (OCVKN)
ಒಂದೇ ಸಾರಿ ನನ್ನ ಪರಿಶುದ್ಧತ್ವದಿಂದ ಆಣೆಯಿಟ್ಟು ಹೇಳಿದ್ದೇನೆ. ದಾವೀದನಿಗೆ ಸುಳ್ಳಾಡೆನು.
ಕೀರ್ತನೆಗಳು 89 : 36 (OCVKN)
ಆತನ ಸಂತತಿಯು ಯುಗಯುಗಕ್ಕೂ ಇರುವುದು. ಆತನ ಸಿಂಹಾಸನವು ನನ್ನ ಮುಂದೆ ಸೂರ್ಯನ ಹಾಗೆಯೂ ಇರುವುದು.
ಕೀರ್ತನೆಗಳು 89 : 37 (OCVKN)
ಚಂದ್ರನ ಹಾಗೆ ಅದು ಯುಗಯುಗಕ್ಕೂ ಸ್ಥಿರವಾಗಿರುವುದು; ಆಕಾಶದಲ್ಲಿರುವ ಸಾಕ್ಷಿಯ ಹಾಗೆ ನಂಬಿಗಸ್ತಿಕೆಯುಳ್ಳದ್ದಾಗಿರುವುದು.”
ಕೀರ್ತನೆಗಳು 89 : 38 (OCVKN)
ಆದರೆ ನೀವು ತಿರಸ್ಕರಿಸಿ ಬಿಟ್ಟುಬಿಟ್ಟ, ನಿಮ್ಮ ಅಭಿಷಿಕ್ತನಿಗೆ ವಿರೋಧವಾಗಿ ಬೇಸರವಾದಿರಿ.
ಕೀರ್ತನೆಗಳು 89 : 39 (OCVKN)
ನಿಮ್ಮ ಸೇವಕನೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಅಸಡ್ಡೆಮಾಡಿ, ಅವನ ಕಿರೀಟವನ್ನು ಮಣ್ಣುಪಾಲು ಮಾಡಿದ್ದೀರಿ.
ಕೀರ್ತನೆಗಳು 89 : 40 (OCVKN)
ಅವನ ಗೋಡೆಗಳನ್ನೆಲ್ಲಾ ಮುರಿದು, ಅವನ ಕೋಟೆಗಳನ್ನು ಹಾಳುಮಾಡಲು ಅನುಮತಿಸಿದ್ದೀರಿ.
ಕೀರ್ತನೆಗಳು 89 : 41 (OCVKN)
ದಾರಿಯಲ್ಲಿ ಹೋಗುವವರು ಅವನನ್ನು ಕೊಳ್ಳೆ ಹೊಡೆಯುತ್ತಾರೆ. ತನ್ನ ನೆರೆಯವರಿಗೆ ಅವನು ನಿಂದೆಯಾಗಿದ್ದಾನೆ.
ಕೀರ್ತನೆಗಳು 89 : 42 (OCVKN)
ಅವನ ವೈರಿಗಳ ಬಲಗೈ ಉನ್ನತವಾಗಿದೆ. ಅವನ ವೈರಿಗಳೆಲ್ಲಾ ಆನಂದಿಸುತ್ತಿದ್ದಾರೆ.
ಕೀರ್ತನೆಗಳು 89 : 43 (OCVKN)
ಅವನ ಖಡ್ಗದ ಮೊನೆ ಮೊಂಡಾಗಿದೆ. ಯುದ್ಧದಲ್ಲಿ ನೀವು ಅವನನ್ನು ನಿಲ್ಲುವಂತೆ ಮಾಡಲಿಲ್ಲ.
ಕೀರ್ತನೆಗಳು 89 : 44 (OCVKN)
ಅವನ ಪ್ರಭೆ ಮುಗಿದು ಹೋಗಿದೆ. ಅವನ ಸಿಂಹಾಸನ ಉರುಳಿಬಿಟ್ಟಿದೆ.
