ಕೀರ್ತನೆಗಳು 22 : 1 (OCVKN)
ನನ್ನ ದೇವರೇ, ನನ್ನ ದೇವರೇ, ಏಕೆ ನನ್ನನ್ನು ಕೈಬಿಟ್ಟಿದ್ದೀರಿ? ನನ್ನನ್ನು ರಕ್ಷಿಸದೆ ಏಕೆ ದೂರವಾಗಿದ್ದೀರಿ? ನನ್ನ ನರಳುವಿಕೆಯ ಮೊರೆಗೆ ಉತ್ತರ ಕೊಡದೆ ಏಕೆ ದೂರವಾಗಿದ್ದೀರಿ?
ಕೀರ್ತನೆಗಳು 22 : 2 (OCVKN)
ಓ ನನ್ನ ದೇವರೇ, ಹಗಲಿನಲ್ಲಿ ಕರೆಯುತ್ತೇನೆ, ಆದರೆ ನೀವು ಉತ್ತರ ಕೊಡುವುದಿಲ್ಲ; ರಾತ್ರಿಯಲ್ಲಿಯೂ ನನಗೆ ವಿಶ್ರಾಂತಿ ಇರುವುದಿಲ್ಲ.
ಕೀರ್ತನೆಗಳು 22 : 3 (OCVKN)
ನೀವು ಪರಿಶುದ್ಧರು; ನೀವು ಇಸ್ರಾಯೇಲರ ಸ್ತೋತ್ರ ಸಿಂಹಾಸನದಲ್ಲಿರುವಿರಿ.
ಕೀರ್ತನೆಗಳು 22 : 4 (OCVKN)
ನಿಮ್ಮಲ್ಲಿಯೇ ನಮ್ಮ ಪಿತೃಗಳು ಭರವಸೆಯಿಟ್ಟರು; ಅವರು ಭರವಸೆಯಿಟ್ಟಿದ್ದರಿಂದ ನೀವು ಅವರನ್ನು ವಿಮೋಚಿಸಿದಿರಿ.
ಕೀರ್ತನೆಗಳು 22 : 5 (OCVKN)
ಅವರು ನಿಮಗೆ ಮೊರೆಯಿಟ್ಟದ್ದರಿಂದ ನೀವು ಅವರನ್ನು ರಕ್ಷಿಸಿದಿರಿ; ನಿಮ್ಮಲ್ಲಿ ಭರವಸೆಯಿಟ್ಟಿದ್ದರಿಂದ ಅವರು ಅಪಮಾನಕ್ಕೆ ಗುರಿಯಾಗಲಿಲ್ಲ.
ಕೀರ್ತನೆಗಳು 22 : 6 (OCVKN)
ಆದರೆ ನಾನು ಹುಳದಂಥವನೇ ಹೊರತು ಮನುಷ್ಯನಲ್ಲ; ನಾನು ಮನುಷ್ಯರಿಂದ ನಿಂದೆ ಹಾಗು ತಿರಸ್ಕಾರಕ್ಕೆ ಗುರಿಯಾಗಿದ್ದೇನೆ.
ಕೀರ್ತನೆಗಳು 22 : 7 (OCVKN)
ನನ್ನನ್ನು ನೋಡುವವರೆಲ್ಲರೂ ನನ್ನನ್ನು ಗೇಲಿಮಾಡುತ್ತಾರೆ. ಅವರು ತಲೆ ಆಡಿಸುತ್ತಾ ಹೀಗೆ ಅವಮಾನಪಡಿಸುತ್ತಾರೆ:
ಕೀರ್ತನೆಗಳು 22 : 8 (OCVKN)
“ಆತನು ಯೆಹೋವ ದೇವರ ಮೇಲೆ ಭರವಸೆಯಿಟ್ಟಿದ್ದಾನಲ್ಲಾ, ಯೆಹೋವ ದೇವರೇ ಆತನನ್ನು ಕಾಪಾಡಲಿ. ಯೆಹೋವ ದೇವರು ಆತನಲ್ಲಿ ಹರ್ಷಿಸುವುದಾದರೆ, ಅವರೇ ಆತನನ್ನು ಬಿಡಿಸಲಿ.”
ಕೀರ್ತನೆಗಳು 22 : 9 (OCVKN)
ತಾಯಿಯ ಗರ್ಭದೊಳಗಿಂದ ನನ್ನನ್ನು ಹೊರತಂದವರು ನೀವು; ನನ್ನ ತಾಯಿಯ ಎದೆಯಲ್ಲಿ ಇದ್ದಾಗಲೇ ನಾನು ನಿಮ್ಮಲ್ಲಿ ಭರವಸೆಯಿಡುವಂತೆ ಮಾಡಿದಿರಿ.
ಕೀರ್ತನೆಗಳು 22 : 10 (OCVKN)
ಹುಟ್ಟಿದಂದಿನಿಂದಲೇ ನೀವೇ ನನಗೆ ಆಧಾರ ನನ್ನ ತಾಯಿಯ ಗರ್ಭದಿಂದಲೇ ನೀವು ನನ್ನ ದೇವರು.
