ಕೀರ್ತನೆಗಳು 24 : 1 (OCVKN)
ಭೂಮಿಯೂ ಅದರಲ್ಲಿರುವ ಸಮಸ್ತವೂ ಯೆಹೋವ ದೇವರದ್ದೇ; ಲೋಕವೂ ಅದರ ನಿವಾಸಿಗಳೂ ಅವರಿಗೇ ಸೇರಿದ್ದು.
ಕೀರ್ತನೆಗಳು 24 : 2 (OCVKN)
ಏಕೆಂದರೆ ಅವರು ಸಮುದ್ರಗಳ ಮೇಲೆ ಅದನ್ನು ಸ್ಥಾಪಿಸಿ ಪ್ರವಾಹಗಳ ಮೇಲೆ ಅದನ್ನು ಸ್ಥಿರಪಡಿಸಿದ್ದಾರೆ.
ಕೀರ್ತನೆಗಳು 24 : 3 (OCVKN)
ಯೆಹೋವ ದೇವರ ಪರ್ವತವನ್ನು ಹತ್ತುವವನು ಯಾರು? ಅವರ ಪರಿಶುದ್ಧ ಸ್ಥಳದಲ್ಲಿ ನಿಲ್ಲುವವನು ಯಾರು?
ಕೀರ್ತನೆಗಳು 24 : 4 (OCVKN)
ಶುದ್ಧಹಸ್ತಗಳೂ ನಿರ್ಮಲವಾದ ಹೃದಯವೂ ಉಳ್ಳವನಾಗಿದ್ದು; ವಂಚನೆಯಿಂದ ಮುಕ್ತನಾಗಿ, ಮೋಸದಿಂದ ಆಣೆ ಇಡದೆಯೂ ಇರುವವನೇ.
ಕೀರ್ತನೆಗಳು 24 : 5 (OCVKN)
ಇಂಥವರೇ ಯೆಹೋವ ದೇವರಿಂದ ಆಶೀರ್ವಾದವನ್ನು ಹೊಂದುವರು. ತಮ್ಮ ರಕ್ಷಕ ಆಗಿರುವ ದೇವರಿಂದಲೇ ನಿರ್ದೋಷಿಯಾಗುವರು.
ಕೀರ್ತನೆಗಳು 24 : 6 (OCVKN)
ಇಂಥವರೇ ದೇವರನ್ನು ಹುಡುಕುವ ಸಂತತಿಯು; ಯಾಕೋಬನ ದೇವರೇ, ನಿಮ್ಮನ್ನು ಹುಡುಕುವವರು ಇಂಥವರೇ.
ಕೀರ್ತನೆಗಳು 24 : 7 (OCVKN)
ದ್ವಾರಗಳೇ ತಲೆ ಎತ್ತಿ ನೋಡಿರಿ, ಪುರಾತನ ದ್ವಾರಗಳೇ, ತೆರೆದುಕೊಳ್ಳಿರಿ; ಮಹಿಮೆಯ ಅರಸ ಒಳಗೆ ಬರಲಿದ್ದಾರೆ.
ಕೀರ್ತನೆಗಳು 24 : 8 (OCVKN)
ಈ ಮಹಿಮೆಯ ಅರಸ ಯಾರು? ಬಲವೂ ಪರಾಕ್ರಮವೂ ಉಳ್ಳ ಯೆಹೋವ ದೇವರೇ ಆಗಿರುತ್ತಾರೆ. ಯೆಹೋವ ದೇವರು ಯುದ್ಧದಲ್ಲಿ ಪರಾಕ್ರಮವುಳ್ಳವರು ಆಗಿರುತ್ತಾರೆ.
ಕೀರ್ತನೆಗಳು 24 : 9 (OCVKN)
ದ್ವಾರಗಳೇ, ತಲೆ ಎತ್ತಿ ನೋಡಿರಿ, ಪುರಾತನ ದ್ವಾರಗಳೇ, ತೆರೆದುಕೊಳ್ಳಿರಿ; ಮಹಿಮೆಯ ಅರಸ ಒಳಗೆ ಬರಲಿದ್ದಾರೆ.
ಕೀರ್ತನೆಗಳು 24 : 10 (OCVKN)
ಮಹಿಮೆಯ ಅರಸ ಯಾರು? ಸೇನಾಧೀಶ್ವರ ಯೆಹೋವ ದೇವರೇ ಆಗಿರುತ್ತಾರೆ. ಇವರೇ ಮಹಿಮೆಯ ಅರಸರು.
❮
❯