ಕೀರ್ತನೆಗಳು 89 : 45 (OCVKN)
ಅವನ ಯೌವನದ ದಿವಸಗಳು ಕಡಿಮೆಯಾಗಿದೆ. ನಾಚಿಕೆ ಎಂಬ ವಸ್ತ್ರ ಅವನನ್ನು ಮುಚ್ಚಲು ನೀವು ಅನುಮತಿಸಿದ್ದೀರಿ.
ಕೀರ್ತನೆಗಳು 89 : 46 (OCVKN)
ಯೆಹೋವ ದೇವರೇ, ಇನ್ನೂ ಎಷ್ಟರವರೆಗೆ? ಸದಾಕಾಲಕ್ಕೆ ನೀವು ಅಡಗಿಕೊಳ್ಳುವಿರಾ? ನಿಮ್ಮ ಬೇಸರವು ಬೆಂಕಿಯ ಹಾಗೆ ಉರಿಯುವುದು ಎಷ್ಟರವರೆಗೆ?
ಕೀರ್ತನೆಗಳು 89 : 47 (OCVKN)
ನನ್ನ ಆಯುಸ್ಸು ಎಷ್ಟು ಕಡಿಮೆ ಎಂದು ಜ್ಞಾಪಕಮಾಡಿಕೊಳ್ಳಿರಿ. ನಿರ್ಮಿಸಿದ ಎಲ್ಲಾ ಮನುಷ್ಯರೂ ವ್ಯರ್ಥವಾಗಿದ್ದಾರೆ.
ಕೀರ್ತನೆಗಳು 89 : 48 (OCVKN)
ಮರಣವನ್ನು ಕಾಣದೆ ಬದುಕುವಂಥವರು ಯಾರು? ಸಮಾಧಿಯ ಶಕ್ತಿಯಿಂದ ಪ್ರಾಣವನ್ನು ತಪ್ಪಿಸಿಕೊಳ್ಳುವಂಥವರು ಯಾರು?
ಕೀರ್ತನೆಗಳು 89 : 49 (OCVKN)
ಯೆಹೋವ ದೇವರೇ, ನಿಮ್ಮ ಸತ್ಯದಲ್ಲಿ ನೀವು ದಾವೀದನಿಗೆ ಆಣೆಯಿಟ್ಟೆ. ನಿಮ್ಮ ಮೊದಲಿನ ಮಹಾ ಪ್ರೀತಿ ಎಲ್ಲಿ?
ಕೀರ್ತನೆಗಳು 89 : 50 (OCVKN)
ಯೆಹೋವ ದೇವರೇ, ನಿಮ್ಮ ಸೇವಕನು ನಿಂದೆ ಹೊಂದಿರುವದನ್ನು ನೆನಸಿಕೊಳ್ಳಿರಿ. ಎಲ್ಲಾ ರಾಷ್ಟ್ರಗಳ ಅಪಹಾಸ್ಯವನ್ನು ನಾನು ಹೇಗೆ ಸಹಿಸಿದೆನೆಂಬುದನ್ನು ಜ್ಞಾಪಕಮಾಡಿಕೊಳ್ಳಿರಿ.
ಕೀರ್ತನೆಗಳು 89 : 51 (OCVKN)
ಯೆಹೋವ ದೇವರೇ, ನಿಮ್ಮ ಶತ್ರುಗಳು ನಿಂದಿಸುತ್ತಿದ್ದಾರೆ. ನಿಮ್ಮ ಅಭಿಷಿಕ್ತನ ಹೆಜ್ಜೆ ಹೆಜ್ಜೆಗೂ ನಿಂದಿಸುತ್ತಾರಲ್ಲಾ?
ಕೀರ್ತನೆಗಳು 89 : 52 (OCVKN)
ಯೆಹೋವ ದೇವರಿಗೆ ಯುಗಯುಗಕ್ಕೂ ಸ್ತುತಿಯಾಗಲಿ. ಆಮೆನ್, ಆಮೆನ್.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52