ಕೀರ್ತನೆಗಳು 22 : 11 (OCVKN)
ನನ್ನಿಂದ ದೂರವಾಗಿರಬೇಡಿರಿ, ಏಕೆಂದರೆ ಇಕ್ಕಟ್ಟು ಸಮೀಪವಾಗಿದೆ, ಸಹಾಯಕರು ನನಗೆ ಯಾರೂ ಇಲ್ಲ.
ಕೀರ್ತನೆಗಳು 22 : 12 (OCVKN)
ಬಹಳ ಹೋರಿಗಳು ನನ್ನನ್ನು ಸುತ್ತಿಕೊಂಡಿವೆ; ಬಾಷಾನಿನ ಬಲವಾದ ಹೋರಿಗಳು ನನ್ನನ್ನು ಮುತ್ತಿಕೊಂಡಿವೆ.
ಕೀರ್ತನೆಗಳು 22 : 13 (OCVKN)
ಹರಿದು ಬಿಡುವ ಗರ್ಜಿಸುವ ಸಿಂಹದ ಹಾಗೆ ನನ್ನ ಮೇಲೆ ತಮ್ಮ ಬಾಯಿತೆರೆದಿದ್ದಾರೆ.
ಕೀರ್ತನೆಗಳು 22 : 14 (OCVKN)
ನಾನು ಚೆಲ್ಲಿದ ನೀರಿನಂತಿದ್ದೇನೆ, ನನ್ನ ಎಲುಬುಗಳೆಲ್ಲಾ ಕೀಲು ತಪ್ಪಿ ಹೋಗಿದೆ. ನನ್ನ ಹೃದಯವು ಮೇಣದ ಹಾಗೆ ನನ್ನೊಳಗೆ ಕರಗಿಹೋಗಿದೆ.
ಕೀರ್ತನೆಗಳು 22 : 15 (OCVKN)
ನನ್ನ ಬಾಯಿ ಬೋಕಿಯ ಹಾಗೆ ಒಣಗಿಹೋಗಿದೆ, ನನ್ನ ನಾಲಿಗೆ ಅಂಗಳಕ್ಕೆ ಹತ್ತಿದೆ, ನೀವು ನನ್ನನ್ನು ಮಣ್ಣಿಗೆ ಸೇರಿಸುವಿರಿ.
ಕೀರ್ತನೆಗಳು 22 : 16 (OCVKN)
ನಾಯಿಗಳು ನನ್ನನ್ನು ಸುತ್ತಿಕೊಂಡಿವೆ; ದುರ್ಮಾರ್ಗಿಗಳ ಗುಂಪು ನನ್ನನ್ನು ಮುತ್ತಿಕೊಂಡಿದೆ; ಅವರು ನನ್ನ ಕೈಗಳನ್ನೂ ಕಾಲುಗಳನ್ನೂ ತಿವಿದಿದ್ದಾರೆ.
ಕೀರ್ತನೆಗಳು 22 : 17 (OCVKN)
ನನ್ನ ಎಲುಬುಗಳನ್ನೆಲ್ಲಾ ಎಣಿಸುವಂತಾಗಿದೆ; ಅವರು ನನ್ನನ್ನು ಕಂಡು ಹಿಗ್ಗುತ್ತಾರೆ.
ಕೀರ್ತನೆಗಳು 22 : 18 (OCVKN)
ನನ್ನ ಬಟ್ಟೆಯನ್ನು ಅವರು ತಮ್ಮೊಳಗೆ ಪಾಲು ಮಾಡಿಕೊಳ್ಳುತ್ತಾರೆ; ನನ್ನ ಅಂಗಿಗೋಸ್ಕರ ಚೀಟು ಹಾಕುತ್ತಾರೆ.
ಕೀರ್ತನೆಗಳು 22 : 19 (OCVKN)
ಆದರೆ ಯೆಹೋವ ದೇವರೇ, ನೀವು ನನ್ನಿಂದ ದೂರವಾಗಿರಬೇಡಿರಿ; ನೀವು ನನ್ನ ಬಲವಾಗಿದ್ದೀರಿ, ನನ್ನ ಸಹಾಯಕ್ಕೆ ಬೇಗ ಬನ್ನಿರಿ.
ಕೀರ್ತನೆಗಳು 22 : 20 (OCVKN)
ನನ್ನ ಪ್ರಾಣವನ್ನು ಖಡ್ಗದಿಂದಲೂ ನನ್ನ ಅಮೂಲ್ಯ ಜೀವವನ್ನು ನಾಯಿಗಳ ಬಲದಿಂದಲೂ ಬಿಡಿಸಿರಿ.
ಕೀರ್ತನೆಗಳು 22 : 21 (OCVKN)
ಸಿಂಹಗಳ ಬಾಯಿಂದ ನನ್ನನ್ನು ರಕ್ಷಿಸಿರಿ; ಕಾಡುಕೋಣಗಳ ಕೊಂಬುಗಳಿಂದ ನನ್ನನ್ನು ತಪ್ಪಿಸಿರಿ.
ಕೀರ್ತನೆಗಳು 22 : 22 (OCVKN)
ನಾನು ನಿಮ್ಮ ಹೆಸರನ್ನು ನನ್ನ ಸಹೋದರರಿಗೆ ಸಾರುವೆನು; ಸಭಾ ಮಧ್ಯದಲ್ಲಿ ನಿಮ್ಮನ್ನು ಸ್ತುತಿಸುವೆನು.
ಕೀರ್ತನೆಗಳು 22 : 23 (OCVKN)
ಯೆಹೋವ ದೇವರಿಗೆ ಭಯಪಡುವವರೇ, ಅವರನ್ನು ಸ್ತುತಿಸಿರಿ; ಯಾಕೋಬನ ಎಲ್ಲಾ ಸಂತತಿಯವರೇ, ಅವರನ್ನು ಕೊಂಡಾಡಿರಿ; ಇಸ್ರಾಯೇಲರ ಎಲ್ಲಾ ಸಂತತಿಯವರೇ, ಅವರಲ್ಲಿ ಭಯಭಕ್ತಿಯುಳ್ಳವರಾಗಿರಿ.
ಕೀರ್ತನೆಗಳು 22 : 24 (OCVKN)
ಏಕೆಂದರೆ ಸಂಕಟಪಡುವವನ ಸಂಕಟವನ್ನು ಅವರು ತಿರಸ್ಕರಿಸಲಿಲ್ಲ, ಅಸಹ್ಯಪಡಲಿಲ್ಲ; ತಮ್ಮ ಮುಖವನ್ನು ಅವನಿಂದ ಮರೆಮಾಡಲಿಲ್ಲ; ಆದರೆ ಆತನು ಮೊರೆ ಇಡಲು, ಅವರು ಕೇಳಿದರು.
ಕೀರ್ತನೆಗಳು 22 : 25 (OCVKN)
ಮಹಾಸಭೆಯಲ್ಲಿ ನಿಮ್ಮನ್ನು ಕುರಿತು ನನ್ನ ಸ್ತೋತ್ರವು ನಿಮ್ಮಿಂದ ಬರುವುದು; ನನ್ನ ಹರಕೆಗಳನ್ನು ನಿಮಗೆ ಭಯಪಡುವವರ ಮುಂದೆ ಸಲ್ಲಿಸುವೆನು.
ಕೀರ್ತನೆಗಳು 22 : 26 (OCVKN)
ದೀನರು ಉಂಡು ತೃಪ್ತರಾಗುವರು; ಯೆಹೋವ ದೇವರನ್ನು ಹುಡುಕುವವರು ಅವರನ್ನು ಸ್ತುತಿಸುವರು; ಅಂಥವರ ಹೃದಯವು ಎಂದೆಂದಿಗೂ ಚೈತನ್ಯ ಹೊಂದಲಿ.
ಕೀರ್ತನೆಗಳು 22 : 27 (OCVKN)
ಲೋಕದಲ್ಲಿರುವ ಎಲ್ಲರೂ ಎಚ್ಚರವಾಗಿ ಯೆಹೋವ ದೇವರ ಕಡೆಗೆ ತಿರುಗಿಕೊಳ್ಳುವರು; ಜನಾಂಗಗಳ ಕುಟುಂಬಗಳೆಲ್ಲಾ ದೇವರ ಮುಂದೆ ಅಡ್ಡಬೀಳುವವು.
ಕೀರ್ತನೆಗಳು 22 : 28 (OCVKN)
ಏಕೆಂದರೆ ರಾಜ್ಯವು ಯೆಹೋವ ದೇವರದೇ; ಜನಾಂಗಗಳನ್ನು ಆಳುವವರು ಅವರೇ.
ಕೀರ್ತನೆಗಳು 22 : 29 (OCVKN)
ಭೂಮಿಯ ಶ್ರೀಮಂತರೆಲ್ಲರು ಉಂಡು ಆರಾಧಿಸುವರು; ತಮ್ಮ ಪ್ರಾಣವನ್ನು ಬದುಕಿಸಲಾರದೆ ಧೂಳಿನಲ್ಲಿ ಇಳಿಯುವವರೆಲ್ಲರು ಅವರ ಮುಂದೆ ಅಡ್ಡಬೀಳುವರು.
ಕೀರ್ತನೆಗಳು 22 : 30 (OCVKN)
ಸಂತಾನವು ದೇವರನ್ನು ಸೇವಿಸುವುದು; ಮುಂದಿನ ಸಂತತಿಗಳಿಗೆ ಯೆಹೋವ ದೇವರ ಬಗ್ಗೆ ಹೇಳಲಾಗುವುದು.
ಕೀರ್ತನೆಗಳು 22 : 31 (OCVKN)
ಆ ಸಂತತಿಯವರು ದೇವರ ನೀತಿಯನ್ನು ಇನ್ನೂ ಜನಿಸದ ಜನಾಂಗಕ್ಕೆ ಸಾರಿ ತಿಳಿಸುವರು, ಏಕೆಂದರೆ ಇದನ್ನೆಲ್ಲ ಮಾಡಿದವರು ದೇವರೇ!

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31